ದುಬಾರೆಯಲ್ಲಿ ಪ್ರವಾಸಿಗರಿಂದ ರಿವರ್ ರ್‍ಯಾಫ್ಟಿಂಗ್ ಸಾಹಸ
ಕುಶಾಲನಗರ, ಜುಲೈ 16: ಕೆಲ ಸಮಯದಿಂದ ಕುಶಾಲನಗರ ಸಮೀಪದ ದುಬಾರೆಯ ಆನೆ ಶಿಬಿರದ ಬಳಿಯ ಕಾವೇರಿ ನದಿಯಲ್ಲಿ ಸ್ಥಗಿತಗೊಂಡಿದ್ದ ರಿವರ್ ರಾಫ್ಟಿಂಗ್ ಈಗ ಮತ್ತೆ ಆರಂಭವಾಗಿದೆ. ಇದರಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ನದಿಯಲ್ಲಿ ತೇಲಾಡುತ್ತಾ... ಏಳುತ್ತಾ.... ಬೀಳುತ್ತಾ.... ರಾಫ್ಟಿಂಗ್ ನಲ್ಲಿ ಸಾಗಿ ಖುಷಿಪಡುತ್ತಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಇಲ್ಲಿ ರಿವರ್ ರಾಫ್ಟಿಂಗ್ ನಡೆಸಿಕೊಂಡು ಬರಲಾಗುತ್ತಿತ್ತಾದರೂ ಬಳಿಕ ಇದೊಂದು ದಂಧೆಯಾಗಿ ಬದಲಾಗಿತ್ತು. ಗಲಾಟೆಗಳು, ಹೊಡೆದಾಟ, ಬಡಿದಾಟಗಳು ನಡೆಯಲಾರಂಭಿಸಿದವು. ಪ್ರವಾಸಿಗನೊಬ್ಬನ ಹತ್ಯೆ ಕೂಡ ನಡೆದಿತ್ತು. ಹೀಗಾಗಿ 2018ರ ಜನವರಿಯಿಂದ ರಿವರ್ ರಾಫ್ಟಿಂಗ್ ಅನ್ನು ರದ್ದುಗೊಳಿಸಲಾಗಿತ್ತು. ಕಳೆದ ವರ್ಷ ಭಾರೀ ಮಳೆ ಸುರಿದು ಕಾವೇರಿ ಉಕ್ಕಿ ಹರಿದಿದ್ದರೂ ರಾಫ್ಟಿಂಗ್ ನಡೆದಿರಲಿಲ್ಲ.
ಇದೀಗ ಜುಲೈ 5ರಿಂದ ರಾಫ್ಟಿಂಗ್ ಗೆ ಅನುಮತಿ ನೀಡಿದ್ದು, ಮುಂಜಾಗ್ರತಾ ಕ್ರಮವನ್ನು ಅಳವಡಿಸಲಾಗಿದೆ. ರಿವರ್ ರಾಫ್ಟಿಂಗ್ ನಡೆಸುವವರಿಗೆ ಕೆಲವು ಷರತ್ತುಗಳನ್ನು ಹಾಕಲಾಗಿದ್ದು, ಅರಣ್ಯ ಮತ್ತು ಪ್ರವಾಸೋದ್ಯಮ ಇಲಾಖೆಯಿಂದ ದಾಖಲೆಗಳನ್ನು ಪಡೆದು ನಂತರ ಉಳಿದ ಹಲವು ಇಲಾಖೆಗಳಿಂದ ತಾಂತ್ರಿಕ ನಿರಾಕ್ಷೇಪಣಾ ಪತ್ರ ಪಡೆಯುವುದು ಅಗತ್ಯವಾಗಿದೆ.

ರಾಫ್ಟಿಂಗ್ ನಡೆಸುವ ಮಾಲೀಕರಿಗೆ ತಲಾ 2 ರಾಫ್ಟರ್ ನಂತೆ ದುಬಾರೆ ಕೇಂದ್ರ ಸ್ಥಳದಿಂದ 7 ಕಿ.ಮೀ. ಅಂತರದ ತನಕ ಕಾವೇರಿ ನದಿಯಲ್ಲಿ ತೆರಳಲು ಅವಕಾಶ ಮಾಡಿಕೊಡಲಾಗಿದೆ. ರಾಫ್ಟಿಂಗ್ ಪ್ರಾರಂಭಗೊಳ್ಳುವ ಸ್ಥಳ ಮತ್ತು ನಿಗದಿತ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆಯೊಂದಿಗೆ ಪ್ರವಾಸಿಗರಿಗೆ ಮೂಲ ವ್ಯವಸ್ಥೆ ಕಲ್ಪಿಸಲಾಗಿದೆ.
ಆರು ಮಂದಿ ಒಮ್ಮೆಗೆ ಕುಳಿತು ರಾಫ್ಟಿಂಗ್ ಮಾಡಬಹುದಾಗಿದೆ. ರಾಫ್ಟಿಂಗ್ ಮಾಡುವ ಸಂದರ್ಭ ಜೊತೆಯಲ್ಲಿ ಪರಿಣತರು ಇರುವುದರಿಂದ ಭಯಪಡಬೇಕಾಗಿಲ್ಲ. ರಿವರ್ ರಾಫ್ಟಿಂಗ್ ಮಾಡುವವರಿಗೆ ಮೊದಲಿಗೆ ಜೀವರಕ್ಷಕ ಜಾಕೆಟ್ ತೊಡಿಸಲಾಗುತ್ತದೆ. ಜೊತೆಗೆ ಹೆಲ್ಮೆಟ್ ನೀಡಲಾಗುತ್ತದೆ. ಪುರುಷರು, ಮಹಿಳೆಯರು ಎಲ್ಲರೂ ಪಾಲ್ಗೊಳ್ಳಬಹುದಾಗಿದೆ.
ಕಳೆದೊಂದು ವರ್ಷದಿಂದ ರಿವರ್ ರಾಫ್ಟಿಂಗ್ ಸ್ಥಗಿತಗೊಳಿಸಿದ ಪರಿಣಾಮ ಕೆಲವರು ನಿರುದ್ಯೋಗಿಗಳಾಗಿದ್ದರೆ, ಮತ್ತೆ ಕೆಲವರು ವ್ಯಾಪಾರ ವಹಿವಾಟು ಇಲ್ಲದೆ ಸಂಕಷ್ಟಕ್ಕೊಳಗಾಗಿದ್ದರು. ಇದೀಗ ಮತ್ತೆ ರಿವರ್ ರಾಫ್ಟಿಂಗ್ ಆರಂಭಿಸಿರುವ ಕಾರಣ ದುಬಾರೆಯತ್ತ ಪ್ರವಾಸಿಗರು ಹೆಜ್ಜೆ ಹಾಕತೊಡಗಿದ್ದು ಎಂದಿನ ಸ್ಥಿತಿಗೆ ಮರಳುತ್ತಿದೆ.
ಆದರೆ ಈ ಬಾರಿ ಭಾಗಮಂಡಲ ಸೇರಿದಂತೆ ಕಾವೇರಿ ನದಿ ಪಾತ್ರದಲ್ಲಿ ಹೆಚ್ಚು ಮಳೆಯಾಗದ ಕಾರಣ ನದಿ ತುಂಬಿ ಹರಿಯುತ್ತಿಲ್ಲ. ಹೀಗಾಗಿ ಕೆಲವು ಸಾಹಸಿಗಳಿಗೆ ರಿವರ್ ರಾಫ್ಟಿಂಗ್ ಮಜಾ ಕೊಡುವಂತೆ ಕಾಣುತ್ತಿಲ್ಲ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಿ ಕಾವೇರಿ ನದಿ ತುಂಬಿ ಹರಿದಿದ್ದೇ ಆದಲ್ಲಿ ರಿವರ್ ರಾಫ್ಟಿಂಗ್ ಗೆ ಬರುವವರ ಸಂಖ್ಯೆ ಹೆಚ್ಚಾಗಲಿದೆ.











Click it and Unblock the Notifications