ಮೇಲಧಿಕಾರಿಗಳ ಕಿರುಕುಳ, ಮಡಿಕೇರಿ ಅರಣ್ಯಭವನದಲ್ಲೇ ಚಾಲಕ ಆತ್ಮಹತ್ಯೆ
ಮಡಿಕೇರಿ, ಜೂನ್ 23: ಅರಣ್ಯ ಇಲಾಖೆಯಲ್ಲಿ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಅರಣ್ಯಭವದಲ್ಲಿ ನಡೆದಿದೆ.
ಸಕಲೇಶಪುರ ಅರಣ್ಯ ಇಲಾಖಾ ಕಚೇರಿಯಲ್ಲಿ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ಮಂಜುನಾಥ್ (50) ಆತ್ಮಹತ್ಯೆ ಮಾಡಿಕೊಂಡವರು.
ಆತ್ಮಹತ್ಯೆಗೆ ಮುನ್ನ ಡೆತ್ ನೋಟ್ ಬರೆದಿಟ್ಟಿರುವುದು ಗೋಚರಿಸಿದ್ದು, ಅದರಲ್ಲಿ ಮೇಲಧಿಕಾರಿಗಳ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿದ್ದಾರೆ. ಅದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಕಲೇಶಪುರದಲ್ಲಿ ಅರಣ್ಯ ಸಂಶೋಧನಾ ವಿಭಾಗದಲ್ಲಿ ಮಂಜುನಾಥ್ ವಾಹನ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಮಧ್ಯೆ ಅಲ್ಲಿ ಖಾಲಿಯಿದ್ದ ಎಸಿಎಫ್ ಹುದ್ದೆಗೆ ಮಡಿಕೇರಿ ಅರಣ್ಯ ಸಂಶೋಧನಾ ವಿಭಾಗದ ಎಸಿಎಫ್ ಆಗಿರುವ ಪೂರ್ಣಿಮಾ ಅವರನ್ನು ಪ್ರಭಾರ ಅಧಿಕಾರಿಯಾಗಿ ನಿಯೋಜಿಸಲಾಗಿತ್ತು.
ಸಕಲೇಶಪುರಕ್ಕೆ ತೆರಳಿದ್ದ ಎಸಿಎಫ್ ಪೂರ್ಣಿಮಾ ಅವರು ಮಡಿಕೇರಿಗೆ ಆಗಮಿಸಿದ್ದು, ಅವರನ್ನು ಮಂಜುನಾಥರೇ ವಾಹನವನ್ನು ಚಾಲನೆ ಮಾಡಿಕೊಂಡು ಕರೆ ತಂದಿದ್ದರು. ಬಳಿಕ ತಾನು ಅರಣ್ಯ ಭವನದಲ್ಲಿ ಉಳಿದುಕೊಂಡಿದ್ದರು. ಬೆಳಗ್ಗೆ ವಾಚ್ ಮನ್ ನೋಡುವಾಗ ಮಂಜುನಾಥ್ ನೇಣಿಗೆ ಶರಣಾಗಿರುವುದು ಗೋಚರಿಸಿದೆ.
ವಿಷಯ ತಿಳಿದು ಸ್ಥಳಕ್ಕೆ ನಗರ ಠಾಣೆ ಪೊಲೀಸರು ಆಗಮಿಸಿ ಮಹಜರು ನಡೆಸಿದಾಗ ಅಲ್ಲಿ ಎರಡು ಡೆತ್ ನೋಟ್ ಸಿಕ್ಕಿದ್ದು, ಅದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅದರಲ್ಲಿ ಸಕಲೇಶಪುರ ಡಿಸಿಎಫ್ ಅನುಪಮಾ, ಆರ್‍ಎಫ್‍ಓ ದಯಾನಂದ, ಚಾಲಕ ಸುರೇಶ್ ಎಂಬವರು ಮರಗಳ್ಳತನ ಪ್ರಕರಣವೊಂದರ ಸಂಬಂಧ ತನಗೆ ಕಿರುಕುಳ ನೀಡುತ್ತಿದ್ದು ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಅವರ ಪತ್ನಿ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ.












Click it and Unblock the Notifications