ಮಂಡ್ಯದಲ್ಲಿ ಸಂಸದೆ ಸುಮಲತಾ ಜನ್ಮದಿನ ಆಚರಿಸಿದ ಅಂಬರೀಶ್ ಅಭಿಮಾನಿಗಳು
ಮಂಡ್ಯ, ಆಗಸ್ಟ್ 27 : ಸಂಸದೆ ಸುಮಲತಾ ಅಂಬರೀಶ್ ಹುಟ್ಟುಹಬ್ಬದ ಅಂಗವಾಗಿ ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘದ ವತಿಯಿಂದ ಮನೆ- ಮನಗಳಲ್ಲಿ ಅಂಬರೀಶಣ್ಣ ಎಂಬ ವಿಶಿಷ್ಠ- ವಿನೂತನ ಕಾರ್ಯಕ್ರಮ ಅಶೋಕನಗರದ ವಿವೇಕಾನಂದ ಜೋಡಿ ರಸ್ತೆಯಲ್ಲಿರುವ ಸಂಸದರ ನಿಧಿಯಿಂದ ನಿರ್ಮಿಸಲಾಗಿರುವ ಬಸ್ ನಿಲ್ದಾಣದ ಬಳಿ ನಡೆಯಿತು.
ಸಂಸದೆ ಸುಮಲತಾ ಅಂಬರೀಶ್ ಹುಟ್ಟುಹಬ್ಬದ ಕಾರ್ಯಕ್ರಮದ ಅಂಗವಾಗಿ ಮಹಿಳಾ ಪೌರ ಕಾರ್ಮಿಕರಿಗೆ ಅಭಿನಂದನೆ ಸಲ್ಲಿಸುವ ಮೂಲಕ ಸ್ವಾಭಿಮಾನಿ ಮಹಿಳೆಯರೊಂದಿಗೆ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್ ಕಾರ್ಯಕ್ರಮದಲ್ಲಿ ಮಾತನಾಡಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ನಟಿಸಿರುವ ಖ್ಯಾತ ಪಂಚಭಾಷಾ ನಟಿ ಸುಮಲತಾ ಅಂಬರೀಶ್ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ದೇಶದ ಇತಿಹಾಸ ಸೃಷ್ಟಿ ಮಾಡಿದ್ದಾರೆ ಎಂದು ಹೇಳಿದರು.
ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ಸದನದಲ್ಲಿ ಚರ್ಚೆ ಮಾಡಿದ್ದಾರೆ. ಜನರ ಸಮಸ್ಯೆಗಳು, ಪೌರಕಾರ್ಮಿಕರ ಸಮಸ್ಯೆಗಳು, ಆಶಾ ಕಾರ್ಯಕರ್ತರ ಸಮಸ್ಯೆಗಳು ಸೇರಿದಂತೆ ದಿಶಾ ಸಮಿತಿ ಸಭೆಯ ಮೀಟಿಂಗ್ ಅನ್ನು ಹೆಚ್ಚು ನಡೆಸಿದ್ದಾರೆ. ಮಂಡ್ಯ ಜಿಲ್ಲೆಯ ಎರಡು ಜ್ವಲಂತ ಸಮಸ್ಯೆಗಳ ಬಗ್ಗೆ ಗಮನ ಸೆಳೆದು ಮುಚ್ಚಿ ಹೋಗಿದ್ದ 2 ಕಾರ್ಖಾನೆಗಳಾದ ಮೈಷುಗರ್ ಹಾಗೂ ಪಿಎಸ್ಎಸ್ಕೆ ಪ್ರಾರಂಭಿಸಿದ್ದಾರೆ ಎಂದು ಹೇಳಿದರು.

ಜಿಲ್ಲೆಯ ರಸ್ತೆಗಳ ಅಭಿವೃದ್ಧಿಗೆ 300 ಕೋಟಿ ಅನುದಾನ ತಂದು ಕೆಲಸ ಮಾಡಿಸಿದ್ದಾರೆ. ಸಂಸದರ ನಿಧಿಯನ್ನು ಉತ್ತಮವಾಗು ಬಳಕೆ ಮಾಡಿದ ದೇಶದ ಮಹಿಳಾ ಸಂಸದರಾಗಿ ಗುರುತಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಸಂಸದೆ ಸುಮಲತಾ ಅಂಬರೀಶ್‌ಗೆ ಒಳ್ಳೆಯ ಭವಿಷ್ಯವಿದೆ. ನಿಮ್ಮೆಲ್ಲರ ಆಶೀರ್ವಾದ ಅವರ ಮೇಲೆ ಇರಲಿ ಎಂದು ಹುಟ್ಟುಹಬ್ಬದ ಅಂಗವಾಗಿ ಶುಭ ಕೋರಿದರು.
ಇದೇ ಸಂದರ್ಭದಲ್ಲಿ ಅಭಿಷೇಕ್ ನಟಿಸಿರುವ ಬ್ಯಾಡ್‌ಮ್ಯಾನರ್ಸ್ ಚಿತ್ರದ ಪೋಸ್ಟರ್‌ಗಳನ್ನು ಶಾಲಾ ವಿದ್ಯಾರ್ಥಿಗಳು ಮತ್ತು ಸನ್ಮಾನಿತರಿಗೆ ನೀಡಿ ಚಿತ್ರದ ಪ್ರೊಮೋಷನ್ ಉಚಿತ ಪಬ್ಲಿಸಿಟಿ ಪಡೆದುಕೊಂಡಿದ್ದು ಸಾರ್ವಜನಿಕರ ಟೀಕೆಗೆ ಒಳಗಾಗಿತ್ತು.

ಅಭಿಶೇಕ್ ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆ
ಸುಮಲತಾರ 59ನೇ ಹುಟ್ಟುಹಬ್ಬದ ದಿನದಂದೇ ಮಗ ಅಭಿಷೇಕ್ ಹೊಸ ಸಿನಿಮಾದ ಪೋಸ್ಟರ್ ಕೂಡ ಬಿಡುಗಡೆ ಮಾಡಲಾಯಿತು. ಅಯೋಗ್ಯ ಚಿತ್ರ ಖ್ಯಾತಿಯ ಮಹೇಶ್ ಕುಮಾರ್ ನಿರ್ದೇಶನದಲ್ಲಿ ಅಭಿಷೇಕ್ ನಟಿಸುತ್ತಿದ್ದು, ಶನಿವಾರ ಬಿಡುಗಡೆಯಾದ ಪೋಸ್ಟರ್‌ನಲ್ಲಿ ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಅಂಬರೀಶ್ ಜನ್ಮದಿಂದು ಘೋಷಣೆಯಾಗಿತ್ತು. ಇದೀಗ ಸುಮಲತಾ ಜನ್ಮದಿನದಂದು ಪೋಸ್ಟರ್ ಬಿಡುಗಡೆಯಾಗಿದೆ.ಈ ಚಿತ್ರವನ್ನು ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡಲಿದ್ದಾರೆ.











Click it and Unblock the Notifications