ಕೊಡಗಿನಲ್ಲಷ್ಟೆ ನಡೆಯುವ ಪೊವ್ವೋದಿ ಉತ್ಸವದ ಬಗ್ಗೆ ನಿಮಗೆ ಗೊತ್ತಾ?
ಮಡಿಕೇರಿ, ಮೇ 18: ಕೊಡಗಿನಲ್ಲಿ ಬೇಸಿಗೆಯ ದಿನಗಳಲ್ಲಿ ಹಲವಾರು ಹಬ್ಬಗಳು, ಜಾತ್ರೆಗಳು ನಡೆಯುತ್ತವೆ. ಈ ಪೈಕಿ ಒಂದೊಂದು ಹಬ್ಬದ ಆಚರಣೆಯೂ ಒಂದೊಂದು ರೀತಿಯಲ್ಲಿ ವಿಶಿಷ್ಟ ಮತ್ತು ವಿಭಿನ್ನವಾಗಿರುತ್ತವೆ. ಕೊಡಗಿಗೆ ಒಂದು ಸುತ್ತು ಬಂದರೆ ಭದ್ರಕಾಳಿ, ಭಗವತಿ ದೇವರ ದೇವಸ್ಥಾನಗಳು ಕಾಣಸಿಗುತ್ತವೆ. ಇವು ಇಲ್ಲಿನ ಗ್ರಾಮದೇವತೆಯಾಗಿ ಗ್ರಾಮದ ಜನರನ್ನು ಕಾಪಾಡುತ್ತಾ ಬಂದಿದ್ದು, ಪ್ರತಿದಿನವೂ ಪೂಜಾ ಕೈಂಕರ್ಯಗಳನ್ನು ನಡೆಸಲಾಗುತ್ತದೆಯಾದರೂ ವರ್ಷಕ್ಕೊಮ್ಮೆ ನಡೆಯುವ ಉತ್ಸವ ವೈಶಿಷ್ಟ್ಯಪೂರ್ಣವಾಗಿರುತ್ತದೆ.
ಗ್ರಾಮ ದೇವತೆ ಭಗವತಿ ದೇವಿಯನ್ನು ಪೊವ್ವೋದಿ ಎಂದು ಕೂಡ ಕರೆಯಲಾಗುತ್ತದೆ. ಪೊವ್ವೋದಿ (ಭಗವತಿ) ದೇವಿಯ ಬಗ್ಗೆ ಪೌರಾಣಿಕ ಇತಿಹಾಸವನ್ನು ನೋಡಿದ್ದೇ ಆದರೆ ಕೊಡಗಿನ ಕುಲದೇವರಾದ ಇಗ್ಗುತಪ್ಪ ಹಾಗೂ ಕಾವೇರಿಗೆ ನಿಕಟ ಸಂಬಂಧವಿರುವುದನ್ನು ಕಾಣಬಹುದು.

ಕಾವೇರಿ ತಾಯಿಯ ಮಾರ್ಗದರ್ಶನದಂತೆ ನೂರ್ಕೋಲ್ ಬೆಟ್ಟದ ಮೇಲಿಂದ ಮೂರು ಬಾಣಬಿಡಲಾಯಿತು. ಬಾಣಬಿದ್ದ ಜಾಗದಲ್ಲಿ ಮೂವರು ಸಹೋದರಿಯರು ನೆಲೆ ನಿಂತರು. ಈ ಪೈಕಿ ಮೊದನೆಯವಳು ಕೊಡಗಿನ ಚೇರಳ ಗ್ರಾಮದಲ್ಲಿ, ಎರಡನೆಯವಳು ಶ್ರೀಮಂಗಲ ಗ್ರಾಮದಲ್ಲಿ, ಮೂರನೆಯವಳು ಈರಳೆ ಗ್ರಾಮದಲ್ಲಿ ನೆಲೆ ನಿಂತರು.
ಈರಳೆ ಪೊವ್ವೋದಿ(ಭಗವತಿ) ಮಡಿಕೇರಿಗೆ ಸಮೀಪದ ಚೆಟ್ಟಳ್ಳಿ ಎಂಬಲ್ಲಿಂದ 5 ಕಿಮೀ ದೂರದಲ್ಲಿರುವ ಈರಳೆ ಗ್ರಾಮದಲ್ಲಿ ನೆಲೆ ನಿಂತಿದ್ದು ಇಲ್ಲಿ ಸುಂದರ ದೇವಾಲಯ ನಿರ್ಮಾಣಗೊಂಡಿದ್ದು, ಇದಕ್ಕೆ ಸುಮಾರು ಮೂರು ಶತಮಾನಗಳ ಇತಿಹಾಸವಿರುವುದನ್ನು ಕಾಣಬಹುದಾಗಿದೆ. ಇಲ್ಲಿ ಬೇಸಿಗೆಯ ದಿನಗಳಲ್ಲಿ ವಿಜೃಂಭಣೆಯಿಂದ ಹಬ್ಬವನ್ನು ಆಚರಿಸಲಾಗುತ್ತದೆ. ಮೂರು ದಿನಗಳ ಕಾಲ ನಡೆಯುವ ಹಬ್ಬ ಅರ್ಥಾತ್ ಉತ್ಸವವು ಹಲವು ಆಚರಣೆಯನ್ನು ಹೊಂದಿರುವುದನ್ನು ಕಾಣಬಹುದಾಗಿದೆ.

ಹಾಡಿಗೆ ತಕ್ಕಂತೆ ದೇವಾಲಯದ ಬಳಿ ನೃತ್ಯ
ಈ ಹಬ್ಬವನ್ನು ಊರವರೆಲ್ಲ ಸೇರಿ ಆಚರಣೆ ಮಾಡುತ್ತಾರೆ. ಹಿಂದಿನ ಕಾಲದಿಂದಲೂ ನಡೆದು ಬಂದ ಸಂಪ್ರದಾಯದಂತೆ ಹಬ್ಬದ ದಿನದಂದು ದೇವತಕ್ಕ ಹಾಗೂ ಭಂಡಾರತಕ್ಕರಾದ ಪೊರಿಮಂಡ ನಾಣಯ್ಯನವರ ಮನೆಯಿಂದ ದುಡಿಕೊಟ್ಟ್ ಹಾಡಿನೊಂದಿಗೆ ಅದ್ಧೂರಿ ಮೆರವಣಿಗೆಯೊಂದಿಗೆ ದೇವರಭಂಡಾರ ಎತ್ತು ಪೋರಾಟದೊಂದಿಗೆ ದೇವಾಲಯಕ್ಕೆ ತರುತ್ತಾರೆ.
ಬಳಿಕ ಮೇದರ ಪರೆಯ ಹೊಡೆತಕ್ಕೆ ಹಾಗೂ ದುಡಿಕೊಟ್ಟ್ ಹಾಡಿಗೆ ಸರಿಯಾಗಿ ಕೊಡಗಿನ ಸಂಪ್ರದಾಯದ ಬಿಳಿಯ ಕುಪ್ಯಚ್ಯಾಲೆಯನ್ನು ಧರಿಸಿದ ದೇವತಕ್ಕರು, ಊರುತಕ್ಕರು ಸರತಿ ಸಾಲಿನಲ್ಲಿ ದೇವಾಲಯ ಮತ್ತು ಬೊಳಕ್ ಮರದ ಸುತ್ತಲೂ ಬೊಳಕಾಟ್, ಚೌರಿಆಟ್ ನ ನೃತ್ಯ ಮಾಡಿ ದೇವರನ್ನು ಕೊಂಡಾಡುತ್ತಾರೆ.
ದುಡಿಕೊಟ್ಟ್ ಹಾಡಿನೊಂದಿಗೆ ಮೆರವಣಿಗೆ
ಇದಾದ ಬಳಿಕ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ದೇವರಿಗೆ ಭಂಡಾರ ಹಾಕಲಾಗುತ್ತದೆ. ಇದೇ ಸಂದರ್ಭ ಕೆಲವರು ತಾವು ಮಾಡಿಕೊಂಡಿದ್ದ ಹರಕೆಯನ್ನು ಅರ್ಪಿಸಿ ದೇವರ ಪ್ರಸಾದ ಸ್ವೀಕರಿಸುತ್ತಾರೆ. ಅಷ್ಟೇ ಅಲ್ಲ ಹಬ್ಬದ ಅಂಗವಾಗಿ ದೇವರ ಕೋಲವೂ ನಡೆಯುತ್ತದೆ. ಸಂಜೆ ಸಮಯದಲ್ಲಿ ಊರಿನ ದೇವತಕ್ಕ, ಊರು ತಕ್ಕ ಹಾಗೂ ಊರಿನವರೆಲ್ಲ ಸೇರಿ ತಕ್ಕರ ದೇವರನಡೆಯಲ್ಲಿ ಬೇಡಿಕೊಂಡು ದೇವರಗರ್ಭ ಗುಡಿಯಿಂದ ಸಾಂಪ್ರದಾಯಿಕ ದುಡಿಕೊಟ್ಟ್ ಹಾಡಿನೊಂದಿಗೆ ದೇವರಜ್ಯೋತಿಯನ್ನು ತೆಗೆದು ಬೊಳಕ್ (ದೀಪ)ಸ್ಥಂಬದಲ್ಲಿಟ್ಟು, ದೇವಾಲಯದ ಹಬ್ಬದ ಕಟ್ಟನ್ನು ಹಾಕಲಾಗುತ್ತದೆ.
ಹಬ್ಬದ ಕಟ್ಟು ಬಿದ್ದಲ್ಲಿಂದ ಹಬ್ಬ ಆರಂಭವಾಗುವರೆಗೆ ಪ್ರತಿದಿನ ಪ್ರಾತಃಕಾಲದಲ್ಲಿ ಎದ್ದು ದೇವರ ದೀಪದ ಮುಂದೆ ಊರಿನವರು ಬೊಳಕಾಟ್ ನೃತ್ಯವನ್ನು ಮಾಡುತ್ತಾರೆ. ಪ್ರಧಾನ ಉತ್ಸವದ ದಿನದಂದು ದೇವರಿಗೆ ವಿಶೇಷ ಅಲಂಕಾರದೊಂದಿಗೆ ಸಿಂಗಾರಗೊಳಿಸಿ ಊರವರೆಲ್ಲ ಸೇರಿ ಭಂಡಾರವನ್ನು ಭಂಡಾರ ತಕ್ಕರಾದ ಪೊರಿಮಂಡ ನಾಣಯ್ಯನವರ ಮನೆಯಿಂದ ದುಡಿಕೊಟ್ಟ್ ಹಾಡಿನೊಂದಿಗೆ ಮೆರವಣಿಗೆಯ ಮೂಲಕ ತರುತ್ತಾರೆ.
ದೇವನೆಲೆಗೆ ಬಂದು ಜನರಿಗೆ ಆಶೀರ್ವಾದ
ಸಂಜೆ ಪೊವ್ವೋದಿಗೆ ಎತ್ತು ಪೋರಾಟದ ಮೂಲಕ ಭಕ್ತಿಯನ್ನು ದೇವರಿಗೆ ಅರ್ಪಿಸಿದರೆ, ಭದ್ರಕಾಳಿಗೆ ಮೇದರ ಪರೆಯ ಹೊಡೆತಕ್ಕೆ ಸರಿಯಾಗಿ ಕೊಡಗಿನ ಸಂಪ್ರದಾಯದ ಬಿಳಿಯ ಕುಪ್ಯಚ್ಯಾಲೆಯನ್ನು ಧರಿಸಿದ ದೇವತಕ್ಕರು ಊರಿನತಕ್ಕರು ಹಾಗೂ ಊರಿನವರು ಸರತಿ ಸಾಲಿನಲ್ಲಿ ದೇವಾಲಯದ ಸುತ್ತಲೂ ಬೊಳಕಾಟ್ ಹಾಗೂ ಚೌರಿಆಟ್ ನೃತ್ಯ ಮಾಡಿ ದೇವರನ್ನು ಕೊಂಡಾಡುತ್ತಾರೆ. ಅಂದು ರಾತ್ರಿ ಪರದೇವರ ದೇವನೆಲೆಯಲ್ಲಿ ಸಂಪ್ರದಾಯದಂತೆ ಪೂಜೆಸಲ್ಲಿಸಲಾಗುತ್ತದೆ.
ಮಾರನೆಯ ದಿನ ಬೆಳಗ್ಗೆ ದೇವಕೋಲದೊಂದಿಗೆ ದೇವನೆಲೆಗೆ ಬಂದು ಜನರಿಗೆ ಆಶೀರ್ವಾದ ನೀಡಿ ದೇವರಿಗೆ ಪೂಜೆ ಪುರಸ್ಕಾರ ಹಾಗೂ ಹಾರ ನೀಡಿ ದೇವರ ಪ್ರಸಾದವನ್ನೆಲ್ಲ ಸೇವಿಸಿದ ನಂತರ ಪಟ್ಟಣಿಯ ಕಟ್ಟುಪಾಡನ್ನು ಮುರಿಯಲಾಗುತ್ತದೆ. ಉತ್ಸವದ ಕೊನೆಯ ದಿನ ಸಂಜೆ ಬೊಳಕ್ ಮರ ತೆಗೆಯುವ ಸಂಪ್ರದಾಯದಂತೆ ದೀಪಸ್ತಂಬದಲ್ಲಿ ಇಟ್ಟಂತಹ ದೀಪವನ್ನು ದುಡಿಕೊಟ್ಟ್ ಹಾಡಿನೊಂದಿಗೆ ತೆಗೆದು ದೇವಾಲಯದ ಗರ್ಭಗುಡಿಯೊಳಗೆ ಇಡಲಾಗುತ್ತದೆ.
ನಂತರ ಊರವರೆಲ್ಲ ಸೇರಿ ದುಡಿಕೊಟ್ಟ್ ಹಾಡಿನೊಂದಿಗೆ ವಿಜೃಂಭಣೆಯಿಂದ ಮೆರವಣಿಗೆಯ ಮೂಲಕ ದೇವರ ಭಂಡಾರವನ್ನು ದೇವತಕ್ಕ ಹಾಗೂ ಭಂಡಾರ ತಕ್ಕರಾದ ಪೊರಿಮಂಡ ನಾಣಯ್ಯನವರ ಮನೆಯ ನೆಲ್ಲಕ್ಕಿ ನಡುಬಾಡೆಯಲ್ಲಿಡಲಿದ್ದಾರೆ. ತಕ್ಕರ ಮರ್ಯಾದೆಯಂತೆ ಬಂದ ಊರಿನವರಿಗೆಲ್ಲ ಊಟೋಪಚಾರ ನಡೆಯುತ್ತದೆ. ಅಲ್ಲಿಗೆ ಹಬ್ಬವೂ ಮುಗಿದು ಹೋಗುತ್ತದೆ.












Click it and Unblock the Notifications