ಕಾವೇರಿ ನಿರ್ವಹಣಾ ಪ್ರಾಧಿಕಾರದ ಆದೇಶ ಮುಂದಿಟ್ಟು ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲು ಒತ್ತಾಯ
ಮಂಡ್ಯ,ಸೆಪ್ಟೆಂಬರ್ 26: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ನೀರು ನಿರ್ವಹಣಾ ಪ್ರಾಧಿಕಾರ ನೀಡುವ ಆದೇಶವನ್ನು ಮುಂದಿಟ್ಟುಕೊಂಡು ರಾಜ್ಯಸರ್ಕಾರ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬೇಕು ಎಂದು ನೀರಾವರಿ ತಜ್ಜ ಅರ್ಜುನಹಳ್ಳಿ ಪ್ರಸನ್ನಕುಮಾರ್ ಹೇಳಿದರು.
ಜಿಲ್ಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್‌ಗೆ ಅಂತರ್ಗತವಾದಂತಹ ಅಧಿಕಾರವಿದೆ. ಪ್ರಾಧಿಕಾರದ ಆದೇಶವನ್ನು ಪಾಲನೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ಈ ಆದೇಶವನ್ನು ಪುನರ್‌ಪರಿಶೀಲಿಸುವಂತೆ ಸರ್ವೋಚ್ಛ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರೆ ಆಗ ನ್ಯಾಯಾಧೀಶರು ಪ್ರಕರಣವನ್ನು ಮತ್ತೆ ಕೈಗೆತ್ತಿಕೊಳ್ಳುವುದಕ್ಕೆ ಅವಕಾಶವಿದೆ ಎಂದು ತಿಳಿಸಿದರು.

1984 ರಿಂದ 2018ರವರೆಗೆ ಕಾವೇರಿ ನೀರನ್ನು ನಮ್ಮದಾಗಿಸಿಕೊಳ್ಳುವ ಹಲವಾರು ಅವಕಾಶಗಳನ್ನು ಅಧಿಕಾರಕ್ಕೆ ಬಂದ ಸರ್ಕಾರಗಳೂ ಕೈಚೆಲ್ಲಿದ ಪರಿಣಾಮ ಇಂದು ಕುಡಿಯುವ ನೀರನ್ನು ಉಳಿಸಿಕೊಳ್ಳುವುದಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮಾಡಿದ ತಪ್ಪುಗಳಿಂದ ಎಚ್ಚರಗೊಳ್ಳುವ, ಮತ್ತೆ ಅದನ್ನು ಸರಿಪಡಿಸುವ ಯಾವೊಂದು ಪ್ರಯತ್ನಗಳೂ ಸರ್ಕಾರದಿಂದ ನಡೆಯುತ್ತಿಲ್ಲ ಎಂದು ವಿಷಾದಿಸಿದರು.
ಕಾವೇರಿ ವಿಚಾರದಲ್ಲಿ ನ್ಯಾಯಮಂಡಳಿ ಐ-ತೀರ್ಪು ನೀಡಿರುವುದರಿಂದ ಇದರಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ಇದು ನಾಲ್ಕೂ ರಾಜ್ಯಗಳು ಸರ್ವಾನುಮತದಿಂದ ಒಪ್ಪಿರುವ ತೀರ್ಪು ಇದರಲ್ಲಿ ಸಂಸತ್‌ನ ಉಭಯ ಸದನಗಳೂ ಮಧ್ಯಪ್ರವೇಶ ಮಾಡಲಾಗದು ಎಂದು ಅಧಿಸೂಚನೆಯಲ್ಲಿದ್ದರೂ ಈ ವಿಚಾರದಲ್ಲಿ ಸುಪ್ರೀಂಕೋರ್ಟ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನು ಪ್ರಶ್ನಿಸಲು ಸಾಧ್ಯವಿದೆಯೇ ಎಂಬ ಬಗ್ಗೆ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಬೇಕು ಎಂದು ಸಲಹೆ ನೀಡಿದರು.
2018ರಲ್ಲಿ ನಮಗೆ 14.75 ಟಿಎಂಸಿ ಹೆಚ್ಚುವರಿ ನೀರು ಸಿಕ್ಕಿತೆಂದು ಖುಷಿಪಟ್ಟೆವೇ ವಿನಃ ಆ ತೀರ್ಪನ್ನು ವಿರೋಧಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಿಲ್ಲ. ಅಂದು ಅದರ ಅಗತ್ಯವಿತ್ತು. ಒಮ್ಮೆ ನಾವು ಸಲ್ಲಿಸಿದ ವಜಾ ಆಗಿದ್ದರೂ ಕ್ಯುರೇಟೀವ್ ಅರ್ಜಿ ಸಲ್ಲಿಸಲು ಅವಕಾಶ ಸಿಗುತ್ತಿತ್ತು. ಆ ಸಮಯದಲ್ಲಿ ನೀರಿಲ್ಲದೆ ಬೆಳೆ ಇಲ್ಲ. ಕೃಷಿ ಚಟುವಟಿಕೆ ನಡೆಸಲು ಸಾಧ್ಯವಾಗಿಲ್ಲ. ಕುಡಿಯುವ ನೀರಿಗೂ ತೊಂದರೆಯಾಗಿದೆ ಎಂಬ ಅಂಶಗಳನ್ನು ಸುಪ್ರೀಂಕೋರ್ಟ್ ಮುಂದಿಡಬಹುದಾಗಿತ್ತು. ಮೇಲ್ಮನವಿಯನ್ನೇ ಸಲ್ಲಿಸದಿರುವುದರಿಂದ ಕ್ಯುರೇಟಿವ್ ಅರ್ಜಿ ಹಾಕಲು ಅವಕಾಶವೇ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಾಧಿಕಾರಕ್ಕೆ ಸರ್ಕಾರ ಸದಸ್ಯರನ್ನು ನೇಮಿಸಿದ್ದೇ ತಪ್ಪು
2018ರಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಸರ್ಕಾರ ಸದಸ್ಯರನ್ನು ನೇಮಿಸಿದ್ದೇ ತಪ್ಪು .ಪ್ರಾಧಿಕಾರಕ್ಕೆ ಸದಸ್ಯರನ್ನು ನೇಮಿಸದಿದ್ದರೆ ಪ್ರಾಧಿಕಾರ ರಚನೆಯಾಗುತ್ತಿರಲಿಲ್ಲ. ಆದೇಶ ಪಾಲಿಸುವ ಅನಿವಾರ್ಯತೆಯೂ ಎದುರಾಗುತ್ತಿರಲಿಲ್ಲ. ನಾವು ಕನಿಷ್ಠ ಕುಡಿಯುವ ನೀರನ್ನಾದರೂ ಮೀಸಲಿಡಬೇಕೆಂಬ ವಾದವನ್ನು ಎಲ್ಲಿಯೂ ಮಂಡಿಸಲೇ ಇಲ್ಲ. ಇದು ದೊಡ್ಡ ದುರಂತ. ಹೀಗಾಗಿ ಪ್ರಾಧಿಕಾರ ತನ್ನಲ್ಲಿರುವ ಅಧಿಕಾರವನ್ನು ಬಳಸಿ ನೀರು ಬಿಡಿ ಎಂದಷ್ಟೇ ವಾದ ಮುಂದಿಡುತ್ತಿದೆ ಎಂದು ವಿವರಿಸಿದರು.
ಮೂರು ಪಕ್ಷಗಳು ಎಡವಿವೆ
ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ರಾಜ್ಯಕ್ಕೆ ಅನ್ಯಾಯವಾಗಲು ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಎಡವಿವೆ. ಮಳೆಯನ್ನು ಆಧರಿಸಿ ನೀರನ್ನು ಹಂಚಿಕೆ ಮಾಡುವಂತೆ ಎಲ್ಲಿಯೂ ಕೇಳಿಯೇ ಇಲ್ಲ. ಕಾನೂನಾತ್ಮಕವಾಗಿದ್ದ ಅವಕಾಶಗಳನ್ನು ಕೈಚೆಲ್ಲಿ ತಪ್ಪುಗಳನ್ನೂ ಮಾಡಿ ಪ್ರಾಧಿಕಾರಕ್ಕೆ ನಾಲ್ಕೂ ಜಲಾಶಯದ ಕೀಲಿಗಳನ್ನು ಕೊಟ್ಟುಬಿಟ್ಟಿದ್ದೇವೆ. ಈಗ ಅವರಿಂದ ವಾಪಸ್ ಪಡೆದುಕೊಳ್ಳುವ ದಾರಿಯನ್ನೇ ಕಾಣದೆ ಗಾಢಾಂಧಕಾರದಲ್ಲಿ ಮುಳುಗಿದ್ದೇವೆ ಎಂದು ತಿಳಿಸಿದರು.
ರಾಷ್ಟ್ರೀಯ ಜಲನೀತಿ ಜಾರಿಯಾಗಲಿ
ರಾಷ್ಟ್ರೀಯ ಜಲನೀತಿ ಜಾರಿಯಾದರೆ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ. ಏಕೆಂದರೆ, ರಾಷ್ಟ್ರೀಯ ಜಲನೀತಿ ಪ್ರಕಾರ ಒಂದು ಜಲಾನಯನ ಪ್ರದೇಶದಲ್ಲಿ ಬೀಳುವ ಮಳೆಯ ಪ್ರಮಾಣ, ನೀರಿನ ಸಂಗ್ರಹಣೆಯನ್ನು ಆಧರಿಸಿ ಅದನ್ನು ಸಮಪ್ರಮಾಣದಲ್ಲಿ ಹಂಚಿಕೆ ಮಾಡಲಾಗುತ್ತದೆ. ಹಾಗಾಗಿ ರಾಷ್ಟ್ರೀಯ ಜಲನೀತಿ ಜಾರಿಗೆ ಕೇಂದ್ರಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಹೇಳಿದರು.
ರಾಷ್ಟ್ರೀಯ ಜಲನೀತಿ ಬಗ್ಗೆ ಪಿರಿಯಾಪಟ್ಟಣದ ಹೆಚ್.ಎಂ.ಚನ್ನಬಸಪ್ಪನವರು ಹಲವು ದಶಕಗಳ ಹಿಂದೆಯೇ ದನಿ ಎತ್ತಿದ್ದರು. ಅದು ಇಲ್ಲಿಯವರೆಗೆ ಜಾರಿಯಾಗಲೇ ಇಲ್ಲ. ಕಾವೇರಿ ಬಿಕ್ಕಟ್ಟಿಗೆ ರಾಷ್ಟ್ರೀಯ ಜಲನೀತಿಯೂ ಪರಿಹಾರ ಸೂತ್ರವಾಗಿ ಕಂಡುಬರುತ್ತಿದೆ ಎಂದು ತಿಳಿಸಿದರು.












Click it and Unblock the Notifications