Assembly election 2023: ನನಗೆ ಡಿಮ್ಯಾಂಡ್ ಇದೆ, ಎಲ್ಲಾ ಪಕ್ಷಗಳಿಂದಲೂ ಆಹ್ವಾನವಿದೆ: ಎಲ್.ಆರ್. ಶಿವರಾಮೇಗೌಡ
ನಾಗಮಂಗಲ, ಜನವರಿ, 31: ಪಕ್ಷಕ್ಕೆ ಬರುವಂತೆ ನನಗೆ ಎರಡು ರಾಷ್ಟ್ರೀಯ ಮತ್ತು ಎರಡು ಪ್ರಾದೇಶಿಕ ಪಕ್ಷ ಸೇರಿ ಒಟ್ಟು ನಾಲ್ಕೂ ಪಕ್ಷಗಳಿಂದ ಒತ್ತಡ ಬರುತ್ತಿದೆ. ಆದರೆ ನಾನು ಯಾವ ಪಕ್ಷಕ್ಕೆ ಸೇರಬೇಕೆಂಬುದನ್ನು ನನ್ನ ಬೆಂಬಲಿಗರ ಸಲಹೆ ಸೂಚನೆ ಪಡೆದು ನಿರ್ಧರಿಸುವುದಾಗಿ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ನಾಗಮಂಗಲದಲ್ಲಿ ತಿಳಿಸಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏನೇ ಆಗಲಿ 2023ರ ಚುನಾವಣೆಯಲ್ಲಿ ನಾನು ಕ್ಷೇತ್ರದ ಶಾಸಕನಾಗಲೇಬೇಕೆಂದು ನಿರ್ಧರಿಸಿದ್ದೇನೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ನನ್ನ ಮೊದಲ ಆದ್ಯತೆಯಾಗಿದೆ. ಇದಕ್ಕಾಗಿ ಕಳೆದೆರಡು ತಿಂಗಳಿನಿಂದ ಕ್ಷೇತ್ರದಾದ್ಯಂತ ಪ್ರವಾಸ ನಡೆಸಿ ಕಾರ್ಯಕರ್ತರು ಮತ್ತು ಮತದಾರರನ್ನು ಸಂಘಟಿಸುತ್ತಿದ್ದೇನೆ ಎಂದರು.
ಅಪಾರ ಜನಬೆಂಬಲ ವ್ಯಕ್ತವಾಗುತ್ತಿರುವುದನ್ನು ಅರಿತು ನನ್ನನ್ನು ಪಕ್ಷದಿಂದ ಉಚ್ಚಾಟಿಸಿದ ಜೆಡಿಎಸ್ ಸೇರಿದಂತೆ ಕಾಂಗ್ರೆಸ್, ಬಿಜೆಪಿ ಮತ್ತು ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಪ್ರಾದೇಶಿಕ ಪಕ್ಷದ ನಾಯಕರು ಪಕ್ಷಕ್ಕೆ ಸೇರಿಸಿಕೊಳ್ಳಲು ಒತ್ತಡ ಹಾಕುತ್ತಿದ್ದಾರೆ. ಇದರಿಂದ ಯಾವ ಪಕ್ಷಕ್ಕೆ ಸೇರಬೇಕೆಂಬ ಜಿಜ್ಞಾಸೆಯಲ್ಲಿದ್ದೇನೆ. ಆದರೆ ನನ್ನ ಬೆಂಬಲಿಗರು ಮತ್ತು ಮತದಾರ ಪ್ರಭುಗಳನ್ನು ಕೇಳದೆ ನಾನು ಯಾವುದೇ ತೀರ್ಮಾನ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದರು.

ಚರ್ಚಿಸಿದ ಬಳಿಕ ಮುಂದಿನ ನಿರ್ಧಾರ
ಯಾವ ಪಕ್ಷವಾದರೂ ಸಹ ಒಂದು ಕ್ಷೇತ್ರದ ಸ್ಥಾನ ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಹಾಗಾಗಿ ನನಗೆ ಈಗ ಫುಲ್ ಡಿಮ್ಯಾಂಡ್ ಇದೆ. ಹಾಗೆಂದ ಮಾತ್ರಕ್ಕೆ ಕರೆಯುವ ಪಕ್ಷಗಳಿಗೆಲ್ಲಾ ನಾನು ಹೋಗುವುದಿಲ್ಲ. ಸೂಕ್ತ ಸ್ಥಾನಮಾನ ಕೊಟ್ಟು ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟರೆ ಯಾವ ಪಕ್ಷಕ್ಕೆ ಸೇರಬೇಕೆಂಬುದನ್ನು ನನ್ನ ಬೆಂಬಲಿಗರು, ಮುಖಂಡರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ. ಆದರೆ ನನ್ನ ಅಸ್ವಿತ್ವವನ್ನು ಮಾರಿಕೊಂಡು ಒಂದು ರಾಜಕೀಯ ಪಕ್ಷವನ್ನು ಸೇರುವುದಿಲ್ಲ ಎಂದು ತಿಳಿಸಿದರು.

ಸುರೇಶ್‌ಗೌಡಗೆ ಶಿವರಾಮೇಗೌಡ ಟಾಂಗ್
ಕಳೆದ 40 ವರ್ಷಗಳಿಂದ ಕ್ಷೇತ್ರದಲ್ಲಿ ರಾಜಕಾರಣ ಮಾಡುತ್ತಿರುವ ನಾನು ಶಾಸಕ ಸುರೇಶ್‌ಗೌಡರಿಂದ ಸ್ವಾಭಿಮಾನದ ಪಾಠ ಕಲಿಯಬೇಕಿಲ್ಲ. ನಾನು ನೋಡಿದ ನಂತರವೇ ಇವರೆಲ್ಲಾ ಕಾರು ನೋಡಿ ಜಗತ್ತು ಸುತ್ತಾಡಿರುವುದು. ಇವರ ಬಳಿ ಕೈಚಾಚುವ ಸ್ಥಿತಿ ನನಗೆ ಬಂದಿಲ್ಲ. ಸ್ವಾಭಿಮಾನವನ್ನು ಹೇಗೆ ಕಲಿತುಕೊಳ್ಳಬೇಕು ಎಂಬುದನ್ನು ಫೈಟರ್ ರವಿ ಅವರ ಹತ್ತಿರ ಇವರು ಕಲಿಯಬೇಕು ಎಂದು ಶಾಸಕ ಸುರೇಶ್‌ಗೌಡಗೆ ತಿರುಗೇಟು ನೀಡಿದರು.

ರಾಜಕೀಯವಾಗಿ ವಿರೋಧವಿದೆ
ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಮತ್ತು ನನ್ನ ನಡುವೆ ಯಾವುದೇ ರಾಜಕೀಯ ಹೊಂದಾಣಿಕೆ ಇಲ್ಲ. ಕಳೆದ ಲೋಕಸಭಾ ಉಪಚುನಾವಣೆಯಲ್ಲಿ ನನಗೆ ಬೆಂಬಲ ನೀಡಿ ಮತಹಾಕಿಸಿದ್ದಾರೆಂಬ ಕಾರಣಕ್ಕೆ ಅವರೊಂದಿಗೆ ನಾನು ಮಾತನಾಡುತ್ತಿದ್ದೇನೆ. ಇದಕ್ಕೂ ಮೊದಲು ನಾವಿಬ್ಬರು ಮಾತನಾಡುತ್ತಿರಲಿಲ್ಲ. ಸುರೇಶ್ ಗೌಡರನ್ನು ಸೋಲಿಸಲು ನಾವಿಬ್ಬರು ಒಟ್ಟಿಗೆ ಸೇರಬೇಕಿಲ್ಲ. ಸುರೇಶ್‌ಗೌಡರ ಬಗ್ಗೆ ಎಷ್ಟು ವಿರೋಧವಿದೆಯೋ, ಚಲುವರಾಯಸ್ವಾಮಿ ಬಗ್ಗೆಯೂ ಸಹ ಅಷ್ಟೇ ರಾಜಕೀಯವಾಗಿ ವಿರೋಧವಿದೆ ಎಂದರು.

ಎರಡು ಬಾರಿ ಟಿಕೆಟ್ ಸಿಕ್ಕಿದೆ
ಮಾಜಿ ಸಚಿವ ಚಲುವರಾಯಸ್ವಾಮಿ ನಡುವಿನ ಆಡಿಯೋ ಸಂಭಾಷಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಶಿವರಾಮೇಗೌಡ, ಕಾಂಗ್ರೆಸ್ ಪಕ್ಷ ಈ ಹಿಂದೆ ನಾನಿದ್ದ ಮನೆ. ಆ ಪಕ್ಷದಿಂದ ಎರಡು ಬಾರಿ ನಮ್ಮ ಮನೆಗೆ ಚುನಾವಣಾ ಟಿಕೆಟ್ ಸಿಕ್ಕಿದೆ. ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್‌ಗಾಂಧಿ ಅವರು ನಡೆಸಿದ ಪಾದಯಾತ್ರೆಗೆ ನಾನು ಕನಿಷ್ಠ 10 ಸಾವಿರ ಜನರೊಂದಿಗೆ ಪ್ರತ್ಯೇಕವಾಗಿ ಸ್ವಾಗತ ಕೋರಬೇಕೆಂಬ ಉದ್ದೇಶವಿತ್ತು. ಹಾಗಾಗಿ ಚಲುವರಾಯಸ್ವಾಮಿ ಅವರು ಜಿಲ್ಲೆಯ ನಾಯಕತ್ವ ವಹಿಸಿದ್ದ ಹಿನ್ನಲೆಯಲ್ಲಿ ಅವರೊಂದಿಗೆ ಮಾತನಾಡಿದ್ದೆ. ಇದರ ಹೊರತಾಗಿ ಕಾಂಗ್ರೆಸ್ ಪಕ್ಷ ಸೇರುವ ಅಥವಾ ರಾಜಕೀಯವಾಗಿ ಯಾವುದೇ ಚರ್ಚೆ ನಡೆಸಿಲ್ಲ. ಅಲ್ಲದೆ ಚಲುವರಾಯಸ್ವಾಮಿ ಮೂಲಕ ನಾನು ಕಾಂಗ್ರೆಸ್ ಪಕ್ಷ ಸೇರುವ ಅನಿವಾರ್ಯತೆಯಿಲ್ಲ ಎಂದು ವೈರಲ್ ಆಗಿದ್ದ ಆಡಿಯೋ ಸಂಭಾಷಣೆಗೆ ಸ್ಪಷ್ಟನೆ ನೀಡಿದರು.
ಕಳೆದ ಚುನಾವಣೆ ಹಿಂದಿನ ದಿನ ಫೈಟರ್ ರವಿ ಅವರೊಂದಿಗೆ ಮಾತನಾಡಿ ಹಣ ಸಹಾಯ ಮಾಡಿಸುವಂತೆ ಕೇಳಿದವರು ಯಾರು. ನಾನು ಮತ್ತು ಮಾಜಿ ಎಂಎಲ್‌ಸಿ ಅಪ್ಪಾಜಿಗೌಡರು ಮಾತನಾಡಿ ಸಹಾಯ ಮಾಡಿಸಿದ್ದನ್ನು ಸುರೇಶ್ ಗೌಡರು ಮರೆತಿದ್ದಾರೆಯೇ? ತಾಲೂಕಿಗೆ ಫೈಟರ್ ರವಿ ಅವರನ್ನು ಕರೆತಂದವರು ಯಾರೆಂಬುದನ್ನು ಹೇಳಲಿ ಎಂದು ಶಾಸಕ ಸುರೇಶ್‌ಗೌಡಗೆ ಸವಾಲೆಸೆದರು.
ಕಳೆದ ಜನವರಿ 22ರಂದು ವಿಧಾನಸಭಾ ಕ್ಷೇತ್ರ ಕೊಪ್ಪದಲ್ಲಿ ಆಯೋಜಿಸಿದ್ದ ಹೋಬಳಿ ಮಟ್ಟದ ಸ್ವಾಭಿಮಾನಿ ಸಮಾವೇಶಕ್ಕೆ ನಿರೀಕ್ಷೆಗೂ ಮೀರಿ ಹೆಚ್ಚು ಜನರು ಪಾಲ್ಗೊಂಡಿದ್ದರು. ಮತ್ತಷ್ಟು ಜನರು ಬರುವುದಾಗಿ ದೂರವಾಣಿ ಕರೆ ಮಾಡಿದ್ದರು. ಯಾವುದೇ ಫಲಾಪೇಕ್ಷೆಯಿಲ್ಲದೆ ಸಭೆಯನ್ನು ಯಶಸ್ವಿಗೊಳಿಸಿದ ಜನಸ್ತೋಮಕ್ಕೆ ನಾನು ಅಭಿನಂದಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ, ವಕೀಲ ಟಿ.ಕೆ.ರಾಮೇಗೌಡ, ಬಿದರಕೆರೆ ಮಂಜೇಗೌಡ, ಪುರಸಭೆ ಮಾಜಿ ಸದಸ್ಯ ಲಾರಿ ಚನ್ನಪ್ಪ, ಬ್ರಹ್ಮದೇವರಹಳ್ಳಿ ಸೋಮು ಸೇರಿದಂತೆ ಕೊಪ್ಪ ಹೋಬಳಿಯ ಮುಖಂಡರು ಉಪಸ್ಥಿತರಿದ್ದರು.












Click it and Unblock the Notifications