ಕೊಡಗಿನಲ್ಲಿ NDRF ಮೊಕ್ಕಾಂ, ಮುನ್ನೆಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಸಚಿವ ಕೃಷ್ಣ ಭೈರೇಗೌಡ ಸೂಚನೆ
ಕೊಡಗು, ಜುಲೈ,25: ಮಡಿಕೇರಿ, ಭಾಗಮಂಡಲ ಮತ್ತು ಕೊಡಗಿನಲ್ಲಿ ನೆರೆ ವೀಕ್ಷಣೆ ನಡೆಸಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ ಬಳಿಕ ರಾಜ್ಯದ ಮಳೆ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಿದ್ದಾರೆ. ಜೊತೆಗೆ ಎನ್‌ಡಿಆರ್‌ಎಫ್ ತುಕಡಿ ಎರಡು ತಿಂಗಳಿಂದ ಕೊಡಗಿನಲ್ಲೇ ಮೊಕ್ಕಾಂ ಹೂಡಿದೆ. ಅಲ್ಲದೆ, ಮಳೆಯಿಂದ ಅನಾಹುತ ಉಂಟಾಗುವ ಮೊದಲೇ ಎಚ್ವರಾಗುವಂತೆ ಅಧಿಕಾರಿಗಳಿಗೆ ಸಚಿವ ಕೃಷ್ಣಭೈರೇಗೌಡ ಸೂಚನೆ ನೀಡಿದ್ದಾರೆ.
ಕೊಡಗು ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, "ಕೊಡಗಿನಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಕೆಲವು ಮನೆ ಹಾಗೂ ಕೆಲ ಭಾಗದಲ್ಲಿ ತೋಟ ಗದ್ದೆಗಳಿಗೆ ನೀರು ನುಗ್ಗಿದೆ. ಕೆಲವು ವಸತಿ ಪ್ರದೇಶಗಳು ಸಂಪರ್ಕ ಕಳೆದುಕೊಂಡಿದೆ. ಆದರೆ, ಎಲ್ಲೂ ವ್ಯಾಪಕ ಹಾನಿಯಾಗಿಲ್ಲ. ಹಾನಿ ಉಂಟಾದ ನಂತರ ಸ್ಥಳಕ್ಕೆ ಧಾವಿಸುವ ಬದಲಾಗಿ ಹಾನಿಗೆ ಮೊದಲೇ ಮುಂಜಾಗ್ರತಾ ಕ್ರಮ ವಹಿಸುವುದು ಸರ್ಕಾರದ ಕೆಲಸ ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ" ಎಂದಿದ್ದಾರೆ.

"ಹಾನಿ ಉಂಟಾದ ನಂತರ ಸ್ಥಳಕ್ಕೆ ಧಾವಿಸುವ ಬದಲಾಗಿ ಹಾನಿಗೆ ಮೊದಲೇ ಮುಂಜಾಗ್ರತಾ ಕ್ರಮ ವಹಿಸುವುದು ಸರ್ಕಾರದ ಕೆಲಸ. ಪಿಡಿಓ, ಗ್ರಾಮ ಲೆಕ್ಕಾಧಿಕಾರಿ ಮಟ್ಟದಿಂದ ಜಿಲ್ಲಾಧಿಕಾರಿವರೆಗೆ ಎಲ್ಲರೂ ಜನರ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸುವಂತೆ ಸೂಚಿಸಲಾಗಿದೆ. ಅಲ್ಲದೆ, ಮುಂಜಾಗ್ರತಾ ಕ್ರಮವಾಗಿ ಎನ್‌ಡಿಆರ್‌ಎಫ್ ತುಕಡಿ ಕಳೆದ ಎರಡು ತಿಂಗಳಿನಿಂದ ಕೊಡಗಿನಲ್ಲಿ ಮೊಕ್ಕಾಂ ಹೂಡಿದೆ" ಎಂದು ಮಾಹಿತಿ ನೀಡಿದ್ದಾರೆ.
"ಅಧಿಕಾರಿಗಳಿಗೆ ಸೂಚನೆ ನೀಡಿ ಅಗತ್ಯ ಕ್ರಮ ತೆಗೆದುಕೊಳ್ಳುವ ಸಲುವಾಗಿಯೇ ಇಂದು ಕೊಡಗಿನಲ್ಲಿ ನೆರೆ ವೀಕ್ಷಣೆ ನಡೆಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎನ್ ಎಸ್ ಭೋಸರಾಜು ಹಾಗೂ ಸ್ಥಳೀಯ ಶಾಸಕರಾದ ಎ ಎನ್ ಪೊನ್ನಣ್ಣ ಅವರ ಜೊತೆಗೆ ನೆರೆ ವೀಕ್ಷಿಸಿದ್ದು, ಸ್ಥಳೀಯ ಸಮಸ್ಯೆಗಳ ಬಗ್ಗೆ ಮಹತ್ವದ ಚರ್ಚೆ ನಡೆಸಲಾಗಿದೆ" ಎಂದು ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.
ವಿದ್ಯುತ್ ವ್ಯತ್ಯಯ, ಜೆಸ್ಕಾಂ ಜೊತೆಗೆ ಚರ್ಚೆ
ಕೊಡಗಿನಲ್ಲಿ ಮಳೆಯಾದರೆ ವಿದ್ಯುತ್ ವ್ಯತ್ಯಯ ಉಂಟಾಗುತ್ತದೆ. ಕೆಲವು ಬಾರಿ ಎರಡು- ಮೂರು ದಿನಗಳ ಕಾಲ ವಿದ್ಯುತ್ ಸಮಸ್ಯೆ ಉಂಟಾಗುತ್ತದೆ. ಶಾಸಕರಾದ ಪೊನ್ನಣ್ಣ, ಸಚಿವರಾದ ಭೋಸರಾಜು ಹಾಗೂ ಅಧಿಕಾರಿಗಳು ಈ ಸಮಸ್ಯೆ ಬಗ್ಗೆ ನನ್ನ ಜೊತೆಗೆ ಚರ್ಚಿಸಿದ್ದಾರೆ. ಜೆಸ್ಕಾಂನಲ್ಲಿ ಮಾನವ ಸಂಪನ್ಮೂಲ ಕೊರತೆ ಇದ್ದು ಸಕಾಲಕ್ಕೆ ಕೆಲಸ ನಡೆಯುತ್ತಿಲ್ಲ. ಹೀಗಾಗಿ ನಾಳೆಯೇ ಜೆಸ್ಲಾಂ ಅಧಿಕಾರಿಗಳ ಜೊತೆಗೆ ಸಭೆ ಏರ್ಪಡಿಸಲಾಗಿದೆ. ಕೊಡಗಿನ ವಿದ್ಯುತ್ ಸಮಸ್ಯೆಗೆ ಶೀಘ್ರ ಪರಿಹಾರ ನೀಡಲಾಗುವುದು ಎಂದು ಹೇಳಿದ್ದಾರೆ.
"2018-19 ರ ನಂತರ ಕೊಡಗಿನ ಕೆಲ ಕಡೆಗಳಲ್ಲಿ ಭೂ ಕುಸಿತ ಉಂಟಾಗುತ್ತಿದೆ. ಈ ಕುರಿತು ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ ಕೊಡಗಿನಲ್ಲಿ ಎಲ್ಲೆಲ್ಲಿ ಭೂ ಕುಸಿತ ಉಂಟಾಗುವ ಸಾಧ್ಯತೆ ಇದೆ ಎಂದು ಅಧ್ಯಯನ ನಡೆಸಿ ವರದಿ ನೀಡಿದ್ದಾರೆ. ಈ ವರದಿ ಆಧರಿಸಿ ಸಂಪರ್ಕ ರಸ್ತೆ ಭಾಗಗಳಲ್ಲಿ ಎಲ್ಲೆಲ್ಲೆ ಭೂ ಕುಸಿತ ಸಮಸ್ಯೆ ಇದೆ ಎಂದು ಗುರುತಿಸಿ ಪ್ರಸ್ತಾವನೆ ಸಲ್ಲಿಸುವಂತೆ ಸ್ಥಳೀಯ ಶಾಸಕರಿಗೆ ಹಾಗೂ ಜಿಲ್ಲಾಧಿಕಾರಿಗೆ ತಿಳಿಸಲಾಗಿದೆ. ಭೂ ಕುಸಿತ ಪ್ರದೇಶಗಳ ಕಾಮಗಾರಿಗೆ ಕಂದಾಯ ಇಲಾಖೆ 15 ರಿಂದ 20 ಕೋಟಿ ಹಣ ನೀಡಲಿದೆ " ಎಂದು ಸಚಿವ ಕೃಷ್ಣ ಭೈರೇಗೌಡ ಭರವಸೆ ನೀಡಿದ್ದಾರೆ.

ನೈಸರ್ಗಿಕ ವಿಕೋಪದ ಹಣ ಬಳಸಿ
2018-19ರ ಕೊಡಗು ನೈಸರ್ಗಿಕ ವಿಕೋಪದ ಸಂದರ್ಭದಲ್ಲಿ ಬಿಡುಗಡೆ ಮಾಡಿದ ಹಣವನ್ನು ಅಧಿಕಾರಿಗಳು ಇನ್ನೂ ಖರ್ಚು ಮಾಡದ ಬಗ್ಗೆ ಸಚಿವ ಕೃಷ್ಣ ಭೈರೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ. "ಪ್ರಕೃತಿ ವಿಕೋಪಕ್ಕೆ ನೀಡಿದ ಹಣವನ್ನು ಈವರೆಗೆ ಖರ್ಚು ಮಾಡದೆ ಇರುವುದು ಸರಿಯಲ್ಲ. ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಶೀಘ್ರವಾಗಿ ಮುಗಿಸಿರಿ, ಈ ಹಣದಲ್ಲಿ ರಸ್ತೆ ದುರಸ್ಥಿ ಕಾಮಗಾರಿಗಳನ್ನು ನಡೆಸಿ" ಎಂದು ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.
"ಕೊಡಗು ಜಿಲ್ಲಾಧಿಕಾರಿ ಖಾತೆಯಲ್ಲಿ 56 ಕೋಟಿ ರೂಪಾಯಿ ಹಣವಿದೆ. ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಒಟ್ಟಾರೆ 540 ಕೋಟಿ ರೂ. ಹಣವಿದೆ. ಇನ್ನೂ ಹೆಚ್ಚುವರಿ ಹಣ ಬೇಕಿದ್ದರೆ ಅದನ್ನೂ ಬಿಡುಗಡೆ ಮಾಡಲು ಸರ್ಕಾರ ಸಿದ್ಧವಾಗಿದೆ. ಒಟ್ಟಾರೆ ಅಧಿಕಾರಿಗಳು ಜಾಗೃತರಾಗಿ ಮಳೆ ಅನಾಹುತ ನಡೆಯದಂತೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ಇದೇ ಕಾರಣಕ್ಕೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಕೊಡಗು ಪ್ರವಾಸ ಕೈಗೊಳ್ಳಲಾಗಿದೆ" ಎಂದು ವಿವರಿಸಿದ್ದಾರೆ.
ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದೆ. ಜುಲೈ.28 ರ ವರೆಗೂ ಮಳೆ ಮುಂದುವರೆಯುವ ಸಾಧ್ಯತೆ ಇದೆ. ಹಾರಂಗಿ, ಹೇಮಾವತಿ, ಕಪಿಲಾ ಹಾಗೂ ಕೃಷ್ಣರಾಜಸಾಗರ ಅಣೆಕಟ್ಟೆಗಳಿಗೆ 60 ರಿಂದ 70 ಸಾವಿರ ಕ್ಯೂಸೆಕ್ ನೀರು ಹರಿದುಬರುತ್ತಿದ್ದು, ಅಣೆಕಟ್ಟೆಗಳು ಶೇ.50 ರಷ್ಟು ತುಂಬಿವೆ ಎಂದು ಸಚಿವ ಕೃಷ್ಣ ಭೈರೇಗೌಡ ಮಾಹಿತಿ ನೀಡಿದ್ದಾರೆ.
ಉತ್ತರ ಒಳನಾಡಿನಲ್ಲೂ ಕಟ್ಟೆಚ್ಚರ!
ಈ ವರ್ಷ ಉತ್ತರ ಒಳನಾಡಿನಲ್ಲೂ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಕಲಬುರಗಿ, ಬೀದರ್‌ನಲ್ಲಿ ಅತ್ಯಧಿಕ ಮಳೆಯಾಗಿದೆ. ಮುಂದಿನ ಕೆಲ ದಿನಗಳ ಕಾಲ ಬೀದರ್, ಕಲಬುರಗಿ, ವಿಜಯಪುರ ಹಾಗೂ ಬೆಳಗಾವಿಯಲ್ಲಿ ಸಾಧಾರಣಕ್ಕಿಂತ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ವರದಿಯಿದೆ. ಹೀಗಾಗಿ ಈ ಭಾಗದಲ್ಲೂ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.












Click it and Unblock the Notifications