'ತವರಿಗೆ ಬಾ ತಂಗಿ': ರಮ್ಯಾಗೆ ಬಾಗಿನ ಕಳುಹಿಸಿದ ಬಿಜೆಪಿ ಕಾರ್ಯಕರ್ತರು
Recommended Video

ಮಂಡ್ಯ, ಸೆಪ್ಟೆಂಬರ್ 12: ಚುನಾವಣೆ ಸಂದರ್ಭಗಳಲ್ಲಿ ಮಂಡ್ಯದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದ ಕಾಂಗ್ರೆಸ್‌ನ ಮಾಜಿ ಸಂಸದೆ ರಮ್ಯಾ ಅವರಿಗೆ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಬಾಗಿನ ಕಳುಹಿಸಿದ್ದಾರೆ.
ನಗರದ ಪ್ರಧಾನ ಅಂಚೆಕಚೇರಿಯಿಂದ ಹೂವು, ಬಳೆ ಮತ್ತು ತೆಂಗಿನಕಾಯಿಯ ಬಾಗಿನವನ್ನು ರಮ್ಯಾಗೆ ರವಾನಿಸಿದರು.
ಮಾಜಿ ಸಂಸದೆ ರಮ್ಯಾ ತವರು ಕ್ಷೇತ್ರವನ್ನು ಮರೆತಿದ್ದಾರೆ. ಕಳೆದ ವಿಧಾನಸಭೆ, ನಗರಸಭೆ ಚುನಾವಣೆಯಲ್ಲಿಯೂ ರಮ್ಯಾ ಮತ ಚಲಾಯಿಸಲಿಲ್ಲ. ಅವರಿಗೆ ಮಂಡ್ಯ ನೆನಪಾಗಲಿ ಎಂದು ಬಾಗಿನ ಕಳುಹಿಸುತ್ತಿರುವುದಾಗಿ ಕಾರ್ಯಕರ್ತರು ಹೇಳಿದರು.
ಅವರು ಜಿಲ್ಲೆಯನ್ನು ಮರೆತರೂ ನಾವು ಅವರನ್ನು ಮರೆಯುವುದಿಲ್ಲ. ಅವರು ನಮ್ಮ ಸಹೋದರಿ. ಹಾಗಾಗಿ ಗೌರಿ ಹಬ್ಬದ ಉಡುಗೊರೆಯನ್ನು ಕಳುಹಿಸುತ್ತಿದ್ದೇವೆ. ಗೌರಿ-ಗಣೇಶ ಹಬ್ಬದ ಸಲುವಾಗಿಯಾದರೂ ಇಲ್ಲಿ ಬನ್ನಿ ಎಂದು ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದರು.

ಮಂಡ್ಯದ ಬಿಜೆಪಿ ಕಾರ್ಯಕರ್ತರು ರಮ್ಯಾ ಅವರಿಗೆ ಬಾಗಿನ ಕಳುಹಿಸುತ್ತಿರುವುದು ಇದು ಮೊದಲೇನಲ್ಲ. 'ಅಸ್ಸಾಂ ಮಳೆ ಹಾನಿಯಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದರೂ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಸಾಂತ್ವನ ಹೇಳಿಲ್ಲ. ಸಂತ್ರಸ್ತರ ಜತೆ ಮೋದಿ ಇರುವ ಫೋಟೋ ತೋರಿಸಿದರೆ 25 ಸಾವಿರ ಬಹುಮಾನ ನೀಡುತ್ತೇನೆ' ಎಂದು ಕಳೆದ ವರ್ಷ ರಮ್ಯಾ ಟ್ವೀಟ್ ಮಾಡಿದ್ದರು.
ಮೋದಿ ಕುರಿತು ರಮ್ಯಾ ಅವಹೇಳನಕಾರಿಯಾಗಿ ಟ್ವೀಟ್ ಮಾಡಿದ್ದಾರೆ ಎಂದು ಆರೋಪಿಸಿದ್ದ ಬಿಜೆಪಿ ಕಾರ್ಯಕರ್ತರು, ರಮ್ಯಾಗೆ ಆಟಿಕೆ ಸಾಮಾನು, ಒಂದು ಜತೆ ಡ್ರೆಸ್ ಅನ್ನು ಗೌರಿ ಹಬ್ಬದ ಸಂದರ್ಭದಲ್ಲಿ ಬಾಗಿನದ ರೂಪದಲ್ಲಿ ಕಳುಹಿಸಿದ್ದರು.












Click it and Unblock the Notifications