ಟಿಪ್ಪು ಜಯಂತಿಗೆ ವಿರೋಧ : ನ.10ರಂದು ಕೊಡಗು ಬಂದ್‌ಗೆ ಕರೆ
ಮಡಿಕೇರಿ, ನವೆಂಬರ್ 07 : ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ನವೆಂಬರ್ 10ರಂದು ಕೊಡಗು ಬಂದ್‌ಗೆ ಕರೆ ನೀಡಲಾಗಿದೆ. ಟಿಪ್ಪು ಜಯಂತಿ ಆಚರಣೆ ಮಾಡುವುದಾಗಿ ಕರ್ನಾಟಕ ಸರ್ಕಾರ ಈಗಾಗಲೇ ಘೋಷಣೆ ಮಾಡಿದೆ.
ಸೋಮವಾರಪೇಟೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಅಭಿಮನ್ಯು ಕುಮಾರ್ ಅವರು ಈ ಕುರಿತು ಮಾಹಿತಿ ನೀಡಿದರು. 'ಜಿಲ್ಲೆಯ ಮೂರು ತಾಲೂಕಿನಲ್ಲಿ ಬಂದ್ ನಡೆಯಲಿದೆ' ಎಂದರು.
'ಟಿಪ್ಪು ಜಯಂತಿ ವಿರೋಧಿಸಿ ಕೊಡಗು ಜಿಲ್ಲೆಯಲ್ಲಿ ಸ್ವಯಂ ಪ್ರೇರಿತ ಬಂದ್‌ಗೆ ಕರೆ ನೀಡಲಾಗಿದೆ. ಆಟೋ ಚಾಲಕರು, ಖಾಸಗಿ ಬಸ್ ಮತ್ತು ಅಂಗಡಿ ಮಾಲೀಕರು ಬಂದ್‌ಗೆ ಸಹಕಾರ ನೀಡುವ ವಿಶ್ವಾಸವಿದೆ' ಎಂದು ಅಭಿಮನ್ಯು ಕುಮಾರ್ ಹೇಳಿದರು.

ಸೋಮವಾರಪೇಟೆ ಮತ್ತು ವಿರಾಜಪೇಟೆಯಲ್ಲಿ ಗುರುವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಶುಕ್ರವಾರ ಮಡಿಕೇರಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ನವೆಂಬರ್ 10ರಂದು ಶಾಂತಿಯುತ ಪ್ರತಿಭಟನೆ ನಡೆಸಿ ಕರಾಳ ದಿನ ಆಚರಣೆ ಮಾಡುವುದಾಗಿ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಹೇಳಿದೆ.
2015ರಲ್ಲಿ ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಬೃಹತ್ ಪ್ರತಿಭಟನೆ ನಡೆದಿತ್ತು. ಆಗ ನಡೆದ ಗಲಭೆಯಲ್ಲಿ ಕುಟ್ಟಪ್ಪ ಎಂಬುವವರು ಮೃತಪಟ್ಟಿದ್ದರು. 2016 ಮತ್ತು 2017ರಲ್ಲಿಯೂ ಕೊಡಗಿನಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಬಾರದು ಎಂದು ಬೃಹತ್ ಹೋರಾಟ ನಡೆದಿತ್ತು.












Click it and Unblock the Notifications