ವಿಧಾನಸಭೆ ಚುನಾವಣೆ 2023: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದ ಚಲುವರಾಯಸ್ವಾಮಿ
ಮಂಡ್ಯ, ಡಿಸೆಂಬರ್, 20: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲಿದೆ. ಈ ಮೂಲಕ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ ಮಂಡ್ಯದಲ್ಲಿ ಭವಿಷ್ಯ ನುಡಿದರು. ಹಾಗೆಯೇ ನಾವು ಶೋಕಿಗಾಗಿ ರಾಜಕಾರಣವನ್ನು ಮಾಡುವುದಿಲ್ಲ ಎಂದರು.
ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಸೂನಗಹಳ್ಳಿಯಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದವರನ್ನು ಸ್ವಾಗತಿಸಿ ಮಾತನಾಡಿ, ಜಿಲ್ಲೆಯಲ್ಲಿ ಏಳಕ್ಕೆ ಏಳು ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲಾಗುವುದು. ಈ ಮೂಲಕ ಅಭಿವೃದ್ಧಿಗೆ ಒಮ್ಮೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು. ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಜಿಲ್ಲೆಯ ಏಳೂ ಕ್ಷೇತ್ರಗಳಲ್ಲಿ ಹೀನಾಯವಾಗಿ ಸೋಲಿಸಿದ್ದೀರಿ. ಏಳೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಜೆಡಿಎಸ್ ಅಭ್ಯರ್ಥಿಗಳು ಏನು ಮಾಡಿದರು ಎನ್ನುವುದು ನಿಮ್ಮ ಕಣ್ಮುಂದೆಯೇ ಇದೆ. ಒಂದೂವರೆ ವರ್ಷ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿ ಆಗಿದ್ದ. ಆದರೂ ಮೈಶುಗರ್ ಕಾರ್ಖಾನೆಗೆ ಚಾಲನೆ ನೀಡಲಾಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಂಡ್ಯ ನಗರದೊಳಗಿನ ಗುಂಡಿ ಮುಚ್ಚುವುದಕ್ಕೂ ಇವರಿಂದ ಸಾಧ್ಯವಾಗಲಿಲ್ಲ. ಒಬ್ಬರಿಗೂ ಒಂದು ಆಶ್ರಯ ಮನೆಯನ್ನು ಕೊಡಲಿಲ್ಲ. ಹಾಲಿನ ಸಬ್ಸಿಡಿ ಬಿಡುಗಡೆ ಮಾಡಿಸಲಾಗಲಿಲ್ಲ. ಕೃಷಿ ಹೊಂಡ ಸ್ಥಗಿತಗೊಂಡಿತು. ಅಭಿವೃದ್ಧಿ ಮರೀಚಿಕೆಯಾಗಿಯೇ ಉಳಿಯಿತು ಎಂದು ವಿಷಾದನೀಯ ವ್ಯಕ್ತಪಡಿಸಿದರು. ಜೆಡಿಎಸ್‌ನವರನ್ನು ಏಳು ಸ್ಥಾನಗಳಲ್ಲಿ ಗೆಲ್ಲಿಸಿ ಒಂದು ಅವಕಾಶವನ್ನು ನೀಡಿದ್ದೀರಿ. ಅದೇ ರೀತಿ ಕಾಂಗ್ರೆಸ್‌ನ ಏಳು ಅಭ್ಯರ್ಥಿಗಳನ್ನು ಮುಂಬರುವ ಚುನಾವಣೆಯಲ್ಲಿ ಗೆಲ್ಲಿಸಿ ನಮಗೊಂದು ಅವಕಾಶ ಕೊಡಿ. ಜಿಲ್ಲೆಯನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸದಿದ್ದರೆ ಮುಂದೆ ಎಂದೂ ರಾಜಕಾರಣ ಮಾಡುವುದಿಲ್ಲ ಎಂದರು.

ಅವಕಾಶ ಸಿಕ್ಕಾಗ ಅಭಿವೃದ್ಧಿ ಪರ ಇರುತ್ತೇವೆ
ನಾವು ಶೋಕಿಗಾಗಿ ರಾಜಕಾರಣ ಮಾಡುವವರಲ್ಲ. ಅವಕಾಶ ಸಿಕ್ಕಾಗ ಅಭಿವೃದ್ಧಿ ಪರವಾಗಿಯೂ ರಾಜಕಾರಣ ಮಾಡಿದ್ದೇವೆ. ಸಾರಿಗೆ ಮಂತ್ರಿಯಾಗಿದ್ದ ಸಮಯದಲ್ಲಿ ನಾಗಮಂಗಲ, ಕೆ.ಆರ್.ಪೇಟೆ, ಮಳವಳ್ಳಿ, ಮಂಡ್ಯ ಸಾರಿಗೆ ಕಚೇರಿಗಳನ್ನು ಮೇಲ್ದರ್ಜೆಗೇರಿಸಿದೆ. ಶಿವಮೊಗ್ಗ ಪಾಲಾಗಿದ್ದ ಮೆಡಿಕಲ್ ಕಾಲೇಜ್ ಅನ್ನು ಮಂಡ್ಯಕ್ಕೆ ತೆಗೆದುಕೊಂಡು ಬಂದೆ. ಈಗ ಆ ಮೆಡಿಕಲ್ ಕಾಲೇಜು ಸುಣ್ಣ-ಬಣ್ಣವನ್ನು ಕಂಡಿಲ್ಲ, ಅದು ಅವ್ಯವಸ್ಥೆಯ ಆಗರವಾಗಿದೆ. ಕಾಲೇಜಿನ ಮುಂಭಾಗದ ಫುಟ್‌ಪಾತ್ ಅನ್ನು ಉತ್ತಮ ಸ್ಥಿತಿಯಲ್ಲಿಡಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ದ್ವೇಷದ ರಾಜಕಾರಣವನ್ನೂ ಮಾಡುವುದಿಲ್ಲ
ನಾವು ಯಾರಿಗೂ ವೈರಿಗಳಲ್ಲ, ದ್ವೇಷದ ರಾಜಕಾರಣವನ್ನೂ ಮಾಡುವುದಿಲ್ಲ. ಪ್ರಸ್ತುತ ಜಿಲ್ಲೆ ಎಂತಹ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ಅಭಿವೃದ್ಧಿ ವಂಚಿತವಾಗಿರುವ ಮಂಡ್ಯ ಜಿಲ್ಲೆಯನ್ನು ಹಾಸನ, ಹಾವೇರಿ, ಬೆಳಗಾವಿ, ಹುಬ್ಬಳ್ಳಿ ಜಿಲ್ಲೆಗಳಂತೆ ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದ್ದೇವೆ ಎಂದರು.

ಹೊಸಬರನ್ನ ಸ್ವಾಗತಿಸಿದ ಚಲುವರಾಯಸ್ವಾಮಿ
ಅದಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಕೋರಿದರು. ಈ ಸಂದರ್ಭದಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ ಆದವರಿಗೆ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಕಾಂಗ್ರೆಸ್ ಶಾಲು ಹಾಕಿ ಪಕ್ಷಕ್ಕೆ ಸ್ವಾಗತ ಕೋರಿದರು.

ಕಾರ್ಯಕ್ರಮದಲ್ಲಿ ಯಾರೆಲ್ಲ ಭಾಗಿ?
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ, ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಡಾ.ಎಚ್.ಕೃಷ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮಹಿಳಾ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಸಿದ್ದರಾಮೇಗೌಡ, ಶ್ರೀರಂಗಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್, ತ್ಯಾಗರಾಜ್, ಅನುರಾಧ, ಶಶಿಕಲಾ, ವೀಣಾ, ಅಂಕರಾಜು, ರಮೇಶ್ ಮಿತ್ರ, ಬೇಲೂರು ಸೋಮಶೇಖರ್, ಬೂತನಹೊಸೂರು ಗ್ರಾಮ ಪಂಚಾಯತಿ ಅಧ್ಯಕ್ಷ್ಯೆ ಅನುರಾಧ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications