Get Updates
Get notified of breaking news, exclusive insights, and must-see stories!

Maluru Elections : ಬಿಜೆಪಿ ಟಿಕೆಟ್ ಕಗ್ಗಂಟಾಗಿರುವ ಕೋಲಾರದ ಮಾಲೂರು ಕ್ಷೇತ್ರ!

ಬೆಂಗಳೂರು ನಗರದ ಪಕ್ಕದಲ್ಲಿರುವ ಜಿಲ್ಲೆ ಕೋಲಾರ. ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಪೈಕಿ ಒಂದು ಮಾಲೂರು. ಒಂದು ಕಾಲದಲ್ಲಿ ದೇವರ ವಿಗ್ರಹ ಕೆತ್ತನೆಗೆ ಮಾಲೂರಿನ ಶಿವಾರ ಪಟ್ಟಣ ಪ್ರಸಿದ್ಧಿಯಾಗಿತ್ತು. ಈಗ ರಿಯಲ್ ಎಸ್ಟೇಟ್, ಇಟ್ಟಿಗೆ ಫ್ಯಾಕ್ಟರಿ, ಕೈಗಾರಿಕೆ, ಕ್ರಷರ್‌ಗಳ ಸದ್ದು ಜೋರಾಗಿದೆ. ಅಕ್ರಮವಾಗಿ ಕ್ರಷರ್‌ಗಳು ನಡೆಯುತ್ತಿವೆ ಎಂಬ ಆರೋಪಗಳು ಇವೆ. ಆದರೆ ಅವುಗಳು ಲಾರಿಗಳ ದೂಳಿನ ನಡುವೆ ಮುಚ್ಚಿ ಹೋಗಿವೆ. ಅಕ್ರಮ ಗಣಿಗಾರಿಕೆಗೆ ಬ್ರೇಕ್ ಹಾಕಬೇಕು ಎಂಬ ಒತ್ತಾಯದ ನಡುವೆಯೇ ಲಾರಿಗಳೂ ವೇಗವಾಗಿ ಸಂಚಾರ ನಡೆಸುತ್ತಿವೆ.

ಮಾಲೂರಿನಲ್ಲಿ ಅಕ್ರಮವಾಗಿ ಕ್ರಷರ್‌ಗಳು ನಡೆಯುತ್ತಿವೆ ಎಂಬುದು ಪ್ರಮುಖ ಆರೋಪ. ಆದರೆ ಈ ಸಮಸ್ಯೆ ಚುನಾವಣಾ ವಿಚಾರ ಆಗುವುದಿಲ್ಲ. ಮಾರ್ಕಂಡಯ್ಯ ಜಲಾಶಯದ ಸುತ್ತಮುತ್ತಲೇ ಕ್ರಷರ್‌ಗಳಿದ್ದು ಡ್ಯಾಂಗೂ ಸಹ ಅಪಾಯವಿದೆ. ಉಳಿದಂತೆ ಕುಡಿಯುವ ನೀರು, ರಸ್ತೆ, ಸರ್ಕಾರಿ ಶಾಲೆಗಳ ಅಭಿವೃದ್ಧಿ ಸೇರಿದಂತೆ ಹಲವಾರು ಸಮಸ್ಯೆಗಳಿವೆ. ಕ್ಷೇತ್ರದ ಹಾಲಿ ಶಾಸಕರು ಕಾಂಗ್ರೆಸ್‌ನ ಕೆ. ವೈ. ನಂಜೇಗೌಡ. ಮಾರ್ಚ್ 25ರಂದು ಬಿಡುಗಡೆಯಾದ 2023ರ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿಯೂ ಈ ಬಾರಿಯ ಚುನಾವಣೆಯಲ್ಲಿ ಕೆ. ವೈ. ನಂಜೇಗೌಡ ಅವರೇ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ.

maluru constituency map

ಮಾಲೂರು ಕಾಂಗ್ರೆಸ್ ಪಕ್ಷದ ಭದ್ರಕೋಟೆ. 14 ವಿಧಾನಸಭಾ ಕ್ಷೇತ್ರಗಳಲ್ಲಿ 8 ಬಾರಿ ಪಕ್ಷ ಬಾವುಟ ಹಾರಿಸಿದೆ. ಜನತಾಪಕ್ಷ, ಜನತಾದಳ, ಜೆಡಿಎಸ್ ಒದೊಂದು ಬಾರಿ ಮತ್ತು ಬಿಜೆಪಿ 2 ಬಾರಿ ಕ್ಷೇತ್ರದಲ್ಲಿ ಗೆದ್ದಿದೆ. ಪಕ್ಷೇತರ ಅಭ್ಯರ್ಥಿ ಒಮ್ಮೆ ಗೆಲುವು ಕಂಡಿದ್ದಾರೆ. ಆದರೆ ಕ್ಷೇತ್ರದಲ್ಲಿ ಪಕ್ಷೇತರನಾಗಿ ನಿಂತವರು ಎರಡನೇ ಸ್ಥಾನ ಪಡೆಯುವಷ್ಟು ಪೈಪೋಟಿ ನೀಡಿರುವುದು ಕ್ಷೇತ್ರದ ವಿಶೇಷ. ಈ ಬಾರಿಯ ಚುನಾವಣೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರದಿಂದ ಕಣಕ್ಕಿಳಿಯುವ ಕುರಿತು ಇನ್ನೂ ಗೊಂದಲ ಮುಂದುವರೆದಿದೆ. ಅವರು ಕಣಕ್ಕಿಳಿದರೆ ಪಕ್ಕದ ಮಾಲೂರಿನಲ್ಲಿಯೂ 'ಕೈ' ಇನ್ನಷ್ಟು ಬಲವಾಗಲಿದೆ ಎಂಬುದು ರಾಜಕೀಯ ಲೆಕ್ಕಾಚಾರವಾಗಿದೆ.

ಬಿಜೆಪಿ 2004ರಲ್ಲಿ ಮಾಲೂರಿನಲ್ಲಿ ಖಾತೆ ತೆರೆಯಿತು. ಎಸ್. ಎನ್. ಕೃಷ್ಣಯ್ಯ ಶೆಟ್ಟಿ ಕಾಂಗ್ರೆಸ್‌ನ ಎ. ನಾಗರಾಜುರನ್ನು 26,856 ಮತಗಳ ಅಂತರದಿಂದ ಸೋಲಿಸಿ ಶಾಸಕರಾದರು. 2008ರಲ್ಲಿಯೂ ಜೆಡಿಎಸ್‌ನ ಆರ್. ಪ್ರಭಾಕರ್ ವಿರುದ್ಧ 52,401 ಮತಗಳ ಅಂತದಿಂದ ಕೃಷ್ಣಯ್ಯ ಶೆಟ್ಟಿ ಗೆದ್ದರು. ಬಿಜೆಪಿ ಸರ್ಕಾರ ರಚನೆಗೊಂಡಾಗ ಅಪಾರ ದೈವ ಭಕ್ತರಾದ ಅವರಿಗೆ ಮುಜರಾಯಿ ಖಾತೆ ಒಲಿದು ಬಂದಿತು. ಆದರೆ ರಾಚೇನಹಳ್ಳಿ ಅಕ್ರಮ ಡಿನೋಟಿಫೈ ಪ್ರಕರಣದಲ್ಲಿ ಯಡಿಯೂರಪ್ಪ ಜೊತೆಗೆ ಜೈಲಿಗೆ ಹೋದರು ಎಸ್. ಎನ್‌. ಕೃಷ್ಣಯ್ಯ ಶೆಟ್ಟಿ.

k y nanje gowda

2013ರ ಚುನಾವಣೆಯಲ್ಲಿ ಕೃಷ್ಣಯ್ಯ ಶೆಟ್ಟರಿಗೆ ಟಿಕೆಟ್ ಕೊಡಲು ಬಿಜೆಪಿ ಹಿಂದೇಟು ಹಾಕಿತು. ಅಂತಿಮ ಕ್ಷಣದಲ್ಲಿ ಬಿಫಾರಂ ನೀಡಲಾಯಿತು. ಆದರೆ ಎಸ್. ಎನ್. ಕೃಷ್ಣಯ್ಯ ಶೆಟ್ಟಿ ಅದನ್ನು ತಿರಸ್ಕಾರ ಮಾಡಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಹಾಕಿದರು. ಇದು ಅವರು ಮಾಲೂರಿನಲ್ಲಿ ಹ್ಯಾಟ್ರಿಕ್ ಬಾರಿಸುವುದನ್ನು ತಪ್ಪಿಸಿತು. ಜೆಡಿಎಸ್‌ನ ಕೆ. ಎಸ್. ಮಂಜುನಾಥ ಗೌಡ 57,645 ಮತಗಳನ್ನು ಪಡೆದು ಗೆದ್ದರು. ಕೃಷ್ಣಯ್ಯ ಶೆಟ್ಟಿ 38,876 ಮತಗಳಿಂದ 2ನೇ ಸ್ಥಾನ, ಕಾಂಗ್ರೆಸ್‌ನ ಚನ್ನಕೇಶವ 20,159 ಮತಗಳಿಂದ 3ನೇ ಸ್ಥಾನ ಪಡೆದರು. ಪಕ್ಷೇತರ ಅಭ್ಯರ್ಥಿ ರಾಮೇಗೌಡ ಜಿ. ಇ. 19,480 ಮತಗಳನ್ನು ಪಡೆದು ಎಲ್ಲರ ಲೆಕ್ಕಾಚಾರ ತಲೆಕೆಳಗು ಮಾಡಿದರು.

2018ರಲ್ಲಿ ಆಗಿದ್ದೇನು?; 2018ರ ಚುನಾವಣೆಯಲ್ಲಿಯೂ ಕೆ. ಎಸ್. ಮಂಜುನಾಥ ಗೌಡ ಜೆಡಿಎಸ್ ಟಿಕೆಟ್ ಪಡೆದರು, 57,762 ಮತಗಳನ್ನು ಪಡೆದು 2ನೇ ಸ್ಥಾನಗಳಿಸಿದರು. ಕಾಂಗ್ರೆಸ್‌ನ ಕೆ. ವೈ. ನಂಜೇಗೌಡ 75,677 ಮತಗಳನ್ನು ಪಡೆದು ಗೆದ್ದರು. ಎಸ್. ಎನ್. ಕೃಷ್ಣಯ್ಯ ಶೆಟ್ಟಿ ಕಾಂಗ್ರೆಸ್ ಕಡೆ ಹೋಗಿ ಮತ್ತೆ ಬಿಜೆಪಿಗೆ ಬಂದರು. 23,889 ಮತ ಪಡೆದು 3ನೇ ಸ್ಥಾನ ಪಡೆದರು. ಈ ಬಾರಿ ಕೃಷ್ಣಯ್ಯ ಶೆಟ್ಟರು ಮಾಲೂರು ಬಿಟ್ಟು ಬೆಂಗಳೂರಿನ ಗಾಂಧಿ ನಗರದಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಮಾಜಿ ಶಾಸಕ ಕೆ. ಎಸ್. ಮಂಜುನಾಥ ಗೌಡ ಬಿಜೆಪಿಗೆ ಬಂದಿದ್ದಾರೆ, ಬೆಂಬಲಿಗರ ಜೊತೆ ಮಾಲೂರು ಕ್ಷೇತ್ರದಲ್ಲಿ ಚುರುಕಿನಿಂದ ಓಡಾಡಿ ಬಿಜೆಪಿ ಟಿಕೆಟ್ ಬಯಸಿದ್ದಾರೆ. ಸಮಸ್ಯೆ ಇರುವುದೇ ಬಿಜೆಪಿ ಟಿಕೆಟ್‌ ಪೈಪೋಟಿ.

ಕೆ. ಎಸ್. ಮಂಜುನಾಥ ಗೌಡ ಬಿಜೆಪಿ ಸೇರುವುದಕ್ಕೆ ಪ್ರಭಾಕರ್, ವೆಂಕಟೇಶ್ ಸೇರಿದಂತೆ ಕೆಲವು ಮೂಲ ಬಿಜೆಪಿಗರು ವಿರೋಧ ಮಾಡಿದ್ದರು. ಯವ ನಾಯಕ, ಬಿಬಿಎಂಪಿಯ ಮಾಜಿ ಸದಸ್ಯ ಹೂಡಿ ವಿಜಯ ಕುಮಾರ್ ಸಹ ಬಿಜೆಪಿ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ನಾಲ್ಕು ವರ್ಷಗಳಿಂದ ಬಿಜೆಪಿ ಕಟ್ಟುತ್ತಿದ್ದೇನೆ ಟಿಕೆಟ್ ಕೊಡಿ ಎಂಬ ಬೇಡಿಕೆ ಇಟ್ಟಿದ್ದಾರೆ. ಕೆ. ಎಸ್. ಮಂಜುನಾಥ ಗೌಡ ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೆ ಅವರು ಗೈರಾಗಿದ್ದರು. ಮಾಲೂರು ಬಿಜೆಪಿಯಲ್ಲಿ ಅಸಮಾಧಾನವಿದೆ ಎಂಬುದು ಎಲ್ಲರಿಗೂ ಗೊತ್ತು. ಆದರೆ ಟಿಕೆಟ್ ಯಾರಿಗೆ ಎಂಬುದು ಯಾರಿಗೂ ತಿಳಿದಿಲ್ಲ.

ಜೆಡಿಎಸ್‌ನಿಂದ ಗೆದ್ದಿದ್ದ ಕೆ. ಎಸ್. ಮಂಜುನಾಥ ಗೌಡ 2019ರ ಚುನಾವಣೆಯ ಸಮಯದಲ್ಲೇ ಪಕ್ಷದ ನಾಯಕರ ಜೊತೆ ಮುನಿಸಿಕೊಂಡಿದ್ದರು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಮುನಿಸ್ವಾಮಿ ಪರವಾಗಿ ಕೆಲಸ ಮಾಡಿದ್ದರು. ಜೆಡಿಎಸ್ ಆಗಲೇ ಜಿ. ಇ. ರಾಮೇಗೌಡರಿಗೆ ಆದ್ಯತೆ ನೀಡಿತು, 2023ಕ್ಕೆ ಅವರೇ ಅಭ್ಯರ್ಥಿ ಎಂದು ಘೋಷಣೆ ಮಾಡಿತು. ಆದ್ದರಿಂದ ಈ ಬಾರಿಯ ಅಖಾಡಕ್ಕೆ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿ ಅಂತಿಮವಾಗಿದೆ. ಕಗ್ಗಂಟಾಗಿರುವುದು ಬಿಜೆಪಿ ಅಭ್ಯರ್ಥಿ ಆಯ್ಕೆ.

Maluru Karnataka Elections

ವರ್ಷ ಗೆದ್ದವರು ಮತಗಳು ಸೋತವರು ಮತಗಳು
2018 ಕೆ. ವೈ. ನಂಜೇಗೌಡ (ಕಾಂಗ್ರೆಸ್) 75,677 ಕೃಷ್ಣಯ್ಯ ಶೆಟ್ಟಿ (ಬಿಜೆಪಿ) 23,889
2013 ಕೆ. ಎಸ್. ಮಂಜುನಾಥ ಗೌಡ (ಜೆಡಿಎಸ್) 57,645 ಕೃಷ್ಣಯ್ಯ ಶೆಟ್ಟಿ (ಬಿಜೆಪಿ) 38,876
2008 ಕೃಷ್ಣಯ್ಯ ಶೆಟ್ಟಿ (ಬಿಜೆಪಿ) 78,280 ಆರ್‌. ಪ್ರಭಾಕರ್ (ಜೆಡಿಎಸ್) 25,879

ಮಾಲೂರು ಕ್ಷೇತ್ರದ ಒಟ್ಟು ಮತದಾರರು 1,80,278. ಇವರಲ್ಲಿ ಪುರುಷರು 90,955 ಮತ್ತು ಮಹಿಳೆಯರು 89, 285, ಇತರರು 5. ಎಸ್‌ಸಿ/ ಎಸ್‌ಟಿ ಮತಗಳು ಸುಮಾರು 65 ಸಾವಿರ, ಒಕ್ಕಲಿಗ ಸಮುದಾಯ ಸುಮಾರು 60 ಸಾವಿರ ಮತಗಳನ್ನು ಹೊಂದಿದೆ. ಹಿಂದುಳಿದ ವರ್ಗ ಸುಮಾರು 50 ಸಾವಿರ, 15 ಸಾವಿರಕ್ಕೂ ಅಧಿಕ ಮುಸ್ಲಿಂ ಮತಗಳಿವೆ. ಎಲ್ಲಾ ಪಕ್ಷದಿಂದಲೂ ಒಕ್ಕಲಿಗ ಅಭ್ಯರ್ಥಿಗಳೇ ಕಣಕ್ಕಿಳಿಯುವುದರಿಂದ ಮತಗಳು ಹಂಚಿ ಹೋಗುತ್ತವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+