ಬರ ಪೀಡಿತ ಪ್ರದೇಶಗಳ 32 ಲಕ್ಷ ರೈತರ ಖಾತೆಗೆ ರೂ.575 ಕೋಟಿ ಪರಿಹಾರ ಬಿಡುಗಡೆ
ಕೊಡಗು, ಫೆಬ್ರವರಿ. 05: ರಾಜ್ಯಾದ್ಯಂತ ಬರ ಪೀಡಿತ ಪ್ರದೇಶಗಳಲ್ಲಿ ಪ್ರತಿ ರೈತರಿಗೆ ತಲಾ 2,000 ರೂಪಾಯಿಯಂತೆ 32 ಲಕ್ಷ ರೈತರಿಗೆ ಈವರೆಗೆ 575 ಕೋಟಿ ರೂ. ಹಣವನ್ನು ಪರಿಹಾರದ ರೂಪದಲ್ಲಿ ರಾಜ್ಯ ಸರ್ಕಾರವೇ ಬಿಡುಗಡೆ ಮಾಡಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಕೊಡಗಿನ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಸೋಮವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ , "ರಾಜ್ಯದಲ್ಲಿ ಈ ವರ್ಷ ಇತಿಹಾಸ ಕಾಣದ ಬರ ಎದುರಾಗಿದೆ. ಕೇಂದ್ರದಿಂದ ಬರ ಪರಿಹಾರ ಈವರೆಗೆ ಲಭ್ಯವಾಗಿಲ್ಲ. ಹೀಗಾಗಿ ರಾಜ್ಯ ಸರ್ಕಾರವೇ ಮೊದಲ ಕಂತಿನಲ್ಲಿ ರೈತರಿಗೆ 2,000 ರೂ ನೀಡಲು ನಿರ್ಧರಿದೆ.ಸಿ ಈಗಾಗಲೇ 32 ಲಕ್ಷ ರೈತರಿಗೆ ಪರಿಹಾರದ ಹಣ ನೀಡಲಾಗಿದೆ. ಕೊಡಗಿನಲ್ಲೂ ಸಹ 11,000 ರೈತರಿಗೆ 1.5 ಕೋಟಿ ರೂ. ಬಿಡುಗಡೆ ಮಾಡಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ.

ಇನ್ನು, "ರೈತರ ಪರಿಹಾರದ ಹಣ ದುರುಪಯೋಗ ತಡೆಗಟ್ಟಲು ಈ ಬಾರಿ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ. ಫ್ರೂಟ್ಸ್ ತಂತ್ರಾಂಶದ ಮೂಲಕ ಎಲ್ಲಾ ರೈತರಿಗೆ ಪರಿಹಾರದ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಪಾರದರ್ಶಕವಾಗಿ ಜಮಾ ಮಾಡಲಾಗಿದೆ" ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಪೈಕಿ ಮತ್ತು ಪಹಣಿ ಸಮಸ್ಯೆ ಬಗೆಹರಿಸಲು ಅಧಿಕಾರ ಎರಡು ತಿಂಗಳ ಗಡುವು
"ಪೈಕಿ ಮತ್ತು ಪಹಣಿ ಕಾಲಂ 3 ಮತ್ತು 9ರಲ್ಲಿ ವ್ಯತ್ಯಾಸವಿರುವ ಪ್ರಕರಣಗಳ ಸಂಖ್ಯೆ ಕೊಡಗಿನಲ್ಲಿ ಅಧಿಕವಾಗಿದ್ದು ದಶಕಗಳ ಕಾಲದಿಂದ ಉಳಿದಿದ್ದ ಈ ಎಲ್ಲಾ ಸಮಸ್ಯೆಗಳಿಗೂ ಮುಕ್ತಿ ಬಂದಿದೆ. ಪ್ರಸ್ತುತ ರಾಜ್ಯಾದ್ಯಂತ ಪೈಕಿ ಮತ್ತು ಪಹಣಿ ಕಾಲಂ 3 ಮತ್ತು 9ರಲ್ಲಿ ವ್ಯತ್ಯಾಸವಿರುವ ಪ್ರಕರಣಗಳ ಸಂಖ್ಯೆ ಒಟ್ಟಾರೆ 1,32,618. ಈ ಪೈಕಿ ಕೊಡಗಿನಲ್ಲೇ ಸುಮಾರು 60,000ಕ್ಕೂ ಹೆಚ್ಚಿನ ಪ್ರಕರಣಗಳಿವೆ" ಎಂದು ಹೇಳಿದ್ದಾರೆ.

"ಈ ಸಮಸ್ಯೆ ಬಗೆಹರಿಸುವಂತೆ ಅಲ್ಲಿನ ಸ್ಥಳೀಯ ಶಾಸಕರು ಒತ್ತಾಯಿಸುತ್ತಿದ್ದಾರೆ. ಹೀಗಾಗಿ ಕೊಡಗಿನಲ್ಲಿ ವಿಶೇಷ ಆದ್ಯತೆಯ ಮೇಲೆ ಕೆಲಸ ನಿರ್ವಹಿಸುವ ತುರ್ತು ಇದೆ. ಸಂಬಂಧಿತ ಕಂದಾಯ ಮತ್ತು ಸರ್ವೇ ಇಲಾಖೆ ಹಿರಿಯ ಅಧಿಕಾರಿಗಳು ಈಗಲೇ ಕೊಡಗಿಗೆ ತೆರಳಿ ಸರ್ವೇ ತಯಾರಿ ಕೆಲಸ ಆರಂಭಿಸಬೇಕು. ಲೈಸೆನ್ಸ್ ಸರ್ವೇಯರ್ ಗಳ ಸಹಾಯ ಪಡೆದುಕೊಳ್ಳಿ. ಗ್ರಾಮ ಲೆಕ್ಕಿಗರಿಗೂ ಸರ್ವೇ ತರಬೇತಿ ನೀಡಿ. ಈ ಕೆಲಸಕ್ಕೆ ಹೊಸ ತಂತ್ರಜ್ಞಾನ ಮತ್ತು ಉಪಕರಣಗಳನ್ನು ಬಳಸಿಕೊಳ್ಳಿ. ಮುಂದಿನ 60 ದಿನಗಳಲ್ಲಿ ಕೆಲಸ ಪೂರೈಸಬೇಕು. ಕಂದಾಯ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಪ್ರತಿ 15 ದಿನಗಳಿಗೊಮ್ಮೆ ಸಭೆ ನಡೆಸಿ ಚರ್ಚಿಸಬೇಕು" ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕುಡಿಯುವ ನೀರು ಪೂರೈಸಲು ಆದೇಶ
ಕೊಡಗು ಜಿಲ್ಲೆಯ ಯಾವುದೇ ಭಾಗದಲ್ಲಿ ಎಲ್ಲಿಯೇ ಕುಡಿಯುವ ನೀರಿನ ಸಮಸ್ಯೆ ಉಂಟಾದರೂ ಖಾಸಗಿ ಟ್ಯಾಂಕರ್ ಮೂಲಕ ನೀರು ಪೂರೈಸಿ. ಈ ಖರ್ಚಿಗೆ ಜಿಲ್ಲಾಧಿಕಾರಿಗಳ ಖಾತೆಯಿಂದ ಎಸ್‌ಡಿಆರ್‌ಎಫ್ ಹಣವನ್ನು ಬಳಸಿಕೊಳ್ಳಿ ಎಂದು ಸಚಿವ ಕೃಷ್ಣ ಬೈರೇಗೌಡ ಸೂಚಿಸಿದ್ದಾರೆ. ಈ ವರ್ಷ ಬರಗಾಲ ಎದುರಾಗಿದೆ. ಮುಂದಿನ ಬೇಸಿಗೆ ಅಥವಾ ಅದಕ್ಕೂ ಮುನ್ನವೇ ಕೊಡಗಿನ ಕೆಲವೆಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ರಾಜ್ಯಾದ್ಯಂತ ಈಗಾಗಲೇ 3000 ಖಾಸಗಿ ಬೋರ್ ವೆಲ್‌ಗಳನ್ನು ಗುರುತಿಸಲಾಗಿದೆ ಎಂದಿದ್ದಾರೆ.
ಬಗರ್ ಹುಕುಂ ವಿಲೇಗೆ 8 ತಿಂಗಳ ಗಡುವು
ಕೊಡಗು ಜಿಲ್ಲೆಯಲ್ಲಿ ಸಾವಿರಾರು ಬಗರ್ ಹುಕುಂ ಅರ್ಜಿಗಳು ಸಲ್ಲಿಕೆಯಾಗಿದ್ದು ಮುಂದಿನ 8 ತಿಂಗಳಲ್ಲಿ ಈ ಎಲ್ಲಾ ಅರ್ಜಿಗಳನ್ನೂ ವಿಲೇಗೊಳಿಸಿ ಅರ್ಹರಿಗೆ ಭೂಮಿ ನೀಡಬೇಕು. ಫಾರ್ಮ್ 57ರ ಅಡಿಯಲ್ಲಿ ಸಲ್ಲಿಸಲಾಗಿರುವ ಬಗರ್ ಹುಕುಂ ಅರ್ಜಿಗಳನ್ನು ಶೀಘ್ರ ವಿಲೇವಾರಿಗೊಳಿಸಬೇಕು ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹೈಕೋರ್ಟ್ ಆದೇಶಿಸಿದೆ. ಹೀಗಾಗಿ ಅಧಿಕಾರಿಗಳು ಬಗರ್ ಹುಕುಂ ಆ್ಯಪ್ ಸಹಾಯದಿಂದ ಅರ್ಹರಿಗೆ ಶೀಘ್ರವಾಗಿ ಸಾಗುವಳಿ ಚೀಟಿ ಮಂಜೂರು ಮಾಡಬೇಕು ಎಂದಿದ್ದಾರೆ.












Click it and Unblock the Notifications