Breaking:ಮಳವಳ್ಳಿ: ಟ್ಯೂಶನ್‌ಗೆ ತೆರಳಿದ್ದ ಬಾಲಕಿ ಶವ ನೀರಿನ ಸಂಪಿನಲ್ಲಿ ಪತ್ತೆ; ಟೀಚರ್ ಪೊಲೀಸರ ವಶಕ್ಕೆ
ಮಂಡ್ಯ, ಅಕ್ಟೋಬರ್ 12: ಟ್ಯೂಶನ್‌ಗೆಂದು ತೆರಳಿದ್ದ 10 ವರ್ಷದ ವಿದ್ಯಾರ್ಥಿನಿಯ ಶವ ನೀರಿನ ಸಂಪಿನಲ್ಲಿ ಪತ್ತೆಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದಲ್ಲಿ ನಡೆದಿದೆ. ಈ ಘಟನೆ ಸಾರ್ವಜನಿಕ ವಲಯದಲ್ಲಿ ಆತಂಕವನ್ನುಂಟು ಮಾಡಿದೆ.
ಮೈಸೂರು ರಸ್ತೆಯ ಮಯೂರ ಬೇಕರಿ ಹಿಂಭಾಗದ ನಿರ್ಮಾಣ ಹಂತದ ಮನೆಯ ಕಟ್ಟಡದ ಸಂಪಿನಲ್ಲಿ ವಿದ್ಯಾರ್ಥಿನಿ ಶವ ಪತ್ತೆಯಾಗಿದೆ. ಮಂಗಳವಾರ ಬೆಳಗ್ಗೆ ಟ್ಯೂಶನ್‌ಗಾಗಿ ಮನೆಯಿ೦ದ ಹೋಗಿದ್ದ ವಿದ್ಯಾರ್ಥಿನಿ ಬಳಿಕ ಮನೆಗೆ ವಾಪಸ್ ಬಾರದ ಹಿನ್ನೆಲೆ ಟ್ಯೂಶನ್ ಸೆಂಟರ್ ಸೇರಿದಂತೆ ಅಕ್ಕಪಕ್ಕದಲ್ಲಿ ಪೋಷಕರು ವಿಚಾರಿಸಿದ್ದಾರೆ. ಎಲ್ಲಿಯೂ ಬಾಲಕಿ ಪತ್ತೆಯಾಗಿಲ್ಲ. ಬಳಿಕ ಮಳವಳ್ಳಿ ಪಟ್ಟಣದ ಪೊಲೀಸರಿಗೆ ದೂರು ನೀಡಿದ್ದರು.
ಅತ್ಯಾಚಾರದ ಶಂಕೆ
ಮನೆಯ ಮಾಲೀಕರು ನೀರಿನ ಸೆಂಪಿನೊಳಗೆ ಬಾಲಕಿಯ ಶವ ಇರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅತ್ಯಾಚಾರವೆಸಗಿ ಕೊಲೆ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗುತ್ತಿದೆ. ಸ್ಥಳಕ್ಕೆ ಡಿವೈಎಸ್ಪಿ ಎನ್.ನವೀನ್ ಕುಮಾರ್, ಸಿಪಿಐ ಎ.ಕೆ. ರಾಜೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ಯೂಷನ್ ಶಿಕ್ಷಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ಕುರಿತು ಪಟ್ಟಣದ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಡ್ಯ ಎಸ್ಪಿ ಯತೀಶ್ ಸ್ಥಳಕ್ಕೆ ಭೇಟಿ ನೀಡಿ ಪ್ರತಿಕ್ರಿಯಿಸಿ," ಬಾಲಕಿ ಪೋಷಕರು ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಲೈಂಗಿಕ ದೌರ್ಜನ್ಯವಾಗಿರುವುದು ಪತ್ತೆಯಾದರೆ, ಪೋಕ್ಸೊ ಕಾಯ್ದೆ ಹಾಕಲಾಗುವುದು. ಸದ್ಯ ಐಪಿಸಿ 302ರ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ" ಎಂದು ಎಂದು ಮಾಹಿತಿ ನೀಡಿದ್ದಾರೆ.
ಘಟನೆ ನಡೆದ ಸ್ಥಳದಲ್ಲಿ ಸಿಕ್ಕ ಕೆಲವು ಸುಳಿವಿನ ಆಧಾರದ ಮೇಲೆ ಕೆಲವರನ್ನ ವಿಚಾರಣೆ ಮಾಡುತ್ತಿದ್ದೀವಿ. ಟ್ಯೂಷನ್ ನಡೆಸುತ್ತಿದ್ದ ಶಿಕ್ಷಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಬಾಲಕಿ ಕುಟುಂಬಸ್ಥರ ಪ್ರತಿಭಟನೆ
ಬಾಲಕಿಯನ್ನ ಕೊಂದ ಆರೋಪಿಗಳನ್ನು ಆದಷ್ಟು ಬೇಗ ಬಂಧಿಸುವಂತೆ ಒತ್ತಾಯಿಸಿ ಮಳವಳ್ಳಿ ಟೌನ್ ಪೊಲೀಸ್ ಠಾಣೆ ಮುಂದೆ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ. ಕೈಯಲ್ಲಿ ನಾಮಪಲಕವನ್ನ ಹಿಡಿದು ಕೊಳ್ಳೆಗಾಲ ಮದ್ದೂರು ಮಾರ್ಗದ ರಸ್ತೆ ತಡೆದು ಆಕ್ರೋಶ ಹೊರ ಹಾಕಿದ್ದಾರೆ.












Click it and Unblock the Notifications