ಸಂಸದೆ ಸಮಲತಾ ಅಂಬರೀಶ್ ರನ್ನು ಬಿಜೆಪಿ ನಾಯಕರು ಮರೆತೇ ಬಿಟ್ರಾ?
ಮಂಡ್ಯ, ನವೆಂಬರ್ 27: ರಾಜ್ಯದಲ್ಲಿ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡ ಬಳಿಕ ಬಿಜೆಪಿ ನಾಯಕರು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರನ್ನು ಮರೆತೇ ಬಿಟ್ಟರಾ? ಹೀಗೊಂದು ಪ್ರಶ್ನೆ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ಇತ್ತೀಚೆಗಿನ ದಿನಗಳಲ್ಲಿ ಸುಮಲತಾ ಅವರೊಂದಿಗೆ ಬಿಜೆಪಿ ನಾಯಕರು ಕಾಣಿಸಿಕೊಳ್ಳುತ್ತಿಲ್ಲ. ಜತೆಗೆ ರಾಜಕೀಯಕ್ಕೆ ಸಂಬಂಧಿಸಿದಂತೆ ಯಾವುದೇ ಹೇಳಿಕೆಗಳನ್ನು ನೀಡುತ್ತಿಲ್ಲ. ಇದೆಲ್ಲವನ್ನು ಗಮನಿಸಿದರೆ ಚುನಾವಣೆ ಮುನ್ನವೇ ಬೇಡವಾದರಾ? ಎಂಬ ಸಂಶಯ ಕಾಡಲಾರಂಭಿಸಿದೆ.

ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಕಂಡ ಸುಮಲತಾ ಅವರಿಗೆ ಯಾವುದೇ ರಾಜಕೀಯ ಪಕ್ಷ ಅನಿವಾರ್ಯವಲ್ಲ. ಆದರೆ ಕಳೆದ ಚುನಾವಣೆಗೂ ಈ ಬಾರಿ ನಡೆಯಲಿರುವ ಚುನಾವಣೆಗೆ ಬಹಳಷ್ಟು ವ್ಯತ್ಯಾಸಗಳಿರುವುದರಿಂದ ಮತ್ತು ಸದ್ಯ ಅವರನ್ನು ಮತದಾರರು ಕೂಡ ರಾಜಕಾರಣಿಯನ್ನಾಗಿಯೇ ನೋಡುವುದರಿಂದ, ಹಿಂದಿನ ಅನುಕಂಪ ಈ ಬಾರಿ ದೊರೆಯುವುದು ದೂರದ ಮಾತಾಗಿದೆ. ಜೆಡಿಎಸ್ ನೊಂದಿಗಿನ ಮೈತ್ರಿ ಬಳಿಕದ ಬೆಳವಣಿಗೆಗಳು ಸುಮಲತಾ ಅವರಿಗೆ ಪೂರಕನಾ? ಮಾರಕನಾ? ಎಂಬುದು ಈಗ ಎಲ್ಲರ ಮುಂದಿರುವ ಕುತೂಹಲವಾಗಿದೆ.
ಈ ಹಿಂದೆಯೇ ನಾನು ರಾಜಕೀಯ ಬಿಡುತ್ತೇನೆ ಆದರೆ ಸ್ವಾಭಿಮಾನ ಬಿಡಲ್ಲ. ನಾನು ಮಂಡ್ಯದವಳು ಮಂಡ್ಯದಲ್ಲಿಯೇ ಇರುತ್ತೇನೆ. ಇಲ್ಲಿಯೇ ರಾಜಕಾರಣ ಮಾಡುತ್ತೇನೆ ಎಂಬ ಮಾತನ್ನು ಸುಮಲತಾ ಹೇಳಿಕೊಂಡೇ ಬಂದಿದ್ದಾರೆ. ಮತ್ತು ಅದಕ್ಕೆ ಬದ್ಧವಾಗಿಯೇ ಉಳಿಯುವ ತೀರ್ಮಾನವನ್ನು ಮಾಡಿದ್ದಾರೆ. ಹೀಗಾಗಿ ಬಿಜೆಪಿ - ಜೆಡಿಎಸ್ ಮೈತ್ರಿಯ ಬಗ್ಗೆ ಯಾವುದೇ ಅಧೀಕೃತ ಮಾಹಿತಿ ಇಲ್ಲ. ನನ್ನ ಅಭಿಪ್ರಾಯವನ್ನು ಯಾರೂ ಕೇಳಿಲ್ಲ. ಸ್ಪರ್ಧೆ ಕುರಿತಂತೆ ಇನ್ನೂ ಈಗ್ಲೇ ಏನೂ ಹೇಳುವುದಿಲ್ಲ ಎನ್ನುವ ಮೂಲಕ ತಮ್ಮ ನಿಲುವು ಏನು ಎಂಬುದನ್ನು ಪರೋಕ್ಷವಾಗಿಯೇ ಎದುರಾಳಿಗಳಿಗೆ ರವಾನಿಸಿದ್ದಾರೆ.
ರಮ್ಯಾ ಹೆಸರನ್ನು ತೇಲಿ ಬಿಟ್ಟ ಕೈ ನಾಯಕರು
ಇದೆಲ್ಲದರ ನಡುವೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಟಾರ್ ವಾರ್ ಗಳು ನಡೆಯುತ್ತವೆ ಎಂಬ ಮಾತುಗಳು ಹರಿದಾಡುತ್ತಿವೆ. ಜೆಡಿಎಸ್ ನಾಯಕರು ಹೆಚ್.ಡಿ,ಕುಮಾರಸ್ವಾಮಿ ಅವರ ಪುತ್ರ ನಟ ನಿಖಿಲ್ ಕುಮಾರಸ್ವಾಮಿ ಅವರನ್ನು ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸುವಂತೆ ಮಾಡುವ ಹಠಕ್ಕೆ ಬಿದ್ದರೆ, ಕಾಂಗ್ರೆಸ್ ನ ಕೆಲವು ನಾಯಕರು ನಟಿ, ಮಾಜೆ ಸಂಸದೆ ರಮ್ಯಾ ಅವರನ್ನು ಕಣಕ್ಕಿಸಬೇಕು ಎನ್ನುವ ಮಾತುಗಳನ್ನು ತೇಲಿ ಬಿಟ್ಟಿದ್ದಾರೆ. ಇದು ಎಲ್ಲೋ ಒಂದು ಕಡೆ ಮಂಡ್ಯದ ಕಾಂಗ್ರೆಸ್ ಪ್ರಭಾವಿ ನಾಯಕ, ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ಅವರಿಗೆ ಕಸಿವಿಸಿಯನ್ನುಂಟು ಮಾಡಿದೆ. ಕಾರಣ ಅವರು ತಮ್ಮ ಪತ್ನಿಯನ್ನು ಕಣಕ್ಕಿಳಿಸಲು ಕಸರತ್ತು ನಡೆಸುತ್ತಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್ ಅವರಿಗೆ ರೈತಸಂಘ ಬೆಂಬಲ ನೀಡಿತ್ತು. ಆದರೆ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜತೆಗೂಡಿ ಮೇಲುಕೋಟೆ ಕ್ಷೇತ್ರವನ್ನು ಗೆದ್ದುಕೊಂಡಿದೆ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಜತೆಗೆ ಹೋಗುವುದು ಖಚಿತವಾಗಿದೆ. ಇನ್ನು ಮಂಡ್ಯದಲ್ಲಿ ಜೆಡಿಎಸ್ ಪ್ರಭಾವ ಇರುವುದರಿಂದ ಬಿಜೆಪಿ ಮೈತ್ರಿ ಮಾಡಿಕೊಂಡರೆ ಜೆಡಿಎಸ್ ಸೂಚಿಸುವ ಅಭ್ಯರ್ಥಿಗೆ ಮಣೆ ಹಾಕಬೇಕಾದ ಪ್ರಸಂಗ ಬಂದರೂ ಅಚ್ಚರಿಯಿಲ್ಲ. ಆಗ ಸುಮಲತಾ ಅವರ ನಿರ್ಧಾರ ಏನಿರಬಹುದು ಎಂಬುದೇ ನಿಗೂಢವಾಗಿದೆ.
ಅಂತಿಮ ತೀರ್ಮಾನಗಳು ಹೇಗಿವೆಯೋ?
ಕಾಂಗ್ರೆಸ್ ಸದ್ಯಕ್ಕೆ ಅಭ್ಯರ್ಥಿ ಕುರಿತಂತೆ ಯಾವುದೇ ರೀತಿಯ ಸುಳಿವು ಬಿಟ್ಟುಕೊಡುತ್ತಿಲ್ಲ. ಅರ್ಹ ಅಭ್ಯರ್ಥಿಯನ್ನು ಅದರಲ್ಲೂ ಗೆಲ್ಲಬಹುದಾದ ಅಭ್ಯರ್ಥಿಯನ್ನೇ ಕಣಕ್ಕಿಳಿಸುವುದು ಅನಿವಾರ್ಯವಾಗಿದೆ. ಹೀಗಾಗಿ ಹುಡುಕಾಟ ನಡೆಯುತ್ತಿದೆ. ಜತೆಗೆ ಬಿಜೆಪಿ ಮತ್ತು ಜೆಡಿಎಸ್ ನಲ್ಲಿ ಏನೇನು ಬೆಳವಣಿಗೆ ಆಗುತ್ತದೆ. ಅದನ್ನು ನೋಡಿಕೊಂಡೇ ಮುಂದಿನ ತೀರ್ಮಾನಕ್ಕೆ ಕೈ ನಾಯಕರು ಬಂದರೂ ಅಚ್ಚರಿ ಪಡಬೇಕಾಗಿಲ್ಲ.
ಬಿಜೆಪಿ ವರಿಷ್ಠರು ಮಾತುಕತೆ ನಡೆಸಿ ಸುಮಲತಾ ಅಂಬರೀಶ್ ಅವರಿಗೆ ಬೇರೆ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮನವೊಲಿಸುವ ಪ್ರಯತ್ನ ನಡೆದರೂ ಅಚ್ಚರಿಪಡಬೇಕಾಗಿಲ್ಲ. ರಾಜಕೀಯದಲ್ಲಿ ಯಾವುದೂ ಅಸಾಧ್ಯ ಎನ್ನಲಾಗದು. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದ ಸದ್ಯಕ್ಕೆ ಮಂಡ್ಯದಲ್ಲಿ ಹಾಲಿ ಸಂಸದೆ ಸುಮಲತಾರ ರಾಜಕೀಯ ಸ್ಥಿತಿ ಅತಂತ್ರವಾಗಿ ಮೇಲ್ನೋಟಕ್ಕೆ ಕಾಣಿಸಿದರೂ ಅದೇ ಅಂತಿಮ ಅಲ್ಲ. ಕಾರಣ ಈಗಾಗಲೇ ಚುನಾವಣಾ ರಾಜಕೀಯಕ್ಕೆ ಡಿ.ವಿ,ಸದಾನಂದ ಗೌಡರು ರಾಜೀನಾಮೆ ನೀಡಿದ್ದು ಅವರು ಪ್ರತಿನಿಧಿಸುತ್ತಿರುವ ಬೆಂಗಳೂರು ಉತ್ತರ ಕ್ಷೇತ್ರ ಖಾಲಿಯಿದೆ ಎನ್ನುವುದು ನಮಗೆಲ್ಲರಿಗೂ ಗೊತ್ತಿರುವ ವಿಚಾರವೇ ಹೀಗಾಗಿ ಅಂತಿಮ ತೀರ್ಮಾನಗಳು ಹೇಗಿವೆಯೋ ಹೇಳಲಾಗದು.












Click it and Unblock the Notifications