ಕೊಡಗು: ಜಿ.ಪಂ.ಗೆ 18 ಕೋಟಿಯ ಹೊಸ ಸೂರು ನಿರ್ಮಾಣ!

By: ಮಡಿಕೇರಿ ಪ್ರತಿನಿಧಿ
Subscribe to Oneindia Kannada

ಮಡಿಕೇರಿ, ಫೆಬ್ರವರಿ 3: ಕೊಡಗು ಜಿಲ್ಲಾ ಪಂಚಾಯತಿಗೊಂದು ಪ್ರತ್ಯೇಕ ಕಟ್ಟಡ ಬೇಕೆಂಬ ಬೇಡಿಕೆ ನಿಧಾನವಾಗಿ ಇಡೇರುತ್ತಿದೆ. ಮಡಿಕೇರಿ ಹೊರ ವಲಯದ ಕಳಕೇರಿ ನಿಡುಗಣೆಯ ವಿದ್ಯಾನಗರದಲ್ಲಿ 18.25 ಕೋಟಿ ರೂ. ವೆಚ್ಚದಲ್ಲಿ ನೂತನ 'ಜಿಲ್ಲಾ ಪಂಚಾಯತ್ ಭವನ'ದ ಕಟ್ಟಡ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ.

ಈ ಹಿಂದೆ ಮಡಿಕೇರಿಯ ಕೋಟೆ ಆವರಣದಲ್ಲಿ ಕಿಷ್ಕಿಂದೆಯಂತಹ ಸ್ಥಳದಲ್ಲಿ ಜಿಪಂ ಕಚೇರಿ ಕಾರ್ಯನಿರ್ವಹಿಸುತ್ತಿತ್ತು. ಇಲ್ಲಿಂದ ಬೇರೆಡೆಗೆ ಸ್ವಂತ ಕಟ್ಟಡ ನಿರ್ಮಿಸಿ ಕಚೇರಿಯನ್ನು ತೆರವುಗೊಳಿಸಬೇಕೆಂಬ ಕನಸು ಬಹಳ ವರ್ಷಗಳಿಂದ ಇತ್ತಾದರೂ ಅದು ಈಡೇರಿರಲಿಲ್ಲ.[ಮಡಿಕೇರಿಯಲ್ಲಿ ಗಾಂಧಿ ಚಿತಾಭಸ್ಮಕ್ಕೆ ಗೌರವಾರ್ಪಣೆ]

 New Kodagu JP building is under construction

ಹಲವು ವರ್ಷಗಳ ಹಿಂದೆಯೇ ಜಿ.ಪಂ ಭವನ ನಿರ್ಮಾಣಕ್ಕಾಗಿ ನಗರದ ವಿವಿಧೆಡೆಗಳಲ್ಲಿ ಖಾಲಿ ನಿವೇಶನಗಳನ್ನು ಪತ್ತೆ ಹಚ್ಚುವ ಕೆಲಸ ಆರಂಭವಾಗಿತ್ತು. ಆದರೆ ಎಲ್ಲೂ ಸೂಕ್ತ ನಿವೇಶನ ದೊರಕಿರಲಿಲ್ಲ. 1997ರಲ್ಲಿ ಹೆಚ್.ಟಿ.ಸುಂದರ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನಗರದ ಚೈನ್ ಗೇಟ್ ಬಳಿಯ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿದ್ದ ಖಾಲಿ ನಿವೇಶನದಲ್ಲಿ "ಜಿಲ್ಲಾ ಪಂಚಾಯತ್ ಭವನ" ನಿರ್ಮಾಣಕ್ಕೆ ಶಂಕು ಸ್ಥಾಪನೆ ನಡೆದಿತ್ತು. ಆದರೆ ತಾಂತ್ರಿಕ ದೋಷದಿಂದಾಗಿ ಕಾಮಗಾರಿ ಆರಂಭಗೊಳ್ಳಲಿಲ್ಲ.[ಮಡಿಕೇರಿ ಆರ್ ಟಿಒದಲ್ಲಿ ಕಣ್ಣಲ್ಲಿ ಕಣ್ಣಿಟ್ಟು ನೋಡಿದರೂ ಅಧಿಕಾರಿಗಳೇ ಕಾಣಲ್ಲ!]

ಇದಾದ ಬಳಿಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಎಂ.ಕೆ.ಬಲದೇವ ಕೃಷ್ಣ ಅವರ ಕಾಲದಲ್ಲಿ 'ಜಿಲ್ಲಾ ಪಂಚಾಯತ್ ಭವನ' ನಿರ್ಮಾಣಕ್ಕಾಗಿ ಇಲ್ಲಿನ ತಾಪಂ ಕಾರ್ಯಾಲಯದ ಮೇಲ್ಭ್ಬಾಗದ ಖಾಲಿ ನಿವೇಶನ ಗುರುತಿಸಿ ಅದನ್ನು ಸಮತಟ್ಟು ಮಾಡಿಸಿದ್ದರು. ಅವರು ವರ್ಗಾವಣೆಯಾಗಿ ಹೋಗುತ್ತಿದ್ದಂತೆ ಅವರ ಕನಸು ಅಲ್ಲಿಗೆ ಮುದುರಿತ್ತು.

 New Kodagu JP building is under construction

ಇದೀಗ ನಗರದ ಕರ್ಣಂಗೇರಿ ವ್ಯಾಪ್ತಿಯ ವಿದ್ಯಾನಗರ ಗಾಲ್ಫ್ ಮೈದಾನ ಸಮೀಪ ಸುಮಾರು 5 ಎಕರೆ ಜಾಗದಲ್ಲಿ ಜಿಲ್ಲಾ ಪಂಚಾಯತ್ ಭವನ ತಲೆ ಎತ್ತುತ್ತಿದೆ. ನಗರದಿಂದ 5 ಕಿಲೋಮೀಟರ್ ದೂರದಲ್ಲಿ ಈ ಭವನ ನಿರ್ಮಾಣವಾಗುತ್ತಿದ್ದು ಒಟ್ಟು 18.25 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಕಾಮಗಾರಿ ಆರಂಭಗೊಂಡಿದ್ದು, ಪ್ರಸ್ತುತ ಕಟ್ಟಡದ ತಳಪಾಯ ಹಂತದ ಕಾಮಗಾರಿ ಬಿರುಸಿನಿಂದ ನಡೆಯುತ್ತಿದೆ.

ಮೂರು ಅಂತಸ್ತಿನ ಕೊಡಗು ಜಿ. ಪಂ. ಭವನದ ವಿನ್ಯಾಸವನ್ನು ಉಡುಪಿಯ ಎ.ಜಿ. ಅಸೋಸಿಯೇಟ್ಸ್ ಸಿದ್ದಪಡಿಸಿದೆ. ಕಾಮಗಾರಿಯ ಗುತ್ತಿಗೆಯನ್ನು ಕರ್ನಾಟಕ ಗೃಹ ಮಂಡಳಿ ಮೂಲಕ ಬೆಂಗಳೂರಿನ ಗಾದಿ ರಾಜು ಕನ್‍ಸ್ಟ್ರಕ್ಷನ್ ಸಂಸ್ಥೆ ಕೈಗೆತ್ತಿಕೊಂಡಿದೆ. ಮುಂದಿನ 2018ರ ಜೂನ್ 18ಕ್ಕೆ ಕಾಮಗಾರಿ ಮುಗಿಯಬಹುದು ಎಂದುಕೊಳ್ಳಲಾಗಿದೆ.

ಜಿಲ್ಲಾ ಪಂಚಾಯತ್ ಕಟ್ಟಡದಲ್ಲಿ ಮುಖ್ಯವಾಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯನಿರ್ವಹಣಾಧಿಕಾರಿ, ಸ್ಥಾಯಿ ಸಮಿತಿ ಅಧ್ಯಕ್ಷರ ಕಚೇರಿಗಳು, ಅತ್ಯಾಧುನಿಕ ಹಾಗೂ ವ್ಯವಸ್ಥಿತವಾದ ಸಭಾಂಗಣ, ಜಿಲ್ಲಾ ಪಂಚಾಯತ್ ಅಧೀನಕ್ಕೊಳಪಡುವ ವಿವಿಧ 29 ಇಲಾಖಾ ಕಚೇರಿಗಳು ಇರಲಿವೆ.

ಇಷ್ಟೇ ಅಲ್ಲದೆ ಇಂಜಿನಿಯರಿಂಗ್ ವಿಭಾಗದ ಇಲಾಖೆಗಳು, ಯೋಜನಾ ಇಲಾಖೆ, ಕೃಷಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಇಲಾಖೆ, ರೇಷ್ಮೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು ಸೇರಿದಂತೆ ಎಲ್ಲವೂ ಒಂದೇ ಸೂರಿನಲ್ಲಿ ಕಾರ್ಯ ನಿರ್ವಹಿಸಲಿವೆ. ಇದರಿಂದ ಸಾರ್ವಜನಿಕರಿಗೂ ಅನುಕೂಲವಾಗಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
New Kodagu district punchayat building is under construction. Government is spending Rs. 18.25 crore for this new building which will cater all the government departments.
Please Wait while comments are loading...