ಕೃಷಿ ಸಚಿವರ ವಿರುದ್ಧ ಪೇ-ಸಿಎಸ್ ಅಭಿಯಾನ: ಬಿಜೆಪಿ ಕಾರ್ಯಕರ್ತರು ಪೊಲೀಸರ ವಶ
ಮಂಡ್ಯ, ಆಗಸ್ಟ್ 10: ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚೆಲುವರಾಯಸ್ವಾಮಿ ವಿರುದ್ಧ ಬಿಜೆಪಿ ಪಕ್ಷದ ಕಾರ್ಯಕರ್ತರು ಮಂಡ್ಯ ನಗರದಲ್ಲಿ ಪೇ-ಸಿಎಸ್ ಅಭಿಯಾನ ನಡೆಸಿದ ಹಿನ್ನೆಲೆಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಂಡ್ಯ ನಗರದ ಜಯಚಾಮರಾಜೇಂದ್ರ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಸಚಿವ ಚಲುವರಾಯಸ್ವಾಮಿ ಭಾವಚಿತ್ರ ಇದ್ದ ಫ್ಲೆಕ್ಸ್‌ಗೆ 'ಪೇ-ಸಿಎಸ್' ಅಭಿಯಾನದ ಪೋಸ್ಟರ್ ಅಂಟಿಸಿ ಸಚಿವರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹೆದ್ದಾರಿಯ ಮಧ್ಯಭಾಗದ ಕಲ್ಲುಗಳಿಗೂ ಪೋಸ್ಟರ್ ಅಂಟಿಸಿದ ಬಿಜೆಪಿ ಪಕ್ಷದ ಐವರು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆಕ್ಕೆ ಪಡೆದರು. ಅಲ್ಲದೆ, ಪೇ ಸಿಎಸ್ ಪೋಸ್ಟರ್‌ಗಳನ್ನು ಕಿತ್ತು ಹಾಕಿದ್ದಾರೆ.

ಬಿಜೆಪಿ ಕಾರ್ಯಕರ್ತರಾದ ಸಿ.ಟಿ. ಮಂಜುನಾಥ್, ಶಿವಕುಮಾರ್ ಆರಾಧ್ಯ, ಪ್ರಸನ್ನ, ಶಿವಕುಮಾರ್, ವಿನೋಬಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೃಷಿ ಇಲಾಖೆಯ ಅಧಿಕಾರಿಗಳ ಹೆಸರಿನಲ್ಲಿ ಸಚಿವ ಎನ್. ಚಲುವರಾಯಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ದೂರು ಸಲ್ಲಿಕೆಯಾಗಿತ್ತು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ರಾಜ್ಯಪಾಲರು ಪತ್ರವನ್ನು ಕಳುಹಿಸಿಕೊಟ್ಟಿದ್ದರು. ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ ಪ್ರಕರಣ ಕುರಿತು ಸಿಐಡಿ ಪ್ರಕರಣ ಚುರುಕುಗೊಂಡಿರುವ ಬೆನ್ನೆಲ್ಲೇ ಬಿಜೆಪಿಯು ಸಚಿವರ ವಿರುದ್ಧ ಪೇ-ಸಿಎಸ್ ಅಭಿಯಾನ ಆರಂಭಿಸಿದೆ.
ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ಸರ್ಕಾರದ ವಿರುದ್ಧ ಶೇ.40 ಕಮಿಷನ್ ಆರೋಪ ಮಾಡಿದ್ದ ಕಾಂಗ್ರೆಸ್ ಪೇ-ಸಿಎಂ ಅಭಿಯಾನ ಮಾಡಿತ್ತು. ಇದೀಗ ಕಾಂಗ್ರೆಸ್ ಸರ್ಕಾರದ ಸಚಿವರ ವಿರುದ್ಧ ಇದೇ ಮಾದರಿಯ ಅಭಿಯಾನವನ್ನು ಬಿಜೆಪಿ ನಡೆಸಿದೆ.

ಇನ್ನು ಕೃಷಿ ಇಲಾಖೆ ಅಧಿಕಾರಿಗಳ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿರುವ ಕೃಷಿ ಸಚಿವರ ರಾಜೀನಾಮೆ ಹಾಗೂ ರಾಜ್ಯ ಸರ್ಕಾರದ ಮಂತ್ರಿಗಳು ಮಾಡುತ್ತಿರುವ ಭ್ರಷ್ಟಾಚಾರ ವಿರೋಧಿಸಿ ಆ. 11ರಂದು ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಮಂಡ್ಯ ಜಿಲ್ಲಾ ಬಿಜೆಪಿ ತಿಳಿಸಿದೆ.
ಎನ್. ಚಲುವರಾಯಸ್ವಾಮಿ ಅವರು ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಮೂಲಕ ಪ್ರತಿ ತಾಲೂಕಿನ ಕೃಷಿ ಅಧಿಕಾರಿಗಳಿಂದ 6 ರಿಂದ 8 ಲಕ್ಷ ಲಂಚದ ಹಣವನ್ನು ಸಂಗ್ರಹ ಮಾಡಲು ಸೂಚಿಸಿದ್ದರ ವಿರುದ್ಧ ರಾಜ್ಯಪಾಲರಿಗೆ ಅಧಿಕಾರಿಗಳು ಪತ್ರ ಬರೆದು ನಮ್ಮ ಕುಟುಂಬ ಸಮೇತ ವಿಷ ಕುಡಿಯುತ್ತೇವೆ ಎಂದು ವಿವರಿಸಿದ್ದಾರೆ. ರಾಜ್ಯ ಸರ್ಕಾರದ ಇತಿಹಾಸದಲ್ಲೇ ಅಧಿಕಾರಿಗಳು ಸಚಿವರ ವಿರುದ್ದ ಪತ್ರ ಬರೆದಿರುವುದು ಲಜ್ಜೆಗೇಡಿತನದ ಸಂಗತಿಯಾಗಿದೆ. ಈ ಕೂಡಲೇ ಸಚಿವರು ಆರೋಪ ಮುಕ್ತರಾಗುವವರೆಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆಗೆ ಸಹಕಾರ ನೀಡಬೇಕು ಎಂದು ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದ್ದಾರೆ.












Click it and Unblock the Notifications