ಪ್ರವಾಸಿಗರನ್ನು ಕೈಬೀಸಿ ಕರೆಯಲಿವೆ ಮಡಿಕೇರಿ ಕೋಟೆ-ಅರಮನೆ
ಮಡಿಕೇರಿ, ಜೂನ್ 30: ಕೊನೆಗೂ ಕೊಡಗಿನ ಮುಖ್ಯ ಪಟ್ಟಣ ಮಡಿಕೇರಿಯಲ್ಲಿ ಕೊಡಗು ರಾಜರ ಆಡಳಿತಾವಧಿಯಲ್ಲಿ ನಿರ್ಮಿಸಲಾಗಿರುವ ಕೋಟೆ ಮತ್ತು ಅರಮನೆಗೆ ಕಾಯಕಲ್ಪದೊಂದಿಗೆ ರಕ್ಷಣೆ ದೊರೆಯುವ ಲಕ್ಷಣಗಳು ಕಂಡು ಬಂದಿದೆ.
ಭಾರತೀಯ ಪುರಾತತ್ವ ಇಲಾಖೆಗೊಳಪಟ್ಟ ಮಡಿಕೇರಿ ಕೋಟೆ ಮತ್ತು ಅರಮನೆಯು ಸರಕಾರಿ ಇಲಾಖೆಗಳ ಭವನವಾಗಿ ಏರ್ಪಟ್ಟಿತ್ತಲ್ಲದೆ, ಸರ್ಕಾರದ ನಿರ್ಲಕ್ಷ್ಯಕ್ಕೊಳಗಾಗಿತ್ತು. ಕೋಟೆಯೊಳಗೆ ಮತ್ತು ಅರಮನೆ ಸೇರಿದಂತೆ ಆವರಣದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸೇರಿದಂತೆ ನ್ಯಾಯಾಲಯ ಹಾಗೂ ಹಲವು ಇಲಾಖೆಗಳ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದವು. ಕೋಟೆ ಮತ್ತು ಅರಮನೆಯನ್ನು ನೋಡಲೆಂದು ದೂರದಿಂದ ಬರುವ ಪ್ರವಾಸಿಗರು ಇಲ್ಲಿನ ನಿರ್ಲಕ್ಷ್ಯವನ್ನು ನೋಡಿ ಹಿಡಿಶಾಪ ಹಾಕಿಕೊಂಡು ಹೋಗುತ್ತಿದ್ದರು.
ಕೊಡಗಿನ ಪ್ರಮುಖ ಪ್ರವಾಸಿ ತಾಣ ಮಾತ್ರವಲ್ಲದೆ ಇತಿಹಾಸದ ಕುರುಹುವಾಗಿ ಉಳಿದಿರುವ ಕೋಟೆ ಮತ್ತು ಅರಮನೆಯ ರಕ್ಷಣೆ ಮತ್ತು ಅಭಿವೃದ್ಧಿ ಮಾಡುವ ಮೂಲಕ ಪ್ರವಾಸಿ ತಾಣವನ್ನಾಗಿ ಮಾಡಬೇಕೆಂಬ ಒತ್ತಾಯಗಳು ಮೇಲಿಂದ ಮೇಲೆ ಕೇಳಿ ಬರುತ್ತಲೇ ಇದ್ದವು.

ಹಾಗೆ ನೋಡಿದರೆ ಮಡಿಕೇರಿಗೆ ಜಿಲ್ಲಾಧಿಕಾರಿಯಾಗಿ ಬಂದಿದ್ದ ಅನುರಾಗ್ ತಿವಾರಿ ಅವರು ಇದರತ್ತ ಹೆಚ್ಚಿನ ಒಲವು ತೋರಿದ್ದರು. ಹಾಗೆಯೇ 2014ರಲ್ಲಿ ಭಾರತೀಯ ಪುರಾತತ್ವ ಇಲಾಖೆಯ ಬೆಂಗಳೂರು ವಲಯದ ಅಧೀಕ್ಷಕ ಟಿ.ಎಂ.ಕೇಶವ ಹಾಗೂ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಅಭಿವೃದ್ಧಿ ಪಡಿಸಲು ಯೋಜನೆ ತಯಾರಿಸುವಂತೆ ಒತ್ತಡ ತಂದಿದ್ದರು. ತದನಂತರ ಅವರು ವರ್ಗಾವಣೆಯಾಗುತ್ತಿದ್ದಂತೆಯೇ ಆ ಯೋಜನೆ ನೆನೆಗುದಿಗೆ ಬಿದ್ದಿತು.
ಇದೀಗ ಭಾರತೀಯ ಪುರಾತತ್ವ ಇಲಾಖೆಯ ನಿರ್ದೇಶನದಂತೆ ಇಲ್ಲಿದ್ದ ಕಾರಾಗೃಹ, ಜಿಪಂ ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿ ಎಲ್ಲವನ್ನೂ ಬೇರೆಡೆಗೆ ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ. ಜತೆಗೆ ಕೋಟೆಯ ಒತ್ತುವರಿಯಾದ ಜಾಗವನ್ನು ವಶಪಡಿಸಿಕೊಂಡು ಕೋಟೆಯ ಸುತ್ತ ಕಬ್ಬಿಣದ ಬೇಲಿ ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದೆ.

ಸದ್ಯ ನಡೆಯುತ್ತಿರುವ ಕಾಮಗಾರಿಯ ಯೋಜನೆಯನ್ನು ಕೇಂದ್ರ ರೂಪಿಸಿದ್ದು, ಇಲ್ಲಿ ಒಂದಿಷ್ಟು ಅಭಿವೃದ್ಧಿ ಕಾರ್ಯಗಳು ಕೂಡ ನಡೆಯಲಿವೆ. ಇನ್ನು ದೂರದಿಂದ ಬರುವ ಪ್ರವಾಸಿಗರಿಗೆ ವಾಹನ ನಿಲುಗಡೆಗೆ ಸೂಕ್ತ ಸ್ಥಳವಿಲ್ಲದ ಕಾರಣ ಕೋಟೆ ಆವರಣದ ಹಿಂಭಾಗದಲ್ಲಿ ಕೋಟೆ ಮಹಿಳಾ ವಿವಿಧೋದ್ದೇಶ ಸಂಘದ ಕಟ್ಟಡವಿರುವ ಜಾಗದಲ್ಲಿ ಪ್ರವಾಸಿಗರ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡುವ ಕಾರ್ಯವೂ ನಡೆಯುತ್ತಿದೆ. ಇನ್ನು ಶೌಚಾಲಯದ ಅಗತ್ಯತೆ ಇರುವ ಕಾರಣ ಶೌಚಾಲಯದ ನಿರ್ಮಾಣ ಕಾಮಗಾರಿಯೂ ಪ್ರಗತಿಯಲ್ಲಿದೆ.
ಮಡಿಕೇರಿಯ ಕೋಟೆ ಮತ್ತು ಅರಮನೆ ಇತರೆಡೆಗಳಿಗೆ ಹೋಲಿಸಿದರೆ ವಿಭಿನ್ನ ಮತ್ತು ವಿಶಿಷ್ಟವಾಗಿದ್ದು, ಹೆಮ್ಮೆಯೂ ಹೌದು ಇಂತಹ ತಾಣ ಇದುವೆರೆಗೆ ಸರ್ಕಾರಿ ಭವನವಾಗಿಯೇ ಉಳಿದು ಹೋಗಿತ್ತು. 1956ರಲ್ಲಿ ಪ್ರತ್ಯೇಕ ರಾಜ್ಯವಾಗಿದ್ದ ಕೊಡಗು ವಿಶಾಲ ಮೈಸೂರಿನೊಂದಿಗೆ ವಿಲೀನವಾದ ಬಳಿಕ ಕೋಟೆಯೊಳಗಿದ್ದ ಅರಮನೆ ಜಿಲ್ಲಾಧಿಕಾರಿ ಕಚೇರಿಯಾಯಿತಲ್ಲದೆ, ಇದರ ಸುತ್ತಲೂ ಹಲವು ಕಚೇರಿ, ನ್ಯಾಯಾಲಯಗಳು ಆರಂಭವಾದವು. ಬಳಿಕ ಪಕ್ಕದಲ್ಲೇ ಪ್ರತ್ಯೇಕ ಕಟ್ಟಡ ಕಟ್ಟಿ ನ್ಯಾಯಾಲಯ ಆರಂಭವಾಯಿತು. ಆದರೆ ಇದೀಗ ಎಲ್ಲವೂ ಇಲ್ಲಿಂದ ಬೇರೆಡೆಗೆ ಸ್ಥಳಾಂತರಗೊಳ್ಳಲಿದ್ದು, ಪ್ರಕ್ರಿಯೆ ಪ್ರಗತಿಯಲ್ಲಿದೆ. ಎಲ್ಲವೂ ನಿಗದಿಯಂತೆ ನಡೆದಿದ್ದೇ ಆದರೆ ಮುಂದಿನ ದಿನಗಳಲ್ಲಿ ಮಡಿಕೇರಿ ಕೋಟೆ ಮತ್ತು ಅರಮನೆ ಅಭಿವೃದ್ಧಿಗೊಂಡು ಪ್ರವಾಸಿಗರ ಮನಸೆಳೆಯುವ ಮೂಲಕ ಪ್ರವಾಸಿ ತಾಣವಾಗಿ ಉಳಿಯುವುದರಲ್ಲಿ ಸಂಶಯವಿಲ್ಲ.












Click it and Unblock the Notifications