ಮಧ್ಯಪ್ರವೇಶಿಸಿ, ಇಲ್ಲಂದ್ರೆ ಮನೆಗೆ ಹೋಗಿ, ಯಾಕ್ರೀ ನಿಮ್ಗೆಲ್ಲ ರಾಜಕೀಯ: ಪ್ರಧಾನಿ ವಿರುದ್ಧ ಚಲುವರಾಯಸ್ವಾಮಿ ವಾಗ್ದಾಳಿ
ಮಂಡ್ಯ, ಅಕ್ಟೋಬರ್, 05: ಕಾವೇರಿ ಸಂಕಷ್ಟವನ್ನು ಪ್ರಧಾನಿ ಮಧ್ಯಸ್ಥಿಕೆಯಲ್ಲಿ ಬಿಜೆಪಿ-ಜೆಡಿಎಸ್ ಬಗೆಹರಿಸಲಿ, ಅದು ಬಿಟ್ಟು ನೀರಿನ ವಿಚಾರದಲ್ಲಿ ರಾಜಕೀಯ ಮಾಡದೆ ಸುಮ್ಮನೆ ಕುಳಿತುಕೊಳ್ಳಲಿ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿರುಗೇಟು ನೀಡಿದರು.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ವಿಚಾರದ ಬಗ್ಗೆ ಪ್ರಶ್ನಿಸಿದ ತಕ್ಷಣವೇ ಕೆಂಡಾಮಂಡಲರಾದ ಸಚಿವರು, ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು. ಇನ್ನು ನಮ್ಮ ರೈತರು, ಸಂಘಟನೆಗಳು ಸರ್ಕಾರದ ಗಮನ ಸೆಳೆಯಲು ಪ್ರತಿಭಟನೆ ಮಾಡುತ್ತಿದ್ದಾರೆ. ಅವರ ಬಗ್ಗೆ ಮಾತನಾಡುವುದಿಲ್ಲ. ನಾವು ನಮ್ಮ ಸಮಸ್ಯೆಯನ್ನು ಕೋರ್ಟ್ ಹಾಗೂ ಪ್ರಾಧಿಕಾರದ ಮುಂದೆ ಹೇಳಬಹುದಷ್ಟೆ. ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡುವ ಅವಕಾಶವಿದೆ ಎಂದರು.

ಬಿಜೆಪಿ ಹಾಗೂ ಜೆಡಿಎಸ್‌ನವರಿಗೆ ಕೃತಜ್ಞತೆ ಇಲ್ಲವೇ, ಮಂಡ್ಯದಲ್ಲಿ ಬಂದು ಏನು ಮಾಡುತ್ತಾರೆ, ನಮ್ಮ ಗಮನಕ್ಕೆ ತರಲು ಮಂಡ್ಯದಲ್ಲಿ ರೈತರಿಲ್ಲವೇ ಎಂದು ಪ್ರಶ್ನಿಸಿದರು. ಇನ್ನು ಮಾಜಿ ಸಿಎಂಗಳಾದ ಕುಮಾರಸ್ವಾಮಿ, ಬೊಮ್ಮಾಯಿ ಅವರು ದೆಹಲಿಗೆ ಹೋಗಿ ಪ್ರಧಾನಿಗಳ ಬಳಿ ಮಾತನಾಡಬೇಕು. ಕಾವೇರಿ ವಿಚಾರ ಸಮಸ್ಯೆ ಹೇಳಿ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆಸಿ ಸಮಸ್ಯೆ ಬಗೆಹರಿಸಿಕೊಳ್ಳಲು ಹೇಳಬೇಕು. ಅದು ಬಿಟ್ಟು ಇಲ್ಲಿ ಬಂದು ಮಾಧ್ಯಮಗಳ ಮುಂದೆ ಪ್ರತಿಭಟನೆ ಮಾಡಬೇಕಾ ಎಂದು ವಾಗ್ದಾಳಿ ನಡೆಸಿದರು.
ನಾವು ದೆಹಲಿಗೆ ಹೋಗಿದ್ದೇವೆ, ಸಂಸದರ ಸಭೆ ಮಾಡಿದ್ದೇವೆ. ಮೂರು ಬಾರಿ ವಿರೋಧ ಪಕ್ಷಗಳ ಸಭೆಯನ್ನೂ ಮಾಡಿದ್ದೀವಿ, ಕೋರ್ಟ್ ಹಾಗೂ ಪ್ರಾಧಿಕಾರದ ಆದೇಶವನ್ನು ಎಲ್ಲಾ ಸಿಎಂಗಳು ಪಾಲಿಸಿದ್ದಾರೆ. ಇಲ್ಲಿ ಬಂದು ಶೂರರ-ವೀರರ ರೀತಿ ಭಾಷಣ ಮಾಡುವ ಜೆಡಿಎಸ್-ಬಿಜೆಪಿಯವರು ಎಲ್ಲರೂ ನೀರು ಬಿಟ್ಟಿದ್ದಾರೆ ಎಂದು ಛೇಡಿಸಿದರು.
ನಮಗಿಂತ ಜಾಸ್ತಿ ರೈತರಿಗೆ ಅನ್ಯಾಯ ಮಾಡಿ ನೀರು ಬಿಟ್ಟಿದ್ದಾರೆ. ನಾವು ಇಲ್ಲಿಯವರೆಗೆ ರೈತರ ಹಿತಾಸಕ್ತಿ ಕಾಪಾಡಿ, ಅಲ್ಪಸ್ವಲ್ಪ ಆದೇಶ ಪಾಲನೆ ಮಾಡಿದ್ದೇವೆ. ನಾವು ಪೂರ್ಣ ಪ್ರಮಾಣದ ಆದೇಶ ಪಾಲನೆ ಮಾಡದೆ, ಸ್ವಲ್ಪ ಆದೇಶ ಪಾಲನೆ ಮಾಡಿದ್ದೇವೆ ಅಷ್ಟೇ ಎಂದು ತಿರುಗೇಟು ನೀಡಿದರು. ಮಂಡ್ಯ ರೈತರಿಗೆ ಇನ್ನೂ ಎರಡು ಪಟ್ಟು ನೀರು ಕೊಡುತ್ತೇವೆ. ರಕ್ಷಣೆ ಮಾಡುತ್ತೇವೆ. ಲೋಕಸಭಾ ಚುನಾವಣೆಗಾಗಿ ಬಿಜೆಪಿ ಜೆಡಿಎಸ್‌ನವರು ಒಂದಾಗುತ್ತಿದ್ದಾರೆ. ಆದರೆ ಕಾವೇರಿ ವಿಚಾರದ ಬಗ್ಗೆ ಪ್ರಧಾನಿ ಬಳಿ ಹೋಗಿ ಮಾತನಾಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವುದಿಲ್ಲ ಎಂದು ಕಿಡಿಕಾರಿದರು.
ಈ ಹಿಂದೆ ವಾಜಪೇಯಿ ಅವರು ಮಧ್ಯಪ್ರವೇಶ ಮಾಡಿರಲಿಲ್ಲವೇ, ಈಗ ಪ್ರಧಾನಿ ಮಧ್ಯ ಪ್ರವೇಶ ಮಾಡಲು ಆಗಲ್ಲ ಅಂದರೆ ಮನೆಯಲ್ಲಿ ಇರಲಿ, ರಾಜಕಾರಣ ಯಾಕೆ ಮಾಡಬೇಕು ಎಂದು ಪ್ರಶ್ನಿಸಿದರು. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಎರಡೂ ರಾಜ್ಯಗಳನ್ನು ಕರೆದು ಸಮಸ್ಯೆ ಬಗೆಹರಿಸಬೇಕು. ಕರ್ನಾಟಕ, ತಮಿಳುನಾಡು ಬೇರೆ ಬೇರೆ ರಾಜ್ಯ. ತಮಿಳುನಾಡಿನವರು ಅವರ ರೈತರ ಹಿತ ಕಾಯುತ್ತಾರೆ. ನಾವು ಕರ್ನಾಟಕದವರು ನಮ್ಮ ರೈತರ ಹಿತ ಕಾಯುತ್ತೇವೆ ಎಂದರು.
ಐಎನ್‌ಡಿಐಯ ಒಕ್ಕೂಟದ ರಾಜಕೀಯ ಬೇರೆ, ಕಾವೇರಿ ವಿಚಾರವೇ ಬೇರೆ. ಎರಡನ್ನೂ ಒಟ್ಟಿಗೆ ಮಾಡುವುದು ಸರಿಯಲ್ಲ. ಬೇರೆ ವಿಚಾರದಲ್ಲಿ ರಾಜಕೀಯ ಮಾಡಿಕೊಳ್ಳಲಿ, ನಾವೂ ಸಹ ಐಎನ್‌ಡಿಎ ಒಕ್ಕೂಟದ ಮೂಲಕ ರಾಜಕೀಯ ಮಾಡುತ್ತಿದ್ದೇವೆ. ಕಾವೇರಿ ಸಮಸ್ಯೆಯನ್ನು ಸಾಧ್ಯವಾದರೂ ಬಗೆಹರಿಸಲಿ, ಅವರ ಕೈಯ್ಯಲ್ಲಿ ಆಗದೇ ಇದ್ದರೆ ನಮ್ಮ ರೈತರನ್ನು ಉಳಿಸೋದು ಹೇಗೆ ಎಂಬುದು ನಮಗೆ ಗೊತ್ತು. ಈಗಾಗಲೇ ನಾವು ಕಾವೇರಿ ನೀರಿನ ವಿಚಾರದ ಬಗ್ಗೆ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದೇವೆ ಎಂದರು.












Click it and Unblock the Notifications