ಪೊನ್ನಂಪೇಟೆಯ ಸಂಚಾರಿ ಶವದಹನ ಘಟಕ ನಿರ್ಮಾಣ ಹಿಂದಿನ ಕಥೆಯೇನು?
ಮಡಿಕೇರಿ, ಏಪ್ರಿಲ್ 10: ಸರ್ಕಾರ ಮಟ್ಟದಲ್ಲಿ ಒಬ್ಬ ಅಧಿಕಾರಿಗೆ ಸಾಮಾಜಿಕ ಪ್ರಜ್ಞೆ ಹಾಗೂ ನಿಸ್ವಾರ್ಥ ಸೇವೆ ಮಾಡುವ ಉದ್ದೇಶವಿದ್ದರೆ ಸಾರ್ವಜನಿಕರಿಗೆ ಯಾವ ರೀತಿ ಉಪಯೋಗವಾಗುತ್ತದೆ ಎನ್ನುವುದಕ್ಕೆ ಪ್ರಸ್ತುತ ಪೊನ್ನಂಪೇಟೆ ತಾಲೂಕು ಪಂಚಾಯಿತಿಯಲ್ಲಿ ಪಂಚಾಯತ್ ರಾಜ್ ವಿಭಾಗದ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಎಂ.ಡಿ ಶ್ರೀನಿವಾಸ್ ಸಾಕ್ಷಿಯಾಗಿದ್ದಾರೆ.
ಎಂ.ಡಿ ಶ್ರೀನಿವಾಸ್ ಅವರು ಈ ಹಿಂದೆ ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ, ಹೊಸೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದು ಇಂದಿಗೂ ಆ ಭಾಗದ ಜನರು ನೆನಪಿಸಿಕೊಳ್ಳುತ್ತಾರೆ. ಕಾನೂನು ಪಾಲನೆ ಹಾಗೂ ಭ್ರಷ್ಟಾಚಾರ ರಹಿತ ಆಡಳಿತದಲ್ಲಿ ನಂಬಿಕೆ ಇಟ್ಟು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಕೊಡಗಿನ ಬೆರಣಿಕೆಯ ಸರ್ಕಾರಿ ಅಧಿಕಾರಿಗಳಲ್ಲಿ ಇವರು ಕೂಡ ಒಬ್ಬರಾಗಿದ್ದಾರೆ.

2003ರಲ್ಲಿ ಹೊಸೂರು ಗ್ರಾಮ ಪಂಚಾಯಿತಿಯಲ್ಲಿ ಸಂಚಾರಿ ಶವದಹನ ಘಟಕದ ಅಳವಡಿಕೆ ಮಾಡಿ ರಾಜ್ಯದಲ್ಲಿಯೇ ಪ್ರಥಮ ವಿನೂತನ ಪ್ರಯತ್ನಕ್ಕೆ ಕೈ ಹಾಕಿ ಸಫಲತೆಯನ್ನು ಕಂಡಿದ್ದಾರೆ. ಹೊಸೂರು ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಹೆಚ್ಚಿನವರು ಲೈನ್ ಮನೆಗಳಲ್ಲಿ ವಾಸ ಮಾಡುತ್ತಿದ್ದರು. ಈ ಸನ್ನಿವೇಶದಲ್ಲಿ, ಬಹುತೇಕ ಕುಟುಂಬಗಳಿಗೆ ಸ್ವಂತ ಜಮೀನು ಇರಲಿಲ್ಲ. ಅಂತಹ ಕುಟುಂಬಗಳಲ್ಲಿ ಯಾರಾದರೂ ನಿಧನರಾದರೇ ಅವರ ಶವ ಸಂಸ್ಕಾರವೇ ದೊಡ್ಡ ಸವಾಲಾಗುತ್ತಿತ್ತು. ಇದು ಸ್ಥಳೀಯ ಸಮುದಾಯಗಳಲ್ಲಿ ಘರ್ಷಣೆಗಳಿಗೂ ಕಾರಣವಾಗುತ್ತಿತ್ತು. ಇದರಿಂದಾಗಿ ಮಾನಸಿಕ ಒತ್ತಡ ಹಾಗೂ ಅವ್ಯವಸ್ಥೆಯ ಪರಿಸ್ಥಿತಿ ಉಂಟಾಗುತ್ತಿತ್ತು.
ಈ ಸಂದರ್ಭದಲ್ಲಿ ಹೆಚ್ಚಿನ ದೂರದೃಷ್ಟಿಯುಳ್ಳ ಹಾಗೂ ಸಹಾನುಭೂತಿಯುಳ್ಳ ನಿಲುವು ಅಳವಡಿಸಿಕೊಂಡ ಹಿಂದಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಎಂ. ಡಿ. ಹಾಗೂ ಅಧ್ಯಕ್ಷರಾದ ಶಾಂತಿ ಸೋಮಯ್ಯ ಹಾಗೂ ಸಹ ಸದಸ್ಯರುಗಳು ಪರಿಸ್ಥಿತಿಯ ತೀವ್ರತೆಯನ್ನು ಗಮನಿಸಿ ನವೀನ ಪರಿಹಾರವೊಂದನ್ನು ರೂಪಿಸಿದರು. ಅದುವೇ ಸಂಚಾರಿ ಶವದಹನ ಘಟಕ (Mobile Crematorium Unit).
ಸಕಾರಾತ್ಮಕ ಪ್ರಯತ್ನಗಳೊಂದಿಗೆ, ಶ್ರೀನಿವಾಸ್ ಅವರು ಗೋಣಿಕೊಪ್ಪಲು ಲಯನ್ಸ್ ಕ್ಲಬ್ ಸಂಚಾಲಕರಾದ ಪಟ್ಟಡ ಧನು ಉತ್ತಯ್ಯ ಅವರನ್ನು ಭೇಟಿ ನೀಡಿ, ಗ್ರಾಮಸ್ಥರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ವಿವರವಾಗಿ ಮನವರಿಕೆ ಮಾಡಿದರು. ಇದರ ಫಲವಾಗಿ ಲಯನ್ಸ್ ಕ್ಲಬ್ ₹10 ಲಕ್ಷ ಮೌಲ್ಯದ ಶವದಹನ ಘಟಕವನ್ನು ದಾನವಾಗಿ ಒದಗಿಸಿತು. ಅಲ್ಲದೇ, ಅಂದಿನ ಜಿಲ್ಲಾಧಿಕಾರಿಗಳಾದ ಸತೀಶ್ ಐಎಎಸ್ ಅವರನ್ನು ಭೇಟಿಯಾಗಿ ಶವ ಸಂಸ್ಕಾರಕ್ಕೆ 50 ಸೆಂಟ್ ಜಮೀನನ್ನು ಮಂಜೂರು ಮಾಡಿಸಿಕೊಳ್ಳಲಾಯಿತು. ನಂತರ, 15ನೇ ಹಣಕಾಸು ಆಯೋಗದ ಅನುದಾನದಲ್ಲಿ ₹5 ಲಕ್ಷವನ್ನು ಬಳಸಿ ಶೆಡ್ ಹಾಗೂ ಮೂಲಭೂತ ಸೌಕರ್ಯಗಳನ್ನು ನಿರ್ಮಿಸಿ, ಘಟಕದ ನಿರ್ವಹಣೆಗೆ ಅವಕಾಶ ಕಲ್ಪಿಸಲಾಯಿತು.

ಈ ಯೋಜನೆಯ ಯಶಸ್ಸು ಖಚಿತಪಡಿಸಿಕೊಳ್ಳಲು, ಶ್ರೀನಿವಾಸ್ ಅವರು ಸಮಿತಿಯನ್ನು ರಚಿಸಿ, ಸೇವೆಯ ಸಮರ್ಪಕ ನಿರ್ವಹಣೆಗೆ ವಾಟ್ಸಪ್ ಗುಂಪೊಂದನ್ನು ಶುರು ಮಾಡಿದ್ದರು. ಈ ಡಿಜಿಟಲ್ ಸಂವಹನ ವ್ಯವಸ್ಥೆಯು ಮನವಿಗಳನ್ನು ತ್ವರಿತವಾಗಿ ಸಂವಹನ ನಡೆಸಲು ಹಾಗೂ ಘಟಕವನ್ನು ಸಮಯೋಚಿತವಾಗಿ ನಿಯೋಜಿಸಲು ನೆರವಾಯಿತು.
ಪಂಚಾಯತ್ ಅಧ್ಯಕ್ಷರು, ಹಾಗೂ ಆಡಳಿತ ಮಂಡಳಿಯ ಸದಸ್ಯರು ಹಾಗೂ ಪಿ.ಡಿ.ಓರವರ ಸಂಯುಕ್ತ ಪ್ರಯತ್ನದಿಂದ, ಸುಮಾರು 1,300 ಕುಟುಂಬಗಳು ಈಗ ಮೃತರ ಅಂತ್ಯ ಸಂಸ್ಕಾರಕ್ಕಾಗಿ 10 ಕಿಲೋ ಮೀಟರ್ ದೂರದ ವಿರಾಜಪೇಟೆ ಅಥವಾ ಗೋಣಿಕೊಪ್ಪಲು ತೆರಳುವ ಅಗತ್ಯವಿಲ್ಲದಂತಾಗಿದೆ. ಇದರಿಂದ ಸಮಯ, ಹಣ ಉಳಿತಾಯವಾಗಿದ್ದು, ವಿಶೇಷವಾಗಿ ದೈನಂದಿನ ಕೂಲಿಗೆ ಅವಲಂಬಿತವಾಗಿ ಬದುಕು ನಡೆಸುವ ಲೈನ್ ಮನೆ ನಿವಾಸಿಗಳಿಗೆ ಇದು ದೊಡ್ಡ ಅನುಕೂಲವಾಗಿದೆ.
ಈವರೆಗೆ 40ಕ್ಕೂ ಹೆಚ್ಚು ಅಂತ್ಯ ಸಂಸ್ಕಾರಗಳು ಮೃತರ ಮನೆಯಲ್ಲಿಯೇ ಈ ಸಂಚಾರಿ ಘಟಕದ ಮೂಲಕ ಗೌರವಪೂರ್ಣವಾಗಿ ನೆರವೇರಿಸಲಾಗಿದ್ದು, ಈ ಸೇವೆಯನ್ನು ಬೇಡಿಕೆಯ ಮೇರೆಗೆ ಪಕ್ಕದ ಗ್ರಾಮಗಳಲ್ಲಿಯೂ ವಿಸ್ತರಿಸಲಾಗಿದೆ. ಇದರಿಂದಾಗಿ ಯೋಜನೆಯ ಸಮರ್ಪಕವಾಗಿ ಬಳಕೆಯಾಗುತ್ತಿದೆ.
ಈ ಯೋಜನೆ ಇಂದು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಆಡಳಿತ ಮಂಡಳಿ ಸಹಕಾರ ಹಾಗೂ ಪಿಡಿಓ ಶ್ರೀನಿವಾಸ್ ಎಂ. ಡಿ. ಅವರ ದೂರದೃಷ್ಟಿ, ನಿರ್ವಹಣಾ ಸಾಮರ್ಥ್ಯ ಮತ್ತು ಸೇವಾಭಾವನೆಗಳ ಪ್ರತೀಕವಾಗಿದೆ.
ಅವರ ನೇತೃತ್ವದಲ್ಲಿ ಈ ಯೋಜನೆ ಸ್ಥಳೀಯ ಆಡಳಿತದ ಮೂಲಕ ಮೌಲ್ಯಾಧಾರಿತ, ಸೇವೆಯನ್ನು ನೀಡುತ್ತಿರುವುದು ಹೆಗ್ಗಳಿಕೆಯಾಗಿದೆ. ಸ್ಥಳದ ಅಭಾವ ಎದುರಿಸುತ್ತಿರುವ ಇತರೆ ಗ್ರಾಮ ಪಂಚಾಯಿತಿಗಳಿಗೆ ಈ ಮಾದರಿ ಒಂದು ಪ್ರೇರಣೆಯಾಗಿದೆ ಮಾನವೀಯತೆ ಹಾಗೂ ಸಹಾನುಭೂತಿಯುಳ್ಳ ಆಡಳಿತದಿಂದ ದೊಡ್ಡ ಸಮಸ್ಯೆಗೂ ಸಮರ್ಥ ಪರಿಹಾರ ನೀಡಬಹುದೆಂಬುದನ್ನು ಈ ಯೋಜನೆ ತೋರಿಸಿದೆ.












Click it and Unblock the Notifications