ಕಳ್ಳತನದ ಆರೋಪ: ಮಂಡ್ಯದಲ್ಲಿ ದಲಿತ ಯುವಕನಿಗೆ ಥಳಿತ
ಮಂಡ್ಯ ಅಕ್ಟೋಬರ್ 21: ಕಳ್ಳತನದ ಆರೋಪ ಹೋರಿಸಿ ದಲಿತ ಯುವಕನ್ನು ಹಸುವಿಗೆ ಕಟ್ಟಿ ಮೆರವಣಿಗೆ ಮಾಡಿದ ಅಮಾನವೀಯ ಘಟನೆ ಮಂಡ್ಯ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಮಂಡ್ಯದ ಮಳವಳ್ಳಿ ತಾಲ್ಲೂಕಿನ ದುಗ್ಗನಹಳ್ಳಿ ಎಂಬ ಗ್ರಾಮದಲ್ಲಿ ಹಸು ಕೊಳ್ಳಲು ಬಂದಿದ್ದ ದಲಿತ ಯುವಕನ ಮೇಲೆ ಕಳ್ಳತನದ ಆರೋಪ ಹೊರಿಸಿ, ಥಳಿಸಿ, ಹಸುವಿಗೆ ಕಟ್ಟಿ ಮೆರವಣಿಗೆ ಮಾಡಲಾಗಿದೆ. ಈ ಅಮಾನವೀಯ ಜಾತಿ ದೌರ್ಜನ್ಯದ ಘಟನೆ ವಾರದ ಹಿಂದೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಭಾರೀ ವೈರಲ್ ಆಗಿದೆ.
ಹಲ್ಲೆಗೊಳಗಾದ ಯುವಕನನ್ನು ಮಳವಳ್ಳಿ ತಾಲ್ಲೂಕಿನ ಹಣಕೊಳ ಗ್ರಾಮದ ಸುರೇಶ್ ವರ್ಧನ್ (32) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಭಾಗಿಯಾದ ಆರೋಪಿಗಳನ್ನು ದುಗ್ಗನಹಳ್ಳಿಯ ರಾಜು, ಹಣಕೊಳ ಗ್ರಾಮದ ಸುಂದರಮ್ಮ, ಮಳವಳ್ಳಿಯ ಮಲ್ಲಯ್ಯ ಮತ್ತು ಗಿರೀಶ್ ಎನ್ನಲಾಗಿದೆ. ಇವರ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

"ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ಆರೋಪಿಗಳನ್ನು ಬಂಧಿಸಲು ಹುಡುಕಾಟ ನಡೆಸುತ್ತಿದ್ದೇವೆ" ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಡಿವೈಎಸ್ಪಿ ಲಕ್ಷ್ಮಿ ನಾರಾಯಣ್ ತಿಳಿಸಿದರು.
ನಡೆದಿದ್ದೇನು?:
ಹಲ್ಲೆಗೊಳಗಾದ ಸುರೇಶ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲ ತಿಂಗಳಿಂದ ಕೊರೊನಾದಿಂದಾಗಿ ತಮ್ಮ ಹಳ್ಳಿಗೆ ಮರಳಿದ್ದರು. ಹಳ್ಳಿಯಲ್ಲೇ ಹೈನುಗಾರಿಕೆ ಮಾಡಬೇಕೆಂದುಕೊಂಡಿದ್ದರು. ಜೊತೆಗೆ ರಾಜು ಎಂಬುವವರ ಬಳಿ ಹಸು ಕೊಂಡುಕೊಳ್ಳಲು ನಿರ್ಧರಿಸಿಸದ್ದರು. ಹಸು ಮಾರುವ ವೇಳೆ ರಾಜು 15 ಲೀಟರ್ ಹಾಲು ಕೊಡುವುದಾಗಿ ಹೇಳಿ 44 ಸಾವಿರಕ್ಕೆ ಹಸುವನ್ನು ಮಾರಾಟ ಮಾಡಿದ್ದರು. ಆದರೆ ಹಸು ದಿನಕ್ಕೆ ಕೇವಲ ಮೂರು ಲೀಟರ್ ಹಾಲು ನೀಡುತ್ತಿದ್ದರಿಂದ ಸುರೇಶ್ ಬೇಸರಗೊಂಡಿದ್ದರು. ರಾಜುಗೆ ಕರೆ ಮಾಡಿ ವಿಚಾರ ತಿಳಿಸಿದಾಗ ರಾಜು ಇನ್ನೊಂದು ಹಸುವನ್ನು ಕಡಿಮೆ ಬೆಲೆಗೆ ನೀಡುವುದಾಗಿ ಹೇಳಿ 14 ಸಾವಿರಕ್ಕೆ ಗೊಡ್ಡು ಹಸುವನ್ನು ಮಾರಿದ್ದರು. ಈ ಹಸುವನ್ನು ವೈದ್ಯರಿಗೆ ತೋರಿಸಿದ ಬಳಿಕ ಹಸು ಕರು ಹಾಕುವುದಿಲ್ಲ ಎಂಬುದು ತಿಳಿಯಿತು. ಹೀಗೆ ಎರಡು ಬಾರಿ ರಾಜು ಸುರೇಶ್‌ಗೆ ಮೋಸ ಮಾಡಿದ್ದನು. ಈ ಬಗ್ಗೆ ಸುರೇಶ್ ರಾಜು ಅವರ ಪರಿಚಯಸ್ಥರಿಗೆ ತಿಳಿಸಿದ್ದರು. ಇದಾದ ಬಳಿಕವೂ ರಾಜು ಅಕ್ಟೋಬರ್ 12ರಂದು ಮತ್ತೊಂದು ಹಸು ನೀಡುವುದಾಗಿ ಹೇಳಿದ್ದರು.
ರಾಜು ಹೇಳಿದಂತೆ ಸುರೇಶ್ ಅವರು ಹಸುವನ್ನು ತರಲು ರಾಜು ಮನೆಗೆ ಹೋಗಿದ್ದಾರೆ. ಆದರೆ ರಾಜು ಮನೆಯಲ್ಲಿ ಇರಲಿಲ್ಲ. ಗದ್ದೆಗೆ ಹೋಗಿರುವುದಾಗಿ ತಿಳಿದಿದೆ. ಹೇಗಿದ್ದರೂ ರಾಜು ಹೇಳಿದ್ದಾನೆಂದು ಸುರೇಶ್ ಹಸುವನ್ನು ಹೊಡೆದುಕೊಂಡು ರಾಜು ಇರುವ ಗದ್ದೆಯ ಕಡೆಗೆ ಹೊರಟಿದ್ದರು. ಸುರೇಶ್ ಸ್ನೇಹಿತ ಹಿಂದೆ ಬೈಕ್‌ನಲ್ಲಿ ಬರುತ್ತಿದ್ದನು. ಆದರೆ ರಾಜು ಗದ್ದೆಗೆ ಹೋಗುವುದಕ್ಕಿಂತ ಮುಂಚಿತವಾಗಿಯೇ ಕಳ್ಳ ಕಳ್ಳ ಎಂದು ಕೂಗಿಕೊಳ್ಳಲಾಗಿದೆ. ರಾಜು ಮತ್ತವರ ಸ್ನೇಹಿತರು ಸುತ್ತುವರೆದು ಹಸು ಕದಿಯುತ್ತಿದ್ದಾನೆ ಎಂದು ಆರೋಪಿಸಿ ಸುರೇಶ್‌ನಿಗೆ ಥಳಿಸಿದ್ದಾರೆ. ಸುರೇಶ್ ಕೈ-ಕಾಲು ಕಟ್ಟಿ ಬಾವಿಗೆ ಎಸೆದು ಕೊಲ್ಲಲು ಪ್ರಯತ್ನಿಸಲಾಗಿದೆ. ಕೊನೆಗೆ ಸುರೇಶ್ ರಾಜು ಅವರನ್ನು ಕಾಲಿಡಿದುಕೊಂಡು ಸಾಯಿಸಬೇಡಿ ಎಂದು ಬೇಡಿಕೊಂಡ ಬಳಿಕವಷ್ಟೇ ಸುರೇಶ್ ಪ್ರಾಣ ಉಳಿದಿದೆ. ಆಗ ಜಾತಿನಿಂದನೆ ಮಾಡಿ ಸುರೇಶ್ ಕೈಗಳನ್ನು ಹಸುವಿನ ಹಗ್ಗಕ್ಕೆ ಕಟ್ಟಿ ಮೆರವಣಿಗೆ ಮಾಡಲಾಗಿದೆ. ಇದನ್ನೆಲ್ಲಾ ಅಲ್ಲಿದ್ದವರು ವಿಡಿಯೋ ಮಾಡಿದ್ದಾರೆ. ನಂತರ ಸುರೇಶ್ ನನ್ನು ಕಳ್ಳನೆಂದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಳಿಕ ರಾಜು ತನ್ನ ಸ್ನೇಹಿತರೊಂದಿಗೆ ಪೊಲೀಸ್ ಠಾಣೆಗೆ ಬಂದು ಸುರೇಶ್ ವಿರುದ್ಧ ದೂರು ನೀಡಿದ್ದಾರೆ. ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ರಾಜಿ ಸಂಧಾನ ನಡೆದು ಕೊನೆಗೆ ಸುರೇಶ್ ಬಿಡುಗಡೆ ಮಾಡಿದರು ಎಂದು ಸುರೇಶ್ ಇಡೀ ಘಟನೆಯನ್ನು ವಿವರಿಸಿದರು.

Recommended Video
ಈ ಘಟನೆಗೆ ಸಂಬಂಧಿಸಿದಂತೆ ರಾಜು ಮತ್ತವರ ಸ್ನೇಹಿತರು ಮಾಡಿದ್ದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇದರ ಬಗ್ಗೆ ಪ್ರತಿಕ್ರಿಯಿಸಿದ ಸುರೇಶ್, ಆ ವಿಡಿಯೋದಿಂದಾಗಿ ನನ್ನ ಇಡೀ ಕುಟುಂಬ ಊರಿನಲ್ಲಿ ತಲೆತಗ್ಗಿಸುವಂತಾಯಿತು. ಮಾಡಿಲ್ಲದ ತಪ್ಪಿಗೆ ದೈಹಿಕವಾಗಿ ಮಾತ್ರವಲ್ಲದೇ ಮಾನಸಿಕವಾಗಿಯೂ ನೋವು ಅನುಭವಿಸಿದೆ. ನಿಜವಾಗಿಯೂ ನಡೆದದ್ದೇನು ಎಂಬುದನ್ನು ನನ್ನ ಸಂಬಂಧಿಕರು ಹಾಗೂ ನಮ್ಮ ಸಮುದಾಯದ ಮುಖಂಡರಿಗೆ ವಿವರಿಸಿದೆ. ಆಗ ನಮ್ಮ ಸಮುದಾಯದ ಹಿರಿಯರ ಸಲಹೆ ಮೇರೆಗೆ ಸ್ನೇಹಿತರೊಟ್ಟಿಗೆ ಸೇರಿ ಪೊಲೀಸ್ ಠಾಣೆಯಲ್ಲಿ ರಾಜು ಮತ್ತು ಅವರ ಸ್ನೇಹಿತರ ವಿರುದ್ಧ ದೂರು ನೀಡಿದ್ದೇನೆ ಎಂದು ಸುರೇಶ್ ತಿಳಿಸಿದರು.












Click it and Unblock the Notifications