ಕೊಡಗು ಪ್ರವಾಹದಲ್ಲಿ ಗಂಡನನ್ನು ಕಳೆದುಕೊಂಡ ಹೆಂಡತಿಯ ಕಥೆ ವ್ಯಥೆ....
ಮೈಸೂರು, ಆಗಸ್ಟ್ 26 : "ಮೇಡಂ ಅವತ್ತು ಆಗಸ್ಟ್ 16. ಮೊಮ್ಮಗಳನ್ನು ನೋಡಲು ನಾನು ಮಗನೊಂದಿಗೆ ಸೊಸೆಯ ಮನೆಗೆ ಹೋಗಿದ್ದೆ. ಮಳೆ ಜಾಸ್ತಿಯಾಗಿದ್ದರಿಂದ ಅವರ ಮನೆಯಲ್ಲೇ ಉಳಿದುಕೊಂಡೆ. ನನ್ನ ಗಂಡ ಬಾಬು ಮಾತ್ರ ಮಡಿಕೇರಿಯಲ್ಲಿರೋ ಉದಯಗಿರಿಯ ಮನೆಯಲ್ಲಿದ್ದರು.
ಮಳೆ ಜಾಸ್ತಿ ಇದ್ದರಿಂದ ಸೊಸೆ ಮನೆಗೆ ಬರುವಂತೆ ಫೋನ್ ಮಾಡಿದರೂ ಬರಲಿಲ್ಲ. ಆ.17ರ ಬೆಳಗ್ಗೆ ಹೋಗಿ ನೋಡಿದಾಗ ಮನೆಯೂ ಇಲ್ಲ, ಅವರೂ ಇರಲಿಲ್ಲ. ನಂತರ ಫೋನ್ ಮಾಡಿ ನಿಮ್ಮ ಗಂಡನ ಡೆಡ್ ಬಾಡಿ ಸಿಕ್ಕಿದೆ ಅಂದರು. ಹೃದಯ ಒಡೆದು ಹೋಯ್ತು" ಎಂದು ಕಣ್ಣೀರಿಟ್ಟರು ಉದಯಗಿರಿಯ ಜಯಂತಿ.
"ನಮ್ಮೂರು ಮಕ್ಕಂದೂರು. ಅಲ್ಲಿಯೇ ನಮ್ಮ ಯಜಮಾನ್ರು ಬಾಬು(56) ಎಲ್ಲರೂ ವಾಸವಾಗಿದ್ವಿ. ಏಕಾಏಕಿ ಅಂದು ಕಳೆದ ಶುಕ್ರವಾರ ಮಳೆ ಬಂತು. ಅಂದಿನಿಂದಲೂ ಕಾಣೆಯಾಗಿದ್ದರು. ಆದರೆ ಶುಕ್ರವಾರ ನಿಮ್ಮ ಗಂಡ ಮೃತಪಟ್ಟಿದ್ದಾರೆ ಬನ್ನಿ ಎನ್ನುವ ಸುದ್ದಿ ಬಂತು" ಎಂದು ಎದೆ ಬಡಿದುಕೊಂಡು ಅತ್ತರು ಬಾಬು ಪತ್ನಿ ಜಯಂತಿ. ಈ ದೃಶ್ಯ ನೋಡಿದರೆ ಇವರ ಕಷ್ಟ ಯಾರಿಗೂ ಬೇಡ ಎಂದನಿಸುತ್ತದೆ.

"ನನ್ನ ಅಪ್ಪ ಕೂಲಿ ಮಾಡಿ ನಮ್ಮನ್ನು ಸಾಕುತ್ತಿದ್ದರು. ನಾನು ಆಟೋ ಓಡಿಸುತ್ತಿದ್ದೆ. ಮಗಳು ಹುಟ್ಟಿ ಒಂದು ತಿಂಗಳು ಆಗಿದ್ದರಿಂದ ಹೆಂಡತಿ ತವರು ಮನೆಗೆ ಹೋಗಿದ್ದಳು. ಆ.16ರಂದು ನಾನು ಮತ್ತು ಅಮ್ಮ ಮಗಳನ್ನು ನೋಡಲು ಹೆಂಡತಿ ಮನೆಗೆ ಹೋಗಿದ್ದೆವು.
ಮಳೆ ಜಾಸ್ತಿಯಾಗಿ ಅಲ್ಲಲ್ಲಿ ಗುಡ್ಡ ಕುಸಿದಿರುವ ಸುದ್ದಿ ತಿಳಿದಿದ್ದರಿಂದ ವಾಪಾಸ್ ಮನೆಗೆ ಹೋಗಲು ಆಗಲಿಲ್ಲ. ರಾತ್ರಿ ಪೂರ್ತಿ ಅಪ್ಪ ಒಬ್ಬರೇ ಮನೆಯಲ್ಲಿದ್ದರು. ಮುಂದಿನ ತಿಂಗಳಲ್ಲಿ ಮಗಳ ನಾಮಕರಣ ಇತ್ತು. ಈಗ ಅವರ ಸಾವು ಎದೆಯೊಡುವಂತೆ ಮಾಡಿದೆ" ಎನ್ನುತ್ತಾರೆ ಬಾಬು ಅವರ ಮಗ ಶಿವರಾಮ್.

ತನ್ನ ಗಂಡ ಬಾಬು ಕಾಣೆಯಾದ ದಿನದಿಂದ ಈವರೆಗೂ ತನ್ನ ಮಗ, ಸೊಸೆ ಹಾಗೂ ಒಂದು ತಿಂಗಳ ಪುಟ್ಟ ಮೊಮ್ಮಗಳೊಂದಿಗೆ ನಿರಾಶ್ರಿತರ ಶಿಬಿರದಲ್ಲಿ ವಾಸವಾಗಿದ್ದಾರೆ ಜಯಂತಿ.












Click it and Unblock the Notifications