Magadi elections: ಜೆಡಿಎಸ್ ಭದ್ರಕೋಟೆ ರಕ್ಷಿಸಲು ಎ.ಮಂಜುನಾಥ್‌ಗೆ ಮತ್ತೊಮ್ಮೆ ಅಗ್ನಿ ಪರೀಕ್ಷೆ
ಮಾಗಡಿ, ಮಾರ್ಚ್, 26: ರಾಜ್ಯ ವಿಧಾನಸಭೆ ಚುನಾವಣೆ ಸಮೀಸುತ್ತಿದ್ದು, ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಪ್ರಚಾರದಲ್ಲಿ ಸಕ್ರಿಯರಾಗಿದ್ದಾರೆ. ಮತದಾರರನ್ನು ತಮ್ಮ ಸೆಳೆಯಲು ಇನ್ನಿಲ್ಲದ ಪ್ರಯತ್ನಗಳನ್ನು ಕೂಡ ಮಾಡುತ್ತಿದ್ದಾರೆ, ಹಾಗಾದರೆ ರೇಷ್ಮೆ ನಾಡು ಅಂತಲೇ ಪ್ರಸಿದ್ಧಿ ಪಡೆದಿರುವ ರಾಮನಗರ ಜಿಲ್ಲೆಯಲ್ಲಿ ರಾಜಕೀಯ ರಂಗು ಹೇಗಿದೆ ಎಂದು ನೋಡೋಣ ಬನ್ನಿ.
ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರು ಹುಟ್ಟಿದ ಮಾಗಡಿ ತಾಲೂಕು ಬೆಂಗಳೂರಿನ ಸಮೀಪದಲ್ಲೇ ಇದ್ದು, ಮಾಗಡಿ ವಿಧಾನಸಭಾ ಕ್ಷೇತ್ರ ಮೊದಲಿನಿಂದಲೂ ಜೆಡಿಎಸ್‌ನ ಭದ್ರಕೋಟೆಯಾಗಿದೆ. ಕ್ಷೇತ್ರದಲ್ಲಿ ಜೆಡಿಎಸ್ -ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಮೊದಲಿನಿಂದಲೂ ನಡೆಯುತ್ತಲೇ ಇದೆ. ಇದೀಗ ಬಿಜೆಪಿ ಕೂಡ ನಾವೇನು ಕಡಿಮೆ ಇಲ್ಲವೆಂಬಂತೆ ಪೈಪೋಟಿ ನಡೆಸಲು ತಯಾರಿ ಮಾಡಿಕೊಂಡಿದೆ. ಕೊನೆಗೆ ಮತದಾರ ಪ್ರಭುಗಳು ಯಾರ ಕೊರಳಿಗೆ ಗೆಲುವುನ ಮಾಲೆ ಹಾಕಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.

ಜೆಡಿಎಸ್ ಭದ್ರಕೋಟೆಯಾದ ಮಾಗಡಿ
ರಾಮನಗರ ಜಿಲ್ಲೆಯ ಮಾಗಡಿ ವಿಧಾನಸಭಾ ಕ್ಷೇತ್ರ ಕಳೆದ ಹಲವು ವರ್ಷಗಳಿಂದ ಜೆಡಿಎಸ್‌ನ ಭದ್ರಕೋಟೆ ಆಗಿದೆ. ಒಕ್ಕಲಿಗರ ಪ್ರಾಬಲ್ಯವಿರುವ ಮಾಗಡಿ ವಿಧಾನಸಭಾ ಕ್ಷೇತ್ರ ತನ್ನದೇ ಆದ ರಾಜಕೀಯ ಇತಿಹಾಸವನ್ನು ಒಳಗೊಂಡಿದೆ. ಬೆಂಗಳೂರಿನ ಸಮೀಪದಲ್ಲಿರುವ ಮಾಗಡಿ ಕ್ಷೇತ್ರದಲ್ಲಿ ಕಳೆದ ಬಾರಿಯ ಚುನಾವಣೆಯಲ್ಲಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಶಾಸಕ ಬಾಲಕೃಷ್ಣ ಜೆಡಿಎಸ್ ತೊರೆದು ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದರು.
| ಜಾತಿ | ಒಕ್ಕಲಿಗರು | ಎಸ್ಸಿ, ಎಸ್‌ಟಿ | ಲಿಂಗಾಯತ | ಮುಸ್ಲೀಂ | ಕುರುಬರು | ತಿಗಳರು | ಇತರೆ |
| ಮತದಾರರು | 15,000 | 22,000 | 15,000 | 32,590 | 7,865 | 8,300 | 15,000 |
ನಂತರ ಕಾಂಗ್ರೆಸ್ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಎ.ಮಂಜುನಾಥ್ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿ 50 ಸಾವಿರ ಮತಗಳ ಅಂತರದಿಂದ ಬಾಲಕೃಷ್ಣ ವಿರುದ್ದ ಅಭೂತಪೂರ್ವ ಗೆಲುವು ಸಾಧಿಸಿದ್ದರು. ತಾಲೂಕಿನಲ್ಲಿ ಬಿಜೆಪಿಯ ಸಾವಿರಾರು ಮತಗಳಿದ್ದರೂ ಕೂಡ ಸೂಕ್ತ ಅಭ್ಯರ್ಥಿ ಇಲ್ಲದ ಕಾರಣ ಚುನಾವಣೆಯಲ್ಲಿ ಬಿಜೆಪಿ ಆಟಕ್ಕುಂಟು ಲೆಕ್ಕಕ್ಕೆ ಇಲ್ಲದಂತಹ ಸ್ಥಿತಿಯಲ್ಲಿದೆ.

ಗೆಲುವು ಸಾಧಿಸಲು ಬಿಜೆಪಿ ಹರಸಾಹಸ
ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಮೂಲತಃ ಮಾಗಡಿ ತಾಲೂಕಿನ ಚಿಕ್ಕಕಲ್ಯಾ ಗ್ರಾಮದವರಾಗಿದ್ದು, ರಾಮನಗರ ಉಸ್ತುವಾರಿ ಸಚಿವರಾದ ನಂತರ ಮಾಗಡಿ ಕ್ಷೇತ್ರಕ್ಕೆ ವಿಶೇಷ ಅನುದಾನ ತಂದಿದ್ದರು. ಈ ಮೂಲಕ ಮಾಗಡಿಯಲ್ಲಿ ಅಭಿವೃದ್ಧಿ ಕೆಲಸಗಳು ಕೂಡ ಆಗಿವೆ. ಕಳೆದ ಹಲವು ವರ್ಷಗಳಿಂದ ಜೆಡಿಎಸ್- ಕಾಂಗ್ರೆಸ್ ನಡುವೆ ನೇರಾ ಹಣಾಹಣಿ ನಡೆಯುತ್ತಿತ್ತು. ಆದರೆ 2023ರ ಚುನಾವಣೆ ಸಚಿವ ಅಶ್ವತ್ಥ್ ನಾರಾಯಣ ಅವರಿಗೂ ಪ್ರತಿಷ್ಟೆಯಾಗಿದೆ.
ಈ ಬಾರಿ ಕ್ಷೇತ್ರದಲ್ಲಿ ಶತಾಯಗತಾಯ ತಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುಲು ಅಶ್ವತ್ಥ್ ನಾರಾಯಣ ಅವರು ಪಣ ತೊಟ್ಟಿದ್ದಾರೆ. ಅಶ್ವತ್ಥ್ ನಾರಾಯಣ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಪ್ರಸಾದ್ ಗೌಡ ಕ್ಷೇತ್ರದಾದ್ಯಂತ ಓಡಾಟ ನಡೆಸಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು, ಇವರೇ ಬಿಜೆಪಿ ಅಭ್ಯರ್ಥಿ ಅಂತಾ ಕೂಡ ಹೇಳಲಾಗುತ್ತಿದೆ.
| ವರ್ಷ | ವಿಜೇತರು | ಮತಗಳು | ಸೋತವರು | ಮತಗಳು |
| 2004 | ಎಚ್.ಸಿ.ಬಾಲಕೃಷ್ಣ (ಜೆಡಿಎಸ್) | 49,197 | ಎಚ್.ಎಂ.ರೇವಣ್ಣ (ಕಾಂಗ್ರೆಸ್) | 37,921 |
| 2008 | ಎಚ್.ಸಿ.ಬಾಲಕೃಷ್ಣ (ಜೆಡಿಎಸ್) | 75,991 | ಪಿ.ನಾಗರಾಜು (ಬಿಜೆಪಿ) | 51,072 |
| 2013 | ಎಚ್.ಸಿ.ಬಾಲಕೃಷ್ಣ (ಜೆಡಿಎಸ್) | 74,821 | ಎ.ಮಂಜುನಾಥ್ (ಕಾಂಗ್ರೆಸ್) | 60,462 |
| 2018 | ಎ. ಮಂಜುನಾಥ (ಜೆಡಿಎಸ್) | 119,492 | ಎಚ್.ಸಿ.ಬಾಲಕೃಷ್ಣ (ಜೆಡಿಎಸ್) | 68,067 |
ಎ.ಮಂಜುನಾಥ್‌ಗೆ ಮತ್ತೊಮ್ಮೆ ಅಗ್ನಿ ಪರೀಕ್ಷೆ
ಇನ್ನು ಜೆಡಿಎಸ್‌ನಿಂದ ಹಾಲಿ ಶಾಸಕ ಎ.ಮಂಜುನಾಥ್ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಶಾಸಕರಾದ ನಂತರ ಕ್ಷೇತ್ರದಲ್ಲಿ ಸಂಚರಿಸಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಆದ್ದರಿಂದ ಕ್ಷೇತ್ರದಲ್ಲಿ ಕುಮಾರಸ್ವಾಮಿಯ ಹೆಸರೇ ಶ್ರೀರಕ್ಷೆ ಆಗಿದೆ. ಇನ್ನು ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡುತ್ತಿರುವ ಮಾಜಿ ಶಾಸಕ ಬಾಲಕೃಷ್ಣಗೆ ಈ ಬಾರಿ ಶತಾಯಗತಾಯ ಗೆಲ್ಲಲ್ಲೇಬೇಕಾದ ಅನಿವಾರ್ಯ ಎದುರಾಗಿದೆ.

ಮಾಗಡಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳನ್ನು ನೋಡುವುದಾದರೆ, ಜೆಡಿಎಸ್‌ನಿಂದ ಹಾಲಿ ಶಾಸಕ ಎ.ಮಂಜುನಾಥ್, ಕಾಂಗ್ರೆಸ್‌ನಿಂದ ಮಾಜಿ ಶಾಸಕ ಹೆಚ್.ಸಿ. ಬಾಲಕೃಷ್ಣ ಅವರನ್ನು ಅಖಾಡಕ್ಕಿಳಿಸಲಾಗಿದೆ. ಇನ್ನು ಬಿಜೆಪಿಯಿಂದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಆದರೆ ಬಿಜೆಪಿಯು ಪ್ರಸಾದ್ ಗೌಡ ಅಥವಾ ರಂಗರಾಮಯ್ಯ ಇವರಿಬ್ಬರಲ್ಲಿ ಒಬ್ಬರನ್ನು ಕಣಕ್ಕಿಳಿಸಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಕ್ಷೇತ್ರದ ಒಟ್ಟು 2,30,174 ಮತದಾರರಿದ್ದಾರೆ. ಇದರಲ್ಲಿ ಪುರುಷ ಮತದಾರರು 1,15,067 ಜನ ಇದ್ದರೆ,
1,15,107 ಮಹಿಳೆ ಮತದಾರರಿದ್ದಾರೆ.
ಒಟ್ಟಾರೆ 2023ರ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ತೀವ್ರ ಹಣಾಹಣಿ ನಡೆಯಲಿದ್ದು, ಬಿಜೆಪಿ ಕೂಡ ರೇಸ್‌ನಲ್ಲಿ ಇರಲಿದೆ. ಬಿಜೆಪಿ ಪಕ್ಷದ ಮತಗಳು ಬೇರೆ ಪಕ್ಷಗಳ ಫಲಿತಾಂಶದ ಮೇಲೆ ಪರಿಣಾಮ ಬೀಳಲಿದೆ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ.












Click it and Unblock the Notifications