ಕೆ. ಜಿ. ಬೋಪಯ್ಯಗೆ ಈ ಸಲ ಟಿಕೆಟ್ ಇಲ್ಲ?. ಮಹಿಳೆಗೆ ಬಿಜೆಪಿ ಟಿಕೆಟ್!
ಮಡಿಕೇರಿ, ಮಾರ್ಚ್ 17; ಕರ್ನಾಟಕದಲ್ಲಿ ಚುನಾವಣೆ ದಿನಾಂಕ ಘೋಷಣೆ ಹತ್ತಿರವಾಗುತ್ತಿದ್ದಂತೆಯೇ ಹಾಲಿ ಶಾಸಕರಿಗೆ ಟಿಕೆಟ್ ಕೈ ತಪ್ಪಲಿದೆ ಎಂಬ ಮಾತು ಮೂರು ಪಕ್ಷದಲ್ಲಿ ಕೇಳಿ ಬರುತ್ತಿದೆ. ಆಡಳಿತಾರೂಢ ಬಿಜೆಪಿಯಲ್ಲಿಯೂ ಇದೇ ಮಾತಿದೆ, ಕಾರಣ ಹಾಲಿ ಶಾಸಕರ ವಿರುದ್ಧ ಅಸಮಾಧಾನ. ಕೊಡಗು ಜಿಲ್ಲಾ ಬಿಜೆಪಿಯಲ್ಲೂ ಈ ಮಾತು ಕೇಳಿ ಬಂದಿದ್ದು, ಹಾಲಿ ಶಾಸಕರ ಬದಲು ಮಹಿಳೆ ಈ ಬಾರಿಯ ಚುನಾವಣೆ ಅಭ್ಯರ್ಥಿಯಾಗಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹಬ್ಬಿದೆ.
ಕೊಡಗು ಜಿಲ್ಲೆಯ ಎರಡೂ ವಿಧಾನಸಭಾ ಕ್ಷೇತ್ರಗಳು ಬಿಜೆಪಿ ವಶದಲ್ಲಿದೆ. ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರ ವಶಪಡಿಸಿಕೊಳ್ಳಬೇಕು ಎಂದು ಕಾಂಗ್ರೆಸ್, ಕ್ಷೇತ್ರ ಉಳಿಸಿಕೊಳ್ಳಬೇಕು ಎಂದು ಬಿಜೆಪಿ ತಂತ್ರ ರೂಪಿಸುತ್ತಿವೆ. ವಿರಾಜಪೇಟೆ ಕ್ಷೇತ್ರದ ಹಾಲಿ ಶಾಸಕರು ಕೆ. ಜಿ. ಬೋಪಯ್ಯ. ಕ್ಷೇತ್ರ ಪುನರ್ ವಿಂಗಡನೆ ಬಳಿಕ ನಡೆದ ಮೂರು ಚುನಾವಣೆಯಲ್ಲಿಯೂ ಬೋಪಯ್ಯ ವಿರಾಜಪೇಟೆ ಗೆದ್ದು ಕ್ಷೇತ್ರವನ್ನು ಬಿಜೆಪಿ ಭದ್ರಕೋಟೆ ಮಾಡಿದ್ದಾರೆ. ಆದರೆ ಈ ಬಾರಿಯ ಚಿತ್ರಣವೇ ಬೇರೆ.

ಮೊದಲು ಮಂಗಳೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿತ್ತು ವಿರಾಜಪೇಟೆ. 2008ರಲ್ಲಿ ಕ್ಷೇತ್ರ ಪುನರ್ ವಿಂಗಡನೆ ಬಳಿಕ ಮೈಸೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬಂದಿದೆ. ಈಗಾಗಲೇ ಆರು ಬಾರಿ ಗೆದ್ದಿರುವ ಕೆ. ಜಿ. ಬೋಪಯ್ಯ ಈ ಬಾರಿಯ ಚುನಾವಣೆಯಲ್ಲಿಯೂ ಸ್ಪರ್ಧಿಸಲು ಅವಕಾಶ ಸಿಕ್ಕರೆ ಸ್ಪರ್ಧಿಸುವ ಮೂಲಕ 7ನೇ ಜಯ ದಾಖಲಿಸಿ, ಹೊಸ ದಾಖಲೆ ಬರೆಯುವ ಉತ್ಸಾಹದಲ್ಲಿದ್ದಾರೆ. ಇದುವರೆಗೂ ನಡೆದ 14 ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ 4 ಬಾರಿ, ಬಿಜೆಪಿ 4 ಬಾರಿ, ಒಮ್ಮೆ ಭಾರತೀಯ ಜನಸಂಘ ಇಲ್ಲಿ ಗೆಲುವು ಕಂಡಿದೆ. ಈ ಸಲದ ಚುನಾವಣೆಯಲ್ಲಿ ವಿರಾಜಪೇಟೆ ಕುತೂಹಲ ಮೂಡಿಸಿದೆ.
ತೇಲಪಂಡ ಶಿವಕುಮಾರ್ ನಾಣಯ್ಯ, ಪಳೆಯಂಡ ರಾಬಿನ್ ದೇವಯ್ಯ, ಶಾಂತೆಯಂಡ ರವಿ ಕುಶಾಲಯ್ಯ, ಪಟ್ಟಡ ರೀನಾ ಪ್ರಕಾಶ್ ಮುಂತಾದವರ ಹೆಸರು ಬಿಜೆಪಿ ಟಿಕೆಟ್‌ಗಾಗಿ ಕೇಳಿ ಬರುತ್ತಿದೆ. ಇದರಲ್ಲಿ ಮುಖ್ಯವಾಗಿ ಹಾಲಿ ಶಾಸಕ ಕೆ. ಜಿ. ಬೋಪಯ್ಯಗೆ ಟಿಕೆಟ್ ಕೈ ತಪ್ಪಲಿದೆ. ಪಟ್ಟಡ ರೀನಾ ಪ್ರಕಾಶ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿಗಳು ಜೋರಾಗಿವೆ. ಆದರೆ ರಾಜ್ಯದ ಬಿಜೆಪಿ ನಾಯಕರಾಗಲಿ, ಕೆ. ಜಿ. ಬೋಪಯ್ಯರಾಗಲಿ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
67 ವರ್ಷದ ಕೆ. ಜಿ. ಬೋಪಯ್ಯ ಬಿಜೆಪಿಯ ಹಿರಿಯ ನಾಯಕರು. ವಿಧಾನಸಭೆ ಸ್ಪೀಕರ್ ಆಗಿ ಕಾರ್ಯ ನಿರ್ವಹಣೆ ಮಾಡಿದವರು. ಪ್ರಸ್ತುತ ಸರ್ಕಾರಿ ಜಮೀನು ರಕ್ಷಣಾ ಸಮಿತಿಯ ಅಧ್ಯಕ್ಷರು. 2013ರ ಚುನಾವಣೆಯಲ್ಲಿ ಕೆ. ಜಿ. ಬೋಪಯ್ಯ ಕಾಂಗ್ರೆಸ್‌ನ ಬಿದ್ದಾಟಂಡ ಟಿ. ಪ್ರದೀಪ್ ವಿರುದ್ಧ ಕೇವಲ 3414 ಮತಗಳ ಅಂತರದಿಂದ ಗೆದ್ದಿದ್ದರು. 2018ರಲ್ಲಿ ಕಾಂಗ್ರೆಸ್‌ನ ಚೆಪ್ಪುಡಿರ ಅರುಣ್ ಮಾಚಯ್ಯ 64,519 ಮತಗಳನ್ನು ಪಡೆದಿದ್ದರು. ಈ ಬಾರಿ ವಯಸ್ಸಿನ ಕಾರಣಕ್ಕಾಗಿಯೇ ಬೋಪಯ್ಯಗೆ ಟಿಕೆಟ್ ಕೈತಪ್ಪಲಿದೆ ಎಂಬ ಮಾತಿದೆ.

ಪೊಲೀಸ್ ದೂರು ತಂದ ಸಂಕಷ್ಟ; ಚುನಾವಣೆ ಸಮಯದಲ್ಲಿಯೇ ಶಾಸಕ ಕೆ. ಜಿ. ಬೋಪಯ್ಯಗೆ ಹೊಸ ಸಮಸ್ಯೆ ಎದುರಾಗಿದೆ. ಚುನಾವಣಾ ಆಯೋಗಕ್ಕೆ ಜನ್ಮ ದಿನಾಂಕವನ್ನು ಅವರು ತಪ್ಪಾಗಿ ನೀಡಿದ್ದಾರೆ ಎಂದು ಪಿ. ಬಿ. ತಿಮ್ಮಯ್ಯ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ. ಹಿಂದಿನ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡುವಾಗ ಕೆ. ಜಿ. ಬೋಪಯ್ಯ ನಾಮಪತ್ರದಲ್ಲಿ ತಮ್ಮ ವಯಸ್ಸನ್ನು 65 ಎಂದು ದಾಖಲು ಮಾಡಿದ್ದಾರೆ. ಇದು ಸುಳ್ಳು ಮಾಹಿತಿ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪ್ರಸ್ತುತ ಶಾಸಕರಾಗಿರುವ ಕೆ. ಜಿ. ಬೋಪಯ್ಯ 26-10-1979ರಲ್ಲಿ ವಕೀಲರ ಕರ್ನಾಟಕ ಬಾರ್ ಕೌನ್ಸಿಲ್ನ ಸದಸ್ಯರಾಗಿದ್ದರು. ಈ ವೇಳೆ ಬಾರ್ ಕೌನ್ಸಿಲ್ನಲ್ಲಿ ತಮ್ಮ ಜನ್ಮ ದಿನಾಂಕ 17-10-1951 ಎಂದು ದಾಖಲಿಸಿದ್ದರು. ಈ ಪ್ರಕಾರ 2018ರಲ್ಲಿ ಕೆ. ಜಿ. ಬೋಪಯ್ಯ ಅವರ ನೈಜ ವಯಸ್ಸು 67. ಆದರೆ ಬೋಪಯ್ಯ ನಾಮಪತ್ರದಲ್ಲಿ 65 ಎಂದು ಮಾಹಿತಿ ನೀಡಿದ್ದಾರೆ ಎಂದು ದೂರಿನಲ್ಲಿ ವಿವರಣೆ ನೀಡಲಾಗಿದೆ.












Click it and Unblock the Notifications