• search
  • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಂದೂ ಕ್ಷೇತ್ರದ ಗೆಲ್ಲದ ಮಂಡ್ಯದಲ್ಲಿ ಕಾಂಗ್ರೆಸ್ ಟಿಕೆಟ್‌ಗೆ ಭಾರಿ ಡಿಮ್ಯಾಂಡ್: ಒಂದೇ ಕ್ಷೇತ್ರಕ್ಕೆ 15 ಅರ್ಜಿ

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ನವೆಂಬರ್ 23: ಮುಂಬರುವ 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗುವುದಕ್ಕೆ ತೀವ್ರ ಪೈಪೋಟಿ ಶುರುವಾಗಿದೆ. ಸ್ಪರ್ಧೆ ಬಯಸಿ ಬಿ-ಫಾರಂಗಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ಭರಪೂರ ಅರ್ಜಿಗಳು ಸಲ್ಲಿಕೆಯಾಗಿದ್ದು, ಚುನಾವಣಾ ಕಾರ್ಯಚಟುವಟಿಕೆಗಳು ಬಿರುಸುಗೊಂಡಿವೆ.

ಮಂಡ್ಯ ವಿಧಾನಸಭಾ ಕ್ಷೇತ್ರವೊಂದರಿಂದಲೇ 15 ಮಂದಿ ಅಭ್ಯರ್ಥಿಯಾಗಲು ಬಯಸಿ ಅರ್ಜಿ ಸಲ್ಲಿಸಿರುವುದು ವಿಶೇಷವೆನಿಸಿದೆ. ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಮಂಡ್ಯ ಕ್ಷೇತ್ರದಿಂದ ಅತ್ಯಧಿಕ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಕ್ಷೇತ್ರವೊಂದರಿಂದ ಇಷ್ಟೊಂದು ಪ್ರಮಾಣದಲ್ಲಿ ಅರ್ಜಿಗಳು ಸಲ್ಲಿಕೆಯಾಗಿರುವುದು ಹೊಸ ದಾಖಲೆಯಾಗಿದೆ.

ನಂಜನಗೂಡು ಕ್ಷೇತ್ರದತ್ತ ಘಟಾನುಘಟಿ 'ಕೈ'ನಾಯಕರ ಚಿತ್ತ!ನಂಜನಗೂಡು ಕ್ಷೇತ್ರದತ್ತ ಘಟಾನುಘಟಿ 'ಕೈ'ನಾಯಕರ ಚಿತ್ತ!

2018ರ ವಿಧಾನಸಭಾ ಚುನಾವಣೆಯಲ್ಲಿ ಒಂದೂ ಕ್ಷೇತ್ರವನ್ನು ಗೆಲ್ಲಲಾಗದೆ ಅಸ್ತಿತ್ವವನ್ನೇ ಕಳೆದುಕೊಂಡಿದ್ದ ಕಾಂಗ್ರೆಸ್‌ನಲ್ಲಿ ಇದೀಗ ಹೊಸ ಉತ್ಸಾಹ ಮೂಡಿದೆ. ಎರಡು ವಿಧಾನಪರಿಷತ್ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವು ಮುಖಂಡರು-ಕಾರ್ಯಕರ್ತರಲ್ಲಿ ನವ ಚೈತನ್ಯ ತಂದಿದೆ. ಕೆಪಿಸಿಸಿ ಉಪಾಧ್ಯಕ್ಷರಾದ ಎನ್. ಚೆಲುವರಾಯಸ್ವಾಮಿ ಹಾಗೂ ಪಿ.ಎಂ.ನರೇಂದ್ರಸ್ವಾಮಿ ಸಾರಥ್ಯದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಪುಟಿದೆದ್ದು ನಿಂತಿದೆ. 2023ರಲ್ಲಿ ನಡೆಯಲಿರುವ ಚುನಾವಣಾ ಮಹಾ ಕದನಕ್ಕೆ ಕಾರ್ಯಕರ್ತರನ್ನು ಸಜ್ಜುಗೊಳಿಸಲಾಗುತ್ತಿದೆ.

ಮಂಡ್ಯ ಕ್ಷೇತ್ರದಿಂದ ಅರ್ಜಿ ಸಲ್ಲಿಸಿದವರು

ಮಂಡ್ಯ ಕ್ಷೇತ್ರದಿಂದ ಅರ್ಜಿ ಸಲ್ಲಿಸಿದವರು

ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ರವಿಕುಮಾರ್ ಗಣಿಗ, ಕೆ.ಕೆ.ರಾಧಾಕೃಷ್ಣ, ಮಾಜಿ ಶಾಸಕ ಹೆಚ್.ಬಿ.ರಾಮು, ಅಮರಾವತಿ ಚಂದ್ರಶೇಖರ್, ಹಾಲಹಳ್ಳಿ ರಾಮಲಿಂಗಯ್ಯ, ಎಂ.ಎಸ್.ಚಿದಂಬರ್, ಅಂಜನಾ ಶ್ರೀಕಾಂತ್, ಸಿದ್ಧಾರೂಢ ಸತೀಶ್, ಡಾ.ಹೆಚ್.ಕೃಷ್ಣ, ಯು.ಸಿ.ಶಿವಕುಮಾರ್, ಹೆಚ್.ಬಿ.ರಾಮು, ಹನಕೆರೆ ಶಿವರಾಮು, ಬಿ.ಸಿ.ಶಿವಾನಂದ, ಹೊಸಹಳ್ಳಿ ಶಿವಲಿಂಗೇಗೌಡ ಹಾಗೂ ಅಸಾದುಲ್ಲಾಖಾನ್ ಅಭ್ಯರ್ಥಿಯಾಗಲು ಬಯಸಿ ಅರ್ಜಿ ಸಲ್ಲಿಸಿದ್ದಾರೆ.

ಕಳೆದ ಬಾರಿ ಸೋಲನುಭವಿಸಿದ್ದ ರವಿಕುಮಾರ್ ಗಣಿಗ ಮತ್ತೊಮ್ಮೆ ಸ್ಪರ್ಧೆ ಬಯಸಿದ್ದಾರೆ. ಈ ಬಾರಿ ಸೋಲಿನ ಅನುಕುಂಪ ಕೈ ಹಿಡಿಯಬಹುದೆಂಬ ಆಶಾಭಾವನೆಯಲ್ಲಿದ್ದಾರೆ. ಜೆಡಿಎಸ್‌ನಿಂದ ಈಗಷ್ಟೇ ಹೊರಬಂದು ಪಕ್ಷ ಸೇರಿರುವ ಕೀಲಾರ ರಾಧಾಕೃಷ್ಣ ಅವರು ಕೂಡ ಅರ್ಜಿ ಸಲ್ಲಿಸಿರುವುದು ಅಚ್ಚರಿ ಮೂಡಿಸಿದೆ. ನಾಯಕರು ನೀಡಿದ್ದಾರೆನ್ನಲಾದ ಭರವಸೆಯ ಮೇರೆಗೆ ಟಿಕೆಟ್ ಬಯಸಿದ್ದಾರೆ.

ಅಂಬರೀಶ್ ಇದ್ದ ಸಮಯದಿಂದ ಅವರೊಂದಿಗೆ ಅನೇಕ ಚುನಾವಣೆಗಳನ್ನು ಎದುರಿಸಿರುವ ಅಮರಾವತಿ ಚಂದ್ರಶೇಖರ್ ಕೂಡ ಅಭ್ಯರ್ಥಿಯಾಗುವ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಅವರೂ ಸದ್ದಿಲ್ಲದೆ ಕ್ಷೇತ್ರ ಸಂಚಾರ ಆರಂಭಿಸಿದ್ದಾರೆ. ಕಾಂಗ್ರೆಸ್ ಟಿಕೆಟ್‌ಗೆ ತೀವ್ರ ಪೈಪೋಟಿ ನಡೆಸಿದ್ದಾರೆ.

ಡಾ. ಎಚ್.ಕೃಷ್ಣ ಜನರ ವಿಶ್ವಾಸ ಗಳಿಸುವುದಕ್ಕಾಗಿ ನೀರಿನ ಕ್ಯಾನ್‌ಗಳನ್ನು ಪಂಚಾಯಿತಿವಾರು ವಿತರಿಸುತ್ತಿದ್ದಾರೆ. ಆರೋಗ್ಯ ಶಿಬಿರಗಳನ್ನು ಏರ್ಪಡಿಸಿ ಮತದಾರರನ್ನು ಓಲೈಸಿಕೊಳ್ಳುವ ಪ್ರಯತ್ನಕ್ಕಿಳಿದಿದ್ದಾರೆ. ಕಾಂಗ್ರೆಸ್ ಟಿಕೆಟ್‌ನ ಪ್ರಬಲ ಆಕಾಂಕ್ಷಿ ಎನ್ನುವುದನ್ನು ಬಿಂಬಿಸಿಕೊಳ್ಳುತ್ತಿದ್ದಾರೆ. ಇನ್ನುಳಿದಂತೆ ಅನೇಕರು ಅರ್ಜಿ ಸಲ್ಲಿಸಿ ಚುನಾವಣಾ ತಯಾರಿಗೆ ಸಿದ್ಧತೆ ಆರಂಭಿಸುತ್ತಿದ್ದಾರೆ.

ಎಸ್‌ಎಂ ಕೃಷ್ಣ ಸಹೋದರ ಮಗ ಮದ್ದೂರು ಟಿಕೆಟ್‌ಗೆ ಸ್ಪರ್ಧೆ

ಎಸ್‌ಎಂ ಕೃಷ್ಣ ಸಹೋದರ ಮಗ ಮದ್ದೂರು ಟಿಕೆಟ್‌ಗೆ ಸ್ಪರ್ಧೆ

ಮೂರು ಚುನಾವಣೆಗಳಿಂದ ಕಾಂಗ್ರೆಸ್ ಮದ್ದೂರು ವಿಧಾನಸಭಾ ಕ್ಷೇತ್ರದ ಅಪತ್ಯ ಹಿಡಿಯುವಲ್ಲಿ ವಿಲವಾಗಿದೆ. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸಹೋದರ ಎಸ್.ಎಂ.ಶಂಕರ್ ಪುತ್ರ ಗುರುಚರಣ್, ವಿಧಾನಪರಿಷತ್ ಮಾಜಿ ಸದಸ್ಯ ಬಿ.ರಾಮಕೃಷ್ಣ, ವಳಗೆರೆಹಳ್ಳಿ ಶಂಕರೇಗೌಡ ಅವರು ಅಭ್ಯರ್ಥಿಗಳಾಗಲು ಬಯಸಿ ಅರ್ಜಿ ಸಲ್ಲಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಸ್.ಗುರುಚರಣ್ ಅಭ್ಯರ್ಥಿ ಎಂದು ಅನಧಿಕೃತವಾಗಿ ಘೋಷಿಸಿದ್ದಾರೆ. ಆ ನಿಟ್ಟಿನಲ್ಲಿ ಎಸ್.ಗುರುಚರಣ್ ಕೂಡ ಚುನಾವಣಾ ಕಾರ್ಯಚಟುವಟಿಕೆ ಆರಂಭಿಸಿ ಎಲ್ಲೆಡೆ ಓಡಾಡುತ್ತಿದ್ದಾರೆ. ಇದರ ನಡುವೆಯೂ ಜೆಡಿಎಸ್‌ನಲ್ಲಿದ್ದ ವೇಳೆ ವಿಧಾನಪರಿಷತ್ ಸದಸ್ಯರಾಗಿದ್ದ ಬಿ.ರಾಮಕೃಷ್ಣ ಅರ್ಜಿ ಸಲ್ಲಿಸಿ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ.

ಇದು ನಿಮ್ಮಿಂದ ಸಾಧ್ಯವೇ? ಕುಮಾರಸ್ವಾಮಿ ಎಂದು ಪ್ರಶ್ನಿಸಿದ ಎಚ್.ಸಿ ಬಾಲಕೃಷ್ಣಇದು ನಿಮ್ಮಿಂದ ಸಾಧ್ಯವೇ? ಕುಮಾರಸ್ವಾಮಿ ಎಂದು ಪ್ರಶ್ನಿಸಿದ ಎಚ್.ಸಿ ಬಾಲಕೃಷ್ಣ

ನಾಗಮಂಗಲದಲ್ಲಿ ಚಲುವರಾಯಸ್ವಾಮಿ ಸ್ಪರ್ಧೆ ಖಚಿತ

ನಾಗಮಂಗಲದಲ್ಲಿ ಚಲುವರಾಯಸ್ವಾಮಿ ಸ್ಪರ್ಧೆ ಖಚಿತ

ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅದ್ವಿತೀಯ ನಾಯಕರೆನಿಸಿರುವ ಎನ್.ಚಲುವರಾಯಸ್ವಾಮಿ ಹೊರತುಪಡಿಸಿದಂತೆ ಉಳಿದ ಕಾಂಗ್ರೆಸ್ಸಿಗರು ಯಾರೂ ಅರ್ಜಿ ಸಲ್ಲಿಸಿಲ್ಲ. ಜೆಡಿಎಸ್‌ನಿಂದ ಮೂರು ಬಾರಿ ಶಾಸಕರಾಗಿ, ಒಮ್ಮೆ ಸಂಸದರಾಗಿ ಆಯ್ಕೆಯಾಗಿರುವ ಚಲುವರಾಯಸ್ವಾಮಿ 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತಿದ್ದರು. ಈಗ ಮತ್ತೆ ಕಾಂಗ್ರೆಸ್‌ನಿಂದ 2023ರ ಚುನಾವಣೆಗೆ ನಾಗಮಂಗಲ ಕ್ಷೇತ್ರದಿಂದಲೇ ಬಿ ಫಾರಂ ಕೋರಿ ಅರ್ಜಿ ಸಲ್ಲಿಸಿರುವುದರಿಂದ ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಯುವರೆಂಬ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಅವರೂ ಸಹ ಕ್ಷೇತ್ರದಾದ್ಯಂತ ಪಂಚಾಯಿತಿಗಳಿಗೆ ತೆರಳಿ ಮತದಾರರ ಮನವೊಲಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಕ್ಷೇತ್ರದೊಳಗೆ ಚಲುವರಾಯಸ್ವಾಮಿ ಅವರು ತಮ್ಮದೇ ಆದ ಬೆಂಬಲಿಗರು-ಕಾರ್ಯಕರ್ತರ ಪಡೆಯನ್ನು ಹೊಂದಿದ್ದು, ಚುನಾವಣಾ ಕಾರ್ಯತಂತ್ರವನ್ನು ಈಗಿನಿಂದಲೇ ರೂಪಿಸಲಾರಂಭಿಸಿದ್ದಾರೆ. ಜೆಡಿಎಸ್ ವರಿಷ್ಠರು ನಾಗಮಂಗಲ ಕ್ಷೇತ್ರವನ್ನು ಟಾರ್ಗೆಟ್ ಮಾಡಿರುವುದನ್ನು ಸೂಕ್ಷ್ಮವಾಗಿ ಅರಿತಿರುವ ಚಲುವರಾಯಸ್ವಾಮಿ ಅವರು ಗೆಲುವಿನ ಸೂತ್ರಗಳನ್ನು ರಹಸ್ಯವಾಗಿ ರೂಪಿಸುತ್ತಾ ಮುನ್ನಡೆಯುತ್ತಿದ್ದಾರೆ.

ಮಳವಳ್ಳಿಯಿಂದ ನರೇಂದ್ರಸ್ವಾಮಿ ಸೇರಿ ಮೂವರ ಅರ್ಜಿ

ಮಳವಳ್ಳಿಯಿಂದ ನರೇಂದ್ರಸ್ವಾಮಿ ಸೇರಿ ಮೂವರ ಅರ್ಜಿ

ಮಳವಳ್ಳಿ ವಿಧಾನಸಭಾ ಮೀಸಲು ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಪಿ.ಎಂ.ನರೇಂದ್ರಸ್ವಾಮಿ, ಮಾಜಿ ಶಾಸಕಿ ಮಲ್ಲಾಜಮ್ಮ ಹಾಗೂ ಡಾ.ಮೂರ್ತಿ ಅವರು ಬಿ ಫಾರಂ ಬಯಸಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ಪಿ.ಎಂ.ನರೇಂದ್ರಸ್ವಾಮಿ ವಿರುದ್ಧ ಪ್ರತಿ ಚುನಾವಣೆಯಲ್ಲೂ ಮಲ್ಲಾಜಮ್ಮ ಹಾಗೂ ಡಾ.ಮೂರ್ತಿ ಬಂಡಾಯದ ಬಾವುಟ ಹಾರಿಸುತ್ತಾ ಬಂದಿದ್ದಾರೆ.ಇತ್ತೀಚೆಗೆ ನರೇಂದ್ರಸ್ವಾಮಿ ಅವರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡಬಾರದೆಂದು ಹಲವರು ಕ್ಷೇತ್ರದೊಳಗೆ ಸಭೆ ನಡೆಸಿ ಕೂಗೆಬ್ಬಿಸಿದ್ದರು.

ಪಿ.ಎಂ.ನರೇಂದ್ರಸ್ವಾಮಿ ಅವರು ಕೆಪಿಸಿಸಿ ಉಪಾಧ್ಯಕ್ಷರಾಗಿದ್ದಾರೆ. ಎರಡು ಬಾರಿ ಶಾಸಕ, ಒಮ್ಮೆ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಜೆಡಿಎಸ್ ಪಕ್ಷವನ್ನು ಸಮರ್ಥವಾಗಿ ಎದುರಿಸುವಷ್ಟು ಸಾಮರ್ಥ್ಯ ಹೊಂದಿದ್ದಾರೆ. ಇವರನ್ನು ಹೊರತುಪಡಿಸಿ ಇವರಷ್ಟು ಸಮರ್ಥರು ಕ್ಷೇತ್ರದೊಳಗೆ ಕಂಡುಬರುತ್ತಿಲ್ಲ. ಜೊತೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆ ಉತ್ತಮ ಒಡನಾಟವಿರುವುದರಿಂದ ಟಿಕೆಟ್ ತಮ್ಮ ಕೈ ತಪ್ಪುವುದಿಲ್ಲವೆಂಬ ಖಚಿತ ಭರವಸೆಯನ್ನು ಹೊಂದಿದ್ದಾರೆ.

ಮಾಜಿ ಶಾಸಕ ಸೇರಿ ಶ್ರೀರಂಗಪಟ್ಟಣದಿಂದ ಮೂವರು ಅರ್ಜಿ

ಮಾಜಿ ಶಾಸಕ ಸೇರಿ ಶ್ರೀರಂಗಪಟ್ಟಣದಿಂದ ಮೂವರು ಅರ್ಜಿ

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ, ಕಾಂಗ್ರೆಸ್ ಮುಖಂಡ ಪಾಲಹಳ್ಳಿ ಚಂದ್ರಶೇಖರ್, ಎಂ.ಪುಟ್ಟೇಗೌಡ ಅವರು ಆಕಾಂಕ್ಷಿತರಾಗಿ ಅರ್ಜಿ ಸಲ್ಲಿಸಿದ್ದಾರೆ. ಜೆಡಿಎಸ್‌ನಿಂದ ಎರಡು ಬಾರಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವ ರಮೇಶ್ ಬಂಡಿಸಿದ್ದೇಗೌಡ ಅವರು 2018ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನುಭವಿಸಿದ್ದರು.

2023ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಲು ಬಯಸಿದ್ದಾರೆ. ಈಗಾಗಲೇ ಕ್ಷೇತ್ರದೊಳಗೆ ಬಿರುಸಿನ ಸಂಚಾರ ನಡೆಸುತ್ತಾ ಮತದಾರರನ್ನು ಓಲೈಸಿಕೊಳ್ಳುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಪಾಲಹಳ್ಳಿ ಚಂದ್ರಶೇಖರ್ ಹಾಗೂ ಎಂ.ಪುಟ್ಟೇಗೌಡ ಅವರು ಆಕಾಂಕ್ಷಿತ ಅಭ್ಯರ್ಥಿಗಳಾಗಿದ್ದು ಚುನಾವಣಾ ಪೂರ್ವ ಸಿದ್ಧತೆಗೆ ರೆಡಿಯಾಗುತ್ತಿದ್ದಾರೆ.

ಮಾಜಿ ಶಾಸಕರಲ್ಲದೆ ಹೊಸಬರಿಂದಲೂ ಪೈಪೋಟಿ

ಮಾಜಿ ಶಾಸಕರಲ್ಲದೆ ಹೊಸಬರಿಂದಲೂ ಪೈಪೋಟಿ

ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಿಂದ ಹಲವಾರು ಮಂದಿ ಈ ಬಾರಿ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿರುವುದು ಗಮನಾರ್ಹವಾಗಿದೆ. ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ವಿಜಯ್ ರಾಮೇಗೌಡ, ಕಿಕ್ಕೇರಿ ಸುರೇಶ್, ಎಂ.ಡಿ.ಕೃಷ್ಣಮೂರ್ತಿ ಅವರು ಅರ್ಜಿ ಸಲ್ಲಿಸಿದ್ದಾರೆ. ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಕೆ.ಬಿ.ಚಂದ್ರಶೇಖರ್ ಇಳಿ ವಯಸ್ಸಿನಲ್ಲೂ ಮತ್ತೊಮ್ಮೆ ಸ್ಪರ್ಧಿಸುವ ಉತ್ಸಾಹ ತೋರುತ್ತಿದ್ದಾರೆ. ಮಾಜಿ ಶಾಸಕ ಬಿ.ಪ್ರಕಾಶ್ ಕೂಡ ಬಿಫಾರಂಗಾಗಿ ಅರ್ಜಿ ಸಲ್ಲಿಸಿ ಜನಬೆಂಬಲ ಗಳಿಸುವುದಕ್ಕೆ ಮುಂದಾಗಿದ್ದಾರೆ.

ಇದರ ನಡುವೆ ಕ್ಷೇತ್ರಕ್ಕೆ ಹೊಸದಾಗಿ ಆಗಮಿಸಿರುವ ವಿಜಯ್‌ ರಾಮೇಗೌಡ ಮಿಂಚಿನ ಸಂಚಾರ ನಡೆಸುತ್ತಿದ್ದಾರೆ. ಪ್ರತಿ ಪಂಚಾಯಿತಿ, ಗ್ರಾಮಗಳಿಗೆ ತೆರಳಿ ಮತದಾರರನ್ನು ಭೇಟಿಯಾಗುತ್ತಾ ಚುನಾವಣಾ ಕಾರ್ಯಚಟುವಟಿಕೆಯನ್ನು ಚುರುಕುಗೊಳಿಸಿದ್ದಾರೆ. ಕಾಂಗ್ರೆಸ್‌ನ ಉನ್ನತಮಟ್ಟದ ನಾಯಕರ ಸಂಪರ್ಕದಲ್ಲಿರುವ ವಿಜಯ್ ರಾಮೇಗೌಡ ಈ ಚುನಾವಣೆಯಲ್ಲಿ ಟಿಕೆಟ್‌ ಪಡೆಯಲೇಬೇಕೆಂಬ ಹಠಕ್ಕೆ ಬಿದ್ದಿದ್ದಾರೆ.

ಕರ್ನಾಟಕ ನಗರಾಭಿವೃದ್ಧಿ ಕೋಶ ಮತ್ತು ಹಣಕಾಸು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಂ.ಡಿ.ಕೃಷ್ಣಮೂರ್ತಿ, ತಾಪಂ ಮಾಜಿ ಅಧ್ಯಕ್ಷ ಕಿಕ್ಕೇರಿ ಸುರೇಶ್ ಕೂಡ ಆಕಾಂಕ್ಷಿಗಳಾಗಿದ್ದು, ತಮಗೊಂದು ಅವಕಾಶ ನೀಡಲೇಬೇಕೆಂಬ ಒತ್ತಾಯವನ್ನು ವರಿಷ್ಠರೆದುರು ಇಟ್ಟಿದ್ದಾರೆ.

ಮೇಲುಕೋಟೆ ಕೈ ಟಿಕೆಟ್‌ಗೆ 2 ಅರ್ಜಿ

ಮೇಲುಕೋಟೆ ಕೈ ಟಿಕೆಟ್‌ಗೆ 2 ಅರ್ಜಿ

ಪಾಂಡವಪುರ ವಿಧಾನಸಭಾ ಕ್ಷೇತ್ರದಿಂದ ಕೇವಲ ಇಬ್ಬರು ಮಾತ್ರ ಅರ್ಜಿ ಸಲ್ಲಿಸಿದ್ದಾರೆ. 1999ರಲ್ಲಿ ಸ್ಪರ್ಧಿಸಿದ್ದ ಕೆ.ಕೆಂಪೇಗೌಡರ ನಂತರ ಕಾಂಗ್ರೆಸ್ ಕ್ಷೇತ್ರದಿಂದ ಗೆಲುವು ಸಾಸಲು ಇಲ್ಲಿಯವರೆಗೆ ಸಾಧ್ಯವಾಗಿಲ್ಲ. ಎಲ್.ಡಿ.ರವಿ, ಮಾಜಿ ಶಾಸಕ ಡಿ.ಹಲಗೇಗೌಡರ ಪುತ್ರ ಹೆಚ್.ಮಂಜುನಾಥ್ ಇದ್ದರೂ ಕಾಂಗ್ರೆಸ್‌ನ್ನು ಸಮರ್ಥವಾಗಿ ಕಟ್ಟಿಬೆಳೆಸಲಾಗಲಿಲ್ಲ. ಇದೀಗ ಭಾರತೀಯ ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷ ಡಾ.ಹೆಚ್.ಎನ್.ರವೀಂದ್ರ ಹಾಗೂ ಜಿಪಂ ಮಾಜಿ ಸದಸ್ಯ ಹೆಚ್.ತ್ಯಾಗರಾಜು ಅಭ್ಯರ್ಥಿಗಳಾಗಲು ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಡಾ.ಹೆಚ್.ಎನ್.ರವೀಂದ್ರ ಕ್ಷೇತ್ರದೊಳಗೆ ಚುರುಕಾಗಿ ಓಡಾಡಲಾರಂಭಿಸಿದ್ದಾರೆ.

English summary
2023 general Assembly election: Total of 15 aspirants applied for Congress Ticket from the Mandya constituency, check here details seven assembly constituencies of the Mandya district,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X