Kodagu: ಕೊಡಗಿನಲ್ಲಿ ಅಳಿವಿನಂಚಿನಲ್ಲಿರುವ ಈ ಜನಾಂಗ ಯಾವುದು ಗೊತ್ತಾ?
ಮಡಿಕೇರಿ, ಏಪ್ರಿಲ್ 10: ಕೊಡಗು ತನ್ನದೇ ಆದ ಸಂಸ್ಕೃತಿಯಿಂದ ವಿಶ್ವದ ಗಮನಸೆಳೆದಿದೆ. ಇಲ್ಲಿನವರ ಆಚಾರ, ವಿಚಾರ, ಅಡುಗೆ, ಉಡುಗೆ, ತೊಡುಗೆ ಎಲ್ಲವೂ ವಿಭಿನ್ನವಾಗಿದೆ. ಹೀಗಾಗಿಯೇ ಇತ್ತ ಎಲ್ಲರೂ ಆಸಕ್ತಿಯ ನೋಟ ಬೀರುತ್ತಾರೆ. ಇಲ್ಲಿನವರು ಪ್ರಕೃತಿಯನ್ನೇ ಪೂಜಿಸಿಕೊಂಡು ಕೃಷಿಯನ್ನೇ ನಂಬಿಕೊಂಡು ಜೀವನ ಮಾಡುತ್ತಾ ಬಂದಿದ್ದಾರೆ. ಕೊಡಗಿನ ಸಂಸ್ಕೃತಿಗೆ ಹಲವು ಜನಾಂಗಗಳ ಕೊಡುಗೆಯಿದ್ದು, ಈ ಪೈಕಿ ಕೆಲವು ಜನಾಂಗಗಳು ಅಳಿವಿನಂಚಿನಲ್ಲಿದ್ದು ಅದರಲ್ಲೊಂದು ಕೆಂಬಟ್ಟಿ ಜನಾಂಗವೊಂದಾಗಿದೆ.
ಕೊಡಗಿನ ಮಟ್ಟಿಗೆ ಹೇಳುವುದಾದರೆ ರಾಜ ಮಹಾರಾಜರ ಕಾಲದಿಂದಲೂ ಕೆಂಬಟ್ಟಿ ಜನಾಂಗ ಬಾಳಿ ಬದುಕಿಕೊಂಡು ಬಂದಿದೆ. ಈ ಜನಾಂಗ ಕೊಡಗು ಹೊರತುಪಡಿಸಿದರೆ ಬೇರೆಲ್ಲೂ ಇಲ್ಲ ಎನ್ನಬೇಕು. ಇವರು ಕೊಡಗಿನಲ್ಲಿ ಹುಟ್ಟಿ ಕೊಡವ ಸಂಸ್ಕೃತಿಯನ್ನು ಉಳಿಸಿಬೆಳೆಸಿಕೊಂಡು ಬರುತ್ತಿದ್ದರೂ ಎಲ್ಲೋ ಒಂದು ಕಡೆ ಈ ಜನಾಂಗ ಅಳಿವಿನಂಚಿನಲ್ಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಕೆಂಬಟ್ಟಿ ಜನಾಂಗದ ಕುರಿತು ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಇವರು ಕೊಡಗಿನ ಮೂಲ ನಿವಾಸಿಗಳು ಎನ್ನುವುದು ತಿಳಿದು ಬರುತ್ತದೆಯಲ್ಲದೆ, ಕೊಡವ ಆಚಾರ, ವಿಚಾರ, ಸಂಸ್ಕೃತಿಯನ್ನು ಉಳಿಸಿ, ಬೆಳೆಸಿಕೊಂಡು ಬಂದ ಕೀರ್ತಿಯೂ ಸಲ್ಲುತ್ತದೆ.

ಈ ಜನಾಂಗವು ಜಿಲ್ಲೆಯ ಕೆಲವೇ ಕೆಲವು ಕಡೆ ಮಾತ್ರ ವಾಸವಿರುವುದನ್ನು ನಾವು ಕಾಣಬಹುದು. ಜಿಲ್ಲೆಗೊಂದು ಸುತ್ತು ಹೊಡೆದರೆ, ವೀರಾಜಪೇಟೆ ತಾಲ್ಲೂಕಿನಲ್ಲಿ ಶೇ.70, ಮಡಿಕೇರಿ ಹಾಗೂ ಸೋಮವಾರಪೇಟೆ ತಾಲ್ಲೂಕಿನಲ್ಲಿ ಶೇ30ರಷ್ಟು ವಾಸವಿರುವುದಾಗಿಯೂ, ಒಟ್ಟಾರೆ ಇಡೀ ಜಿಲ್ಲೆಯಲ್ಲಿ ಇಪ್ಪತ್ತುಸಾವಿರ ಆಸುಪಾಸಿನಲ್ಲಿ ಜನಸಂಖ್ಯೆಯಿದೆ ಎನ್ನಲಾಗುತ್ತಿದೆ. ಜಿಲ್ಲೆಯ ಜೋಡುಬಿಟ್ಟಿ, ಮತ್ತೂರು, ಮುಗಟಗೇರಿ, ಕಾನೂರು, ಕೋತೂರು, ವಡ್ಡರಮಾಡು, ಬಾಳೆಲೆ, ಕೈಕೇರಿ, ನಾಂಗಾಲ, ವೀರಾಜಪೇಟೆ, ಮಗ್ಗುಲ, ಕರಡ, ಕಕ್ಕಬೆ, ಕುಂಜಿಲ, ಸೂರ್ಯ, ಪಾರಾಣೆ, ಬಿಳುಗುಂದ, ಅರಮೇರಿ, ಬೇತ್ರಿ, ಮಡಿಕೇರಿ, ಕಡಗದಾಳು, ಕುಶಾಲನಗರ, ಆರ್ಜಿ, ಮರಂದೋಡು, ತಿತಿಮತಿ, ನಡಿಕೇರಿ, ಹುದಿಕೇರಿಯಲ್ಲಿ ವಾಸಿಸುತ್ತಿದ್ದಾರೆ.
ಕೆಂಬಟ್ಟಿ ಜನಾಂಗಕ್ಕೂ ಮನೆಹೆಸರಿದೆ
ಈ ಜನಾಂಗವೂ ತನ್ನದೇ ಆದ ಮನೆ ಹೆಸರಿನಿಂದ ಗುರುತಿಸಿಕೊಳ್ಳುತ್ತಿದ್ದು, 1. ಬಿಲ್ಲರಿ ಕುಟ್ಟಡ, 2. ಪೆಮ್ಮಡಿ ಕುಟ್ಟಡ, 3.ಮೂಕುಟ್ಟಡ, 4. ಚಟ್ಟಕುಟ್ಟಡ, 5.ತೂಚಕುಟ್ಟಡ, 6.ಚಿಮ್ಮಿಕುಟ್ಟಡ, 7.ಚಟ್ಟಕುಟ್ಟಡ(ಮಗ್ಗುಲ) 8.ಉತ್ತಕುಟ್ಟಡ(ಕಕ್ಕಬೆ) ಹೀಗೆ 38 'ಮನೆ ಹೆಸರು(ಕುಟುಂಬ)' ಮತ್ತು ಊರಿನಲ್ಲಿ 'ದೇವರ ಮಂದ್' ಹೊಂದಿದ್ದಾರೆ. ಕೆಂಬಟ್ಟಿ ಜನಾಂಗವು ಕೊಡಗಿನ ರಾಜರ ಕಾಲದಿಂದಲೂ ನೆಲೆಸಿದ್ದು, ಆದಿವಾಸಿಗಳಲ್ಲದಿದ್ದರೂ ಸದಾ ಪ್ರಕೃತಿಯೊಂದಿಗೆ ಒಡನಾಟ ಇಟ್ಟುಕೊಂಡವರು ಎನ್ನುವುದರಲ್ಲಿ ಎರಡು ಮಾತಿಲ್ಲ.

ಹಿಂದೆ ಕಾಡಿನಲ್ಲಿ ದೊರೆಯುವ ಸಂಪನ್ಮೂಲಗಳೇ ಇವರಿಗೆ ಜೀವನಾಧಾರವಾಗಿತ್ತು. ಕಾಡಿಗೆ ಹೋಗಿ ವಾಟೆ(ಒಂದುಜಾತಿಯ ಬಿದಿರು)ಯನ್ನು ಕಡಿದು ತಂದು ಅದರಲ್ಲಿ ಕುಕ್ಕೆ (ಗದ್ದೆಗೆ ಗೊಬ್ಬರ ಹಾಕಲು) ತುಳಿಯ(ಭತ್ತ ಶೇಖರಿಸಿ ಇಡುವ ವಸ್ತು), ಕೋರಿಕೊಡೆ(ಮಳೆಗಾಲದಲ್ಲಿ ಗದ್ದೆ ತೋಟಕ್ಕೆ ಹೋಗಲು ಕೊಡೆಯ ರೂಪದ ಸಾಧನ), ಮೀನು ಹಿಡಿಯಲು ಪೊಡಗಳನ್ನು ತಯಾರಿಸಿ ಅದನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು.
ಕಾಡಿನೊಂದಿಗೆ ಇವರ ಒಡನಾಟ ಹೆಚ್ಚು
ಹೆಂಗಸರು ಕಾಡಿನಿಂದ ಓಲೆಗರಿ (ತಾಳೆಗರಿಗೆ ಸೇರಿರುವ ಒಂದು ರೀತಿಯ ಸಸ್ಯ)ಯನ್ನು ತಂದು ಹದ ಮಾಡಿ ಚಾಪೆ(ಪಲಂಬು) ತಯಾರಿಸುತ್ತಿದ್ದರು. (ಆಗಿನ ಕಾಲದಲ್ಲಿ ಇದನ್ನು ಮದುವೆ ಸಂದರ್ಭ ಬಾಳೆ ಕಡಿಯುವ ಶಾಸ್ತ್ರದಲ್ಲಿ ಹಾಗೂ ವಧು-ವರ ಧಾರೆಗೆ ಕೂರುವ ಸ್ಥಳದಲ್ಲಿ ಹಾಸಿ ಕೂರಿಸಲಾಗುತ್ತಿತ್ತು. ಈಗ ಓಲೆಗರಿ ಹಾಗೂ ವಾಟೆಗಳು ಸಿಗದ ಕಾರಣ ಈ ಕಸುಬುಗಳು ಮರೆಯಾಗಿದೆ. ಚಾಪೆ ಮಾತ್ರ ಈಗಲೂ ಚಾಲ್ತಿಯಲ್ಲಿದೆ.) ಇದನ್ನು ಮನೆಮನೆಗೆ ಕೊಂಡೊಯ್ದು ಮಾರಾಟ ಮಾಡುತ್ತಿದ್ದರು.

ಬದಲಾದ ಕಾಲದಲ್ಲಿ ಈ ವಸ್ತುಗಳು ಹೇರಳವಾಗಿ ಸಿಗದ ಕಾರಣ ಈ ಜನಾಂಗದವರು ಜೀವನ ನಿರ್ವಹಣೆಗಾಗಿ ವಾಲಗ, ಕೂಲಿ ಕೆಲಸ ಸೇರಿದಂತೆ ಬೇರೆ ಬೇರೆ ಉದ್ಯೋಗವನ್ನು ಕಂಡುಕೊಂಡಿದ್ದಾರೆ. ಈ ಜನಾಂಗ ಸಂಪ್ರದಾಯದಲ್ಲೂ ಪಕ್ಕಾ ಕೊಡವ ಸಂಸ್ಕೃತಿಯನ್ನೇ ಹೊಂದಿರುವುದನ್ನು ಕಾಣಬಹುದು. ಮದುವೆ, ಮಕ್ಕಳ ನಾಮಕರಣ, ಹೊಸ ಮನೆ ಸೇರುವುದು, ಸಾವು, ಸಂಸ್ಕಾರ ಎಲ್ಲದರಲ್ಲೂ ಕೊಡವ ಆಚಾರ ವಿಚಾರವನ್ನೇ ಮಾಡುತ್ತಾರೆ. ಇನ್ನು . ಕುಟುಂಬದಲ್ಲಿ ಕಾರಣ ಕೊಡವುದು, ಹುತ್ತರಿ ಹಬ್ಬ, ಕೈಲ್ ಪೋದ್, ಸಂಕ್ರಮಣ ಈ ಹಬ್ಬಗಳನ್ನು ಕೊಡವ ಪದ್ಧತಿಯಲ್ಲಿಯೇ ಆಚರಿಸುತ್ತಾರೆ.
ಪನ್ನಂಗಾಲತಮ್ಮೆ ಇವರ ಕುಲದೇವತೆ
ಇವರ ಕುಲದೇವತೆ "ಪನ್ನಂಗಾಲತಮ್ಮೆ (ಇಗ್ಗುತಪ್ಪ ದೇವರ ತಂಗಿ)". ಈಗಲೂ ಯುವಕಪಾಡಿ ಕಕ್ಕಬೆಯಲ್ಲಿ ಆದಿ ಸ್ಥಾನವಿದೆ. ಇಲ್ಲಿ ಪ್ರತಿವರ್ಷ ಏಪ್ರಿಲ್ ತಿಂಗಳ 12ಮತ್ತು 13ರಂದು ಹಬ್ಬ ನಡೆಯುತ್ತದೆ. ಈಗಲೂ ಕೊಡೆಯ ರೂಪದಲ್ಲಿ ದೇವರು ಬರುತ್ತವೆ. ಇಷ್ಟೆಲ್ಲಾ ವಿಶಿಷ್ಟತೆ ಹೊಂದಿದ್ದರೂ ಈ ಜನಾಂಗ ನಿಕೃಷ್ಟವಾಗಿಯೇ ಬದುಕುತ್ತಿದೆ. ಇವರನ್ನು ಮುಖ್ಯವಾಹಿನಿಗೆ ತರುವ ಕೆಲಸಗಳು ಇನ್ನೂ ಕೂಡ ಆಗದಿರುವುದು ಎದ್ದು ಕಾಣಿಸುತ್ತಿದೆ. ಅದು ಏನೇ ಇರಲಿ ಮೂಲನಿವಾಸಿಗಳಾಗಿ, ಕೊಡವ ಸಂಸ್ಕೃತಿಯನ್ನು ಉಳಿಸಿ, ಬೆಳೆಸಿಕೊಂಡು ಬಂದ ಜನಾಂಗಕ್ಕೆ ಮೂಲ ಸವಲತ್ತುಗಳನ್ನು ಕಲ್ಪಿಸಿ ಅವರನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕಾಗಿದೆ.












Click it and Unblock the Notifications