ನಿಸರ್ಗ ಪ್ರೇಮಿಗಳ ಮನಕ್ಕೆ ಲಗ್ಗೆಯಿಡುವ ನೀಲಕಂಡಿ ಜಲಧಾರೆ: ಇಂದೇ ಭೇಟಿ ಕೊಡಿ

ಮಡಿಕೇರಿ, ಆಗಸ್ಟ್ 13: ಕೊಡಗಿನಲ್ಲಿ ಮುಂಗಾರು ಮಳೆ ಉತ್ತಮವಾಗಿ ಸುರಿದ ಕಾರಣಗಳಿಂದಾಗಿ ಜಲಧಾರೆಗಳೆಲ್ಲವೂ ಭೋರ್ಗರೆಯುತ್ತಿವೆ. ಈಗ ಮಳೆ ಒಂದಷ್ಟು ಬಿಡುವು ಕೊಟ್ಟಿದ್ದರೂ ಆಗೊಮ್ಮೆ ಈಗೊಮ್ಮೆ ಧೋ ಎಂದು ಸುರಿಯುವ ಮಳೆಯಿಂದಾಗಿ ಜಲಧಾರೆಗಳೆಲ್ಲವೂ ಸಮೃದ್ಧವಾಗಿವೆ. ಹೀಗಾಗಿ ನಿಸರ್ಗಪ್ರೇಮಿಗಳು ಜಲಧಾರೆಗಳನ್ನು ಅರಸಿಕೊಂಡು ತೆರಳುತ್ತಿದ್ದು, ಹತ್ತಿರದಿಂದ ನೋಡಿ ಖುಷಿಪಡುತ್ತಿದ್ದಾರೆ.

ಜಲಧಾರೆಗಳನ್ನು ಹತ್ತಿರದಿಂದ ನೋಡುವುದೇ ಒಂಥರಾ ಮಜಾ.. ಅದರಲ್ಲೂ ಇಲ್ಲಿರುವ ಜಲಧಾರೆಗಳೆಲ್ಲವೂ ಒಂದೊಂದು ಒಂದೊಂದು ರೀತಿಯಲ್ಲಿವೆ. ಹೀಗಾಗಿ ಅವುಗಳ ಚೆಲುವನ್ನು ನೋಡುವುದೇ ಮರೆಯಲಾಗದ ಅನುಭವ. ಇತ್ತೀಚೆಗಿನ ವರ್ಷಗಳಲ್ಲಿ ಸಮರ್ಪಕವಾಗಿ ಮಳೆ ಸುರಿಯದ ಕಾರಣದಿಂದಾಗಿ ಮಳೆ ಸುರಿದಾಗ ಜಲಧಾರೆ ಧುಮ್ಮಿಕ್ಕಿ ಹರಿದು ಮಳೆ ಕಡಿಮೆಯಾಗುತ್ತಿದ್ದಂತೆಯೇ ಭೋರ್ಗರೆತ ಕಡಿಮೆಯಾಗಿ ಬಿಡುತ್ತದೆ.

What Is The Speciality Of Kodagu Nilakandi Waterfalls

ಈ ಬಾರಿ ಮುಂಗಾರು ಆರಂಭದಿಂದಲೇ ವೇಗ ಪಡೆದುಕೊಂಡಿದ್ದರಿಂದ ಮತ್ತು ಬಿಡುವು ನೀಡದೆ ಸುರಿದ ಪರಿಣಾಮ ಅಂತರ್ಜಲ ಹೆಚ್ಚಾಗಿದ್ದು, ಬೆಟ್ಟಗುಡ್ಡಗಳಲ್ಲಿ ನೀರು ಉಕ್ಕಿ ಹರಿದಿದೆ ಮತ್ತು ಹರಿಯುತ್ತಲೂ ಇದೆ. ಇದರಿಂದ ಬಿಸಿಲಿದ್ದರೂ ಜಲಧಾರೆಯ ಭೋರ್ಗರೆತ ಕಡಿಮೆಯಾಗುವುದಿಲ್ಲ. ಈಗ ಜಲಧಾರೆಗಳನ್ನು ನೋಡಲು ಹೊರಡುವವರಿಗೆ ಪ್ರಕೃತಿ ಮಾತೆ ಮನವೊಲ್ಲಾಸ ನೀಡುವುದಂತು ಖಚಿತ. ಸುತ್ತಲ ಹಸಿರು ಗಿರಿ ಕಂದರ, ಬಂಡೆಕಲ್ಲು, ಕಂದಕಗಳ ನಡುವೆ ಚಿಮ್ಮುವ ಜಲ, ಚಿಲಿಪಿಲಿ ಗುಟ್ಟುವ ಹಕ್ಕಿಗಳು, ನಿಸರ್ಗದ ಸೊಬಗು ಸವಿಯುವಂತೆ ಮಾಡುತ್ತಿವೆ.

ಪಾತಿ ನದಿಯಿಂದ ಸೃಷ್ಟಿಯಾದ ಜಲಧಾರೆ

ಸದ್ಯಕ್ಕೆ ಕೊಡಗಿನಲ್ಲಿ ನಗರಕ್ಕೆ ಹತ್ತಿರದಲ್ಲಿರುವ ಜಲಧಾರೆಯತ್ತ ಜನ ಹೆಚ್ಚಾಗಿ ಹೋಗುತ್ತಾರೆ. ಆದರೆ ಬೆಟ್ಟಗುಡ್ಡಗಳ ನಡುವೆ ಇರುವ ಜಲಧಾರೆಗಳತ್ತ ಹೋಗುವುದು ವಿರಳವೇ.. ಹೀಗಾಗಿ ಅಂತಹ ಜಲಧಾರೆಗಳ ಪೈಕಿ ನೀಲಕಂಡಿ ಜಲಧಾರೆಯೂ ಒಂದಾಗಿದ್ದು, ಈ ಜಲಧಾರೆ ಬಗ್ಗೆ ವಿವರಿಸಲೇ ಬೇಕಾಗುತ್ತದೆ. ಇದು ತಡಿಯಂಡಮೋಳ್ ಬೆಟ್ಟ ಶ್ರೇಣಿಯಲ್ಲಿದ್ದು, ಧುಮುಕುವ ಮತ್ತು ಕೇರಳದ ಕಡೆಗೆ ಹರಿಯುವ ಪಾತಿ ನದಿಯಿಂದ ಸೃಷ್ಟಿಯಾದ ಜಲಧಾರೆಯಾಗಿದೆ.

ಈ ಜಲಧಾರೆ ಸುಮಾರು 150 ಅಡಿಗಿಂತಲೂ ಹೆಚ್ಚು ಎತ್ತರದಿಂದ ವಿವಿಧ ಹಂತದಲ್ಲಿ ಧುಮುಕುತ್ತಾ ನೋಡುಗರ ಕಣ್ಮನಸೆಳೆಯುತ್ತದೆ. ನೀಲಕಂಡಿ ಜಲಧಾರೆ ಎಂಬುದು ಸ್ಥಳೀಯರು ಇಟ್ಟ ಹೆಸರಾಗಿದೆ. ಇದಕ್ಕೆ ಕಾರಣವೂ ಇದೆ ಅದೇನೆಂದರೆ, ಜಲಧಾರೆಯಿರುವ ಬೆಟ್ಟ ಸೇರಿದಂತೆ ಸುತ್ತಮುತ್ತಲಿನ ಬೆಟ್ಟಗಳಲ್ಲಿ ಕುರುಂಜಿ ಗಿಡಗಳು ಬೆಳೆದಿದ್ದು ಇವುಗಳು ಹತ್ತೋ, ಹನ್ನೆರಡೋ ವರ್ಷಗಳಿಗೊಮ್ಮೆ ಹೂ ಬಿಡುತ್ತವೆ. ಹೀಗೆ ಹೂ ಬಿಟ್ಟಾಗ ಇಡೀ ಬೆಟ್ಟ ನೀಲಿಯಾಗಿ ಗೋಚರಿಸುತ್ತದೆ. ನೀಲಿ ಬೆಟ್ಟದ ನಡುವೆ ಕಿಂಡಿಯಂತಹ ಕಂದಕದ ಹೆಬ್ಬಂಡೆಯ ಮೇಲೆ ಬೆಳ್ಳಿ ಸುರಿದಂತೆ ಜಲಧಾರೆ ಗೋಚರಿಸುವುದರಿಂದ ನೀಲಕಂಡಿ ಜಲಧಾರೆ ಎಂಬ ಹೆಸರಿನಿಂದ ಕರೆಯಲಾಗುತ್ತಿದೆ.

What Is The Speciality Of Kodagu Nilakandi Waterfalls

ಮೈಮನ ಪುಳಕಗೊಳಿಸುವ ನಿಸರ್ಗ

ಇನ್ನು ಈ ನೀಲಕಂಡಿ ಜಲಧಾರೆಗೆ ಮಡಿಕೇರಿಯಿಂದ ಸುಮಾರು 23 ಕಿ.ಮೀ. ದೂರದಲ್ಲಿರುವ ನಾಪೋಕ್ಲಿಗೆ ತೆರಳಿ, ಬಳಿಕ ಕಕ್ಕಬ್ಬೆಯ ಕಬ್ಬಿನಕಾಡಿಗೆ ಹೋಗಿ ಅಲ್ಲಿಂದ ಬಲಕ್ಕೆ ಮಣ್ಣಿನ ರಸ್ತೆಯಲ್ಲಿ ಸುಮಾರು ಮೂರು ಕಿ.ಮೀ. ಸಾಗಬೇಕು. ಏರುರಸ್ತೆಯಲ್ಲಿ ಸಾಗುವುದು ವಿಶಿಷ್ಟ ಅನುಭವ. ಫೋರ್ವೀಲ್ ವಾಹನ ಹೊರತುಪಡಿಸಿ ಬೇರೆ ವಾಹನಗಳಲ್ಲಿ ಸಾಗುವುದು ಸ್ವಲ್ಪ ಕಷ್ಟವೇ... ಆದರೂ ಕಷ್ಟಪಟ್ಟು ಸಾಗಿದರೆ ಹನಿವ್ಯಾಲಿ ಎಂಬ ಎಸ್ಟೇಟ್ ಸಿಗುತ್ತದೆ. ಅಲ್ಲಿಂದ ಮತ್ತೆ ಏರು ಹಾದಿಯಲ್ಲಿ ನಡೆಯುತ್ತಾ ಸುಮಾರು ಮೂರು ಕಿ.ಮೀ.ನಷ್ಟು ಸಾಗಿದರೆ ಸುಮಾರು ಒಂದೂವರೆ ಕಿ.ಮೀ.ದೂರದಿಂದಲೇ ನೀಲಕಂಡಿ ಜಲಧಾರೆಯ ದರ್ಶನವಾಗುತ್ತದೆ.

ಈ ಜಲಧಾರೆಯನ್ನು ನೋಡುವ ಸಲುವಾಗಿ ಬೆಟ್ಟದಂಚಿನಲ್ಲಿ ಹೆಜ್ಜೆ ಹಾಕುತ್ತಿದ್ದರೆ ಪ್ರಪಾತದಲ್ಲಿ ಸದ್ದು ಮಾಡುತ್ತಾ ಹರಿಯುವ ನದಿ.. ಸುತ್ತಲೂ ಬೆಳೆದ ಗಿರಿಶಿಖರಗಳು.. ಹಿತವಾಗಿ ಬೀಸುವ ತಂಗಾಳಿ ಹೊಸ ಅನುಭವ ನೀಡುತ್ತದೆ. ಜಲಧಾರೆ ಹತ್ತಿರವಾದಂತೆಲ್ಲ ಅದರ ರುದ್ರರಮಣೀಯತೆ ಮೈಮನವನ್ನು ಪುಳಕಗೊಳಿಸಿ ಉಲ್ಲಾಸ ನೀಡುತ್ತದೆ. ಮೇಲಿನಿಂದ ಭೋರ್ಗರದೆ ಧುಮ್ಮಿಕ್ಕುವ ಜಲಧಾರೆ ತಳ ಸೇರುವ ವೇಳೆಗೆ ಚಿಕ್ಕಾತಿ ಚಿಕ್ಕ ಜಲಧಾರೆಗಳನ್ನು ಸೃಷ್ಠಿಮಾಡಿ ಕಂದಕದೆಡೆಗೆ ಧುಮುಕಿ ನದಿಯಾಗಿ ಹರಿಯುತ್ತದೆ.

What Is The Speciality Of Kodagu Nilakandi Waterfalls

ಬೆಟ್ಟ ಶ್ರೇಣಿಯ ವಿಹಂಗಮ ನೋಟ

ನೀಲಕಂಡಿ ಜಲಧಾರೆಯನ್ನು ನೋಡಬೇಕಾದರೆ ಏರು ಹಾದಿಯಲ್ಲಿ ಉಸಿರು ಬಿಗಿಹಿಡಿದು ಹತ್ತಬೇಕು... ಬೆಟ್ಟಗುಡ್ಡಗಳ ಕಡಿದಾದ ಕಾಲು ದಾರಿಯಲ್ಲಿ ಎಚ್ಚರಿಕೆಯ ಹೆಜ್ಜೆಯನ್ನಿಟ್ಟು ನಡೆಯಬೇಕು... ಹೀಗೆ ನಡೆಯುವಾಗ ತಡಿಯಂಡಮೋಳ್ ಬೆಟ್ಟಶ್ರೇಣಿಯ ವಿಹಂಗಮ ನೋಟ ಕಣ್ಮನ ಸೆಳೆಯುತ್ತದೆ. ಒಂದೆಡೆ ಮುಗಿಲೆತ್ತರಕ್ಕೇರಿ ನಿಂತ ಪರ್ವತ ಶ್ರೇಣಿಗಳು ಮತ್ತೊಂದೆಡೆ ಕಣ್ಣು ಎಟುಕದಷ್ಟು ಆಳದ ಕಂದಕ. ಅದರ ನಡುವೆ ಬೆಳೆದು ನಿಂತ ವೃಕ್ಷ ಸಂಕುಲಗಳ ನಡುವೆ ಭೋರ್ಗರೆದು ಹರಿಯುವ ಪಾತಿ ನದಿ ರೋಮಾಂಚನವನ್ನುಂಟು ಮಾಡುತ್ತದೆ. ಇದುವೇ ನೀಲಕಂಡಿ ಜಲಧಾರೆಯ ವಿಶೇಷತೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+