Madikeri Dasara: ಮಡಿಕೇರಿ ದಸರಾ ಸ್ಥಳೀಯ ಕಲಾವಿದರ ಸಮಸ್ಯೆಗೆ ಪರಿಹಾರ ಸಿಗುತ್ತಾ?

ಮಡಿಕೇರಿ, ಸೆಪ್ಟೆಂಬರ್‌ 12: ಮೈಸೂರಿನಲ್ಲಿ ನಡೆಯುವ ವಿಶ್ವವಿಖ್ಯಾತ ದಸರಾದಂತೆ ಮಡಿಕೇರಿ ದಸರಾದಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರಲಾಗುತ್ತಿದ್ದು, ವರ್ಷದಿಂದ ವರ್ಷಕ್ಕೆ ಜನಪ್ರಿಯ ದಸರಾವಾಗಿ ಗಮನಸೆಳೆಯುತ್ತಾ ಬರುತ್ತಿದೆ. ಮಡಿಕೇರಿ ದಸರಾ ವೀಕ್ಷಿಸಲೆಂದೇ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸಲಾಗುತ್ತಿದೆ. ಆದರೆ ಕಲಾವಿದರಿಗೆ ನೀಡುವ ಸಂಭಾವನೆ ತೀರಾ ಕಡಿಮೆಯಾಗಿದ್ದು, ಸಂಭಾವನೆ ಹೆಚ್ಚಿಸುವುದರೊಂದಿಗೆ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವಂತೆ ಮನವಿ ಮಾಡಲಾಗುತ್ತಿದೆ.

ಈ ನಡುವೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿರುವ ಸ್ಥಳೀಯ ಕಲಾವಿದರು ತಮ್ಮ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಮುಂದಿಟ್ಟಿದ್ದಾರೆ. ಅದು ಏನೆಂದರೆ? ಪ್ರತಿ ಬಾರಿ ಮಡಿಕೇರಿ ದಸರಾ ಉತ್ಸವದಲ್ಲಿ ಸ್ಥಳೀಯ ಕಲಾವಿದರು ದೂರದ ಊರಿನಿಂದ ಬಂದರೂ ಅವರ ಪ್ರಯಾಣ ಭತ್ಯೆಗೂ ಕೂಡ ಸಾಲದಷ್ಟೂ ಸಂಭಾವನೆಯನ್ನು ನೀಡಿ ಕಳುಹಿಸುತ್ತಾರೆ. ಈ ಬಗ್ಗೆ ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿಯವರನ್ನು ಪ್ರಶ್ನಿಸಿದರೆ ನಮಗೆ ನೀಡುವ ಎಂಟು ಲಕ್ಷ ಅನುದಾನದಲ್ಲಿ ಹತ್ತು ದಿನಗಳ ಕಾರ್ಯಕ್ರಮವನ್ನು ನಡೆಸಬೇಕಾಗುತ್ತದೆ. ಆದ್ದರಿಂದ ಹೆಚ್ಚಿನ ಸಂಭಾವನೆಯನ್ನು ಕೊಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ.

Madikeri Dasara 2024 Will The Problem Of Local Artists Be Solved In Madikeri Dasara

ಸರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ನಾಡಿನಲ್ಲಿ ಕಲೆ ಸಾಹಿತ್ಯ ಸಂಸ್ಕೃತಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮಡಿಕೇರಿ ದಸರಾ ಉತ್ಸವಕ್ಕೆ ಒಂದು ಕೋಟಿ ಹಣವನ್ನು ಬಿಡುಗಡೆಗೊಳಿಸುತ್ತದೆ. ಕಲೆ ಸಾಹಿತ್ಯ ಸಂಸ್ಕೃತಿಗೆ ಮೀಸಲಿಡಬೇಕಾದ ಈ ಹಣವು ಬೇರೆ ಬೇರೆ ರೂಪದಲ್ಲಿ ಖರ್ಚುಗಳು ಹೆಚ್ಚಾಗುವುದರಿಂದ ಸಾಂಸ್ಕೃತಿಕ ಸಮಿತಿಗೆ ಕೇವಲ ಅಂದಾಜು ಎಂಟು ಲಕ್ಷ ಮಾತ್ರ ನೀಡಲಾಗುತ್ತದೆ.

ಸೋಜಿಗದ ವಿಚಾರವೆಂದರೆ ಶಾಮಿಯಾನ ಅಲಂಕಾರಕ್ಕೆ 40 ಲಕ್ಷ ರೂಪಾಯಿಗಳಿಗೂ ಹೆಚ್ಚು ಹಣ ವೆಚ್ಚ ಮಾಡುತ್ತಿದ್ದು ಅದೇ ಶಾಮಿಯಾನದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಹತ್ತು ದಿನಕ್ಕೆ 8 ಲಕ್ಷ ಮಾತ್ರ ನೀಡಲಾಗುತಿದೆ.

Madikeri Dasara 2024 Will The Problem Of Local Artists Be Solved In Madikeri Dasara

ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸಿ

ಈ ಬಾರಿ ದಸರಾ ಉತ್ಸವ ಸಂದರ್ಭದಲ್ಲಿ ಸಾಂಸ್ಕೃತಿಕ ಸಮಿತಿಗೆ ಹೆಚ್ಚಿನ ಅನುದಾನವನ್ನು ನೀಡುವ ಮೂಲಕ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಸಂಭಾವನೆಯನ್ನು ನೀಡುವಂತೆ ಕೊಡಗಿನ ಹಲವು ಕಲಾವಿದರುಗಳು ಕೋರಿಕೊಂಡಿದ್ದಾರೆ. ಕೆಲವು ವರ್ಷಗಳು ಸ್ಥಳೀಯ ಕಲಾವಿದರಿಗೆ ಹಣ ಕಳುಹಿಸುತ್ತೇವೆ ಎಂದು ಹೇಳಿ ಹಣವನ್ನು ಕೂಡ ನೀಡಿರುವುದಿಲ್ಲ. ಸರ್ಕಾರದ ಅನುದಾನ ಸದ್ಬಳಕೆಯಾಗಬೇಕು, ಐತಿಹಾಸಿಕ ಮಡಿಕೇರಿ ದಸರಾದಲ್ಲಿ ಜಗ ಮುಗಿಸುವ ವಿದ್ಯುತ್ ಅಲಂಕಾರದೊಂದಿಗೆ ಸ್ಥಳೀಯ ಪ್ರತಿಭೆಗಳು ಕೂಡ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಮಿಂಚಲು ಈ ವೇದಿಕೆ ಬುನಾದಿಯಾಗಬೇಕು.

ಸ್ಥಳೀಯ ಕಾರ್ಯಕ್ರಮ ನಡೆಸಿದರೆ ಹೆಚ್ಚು ಜನ ಸೇರಲ್ಲ ಎಂಬ ಕಾರಣಕ್ಕಾಗಿ ಸ್ಥಳೀಯ ಕಲಾವಿದರಿಗೆ ಅಲ್ಪಸಮಯ ಪ್ರತಿಭೆ ಪ್ರದರ್ಶಿಸುವ ಅವಕಾಶ ನೀಡುತ್ತಾರೆ. ಆದರೆ ಸ್ಥಳೀಯ ಮಕ್ಕಳ ಕಾರ್ಯಕ್ರಮಕ್ಕೆ ಅವರ ಪೋಷಕರು ಸೇರಿದಂತೆ ಹೆಚ್ಚಿನ ಕಲಾಸಕ್ತರು ಆಗಮಿಸುವುದನ್ನು ಸಮಿತಿಯವರು ಗಮನಿಸಿದರು ಕೂಡ ಅವಕಾಶ ನೀಡುತ್ತಿಲ್ಲ ಎಂಬುದು ಹಲವರ ದೂರು ಕೂಡ ಆಗಿದೆ. ನಮ್ಮ ಆಚಾರ ವಿಚಾರ ಸಂಸ್ಕೃತಿ ಮತ್ತು ಜಾನಪದ ಸೊಗಡನ್ನು ಬಿಂಬಿಸುವ ಕಾರ್ಯಕ್ರಮಗಳು ಈ ಬಾರಿ ಹೆಚ್ಚು ಪ್ರದರ್ಶನಗೊಳ್ಳಬೇಕು, ಶಾಸ್ತ್ರೀಯ ನೃತ್ಯ, ಕರ್ನಾಟಕ ಸಂಗೀತ, ಯಕ್ಷಗಾನ, ಜಿಲ್ಲೆಯ ವಿವಿಧ ಜನಾಂಗಗಳ ಸಾಂಪ್ರದಾಯಕ ನೃತ್ಯಗಳು ಪ್ರದರ್ಶನವಾಗಬೇಕು.

Madikeri Dasara 2024 Will The Problem Of Local Artists Be Solved In Madikeri Dasara

ರಂಗಮಂದಿರ ನಿರ್ಮಾಣಕ್ಕೆ ಮುಂದಾಗಲಿ

ಕೊಡಗಿನ ಕಲಾವಿದರು ಗಳಿಗೆ ಮಡಿಕೇರಿ ಹಾಗೂ ಗೋಣಿಕೊಪ್ಪಲಿನಲ್ಲಿ ನಡೆಯುವ 10 ದಿನಗಳ ದಸರಾ ಸಂದರ್ಭದಲ್ಲಿ ಮಾತ್ರ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಅವಕಾಶವಿದೆ. ಜಿಲ್ಲೆಯಲ್ಲಿ ಸುಸಜ್ಜಿತ ರಂಗಮಂದಿರದ ನಿರ್ಮಾಣದ ಕೂಗಿಗೆ ನಾಲ್ಕು ದಶಕಗಳು ಕಳೆದಿವೆ. ಇದುವರೆಗೆ ಬಂದ ಜನಪ್ರತಿನಿಧಿಗಳು ಈ ಬಗೆ ಗಮನ ಹರಿಸಲೇ ಇಲ್ಲ. ಈ ಬಾರಿಯಾದರೂ ನಮ್ಮ ಜನಪ್ರತಿನಿಧಿಗಳು ಜಿಲ್ಲೆಯ 5 ತಾಲೂಕಿನಲ್ಲಿ ರಂಗಮಂದಿರದ ನಿರ್ಮಾಣಕ್ಕೆ ಮುಂದಾಗಲಿ ಎಂಬುದು ಕಲಾವಿದರ ಆಶಯವಾಗಿದೆ.

ಈ ಬಾರಿ ಸರಕಾರದ ನಿಯಮದಂತೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಹೆಚ್ಚು ಒತ್ತು ನೀಡದಿದ್ದರೆ, ಸ್ಥಳೀಯ ಕಲಾವಿದರಿಗೆ ಹೆಚ್ಚು ಅವಕಾಶ ಹಾಗೂ ಸಂಭಾವನೆಯನ್ನು ನೀಡದಿದ್ದರೆ. ಕನ್ನಡ ಮತ್ತು ಸಂಸ್ಕೃತಿ ಸಚಿವರಿಗೆ ಹಾಗೂ ಇಲಾಖೆಗೆ ದೂರು ನೀಡುವ ಮೂಲಕ ನಿಯಮವನ್ನು ಉಲ್ಲಂಘಿಸುವ ಬಗೆ ಹೋರಾಟ ನಡೆಸಲಾಗುವುದೆಂದು ಕಲಾವಿದರು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ಈ ಸಂಬಂಧ ಜಿಲ್ಲಾಡಳಿತ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+