ರಸ್ತೆ ಪಕ್ಕಕ್ಕೆ ಬಸ್ ಉರುಳಿ ಓರ್ವ ಸಾವು, 35 ಮಂದಿಗೆ ಗಾಯ
ಮಳವಳ್ಳಿ, ಜುಲೈ 26: ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮ ಸ್ಥಳದಲ್ಲಿದ್ದ ವ್ಯಕ್ತಿ ಸಾವನ್ನಪ್ಪಿದ್ದು, ಬಸ್‍ನಲ್ಲಿದ್ದ 35 ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ತಾಲೂಕಿನ ಬುಳ್ಳಿಕೆಂಪನದೊಡ್ಡಿ ಬಳಿ ಗುರುವಾರ ಸಂಭವಿಸಿದೆ.
ಟಿ.ನರಸೀಪುರ ತಾಲೂಕಿನ ಕುಳ್ಳನಕೊಪ್ಪಲು ಗ್ರಾಮದ ಮಹೇಶ(40) ಸಾವನ್ನಪ್ಪಿದ ದುರ್ದೈವಿ. ಇನ್ನು ಗಾಯಾಳುಗಳಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಅಗತ್ಯವುಳ್ಳವರಿಗೆ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಗಿದೆ.
ಖಾಸಗಿ ಬಸ್ಸಿನ ಚಾಲಕ ಸೈಕಲ್‌ನಲ್ಲಿ ಹೋಗುತ್ತಿದ್ದ ವಿದ್ಯಾರ್ಥಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.

ಸ್ಥಳಕ್ಕೆ ಟಿ.ನರಸೀಪುರ ಶಾಸಕ ಅಶ್ವಿನ್‌ಕುಮಾರ್, ಮಳವಳ್ಳಿ ಶಾಸಕ ಡಾ.ಕೆ.ಅನ್ನದಾನಿ, ಡಿವೈಎಸ್ಪಿ ಸಿ.ಮಲ್ಲಿಕ್, ವೃತ್ತ ನಿರೀಕ್ಷಕ ಶ್ರೀಕಾಂತ್, ತಾಲೂಕು ಆರೋಗ್ಯಾಧಿಕಾರಿ ಡಾ.ವೀರಭದ್ರಪ್ಪ, ಸೇರಿದಂತೆ ತಾಲೂಕು ಮಟ್ಟದ ಆಧಿಕಾರಿಗಳು ಸ್ಥಳಕ್ಕೆ ತೆರಳಿ ಮೃತ ಕುಟುಂಬಕ್ಕೆ ಸಾಂತ್ವಾನ ಹೇಳಿ, ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದಾರೆ. ಈ ಸಂಬಂಧ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.












Click it and Unblock the Notifications