ಸರ್ಕಾರ ಹೆಚ್ಚು ದಿನ ಉಳಿಯೊಲ್ಲ ಎಂಬ ಸುಳಿವು ನೀಡಿದರಾ ನಿಖಿಲ್ ಕುಮಾರಸ್ವಾಮಿ?
ಮಂಡ್ಯ, ಜೂನ್ 6: ಜೆಡಿಎಸ್ ಕಾರ್ಯಕರ್ತರೊಂದಿಗೆ ಮಾತನಾಡುತ್ತಿದ್ದ ವೇಳೆ ನಿಖಿಲ್ ಕುಮಾರಸ್ವಾಮಿ ಅವರು ಚುನಾವಣೆ ಎದುರಿಸಲು ಸಿದ್ಧರಾಗಿರಿ ಎಂದು ಸಲಹೆ ನೀಡುವ ವಿಡಿಯೋ ವೈರಲ್ ಆಗಿದೆ.
ಅನೇಕ ಕಾರ್ಯಕರ್ತರ ಜತೆ ಕುಳಿತು ಚುನಾವಣೆಗೆ ಸಿದ್ಧತೆ ನಡೆಸುವಂತೆ ನಿಖಿಲ್ ಮಾತನಾಡಿರುವುದು ಸಮ್ಮಿಶ್ರ ಸರ್ಕಾರದ ಅಳಿವು ಉಳಿವಿನ ಕುರಿತಾದ ಸಂದೇಹಗಳನ್ನು ಹೆಚ್ಚಿಸಿದೆ. ಆರಂಭದ ದಿನದಿಂದಲೂ ಅಲುಗಾಡುತ್ತಲೇ ಒಂದು ವರ್ಷ ಪೂರೈಸಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಇನ್ನೂ ಕಂಟಕ ದೂರವಾಗಿಲ್ಲ. ಮೈತ್ರಿ ಸರ್ಕಾರದ ನಾಯಕರ ಹೇಳಿಕೆಗಳು, ಚುನಾವಣೆಯಲ್ಲಿನ ಸೋಲು ಸರ್ಕಾರದ ಭವಿಷ್ಯವನ್ನು ತೂಗುಯ್ಯಾಲೆಯಲ್ಲಿಯೇ ಇರಿಸಿದೆ.
ಮಂಡ್ಯಕ್ಕೆ ಮತ್ತೆ ಬರ್ತಾರೆ ನಿಖಿಲ್ ! ವಿಡಿಯೋ ಸಖತ್ ವೈರಲ್
ಬಿಜೆಪಿಯನ್ನು ಅಧಿಕಾರಕ್ಕೆ ಬರದಂತೆ ತಡೆಯಲು ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡೂ ಪಕ್ಷಗಳಿಗೆ ಸರ್ಕಾರವನ್ನು ಉಳಿಸಿಕೊಳ್ಳುವುದು ಅನಿವಾರ್ಯವಾಗಿದೆ. ಈಗಾಗಲೇ ಲೋಕಸಭೆ ಚುನಾವಣೆಯಲ್ಲಿ ಪ್ರಚಂಡ ಜಯಗಳಿಸಿರುವ ಬಿಜೆಪಿ, ರಾಜ್ಯದಲ್ಲಿ ಚುನಾವಣೆ ನಡೆದರೆ ಅದೇ ಅಲೆಯಲ್ಲಿ ಇಲ್ಲಿಯೂ ಸರ್ಕಾರ ರಚಿಸುವುದು ಖಚಿತ ಎಂಬ ಭಯ ಕಾಡುತ್ತಿದೆ.
ಆದರೆ, ಸರ್ಕಾರ ಉಳಿಸಿಕೊಳ್ಳುವುದು ಅಷ್ಟು ಸುಲಭವಾಗಿಲ್ಲ. ಅತೃಪ್ತ ಶಾಸಕರು ಪದೇ ಪದೇ ಸರ್ಕಾರ ಹಾಗೂ ತಮ್ಮ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲಿಯೂ ಹಿರಿಯ ನಾಯಕರ ಸಿಟ್ಟು ಸರ್ಕಾರಕ್ಕೆ ಸಂಚಕಾರ ತರಲಿದೆ ಎಂದು ಹೇಳಲಾಗುತ್ತಿದೆ.
ಖರ್ಗೆ ಆಶೀರ್ವಾದ ಪಡೆದು ರಾಜಕಾರಣ ಚರ್ಚಿಸಿದ ನಿಖಿಲ್ ಕುಮಾರಸ್ವಾಮಿ
ಈ ಹಿನ್ನೆಲೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಜೆಡಿಎಸ್ ಕಾರ್ಯಕರ್ತರೊಂದಿಗೆ ಆಡಿದ ಮಾತುಗಳು, ಜೆಡಿಎಸ್ ಮತ್ತೊಂದು ಚುನಾವಣೆ ಎದುರಿಸಲು ಸನ್ನದ್ಧವಾಗುತ್ತದೆಯೇ ಎಂಬ ಪ್ರಶ್ನೆ ಮೂಡಿಸಿದೆ.

ಕುಮಾರಣ್ಣನೆ ಇರುತ್ತಾರೆ
ವಿಡಿಯೋದಲ್ಲಿ ಆರಂಭದಲ್ಲಿ ಮಾತನಾಡುವಾಗ ನಿಖಿಲ್ ಕುಮಾರಸ್ವಾಮಿ ಅವರು, ಸರ್ಕಾರಕ್ಕೆ ಯಾವ ಸಂಕಷ್ಟವೂ ಇಲ್ಲ ಎಂದು ಜೆಡಿಎಸ್ ಕಾರ್ಯಕರ್ತರನ್ನು ಸಮಾಧಾನಪಡಿಸುತ್ತಾರೆ. ಸರ್ಕಾರಕ್ಕೇನೂ ತೊಂದರೆ ಆಗುವುದಿಲ್ಲ. ಒಳಗಿರುವ ನಮಗೆ ಅದರ ಬಗ್ಗೆ ಹೇಗಿದ್ದರೂ ಗೊತ್ತಿದೆಯಲ್ಲ. ನಾಲ್ಕು ವರ್ಷವೂ ಕುಮಾರಣ್ಣ ಅವರೇ ಸರ್ಕಾರ ನಡೆಸುತ್ತಾರೆ ಎಂದು ನಿಖಿಲ್ ಹೇಳಿದ್ದಾರೆ.

ಚುನಾವಣೆ ಬರಬಹುದು
ಮಾಧ್ಯಮಗಳಲ್ಲಿ ಬರುವ ವರದಿಗಳನ್ನು ನೋಡಿ ಟೆನ್ಷನ್ ಆಗಬೇಡಿ ಎಂದಿರುವ ನಿಖಿಲ್, ಚುನಾವಣೆ ಯಾವಾಗ ನಡೆಯುತ್ತದೆಯೋ ಗೊತ್ತಿಲ್ಲ. ಯಾವಾಗ ಬೇಕಾದರೂ ಚುನಾವಣೆ ಎದುರಾಗಬಹುದು. ಒಂದು ವರ್ಷಕ್ಕೋ, ಎರಡು ವರ್ಷಕ್ಕೋ ಬರಬಹುದು. ಹಾಗಾಗಿ ಈಗಿನಿಂದಲೇ ಅದಕ್ಕೆ ಎಲ್ಲ ತಯಾರಿ ನಡೆಸಿ ಸಿದ್ಧರಾಗಿರಿ ಎಂದು ಸೂಚಿಸಿದ್ದಾರೆ.
ಮಂಡ್ಯದಲ್ಲಿ ಜಮೀನಿಗಾಗಿ ಹುಡುಕಾಟ ನಡೆಸಿದ್ದಾರೆ ನಿಖಿಲ್ ಕುಮಾರಸ್ವಾಮಿ!

ನಾನು ಸುಮ್ಮನೆ ಕೂರುವುದಿಲ್ಲ
ಚುನಾವಣೆ ಬಳಿಕ ನಿಖಿಲ್ ಏನು ಮಾಡುತ್ತಾರೆ ಎಂಬ ಪ್ರಶ್ನೆಗೆ ಇತ್ತಿಚೆಗೆ ವೈರಲ್ ಆಗಿದ್ದ ಅವರ ವಿಡಿಯೋ ಉತ್ತರ ನೀಡಿತ್ತು. 'ನಾನು ಹಿಂದಿಗಿಂತ ತುಂಬಾ ಬದಲಾಗಿದ್ದೇನೆ. ಜನರನ್ನು ಮುಖತಃ ಭೇಟಿ ಮಾಡಿದಾಗ ಮಾತ್ರ ವಾಸ್ತವ ಸಮಸ್ಯೆಗಳ ಅರಿವಾಗುತ್ತದೆ. 45-50 ದಿನ ಎಂಟು ತಾಲ್ಲೂಕುಗಳಲ್ಲಿ ಸುತ್ತಾಟ ನಡೆಸಿದ ಬಳಿಕ ನನಗೆ ಈ ವಿಚಾರ ಗೊತ್ತಾಗಿದೆ. ಜತೆಗೆ ಬೇರೆ ಜಿಲ್ಲೆಗಳನ್ನೂ ಅರ್ಥಮಾಡಿಕೊಳ್ಳಬೇಕಿದೆ. ಪಕ್ಷದ ಕಾರ್ಯಕರ್ತನಾಗಿ ಆ ಕೆಲಸ ಮಾಡುತ್ತೇನೆ' ಎಂದು ನಿಖಿಲ್ ಹೇಳಿದ್ದರು.

ಮಂಡ್ಯದಲ್ಲಿ ಮನೆ ಕಟ್ಟುತ್ತೇನೆ
ಮಂಡ್ಯದಲ್ಲಿ ಬೀಡುಬಿಡಲು ನಿರ್ಧರಿಸಿರುವ ನಿಖಿಲ್ ಕುಮಾರಸ್ವಾಮಿ, ಮಂಡ್ಯದಲ್ಲಿಯೇ ಎರಡೂವರೆ ಎಕರೆ ನೀರಾವರಿ ಜಮೀನು ಖರೀಸುವುದಾಗಿ ತಿಳಿಸಿದ್ದಾರೆ. ಅಲ್ಲಿಯೇ ಮೊದಲು ಶೆಡ್ ಹಾಕಿಕೊಂಡು ವಾಸವಿದ್ದು, ಮನೆ ಕಟ್ಟಿಸುತ್ತೇನೆ. ಈ ಮೂಲಕ ಜನರೊಂದಿಗೆ ಒಡನಾಟ ಬೆಳೆಸಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

ಪಕ್ಷ ಸಂಘಟನೆ ಮಾತುಕತೆ
ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಸೋಲು ಕಂಡ ಬಳಿಕ ಅಲ್ಲಿಯೇ ಪಕ್ಷ ಸಂಘಟನೆಯ ಕಾರ್ಯ ಆರಂಭಿಸಿರುವ ನಿಖಿಲ್ ಕುಮಾರಸ್ವಾಮಿ, ಕಾರ್ಯಕರ್ತರನ್ನು ಭೇಟಿ ಮಾಡಿ ಮುಂದಿನ ನಡೆಯ ಬಗ್ಗೆ ಸಮಾಲೋಚನೆ ನಡೆಸುತ್ತಿದ್ದಾರೆ. ಸೋಲಿನ ಬಳಿಕ ಎಚ್ಚೆತ್ತುಕೊಂಡಿರುವ ಅವರು ಚುನಾವಣೆಯಲ್ಲಿ ಆಗಿರುವ ಲೋಪಗಳನ್ನು ಪರಾಮರ್ಶಿಸಿ ಸರಿಪಡಿಸುವತ್ತ ಗಮನ ಹರಿಸುತ್ತಿದ್ದಾರೆ.