• search
  • Live TV
ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮುಂಗಾರಿನ ಆತಂಕ: ಜನಕ್ಕೆ ಧೈರ್ಯ ತುಂಬಿದ ಕೊಡಗು ಜಿಲ್ಲಾಡಳಿತ

|

ಮಡಿಕೇರಿ, ಜೂನ್ 1: 2018 ಆಗಸ್ಟ್ 15, ಕೊಡಗಿನ ಜನ ಮರೆಯಲಾರದ ದಿನ. ಅವತ್ತು ಇಡೀ ದೇಶ ಸ್ವಾತಂತ್ರ್ಯ ದಿನವನ್ನು ಸಂಭ್ರಮಿಸಿ ನೆಮ್ಮದಿಯಾಗಿ ಮಲಗಿದ್ದರೆ, ಇತ್ತ ಕೊಡಗಿನಲ್ಲಿ, ಅದರಲ್ಲೂ ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ ಕುಂಭದ್ರೋಣ ಮಳೆ ಸುರಿಯಲಾರಂಭಿಸಿತು. ಆಕಾಶಕ್ಕೆ ತೂತು ಬಿದ್ದಂತೆ ಸುರಿಯುತ್ತಿದ್ದ ಆ ಮಳೆಯನ್ನು ನೋಡಿದ ಜನ ಬೆಚ್ಚಿಬಿದ್ದರು. ಇಡೀ ಭೂಮಿ ಆಕಾಶ ಒಂದಾದ ಅನುಭವ. ಎಲ್ಲಿ ನೋಡಿದರೂ ಮಣ್ಣು ಮಿಶ್ರಿತ ಕೆಸರು ನೀರು. ಮನೆಯ ಸುತ್ತಮುತ್ತಲಿದ್ದ ಬೆಟ್ಟ ಗುಡ್ಡಗಳು ಕುಸಿದು ಬರತೊಡಗಿದವು. ಬಂಡೆಗಳು ಉರುಳಿದವು. ನೋಡ ನೋಡುತ್ತಿದ್ದಂತೆಯೇ ಮರಗಳು ಉರುಳಿಬಿದ್ದವು. ಮನೆಗಳು ಕುಸಿದವು, ಇನ್ನುಳಿದ ಮನೆಗಳು ಕೆಸರು ಮಣ್ಣಿನಲ್ಲಿ ಹೂತು ಹೋದವು. ಕೆಲವರು ಜೀವ ಕಳೆದುಕೊಂಡರು. ಮತ್ತೆ ಕೆಲವರು ಜೀವ ಉಳಿಸಿಕೊಂಡು ತಮ್ಮದು ಅಂತ ಇದ್ದ ಆಸ್ತಿಪಾಸ್ತಿ ಕಳೆದುಕೊಂಡು ನಿರ್ಗತಿಕರಾದರು.

ಇದ್ಯಾವುದೂ ನಿರೀಕ್ಷೆ ಮಾಡದೆ ಆಗಿ ಹೋದ ಘಟನೆ. ಕೊಡಗಿನ ಇತಿಹಾಸದಲ್ಲೇ ಅಂತಹದೊಂದು ಮಳೆ ಸುರಿದಿರಲಿಲ್ಲ. ಒಂದು ವೇಳೆ ಸುರಿದಿದ್ದರೂ ಇಷ್ಟೊಂದು ಅನಾಹುತವನ್ನು ಸೃಷ್ಠಿ ಮಾಡಿರಲಿಲ್ಲ. ಆದರೆ ಕಳೆದ ಬಾರಿಯ ಮುಂಗಾರು ಮಳೆ ಇಡೀ ಕೊಡಗನ್ನು ಅಲ್ಲೋಲ ಕಲ್ಲೋಲ ಮಾಡಿದ್ದಂತು ನಿಜ. ಈ ಬಾರಿ ಮುಂಗಾರು ಬರುತ್ತಿದೆ ಎಂಬುದು ಗೊತ್ತಾಗುತ್ತಿದ್ದಂತೆಯೇ ಜನರಲ್ಲಿ ಭಯ ಆರಂಭವಾಗಿದೆ. ಮೊದಲೆಲ್ಲ ಮುಂಗಾರು ಆಗಮನವನ್ನು ಸಂಭ್ರಮಿಸುತ್ತಿದ್ದ ಕೊಡಗಿನ ಜನ ಈ ಬಾರಿ ಏನು ಅನಾಹುತ ಮಾಡಿ ಬಿಡುತ್ತದೆಯೋ ಎಂಬ ಭೀತಿಯಿಂದ ದಿನ ಕಳೆಯುತ್ತಿದ್ದಾರೆ.

ಚಿತ್ರಗಳು : ಕೊಡಗಿನಲ್ಲಿ ಎನ್‌ಡಿಆರ್ ಎಫ್‌ ಪಡೆ ಅಣಕು ಪ್ರದರ್ಶನ

ಮುಂದೆ ಬರಲಿರುವ ಮುಂಗಾರು ಮಳೆ ಹೇಗಿದೆಯೋ ಗೊತ್ತಿಲ್ಲ. ಒಂದು ವೇಳೆ ಯಾವುದೇ ತೊಂದರೆಯಾಗದಂತೆ ಸುರಿದು ಹೋಗಬಹುದು. ಆದರೂ ಈ ಬಾರಿ ಬರುವ ಮಳೆಗೆ ಕಳೆದ ಬಾರಿ ಕುಸಿದು ನಿಂತಿರುವ ಬೆಟ್ಟಗುಡ್ಡಗಳು, ರಸ್ತೆಗಳಲ್ಲಿ ಮತ್ತೆ ಸಮಸ್ಯೆ ಕಾಣಿಸಿಕೊಳ್ಳಲೂಬಹದು. ಹೀಗಾಗಿ ಅವಘಡ ಸಂಭವಿಸುವಂತಹ ಅಸುರಕ್ಷಿತ ಸ್ಥಳಗಳಿಂದ ಈಗಾಗಲೇ ಜನರನ್ನು ಸ್ಥಳಾಂತರ ಮಾಡಲಾಗಿದೆ.

ಒಂದು ವೇಳೆ ಪ್ರಕೃತಿ ವಿಕೋಪಗಳು ಸಂಭವಿಸಿದರೆ ಏನು ಮಾಡಬೇಕು ಮತ್ತು ಹೇಗೆ ಕಾರ್ಯಾಚರಣೆ ಮಾಡಬೇಕು ಎಂಬುದರ ಬಗ್ಗೆ ತರಬೇತಿ ನಡೆಯುತ್ತಿದ್ದು, ಈಗಾಗಲೇ ಜಿಲ್ಲೆಯಲ್ಲಿ ರಾಜ್ಯ ನಾಗರಿಕ ರಕ್ಷಣಾ ಪಡೆ, ಎನ್‌ಡಿಆರ್ ಎಫ್, ಅಗ್ನಿಶಾಮಕ ಇಲಾಖೆ, ಗೃಹ ರಕ್ಷಕದಳ, ಪೊಲೀಸ್ ಇಲಾಖೆ ಪ್ರಕೃತಿ ವಿಕೋಪ ಎದುರಿಸಲು ಸರ್ವಸಿದ್ಧವಾಗಿವೆ. ಇದೀಗ ಕೆಲವು ಗ್ರಾಮಗಳಿಗೆ ಭೇಟಿ ನೀಡಿರುವ ತಂಡ, ಪ್ರಕೃತಿ ವಿಕೋಪದ ಸ್ಥಿತಿಯಲ್ಲಿ ಜನರನ್ನು ಹೇಗೆ ರಕ್ಷಿಸಬೇಕು ಎಂಬುದರ ಬಗ್ಗೆ ಪ್ರಾತ್ಯಕ್ಷಿಕೆ ಮತ್ತು ಅಣಕು ಪ್ರದರ್ಶನ ನಡೆಸಿದೆ. ಹೆಬ್ಬೆಟಗೇರಿ ಮತ್ತು ಹಟ್ಟಿಹೊಳೆಯಲ್ಲಿ ಕಾರ್ಯಾಚರಣೆಯ ಅಣಕು ಪ್ರದರ್ಶನ ನಡೆಸಿದ್ದು, ನಾವು ಕಾರ್ಯ ಸನ್ನದ್ಧರಾಗಿದ್ದೇವೆ ಕೊಡಗಿನ ಜನತೆ ಭಯಪಡಬೇಕಾಗಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ.

ಜಿಲ್ಲಾಡಳಿತ ಮತ್ತು ರಾಜ್ಯ ವಿಪತ್ತು ನಿರ್ವಹಣಾ ವಿಭಾಗದ ವತಿಯಿಂದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್, ಜಿ.ಪಂ.ಸಿಇಒ ಕೆ.ಲಕ್ಷ್ಮಿಪ್ರಿಯ ಅವರ ಉಪಸ್ಥಿತಿಯಲ್ಲಿ ಪ್ರಾತ್ಯಕ್ಷಿಕೆ ನಡೆಸಲಾಗಿದೆ. ಬೆಟ್ಟದಿಂದ ಕೆಳಗೆ ಹಗ್ಗ ಹಾಗೂ ಏಣಿ ಬಳಸಿ ನಾಗರಿಕರನ್ನು ರಕ್ಷಣೆ ಮಾಡುವುದು, ಬೆಟ್ಟದಿಂದ ಸಮತಟ್ಟು ಪ್ರದೇಶಕ್ಕೆ ಹಗ್ಗದ ಮೂಲಕ ಕಳುಹಿಸುವುದು, ರಕ್ಷಣೆ ಮಾಡಿದವರಿಗೆ ಸ್ಥಳದಲ್ಲಿಯೇ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸಾಗಿಸುವುದು. ಚಿಕಿತ್ಸೆ ನೀಡಿದ ನಂತರ ಪರಿಹಾರ ಕೇಂದ್ರಕ್ಕೆ ಸ್ಥಳಾಂತರ ಮಾಡುವುದು. ಹೀಗೆ ನಾನಾ ರೀತಿಯ ರಕ್ಷಣಾ ಕಾರ್ಯಗಳನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಲಾಯಿತಲ್ಲದೆ ಈ ಸಂದರ್ಭ ಅಗ್ನಿಶಾಮಕ ಇಲಾಖೆ, ರಾಜ್ಯ ನಾಗರಿಕ ರಕ್ಷಣಾ ಪಡೆ, ಎನ್‌ಡಿಆರ್ ಎಫ್, ಗೃಹರಕ್ಷಕ ದಳ, ಪೊಲೀಸ್ ಇಲಾಖೆ ಹೀಗೆ ಹಲವು ರಕ್ಷಣಾ ತಂಡಗಳು ತಮ್ಮ ಕಾರ್ಯವನ್ನು ಹೇಗೆ ಮಾಡುತ್ತಾರೆ ಎಂಬುದನ್ನು ಜನತೆಗೆ ತಿಳಿಸಿದ್ದಾರೆ.

ಬರಲಿರುವ ಮುಂಗಾರು ಕೊಡಗಿಗೆ ಒಳಿತು ಮಾಡುವಂತಿರಲಿ!

ಪ್ರವಾಹದ ವೇಳೆ ರಕ್ಷಣಾ ಕಾರ್ಯಾಚರಣೆ: ಹಟ್ಟಿಹೊಳೆಯಲ್ಲಿ ಪ್ರವಾಹ ಪರಿಸ್ಥಿತಿಯುಂಟಾದಾಗ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲು ಮಾನವ ರಹಿತ ಯಂತ್ರ ಚಾಲಿತ ದೋಣಿ, ತೇಲುವ ಸೇತುವೆ ಬಳಸಿ, ಅತ್ಯಾಧುನಿಕ ರಬ್ಬರ್ ದೋಣಿಗಳ ಮೂಲಕ ಪ್ರವಾಹದಿಂದ ಉಕ್ಕಿ ಹರಿಯುತ್ತಿರುವ ನದಿತಟದಿಂದ ಸುರಕ್ಷಿತ ಸ್ಥಳಗಳಿಗೆ ಜನರನ್ನು ಸ್ಥಳಾಂತರಿಸುವ, ಅತಿವೃಷ್ಟಿಯಲ್ಲಿ ಸಿಲುಕಿಕೊಂಡವರನ್ನು ರಕ್ಷಿಸುವ, ಖಾಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಿ ಜೀವ ರಕ್ಷಣೆಯನ್ನು ಮಾಡಿಕೊಳ್ಳುವ ಬಗೆಗಿನ ಪ್ರಾತ್ಯಕ್ಷಿಕೆಯೂ ನಡೆಯಿತು. ಇದೆಲ್ಲವನ್ನು ನೋಡಿದ ಜನ ತಮ್ಮ ರಕ್ಷಣೆಗೆ ರಕ್ಷಣಾ ತಂಡವಿದೆ ಎಂಬ ನೆಮ್ಮದಿಯುಸಿರುಬಿಟ್ಟಿದ್ದಾರೆ.

ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು, ಕಳೆದ ವರ್ಷ ಸಂಭವಿಸಿದ ಪ್ರಕೃತಿ ವಿಕೋಪದಿಂದ ಮುಂಜಾಗ್ರತೆ ವಹಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತವು ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಭೂಕುಸಿತ ಹಾಗೂ ಪ್ರವಾಹ ಪೀಡಿತ ಸೂಕ್ಷ್ಮ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ವಹಿಸಬೇಕಿರುವ ಕ್ರಮಗಳ ಬಗ್ಗೆ ವಿವಿಧ ರಕ್ಷಣಾ ತಂಡಗಳಿಂದ ಪ್ರಾತ್ಯಕ್ಷಿಕೆ ನಡೆಸಲಾಗಿದ್ದು, ಇದು ಜನರಲ್ಲಿ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಕೈಕೊಂಡ ಕಾರ್ಯಕ್ರಮವಾಗಿದೆ ಎಂದು ಹೇಳಿದರು.

English summary
kodagu district administration took many steps ahead of mansoon season. and also conductred mock drill by ndrf in kodagu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X