ಕೊಡಗಿನಲ್ಲಿ ಮತ್ತೊಂದು ರೇವ್ ಪಾರ್ಟಿ ನೂರಕ್ಕೂ ಹೆಚ್ಚು ಮಂದಿ ಭಾಗಿ
ಪೊನ್ನಂಪೇಟೆ, ನವೆಂಬರ್ 3: ದಕ್ಷಿಣ ಕೊಡಗಿನ ನಲ್ಲೂರು ಗ್ರಾಮದಲ್ಲಿ ಪಿ. ವಿವೇಕ್ ಎಂಬಾತನ ಅನಧಿಕೃತ ಹೋಂ ಸ್ಟೇಯೊಂದರಲ್ಲಿ ರೇವ್ ಪಾರ್ಟಿ ನಡೆಯುತ್ತಿದ್ದಾಗ ಕೊಡಗು ಜಿಲ್ಲಾ ಅಪರಾಧಿ ಪತ್ತೆದಳದ ಅಧಿಕಾರಿ ಮಹೇಶ್ ನೇತೃತ್ವದ ತಂಡ ಶನಿವಾರ ರಾತ್ರಿ ದಾಳಿ ನಡೆಸಿ, ಎಂಟು ಮಂದಿಯನು ಬಂಧಿಸಿದೆ.
ದಾಳಿ ಸಂದರ್ಭದಲ್ಲಿ ಹೈದರಾಬಾದ್ ಮೂಲದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಬಹುರಾಷ್ಟ್ರೀಯ ಕಂಪೆನಿಗಳ ಉದ್ಯೋಗಸ್ಥ ಯುವಕ- ಯುವತಿಯರು ಮದ್ಯ, ಗಾಂಜಾ ಮುಂತಾದ ಮಾದಕ ದ್ರವ್ಯಗಳನ್ನು ಸೇವಿಸುತ್ತಾ ಹಾಡಿಗೆ ಮೈ ಮರೆತು ಕುಣಿಯುತ್ತಿರುವುದು ಕಂಡುಬಂದಿದೆ.
ಹೋಂ ಸ್ಟೇ ಕೂಡ ಅನಧಿಕೃತ ಎಂಬ ವಿಷಯವು ಈ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ. ಘಟನೆ ನಡೆದ ಸ್ಥಳದಲ್ಲಿ ನೂತನ ರೆಸಾರ್ಟ್ ನಿರ್ಮಾಣ ಆಗುತ್ತಿರುವ ಕುರಿತು ಪೊಲೀಸ್ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಹೈದರಾಬಾದ್ ಮೂಲದ ಮ್ಯಾನೇಜರ್, ಹೋಂ ಸ್ಟೇ ಮಾಲೀಕ ವಿವೇಕ್, ಡಿಜೆ ಆಪರೇಟರ್ ಗಳು, ಮಾದಕ ದ್ರವ್ಯದ ಅಮಲಿನಲ್ಲಿದ್ದ ಮೂವರು ಸೇರಿದಂತೆ ಒಟ್ಟು ಎಂಟು ಮಂದಿಯನ್ನು ಬಂಧಿಸಿ, ಪ್ರಕರಣ ದಾಖಲಿಸಲಾಗಿದೆ.
ಎಂಬತ್ತೆರಡು ಸಾವಿರ ನಗದು ಹಾಗೂ ಡಿ.ಜೆ.ಗೆ ಉಪಯೋಗಿಸಿದ ಸೌಂಡ್ ಸಿಸ್ಟಮ್, ಮಾದಕ ದ್ರವ್ಯ, ಗಾಂಜಾ, ಮದ್ಯ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.












Click it and Unblock the Notifications