ಸುಮಲತಾ ಅಕ್ಕ ಗೆದ್ದರೆ ಡೆಲ್ಲಿವರೆಗೆ ಮಂಡ್ಯ ಹವಾ: ಅಣ್ತಮ್ಮ ಯಶ್
Recommended Video

ಮಂಡ್ಯ, ಮಾರ್ಚ್ 20: ಸುಮಲತಾ ಅಂಬರೀಶ್ ಪರವಾಗಿ ಇಂದು ಮೊದಲ ಬಾರಿಗೆ ಚುನಾವಣಾ ಪ್ರಚಾರ ಭಾಷಣ ಮಾಡಿದ ಯಶ್ ತಮ್ಮ ಸಿನಿ ಶೈಲಿಯ ಮಾತುಗಳಿಂದ ನೆರದಿದ್ದವರ ಚಪ್ಪಾಳೆ ಗಿಟ್ಟಿಸಿದರು.
ಇಂದು ಸುಮಲತಾ ಅಂಬರೀಶ್ ಅವರು ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದು, ಆ ನಂತರ ನಡೆದ ಮೊದಲ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಯಶ್ ಅವರು, ಸುಮಲತಾ ಅವರನ್ನು ಗೆಲ್ಲಿಸಿದರೆ ಮಂಡ್ಯದ ಹವಾ ಡೆಲ್ಲಿಯ ವರೆಗೆ ಹರಡುತ್ತದೆ ಎಂದು ಹೇಳಿದರು.
ಮಂಡ್ಯದ ಜನ ಮನೆ-ಮಠ ಹೋದರೂ ಸ್ವಾಭಿಮಾನ ಉಳಿಸಿಕೊಳ್ಳುವರು, ಸುಮಲತಾ ಮಂಡ್ಯದ ಮಗಳು ಅವರನ್ನು ಗೆಲ್ಲಿಸಿಕೊಳ್ಳದೇ, ಅವರಿಗೆ ಅವಮಾನವಾಗಲು ಮಂಡ್ಯದ ಜನ ಬಿಡುವವರಲ್ಲ ಎಂದರು, ಯಶ್ ಮಾತುಗಳಿಗೆ ಭಾರಿ ಕರತಾಡನ ವ್ಯಕ್ತವಾಯಿತು.

'ಸುಮಲತಾ ಮಂಡ್ಯದಲ್ಲೇ ಇರಲಿದ್ದಾರೆ'
ಸುಮಲತಾ ಅವರು ಮಂಡ್ಯದಲ್ಲೇ ಇರಲಿದ್ದಾರೆ, ಅವರು ಈ ನೆಲದವರು, ಅವರು ಗೆಲ್ಲಲಿ-ಸೋಲಲಿ ಅವರು ಮಂಡ್ಯದ ಜನ ಅವರ ಕುಟುಂಬದ ಮೇಲೆ ಇಟ್ಟಿರುವ ಪ್ರೀತಿಯನ್ನು ಹೆಚ್ಚು ಮಾಡಿಕೊಂಡು ಹೋಗುತ್ತಾರೆ ಎಂದು ಯಶ್ ಅವರು ಹೇಳಿದರು.

ಯಶ್‌ರಿಂದ ವಿರೋಧಿಗಳಿಗೆ ಟಾಂಗ್
ವಿರೋಧಿಗಳಿಗೆ ಹೆಸರು ಹೇಳದೆ ಟಾಂಗ್ ನೀಡಿದ ಯಶ್, ದರ್ಶನ್, ಯಶ್ ಬಂದಿದ್ದಾರೆ ಅವರನ್ನು ನೋಡಲು ಜನ ಬಂದಿದ್ದಾರೆ ಎಂದು ಹೇಳುತ್ತಿದ್ದಾರೆ, ಆದರೆ ಜನ ನಮ್ಮನ್ನು ನೋಡಲು ಬಂದಿಲ್ಲ, ಅವರು ಬಂದಿರುವುದು ಸುಮಲತಾ ಅವರನ್ನು ಬೆಂಬಲಿಸಲು, ನಾವ್ಯಾರೂ ಇಲ್ಲಿ ನಮ್ಮ ಲಾಭಕ್ಕಾಗಿ ಬಂದಿಲ್ಲ, ಒಳ್ಳೆಯ ವ್ಯಕ್ತಿಯ ಪರವಾಗಿ ಬಂದಿದ್ದೇವೆ ಎಂದು ಯಶ್ ಹೇಳಿದರು.

ಸುಮಲತಾ ಬೆನ್ನಿಗಿದ್ದಾರೆ ಯಶ್, ದರ್ಶನ್
ದರ್ಶನ್ ಹಾಗೂ ಯಶ್ ಅವರು ಮಂಡ್ಯ ಚುನಾವಣೆ ಪೂರ್ತಿ ಸುಮಲತಾ ಅವರ ಪರ ಪ್ರಚಾರ ಮಾಡುವುದಾಗಿ ಹೇಳಿದ್ದಾರೆ, ಅಂತಯೇ ಸುಮಲತಾ ಅವರು ಉಮೇದುವಾರಿಕೆ ಘೋಷಣೆ, ನಾಮಪತ್ರ ಸಲ್ಲಿಕೆಯಲ್ಲೂ ಈ ಇಬ್ಬರೂ ಸ್ಟಾರ್ ನಟರು ಉಪಸ್ಥಿತರಿದ್ದರು.

ಸುಮಲತಾ ಎದುರಿಗೆ ನಿಖಿಲ್ ಕುಮಾರಸ್ವಾಮಿ
ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಅವರು ಪಕ್ಷೇತರ ಉಮೇದುವಾರರಾಗಿ ಸ್ಪರ್ಧೆ ಮಾಡುತ್ತಿದ್ದಾರೆ. ಅವರ ವಿರುದ್ಧ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಸ್ಪರ್ಧಿಸುತ್ತಿದ್ದಾರೆ.












Click it and Unblock the Notifications