ಮಂಡ್ಯ ಸೀಟು ಹಂಚಿಕೆ; ಅಮಿತ್ ಶಾ ಚರ್ಚಿಸಿದ 4 ಅಂಶಗಳು!
ಮಂಡ್ಯ, ಫೆಬ್ರವರಿ 12: ಬಿಜೆಪಿಯ ಹಿರಿಯ ನಾಯಕ ಅಮಿತ್ ಶಾ ಭಾನುವಾರ ಮೈಸೂರಿಗೆ ಆಗಮಿಸಿದ್ದರು. ಲೋಕಸಭೆ ಚುನಾವಣೆ ಎದುರಾಗುತ್ತಿರುವ ಹಿನ್ನಲೆಯಲ್ಲಿ ಅವರು ಪಕ್ಷದ ರಾಜ್ಯ ನಾಯಕರ ಜೊತೆ ಸಭೆಗಳನ್ನು ನಡೆಸಿದರು. ಈ ಸಭೆಯಲ್ಲಿ ಮಂಡ್ಯ ಕ್ಷೇತ್ರದ ಸೀಟು ಹಂಚಿಕೆ ಕುರಿತು ಸಹ ಚರ್ಚೆ ನಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಅಮಿತ್ ಶಾ ನೇತೃತ್ವದಲ್ಲಿ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಮೈಸೂರು ಕ್ಲಸ್ಟರ್ ವಿಭಾಗದ ಪ್ರಮುಖರೊಂದಿಗೆ ಸಭೆ ನಡೆಸಲಾಯಿತು. ಲೋಕಸಭೆ ಚುನಾವಣೆಯ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಮೈಸೂರು ಕ್ಲಸ್ಟರ್ ವಿಭಾಗದ ಸಭೆಯನ್ನು ಅವರು ನಡೆಸಿದ್ದು, ಕುತೂಹಲಕ್ಕೆ ಕಾರಣವಾಗಿದೆ.

2023ರ ವಿಧಾನಸಭೆ ಚುನಾವಣೆ ಬಳಿಕ ಜೆಡಿಎಸ್ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ಘೋಷಣೆ ಮಾಡಿದೆ. ಅಲ್ಲದೇ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸೀಟು ಹಂಚಿಕೆ ಮಾಡಿಕೊಂಡು ಲೋಕಸಭೆ ಚುನಾವಣೆಯನ್ನು ಎದುರಿಸಲಿವೆ. ಆದರೆ ಯಾರಿಗೆ ಯಾವ ಸೀಟು? ಎಂಬುದು ಇನ್ನೂ ಅಂತಿಮವಾಗಿಲ್ಲ.
ಅಮಿತ್ ಶಾ ನಡೆಸಿದ ಸಭೆಯಲ್ಲಿ ಮಂಡ್ಯದ ಕೆ. ಆರ್. ಪೇಟೆ ಕ್ಷೇತ್ರದ ಮಾಜಿ ಶಾಸಕ, ಮಾಜಿ ಸಚಿವ ಕೆ. ಸಿ. ನಾರಾಯಣ ಗೌಡ ಪಾಲ್ಗೊಂಡಿದ್ದರು. ಈ ಮೂಲಕ ನಾರಾಯಣ ಗೌಡ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿಗಳಿಗೆ ಅವರು ತೆರೆ ಎಳೆದರು. ಮೈತ್ರಿ ಧರ್ಮದಂತೆ ಮಂಡ್ಯದ ಸೀಟು ಯಾರಿಗೆ ಹಂಚಿಕೆಯಾಗಲಿದೆ? ಎಂಬುದು ಈಗ ಎಲ್ಲರ ಪ್ರಶ್ನೆ.
ಅಮಿತ್ ಶಾ ಚರ್ಚಿಸಿದ 4 ಅಂಶಗಳು
1. ಮೈತ್ರಿ ಧರ್ಮವನ್ನು ಪಾಲಿಸಿ; ಅಮಿತ್ ಶಾ ರಾಜ್ಯದ ಬಿಜೆಪಿ ನಾಯಕರಿಗೆ ಮೈತ್ರಿ ಧರ್ಮವನ್ನು ಪಾಲಿಸಿ ಎಂದು ಕಿವಿಮಾತು ಹೇಳಿದ್ದಾರೆ. ಮೈತ್ರಿ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ತೆಗೆದುಕೊಂಡಿದ್ದಾರೆ. ಎರಡೂ ಪಕ್ಷಗಳಿಗೆ ಸಮಾನ ಗೌರವ ಸಿಗಬೇಕು. ಯಾರೂ ಸಹ ಬೇರೆ ಬೇರೆ ವೇದಿಕೆಗಳಲ್ಲಿ ಮೈತ್ರಿ ವಿರುದ್ಧವಾಗಿ ಮಾತನಾಡಬಾರದು ಎಂದು ಅಮಿತ್ ಶಾ ಸೂಚನೆ ನೀಡಿದ್ದಾರೆ. ಮೈತ್ರಿಗೆ ಒಪ್ಪಿಗೆ ನೀಡಲಾಗಿದೆ, ಚುನಾವಣೆಯಲ್ಲಿ ಎರಡೂ ಪಕ್ಷಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ಅವರು ನಿರ್ದೇಶನ ನೀಡಿದ್ದಾರೆ.
2. ಸೀಟು ಹಂಚಿಕೆ ತೀರ್ಮಾನ; ಮೈಸೂರು ಕ್ಲಸ್ಟರ್ ವಿಭಾಗದ ಸಭೆಯಲ್ಲಿ ಮಂಡ್ಯದ 14 ಬಿಜೆಪಿ ನಾಯಕರು ಪಾಲ್ಗೊಂಡಿದ್ದರು. ಸಭೆಯಲ್ಲಿ ಮಾತನಾಡಿದ ಅಮಿತ್ ಶಾ ಮೈತ್ರಿ ಮಾಡಿಕೊಂಡಿದ್ದೇವೆ. ಚುನಾವಣೆಯಲ್ಲಿ ಒಟ್ಟಾಗಿ ಕೆಲಸ ಮಾಡಿ. ಮಂಡ್ಯ ಕ್ಷೇತ್ರವನ್ನು ಯಾರಿಗೆ ನೀಡಬೇಕು ಎಂದು ನಾವು ತೀರ್ಮಾನ ಮಾಡುತ್ತೇವೆ. ಅಭ್ಯರ್ಥಿ ಯಾವುದೇ ಪಕ್ಷದವರಾದರೂ ಗೆಲ್ಲವುದು ಮಾತ್ರವಲ್ಲ, ಭಾರೀ ಅಂತರದಿಂದ ಗೆಲ್ಲುವಂತೆ ಕೆಲಸ ಮಾಡಬೇಕು ಎಂದು ಅವರು ಸೂಚನೆ ನೀಡಿದ್ದಾರೆ.
3. ಬಿಜೆಪಿಗೆ ಲಾಭವಾಗುವ ಅಂಶಗಳು: ಅಮಿತ್ ಶಾ ಬಿಜೆಪಿ ನಾಯಕರ ಜೊತೆ ಮಂಡ್ಯವನ್ನು ಜೆಡಿಎಸ್‌ಗೆ ಹಂಚಿಕೆ ಮಾಡದೇ ತಮ್ಮಲ್ಲೇ ಉಳಿಸಿಕೊಂಡರೆ ಆಗುವ ಲಾಭಗಳ ಕುರಿತು ಚರ್ಚೆ ನಡೆಸಿದ್ದಾರೆ. ವರಿಷ್ಠರು ಸಹ ಇನ್ನೂ ಸೀಟು ಹಂಚಿಕೆ ಕುರಿತು ಅಂತಿಮ ತೀರ್ಮಾನ ಮಾಡಿಲ್ಲ. ಸೀಟು ಹಂಚಿಕೆ ಬಗ್ಗೆ ಸರಿಯಾದ ಸಮಯದಲ್ಲಿ ತೀರ್ಮಾನ ಮಾಡಲಾಗುತ್ತದೆ. ಹಾಲಿ ಸಂಸದರು ಬಿಜೆಪಿ ಬೆಂಬಲಿಸಿದ್ದಾರೆ. ಚುನಾವಣೆಯಲ್ಲಿ ಒಟ್ಟಾಗಿ ಕೆಲಸ ಮಾಡೋಣ ಎಂದು ಅಮಿತ್ ಶಾ ಕರೆ ನೀಡಿದ್ದಾರೆ.
4. ಜೆಡಿಎಸ್‌ಗೆ ಸೀಟು ಹಂಚಿಕೆಯ ಲಾಭ; ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಡಲಾಗುತ್ತದೆ. ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅಭ್ಯರ್ಥಿಯಾಗಲಿದ್ದಾರೆ? ಎಂಬ ಸುದ್ದಿಗಳಿವೆ. ಅಮಿತ್ ಶಾ ಸಭೆಯಲ್ಲಿ ಮಂಡ್ಯ ಸೀಟನ್ನು ಜೆಡಿಎಸ್‌ಗೆ ಹಂಚಿಕೆ ಮಾಡಬಹುದೇ?, ಪಕ್ಷದ ಪ್ಲಸ್ ಮತ್ತು ಮೈನಸ್ ಪಾಯಿಂಟ್‌ಗಳೇನು?, ಸೀಟು ಹಂಚಿಕೆ ಮಾಡಿದರೆ ಬಿಜೆಪಿಗೆ ಆಗುವ ಲಾಭಗಳೇನು? ಎಂದು ಸಹ ಚರ್ಚೆ ಮಾಡಿದ್ದಾರೆ.
2019ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಲ್ಲಿ ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದರು. ಬಿಜೆಪಿ ಅಭ್ಯರ್ಥಿ ಹಾಕದೇ ಅವರನ್ನು ಬೆಂಬಲಿಸಿತ್ತು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಎದುರಾಳಿಯಾಗಿ ಸೋಲು ಕಂಡಿದ್ದರು.
ಈಗ ರಾಜಕೀಯ ಚಿತ್ರಣ ಬದಲಾಗಿದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಸುಮಲತಾ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಆದ್ದರಿಂದ ಮಂಡ್ಯ ಸೀಟು ಯಾರಿಗೆ? ಎಂಬುದು ಪ್ರಶ್ನೆ. ಫೆಬ್ರವರಿ 20ರ ಬಳಿಕ ದೆಹಲಿಯಲ್ಲಿ ಸೀಟು ಹಂಚಿಕೆ ಕುರಿತು ಮಹತ್ವದ ಸಭೆ ನಡೆಯುವ ನಿರೀಕ್ಷೆ ಇದೆ.












Click it and Unblock the Notifications