ಮಂಡ್ಯದಲ್ಲಿ ಜೆಡಿಎಸ್ ಗೆ ಪೈಪೋಟಿ ನೀಡುತ್ತಾ ಬಿಜೆಪಿ?
ಮಂಡ್ಯ, ಅಕ್ಟೋಬರ್.08: ಸಿ.ಎಸ್.ಪುಟ್ಟರಾಜು ರಾಜೀನಾಮೆ ನೀಡಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಗೆಲುವು ಪಡೆದ ಹಿನ್ನಲೆಯಲ್ಲಿ ಅವರಿಂದ ತೆರವಾಗಿದ್ದ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಚುನಾವಣಾ ಆಯೋಗವು ಉಪಚುನಾವಣೆಯ ದಿನಾಂಕ ಘೋಷಣೆ ಮಾಡಿದ ಬೆನ್ನಲ್ಲೇ ಮಂಡ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಬಿಜೆಪಿಯೂ ಜೆಡಿಎಸ್ ಗೆ ಸ್ಪರ್ಧೆ ನೀಡಲು ತಯಾರಿ ನಡೆಸುತ್ತಿದೆ.
ಜೆಡಿಎಸ್ ನ ಭದ್ರಕೋಟೆ ಎಂದೇ ರಾಜ್ಯದಲ್ಲಿ ಬಿಂಬಿತವಾಗಿರುವ ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಹೊರತು ಪಡಿಸಿ ಬೇರೆ ಪಕ್ಷಗಳು ಸದ್ಯದ ಮಟ್ಟಿಗೆ ಗೆಲುವು ಪಡೆಯುವುದು ಅಸಾಧ್ಯವೇ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಮಣಿಸಿ ಗೆಲುವು ಸಾಧಿಸುವ ಮೂಲಕ ಎಚ್.ಡಿ. ಕುಮಾರಸ್ವಾಮಿ ಅವರನ್ನು ಸಿಎಂ ಮಾಡುವಲ್ಲಿ ಇಲ್ಲಿನ ಶಾಸಕರ ಪಾತ್ರವೂ ಇದೆ.
ಮಂಡ್ಯದಲ್ಲಿ ಜೆಡಿಎಸ್ ನಿಂದ ಯಾರೇ ಕಣಕ್ಕಿಳಿದರೂ ಗೆಲುವು ಖಚಿತ ಎಂಬ ಅಭಿಪ್ರಾಯಕ್ಕೆ ಬಂದಿರುವ ಕಾರಣದಿಂದಲೇ ಹೆಚ್ಚಿನ ನಾಯಕರು ಇಲ್ಲಿ ಸ್ಪರ್ಧಿಸಲು ಉತ್ಸಾಹ ತೋರುತ್ತಿದ್ದಾರೆ. ಇದೀಗ ಉತ್ಸಾಹದಲ್ಲಿರುವ ಜೆಡಿಎಸ್ ನಾಯಕರಿಗೆ ಬಿಜೆಪಿ ಪೈಪೋಟಿ ನೀಡಲೇಬೇಕಾಗಿದೆ. ಮುಂದೆ ಓದಿ...

ತಂತ್ರ ರೂಪಿಸುವ ಯತ್ನದಲ್ಲಿ ಬಿಜೆಪಿ
ಗೆಲುವು, ಸೋಲು ಒತ್ತಟ್ಟಿಗಿರಲಿ ಈಗ ಜೆಡಿಎಸ್ ಮುಂದೆ ಪೈಪೋಟಿ ನೀಡಲೇಬೇಕಾದ ಅನಿವಾರ್ಯತೆ ಬಿಜೆಪಿ ಬಂದೊದಗಿದೆ. ರಾಜ್ಯದಲ್ಲಿ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡಿರುವ ಕಾರಣ ಕಾಂಗ್ರೆಸ್‌ನಿಂದ ಅಭ್ಯರ್ಥಿಯಂತೂ ಕಣಕ್ಕಿಳಿಯುವುದಿಲ್ಲ. ಹೀಗಿರುವಾಗ ಜೆಡಿಎಸ್ ಗೆ ಕಾಂಗ್ರೆಸ್ ಬೆಂಬಲ ನೀಡಲಿದೆ.
ಇದರ ನಡುವೆ ಬಿಜೆಪಿಯಿಂದಲೂ ಯಾರಾದರೊಬ್ಬರನ್ನು ಕಣಕ್ಕಿಳಿಸಲೇಬೇಕಾಗಿದೆ. ಹೇಳಿ ಕೇಳಿ ಉಪಚುನಾವಣೆಯಾಗಿರುವುದರಿಂದ ಇನ್ನು ಕೆಲವೇ ತಿಂಗಳಲ್ಲಿ ಮತ್ತೆ ಲೋಕಸಭಾ ಚುನಾವಣೆ ಬರಲಿದೆ. ಈ ಚುನಾವಣೆಯನ್ನು ಎದುರಿಸಿ ಮತ್ತೆ ಚುನಾವಣೆಗೆ ಹೋಗಬೇಕಾಗಿದೆ.
ಈ ಚುನಾವಣೆ ಎರಡು ಪಕ್ಷಗಳಿಗೂ ಚುನಾವಣೆ ಪ್ರತಿಷ್ಠೆಯಾಗಿ ಪರಿಣಮಿಸಿದೆ. ಜೆಡಿಎಸ್ ನಾಯಕರು ಸದ್ಯದ ಮಟ್ಟಿಗೆ ನಮ್ಮ ಅಭ್ಯರ್ಥಿಗಳೇ ಇಲ್ಲಿ ಗೆಲುವು ಸಾಧಿಸುತ್ತಾರೆ ಎಂಬ ಆತ್ಮವಿಶ್ವಾಸದಲ್ಲಿದ್ದಾರೆ. ಬಿಜೆಪಿ ಕೂಡ ಗೆಲುವಿಗಾಗಿ ತಂತ್ರ ರೂಪಿಸುವ ಯತ್ನದಲ್ಲಿದೆ.

ತುದಿಗಾಲಲ್ಲಿ ನಿಂತಿರುವ ಮುಖಂಡರು
ಈ ಬಾರಿಯ ಲೋಕಸಭಾ ಉಪಚುನಾವಣೆಗೆ ಬಿಜೆಪಿಯಿಂದ ಕಣಕ್ಕಿಳಿಯಲು ಜಿಲ್ಲೆಯ ಹಲವು ಮುಖಂಡರು ತುದಿಗಾಲಲ್ಲಿ ನಿಂತಿದ್ದಾರೆ.
ಅವರ ಪೈಕಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ ಪರಾಜಿತರಾಗಿದ್ದ ಜಿಪಂ ಸದಸ್ಯ ಎನ್. ಶಿವಣ್ಣ ಹಾಗೂ ಶ್ರೀರಂಗಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನುಭವಿಸಿದ್ದ ರೈತ ಮುಖಂಡ ಕೆ.ಎಸ್. ನಂಜುಂಡೇಗೌಡ ಹಾಗೂ ೫ ರೂ. ವೈದ್ಯ ಎಂದೇ ಖ್ಯಾತರಾಗಿರುವ ಚರ್ಮರೋಗ ತಜ್ಞ ಡಾ. ಶಂಕರಗೌಡ, ನರೇಂದ್ರ ಮೋದಿ ವಿಚಾರಮಂಥ್ ರಾಜ್ಯ ಕಾರ್ಯದರ್ಶಿ ಸಿ.ಟಿ.ಮಂಜುನಾಥ್ ಕೂಡ ಆಕಾಂಕ್ಷಿಗಳಾಗಿದ್ದಾರೆ.

ಯಾರಿಗೆ ಟಿಕೆಟ್?
ಆದರೆ ಇವರ ಪೈಕಿ ಯಾರಿಗೆ ಟಿಕೆಟ್ ಅನ್ನು ಬಿಜೆಪಿ ನಾಯಕರು ನೀಡುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ. ಸ್ಥಳೀಯ ನಾಯಕರಿಗೆ ಮಣೆ ಹಾಕುತ್ತಾರಾ ಅಥವಾ ಬೇರೆ ಕಡೆಯಿಂದ ಪ್ರಭಾವಿ ನಾಯಕರನ್ನು ಇಲ್ಲಿಗೆ ಕರೆಯಿಸಿಕೊಳ್ಳುತ್ತಾರಾ ಎಂಬ ಸಂಶಯವೂ ಇದೆ.
ಏನೇ ಆದರೂ ಬಿಜೆಪಿಯಿಂದ ಯಾರನ್ನಾದರೂ ಕಣಕ್ಕಿಳಿಸಲೇಬೇಕಾಗಿದೆ. ಜತೆಗೆ ಗೆಲುವಿಗೆ ಏನೆಲ್ಲ ತಂತ್ರವನ್ನು ಬಳಸಬಹುದೋ ಅದನೆಲ್ಲ ಮಾಡಲೇಬೇಕಾಗಿದೆ. ಅದು ಅನಿವಾರ್ಯವೂ ಆಗಿದೆ.
ಕಾದು ನೋಡಬೇಕಾಗಿದೆ

ಏನೆಲ್ಲ ಬೆಳವಣಿಗೆಯಾಗಲಿವೆ?
ಹಾಗೆ ನೋಡಿದರೆ ಲೋಕಸಭಾ ಚುನಾವಣೆಯ ಬಗ್ಗೆ ಮೂರು ಪಕ್ಷಗಳ ನಾಯಕರಲ್ಲಿಯೂ ಒಲವಿಲ್ಲ. ಹಾಗೆಂದು ಚುನಾವಣೆಯಿಂದ ಹಿಂದೆ ಸರಿಯಲು ಯಾರೂ ಕೂಡ ತಯಾರಿಲ್ಲ. ಎಲ್ಲರಿಗೂ ಈ ಚುನಾವಣೆ ಪ್ರತಿಷ್ಠೆಯ ಕಣವಾಗಿದ್ದು ಮುಂದೆ ಏನೆಲ್ಲ ಬೆಳವಣಿಗೆಯಾಗಲಿವೆ ಎಂಬುದನ್ನು ಕಾದು ನೋಡಬೇಕಾಗಿದೆ.












Click it and Unblock the Notifications