25 ವರ್ಷವಾದರೂ ಬದಲಾಗದ ಕೊಡಗು ಕುಗ್ರಾಮದ ರಸ್ತೆಯ ವ್ಯಥೆ-ಕಥೆ

Posted By: ಮಡಿಕೇರಿ ಪ್ರತಿನಿಧಿ
Subscribe to Oneindia Kannada

ಮಡಿಕೇರಿ, ಸೆಪ್ಟೆಂಬರ್ 11: ಕೊಡಗು ಎಲ್ಲ ರೀತಿಯಿಂದಲೂ ಅಭಿವೃದ್ಧಿಯತ್ತ ಮುನ್ನುಗ್ಗುತ್ತಿದೆ. ಹೋಂಸ್ಟೇ, ರೆಸಾರ್ಟ್ ನಾಯಿಕೊಡೆಗಳಂತೆ ತಲೆ ಎತ್ತಿರುವುದರಿಂದ ಇಲ್ಲಿನ ಪರಿಸ್ಥಿತಿ ಭಿನ್ನವಾಗಿದೆ. ಸದಾ ಪ್ರವಾಸಿಗರು ಇಲ್ಲಿಗೆ ಎಡತಾಕುತ್ತಲೇ ಇರುತ್ತಾರೆ. ಮೇಲ್ನೋಟಕ್ಕೆ ಎಲ್ಲವೂ ಸ್ವರ್ಗದಂತೆ ಗೋಚರಿಸಿದರೂ ಗ್ರಾಮಗಳ ತೋಟದೊಳಗೆ ಬದುಕು ಸವೆಸುವ ಬಡವರ ಬದುಕು ಮೂಲಸೌಲಭ್ಯವಿಲ್ಲದೆ ದುಸ್ತರ ಎಂದರೆ ಅಚ್ಚರಿಯಾಗಬಹುದು.

ಇವತ್ತಿಗೂ ಕೊಡಗಿನ ಕೆಲವು ಗ್ರಾಮಗಳಿಗೆ ಡಾಂಬರು ರಸ್ತೆ, ವಿದ್ಯುತ್ ಇಲ್ಲಾಂದ್ರೆ ನಂಬಲಾಗದು. ಆದರೆ ನಂಬಲೇ ಬೇಕಾಗಿದೆ. ಹಲವು ಸೌಲಭ್ಯ ವಂಚಿತ ಕುಗ್ರಾಮಗಳ ಕಥೆ ಒಂದೆಡೆಯಾದರೆ ಮತ್ತೊಂದೆಡೆ ಇರುವ ರಸ್ತೆಗಳನ್ನು ದುರಸ್ತಿ ಮಾಡದ ಕಾರಣದಿಂದಾಗಿ ಅವು ಹಾಳಾಗಿ ಹೋಗಿ ನಡೆಯಲಾಗದ ಸ್ಥಿತಿಗೆ ಬಂದು ನಿಂತಿರುವುದು ಕೂಡ ದುರಂತವೇ.

ಕೊಡಗಿನಲ್ಲಿ ಕಳಪೆ ಕಾಮಗಾರಿ ಬಯಲು ಮಾಡಿದ ಮಳೆ!

ಐಗೂರು ಗ್ರಾಮ ಪಂಚಾಯಿತಿಗೆ ಸೇರುವ ಕಾಜೂರು ದುರ್ಗಾ ಪರಮೇಶ್ವರಿ ಎಸ್ಟೇಟ್ ಗೆ ತೆರಳುವ ರಸ್ತೆಯಲ್ಲಿ ಯಾರಾದರೂ ಹೋದರೆ ಸಾಕಪ್ಪಾ ಇಲ್ಲಿನ ಸಹವಾಸ ಎನಿಸುತ್ತಿದೆ. ಆದರೆ ಇಲ್ಲಿರುವ ಸುಮಾರು 18 ಕುಟುಂಬಗಳ ಜನ ಇದೇ ರಸ್ತೆಯಲ್ಲಿ ಕಳೆದ 25 ವರ್ಷಗಳಿಂದ ಸರ್ಕಸ್ ಮಾಡುತ್ತಾ ಸಾಗುತ್ತಿದ್ದಾರೆ. ಅವರಿಗೂ ಸಂಬಂಧಿಸಿದವರಿಗೆ ಮನವಿ ಮಾಡಿ ಸುಸ್ತಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಹೊಂಡ ಬಿದ್ದ, ಡಾಂಬರಿಲ್ಲದ ರಸ್ತೆಯಲ್ಲಿ ನಡೆದು ಅವರಿಗೆ ಸುಸ್ತಾಗಿದೆ. ಆದರೆ ಅನಿವಾರ್ಯವಾಗಿ ನಡೆಯಲೇಬೇಕಾಗಿದೆ.

ನೇರವಾಗಿ ಗ್ಯಾರೇಜ್ ಗೇ ಹೋಗಬೇಕು!

ನೇರವಾಗಿ ಗ್ಯಾರೇಜ್ ಗೇ ಹೋಗಬೇಕು!

ಇದೇ ರಸ್ತೆಯಲ್ಲಿ ಶಾಲೆಗೆ ತೆರಳುವ ಮಕ್ಕಳು, ಕೆಲಸಕ್ಕೆ, ಇನ್ನಿತರೆ ಕೆಲಸ ಕಾರ್ಯಗಳಿಗೆ ಹೋಗುವ ಹಿರಿಯರು ಹೆಜ್ಜೆ ಹಾಕಬೇಕಾಗಿದೆ. ವಾಹನಗಳು ಇದರಲ್ಲಿ ಸಾಗಿದರೆ ನೇರವಾಗಿ ಗ್ಯಾರೇಜ್ ಸೇರಬೇಕಾಗುತ್ತದೆ. ಹೀಗಾಗಿ ಪ್ರತಿ ದಿನ ಹಿಡಿಶಾಪ ಹಾಕುತ್ತಾ ಇಲ್ಲಿ ಸಾಗೋದು ಮಾಮೂಲಿಯಾಗಿದೆ. ಅಷ್ಟೇ ಅಲ್ಲ ಆ ವ್ಯವಸ್ಥೆಗೆ ಜನ ಕೂಡ ಹೊಂದಿಕೊಂಡಿದ್ದಾರೆ.

ಕಾಡಾನೆ ಹಾವಳಿಯೂ ಜಾಸ್ತಿ

ಕಾಡಾನೆ ಹಾವಳಿಯೂ ಜಾಸ್ತಿ

ಕಳೆದ 18 ವರ್ಷಗಳ ಹಿಂದೆ ಕೊಥಾರಿ ಕಂಪನಿಯ ಜನರಲ್ ಮ್ಯಾನೇಜರ್ ಆಗಿದ್ದ ರಾಮಸ್ವಾಮಿ ಹೆಗಡೆ ಅವರು ದುರ್ಗಾ ಪರಮೇಶ್ವರಿ ಎಸ್ಟೇಟ್ ಮಾಡಿದಾಗ ಕಲ್ಲು ಮಣ್ಣಿನ ರಸ್ತೆ ನಿರ್ಮಿಸಲಾಗಿತ್ತು. ಆದರೆ ಇದೀಗ ಈ ರಸ್ತೆ ಸಂಪೂರ್ಣ ಹಾಳಾಗಿದ್ದು ಶಾಲಾ ಮಕ್ಕಳು, ಸಾರ್ವಜನಿಕರು ನಡೆದಾಡಲು ಆಗದೆ ವಾಹನ ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿದೆ. ಇಲ್ಲಿ ಕಾಡಾನೆಗಳ ಹಾವಳಿಯೂ ಜಾಸ್ತಿಯಿದ್ದು ಆದರೂ ಮಕ್ಕಳು ಭಯದಲ್ಲೇ ಶಾಲೆಗೆ ನಡೆದುಕೊಂಡು ತೆರಳುತ್ತಾರೆ.

ಅಧಿಕಾರಿಗಳ ದಿವ್ಯನಿರ್ಲಕ್ಷ್ಯ

ಅಧಿಕಾರಿಗಳ ದಿವ್ಯನಿರ್ಲಕ್ಷ್ಯ

ಇನ್ನು ಯಡವಾರೆ ಗ್ರಾಮಕ್ಕೆ ಸೇರುವ ಕಾಜೂರು ಮಾಜಿ ಗ್ರಾ.ಪಂ.ಅಧ್ಯಕ್ಷರ ನಿವಾಸದ ಅನತಿ ದೂರದ 1.5 ಕಿ.ಮೀ. ಕಾಲು ರಸ್ತೆ ತೀರಾ ಹಾಳಾಗಿದ್ದು ಗ್ರಾಮಸ್ಥರಾದ ಬಾಬು, ಶೇಖರ್, ಆಮೆಮನೆ ನಾರಾಯಣಪ್ಪ, ರಾಜು ಹಾಗೂ ವಿಠಲ ಅವರುಗಳು ಲೋಕಾಯುಕ್ತಕ್ಕೆ ದೂರು ನೀಡಿದ ಮೇರೆಗೆ ಸ್ವಲ್ಪ ಮಟ್ಟಿಗೆ ಪಂಚಾಯಿತಿಯಿಂದ ರಸ್ತೆ ದುರಸ್ತಿ ಕಾರ್ಯ ನಡೆಯಿತಾದರೂ ಮತ್ತೆ ಆ ಕಡೆ ಗಮನಹರಿಸದ ಕಾರಣದಿಂದ ಮತ್ತೆ ಯಥಾಸ್ಥಿತಿ ಮುಂದುವರೆದಿದೆ.

ಚುನಾವಣೆ ಬಹಿಷ್ಕರಿಸುವ ಬೆದರಿಕೆ!

ಚುನಾವಣೆ ಬಹಿಷ್ಕರಿಸುವ ಬೆದರಿಕೆ!

ಮಕ್ಕಳು, ಹಿರಿಯರು ನಡೆದಾಡಲು ಕಷ್ಟವಾದ್ದರಿಂದ ಇಲ್ಲಿನ ಕುಟುಂಬಸ್ಥರೇ ಕಲ್ಲು ಮಣ್ಣು ತುಂಬುವ ಮೂಲಕ ಗುಂಡಿಗಳನ್ನು ಮುಚ್ಚಿದ್ದಾರೆ. ಚುನಾವಣೆಗಳ ಸಂದರ್ಭ ಜನಪ್ರತಿನಿಧಿಗಳು ರಸ್ತೆ ನಿರ್ಮಿಸಿಕೊಡುವ ಭರವಸೆ ನೀಡಿದ್ದರಾದರೂ ಅದು ಈಡೇರಿಲ್ಲ. ಇದು ಹೀಗೆ ಮುಂದುವರೆದರೆ ಚುನಾವಣೆ ಬಹಿಷ್ಕರಿಸಿ ಹೋರಾಟ ಮಾಡುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ. ಆದರೆ ಇದನ್ನು ಸಂಬಂಧಿಸಿದವರು ಗಂಭೀರವಾಗಿ ಪರಿಗಣಿಸುತ್ತಾರಾ ಎಂಬುದೇ ಪ್ರಶ್ನೆಯಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
People of Aigoor Gram Panchayat in Kodagu district have been using a heavily damaged road since 25 years. The representatives never bother about it.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ