Madikeri Dasara 2024: ಮಡಿಕೇರಿ ದಸರಾ ಆರಂಭಕ್ಕೆ ಕ್ಷಣಗಣನೆ-ಸಿದ್ಧತೆ ಹೇಗಿದೆ ಗೊತ್ತಾ?
Madikeri Dasara 2024: ಮೈಸೂರು ದಸರಾ ಜಂಬೂಸವಾರಿ ಮುಕ್ತಾಯವಾಗುತ್ತಿದ್ದಂತೆಯೇ ಜನ ಸಾಗರ ಮಡಿಕೇರಿಯ ಕಡೆಗೆ ಹರಿದು ಬರುವುದು ಹಿಂದಿನಿಂದಿಲೂ ನಡೆದು ಬಂದಿದೆ, ಅದು ಇಂದಿಗೂ ಮುಂದುವರೆದಿದೆ. ಅದರಲ್ಲೂ ಇತ್ತೀಚೆಗಿನ ವರ್ಷಗಳಲ್ಲಿ ಮಡಿಕೇರಿ ದಸರಾಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಇಮ್ಮಡಿಗೊಂಡಿದ್ದರಿಂದ ಜನಸಾಗರವೇ ಮಡಿಕೇರಿ ದಸರಾದಲ್ಲಿ ನೆರೆಯಲಿದೆ. ಹೀಗಾಗಿಯೇ ಮೈಸೂರು ದಸರಾವನ್ನು ಸ್ವಾಗತಿಸಿದರೆ, ಮಡಿಕೇರಿ ಬೀಳ್ಕೊಡುತ್ತದೆಂಬ ಮಾತು ಬಂದಿದೆ.
ಮಡಿಕೇರಿ ದಸರಾ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಕಂಡಿದ್ದು, ಇತ್ತೀಚೆಗಿನ ವರ್ಷಗಳಲ್ಲಿ ಮೈಸೂರಿನಂತೆ ಒಂಬತ್ತು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲ್ಪಡುತ್ತಿರುವುದು ವಿಶೇಷವಾಗಿದೆ. ಎರಡ್ಮೂರು ದಶಕಗಳ ಹಿಂದೆ ಹಳೆಯ ಖಾಸಗಿ ಬಸ್ ನಿಲ್ದಾಣದಲ್ಲಿ ವೇದಿಕೆ ನಿರ್ಮಿಸುವುದರೊಂದಿಗೆ ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮವನ್ನು ಅಲ್ಲಿ ಹಮ್ಮಿಕೊಳ್ಳಲಾಗುತ್ತಿತ್ತು. ಎಲ್ಲಾ ಮಂಟಪಗಳು ನಿರ್ಧಿಷ್ಟ ಸಮಯದಲ್ಲಿ ಹಾದು ಹೋಗುವಂತೆಯೂ ಅಲ್ಲದೆ, ಉತ್ತಮ ಕಲಾಕೃತಿ ಹೊಂದಿದ ಮಂಟಪಗಳಿಗೆ ಬಹುಮಾನಗಳನ್ನು ನೀಡುವ ಸಂಪ್ರದಾಯವೂ ಜಾರಿಯಲ್ಲಿತ್ತು.

ಮೊದಲೆಲ್ಲ ದಶ ಮಂಟಪಗಳ ಮೆರವಣಿಗೆಯಲ್ಲಿ ಯಾವುದೇ ಧಾರ್ಮಿಕ ಶಿಸ್ತು ಇರಲಿಲ್ಲ. ಆದರೆ ಅದನ್ನು ಕಾಲೇಜು ರಸ್ತೆಯ ರಾಮಮಂದಿರವು ರೂಪಿಸಿತು. ಅದೇನೆಂದರೆ ವಿಜಯದಶಮಿ ದಿನದಂದು ನಡೆಯುವ ಮೆರವಣಿಗೆಯಲ್ಲಿ ಪೇಟೆ ಶ್ರೀರಾಮ ಮಂದಿರದ ಮಂಟಪ ಮಂಗಳವಾದ್ಯ ಹಾಗೂ ಕಳಶದೊಂದಿಗೆ ಬಾರದ ಹೊರತು ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ಕರಗ ಹೊರಡುವಂತಿಲ್ಲ. ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ಕರಗ ಹೊರಡದ ಹೊರತು ಉತ್ಸವದ ಅಂಗವಾಗಿ ಪ್ರದರ್ಶಿಸಲ್ಪಡುವ ಕರಗಗಳಾಗಲೀ, ಮಂಟಪಗಳಾಗಲೀ ಮೆರವಣಿಗೆಯಲ್ಲಿ ಬರುವಂತಿಲ್ಲ ಎಂಬ ನಿಯಮ ರೂಢಿಗೆ ತರಲಾಯಿತು.
ಮೆರವಣಿಗೆಯಲ್ಲಿದೆ ಧಾರ್ಮಿಕ ವಿಧಿವಿಧಾನ: ಎಲ್ಲಾ ಕರಗಗಳು ಹಾಗೂ ಮಂಟಪಗಳು ಶ್ರೀದಂಡಿನ ಮಾರಿಯಮ್ಮನ ಪೂಜೆಯನ್ನು ಸ್ವೀಕರಿಸಿದ ನಂತರವೇ ಬನ್ನಿ ಕಡಿಯಲು ಮೆರವಣಿಗೆಯಲ್ಲಿ ಸಾಗಬೇಕು. ಆದ್ದರಿಂದ ಅಂದು ಪೇಟೆಯ ಶ್ರೀರಾಮಮಂದಿರದಿಂದ ಕಳಶ ಹೊತ್ತ ಪಲ್ಲಕ್ಕಿ ಮೆರವಣಿಗೆಯಲ್ಲಿ ಶ್ರಿ ಚೌಟಿ ಮಾರಿಯಮ್ಮ ದೇವಾಲಯಕ್ಕೆ ತೆರಳಿ ಅಲ್ಲಿ ಕರಗ ಪೂಜೆಯನ್ನು ಸ್ವೀಕರಿಸಿ, ಬಳಿಕ ಶ್ರೀ ಕಂಚಿಕಾಮಾಕ್ಷಮ್ಮ ದೇವಾಲಯಕ್ಕೆ ಹೋಗಿ ಅಲ್ಲಿಯೂ ಪೂಜೆಯನ್ನು ಸ್ವೀಕರಿಸಿ ಅಲ್ಲಿಂದ ದಂಡಿನ ಮಾರಿಯಮ್ಮ ದೇವಾಲಯಕ್ಕೆ ಆಗಮಿಸುತ್ತದೆ.
ಅದೇ ಸಮಯಕ್ಕೆ ಕೋಟೆ ಮಾರಿಯಮ್ಮ ದೇವಾಲಯದ ಕರಗ ಕೂಡ ಅಲ್ಲಿಗೆ ಬರುತ್ತದೆ. ಬಳಿಕ ಪೇಟೆ ರಾಮಮಂದಿರದ ಕಳಶ ಪೂಜೆ ನಡೆದು ಮೆರವಣಿಗೆ ಸಾಗುತ್ತದೆ. ಇನ್ನು ಇಂದು (ಅಕ್ಟೋಬರ್ 12) ನಗರದ ವಿವಿಧ ದೇವಾಲಯಗಳಾದ ಶ್ರೀ ಪೇಟೆ ರಾಮಮಂದಿರ, ಶ್ರೀಕೋಟೆಮಾರಿಯಮ್ಮ, ಶ್ರೀ ಕಂಚಿಕಾಮಾಕ್ಷಿಯಮ್ಮ, ಶ್ರೀ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ಶ್ರೀ ದಂಡಿನ ಮಾರಿಯಮ್ಮ, ಶ್ರೀ ಕೋದಂಡರಾಮ ಮಂದಿರ, ಶ್ರೀ ಚೌಡೇಶ್ವರಿ, ಶ್ರೀದೇಚೂರು ರಾಮಮಂದಿರ, ಕರವಲೆ ಬಾಡಗದ ಶ್ರೀ ಭಗವತಿ ಹಾಗೂ ಶ್ರೀ ಕೋಟೆಗಣಪತಿ ದೇವಾಲಯಗಳ ದಶಮಂಟಪಗಳು ಮೆರವಣಿಗೆಯಲ್ಲಿ ಸಾಗುತ್ತಿವೆ.
ಈ ಹಿಂದೆ ಕೇವಲ ಐದೋ ಹತ್ತೋ ಸಾವಿರ ರೂಪಾಯಿಯಲ್ಲಿ ನಿರ್ಮಾಣ ಆಗುತ್ತಿದ್ದ ಮಂಟಪಗಳು ಇಂದು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿವೆ. ಇನ್ನು ಜಗಮಗಿಸುವ ವಿದ್ಯುತ್ ದೀಪಗಳೊಂದಿಗೆ ಹೈಟೆಕ್ ಮಾದರಿಯ ಚಲನವಲನಗಳನ್ನೊಳಗೊಂಡ ಪೌರಾಣಿಕ ಕಥಾಹಂದರದ ಕಲಾಕೃತಿಗಳು ಮೆರವಣಿಗೆಯಲ್ಲಿ ಸಾಗುತ್ತಿದ್ದರೆ, ಇಡೀ ನಗರ ವಿದ್ಯುತ್‌ದೀಪಗಳಿಂದ ಸಿಂಗಾರಗೊಂಡು ಕಣ್ಮನ ಸೆಳೆಯುತ್ತದೆಯಲ್ಲದೆ, ದೇವಲೋಕವೇ ಧರೆಗೆ ಇಳಿದು ಬಂದಂತೆ ಭಾಸವಾಗುತ್ತದೆ.
ನಗರದ ಗಾಂಧಿ ಮೈದಾನದಲ್ಲಿರುವ ಬೃಹತ್ ವೇದಿಕೆಯಲ್ಲಿ ಜನೋತ್ಸವ ಕಾರ್ಯಕ್ರಮಗಳು ನಡೆದರೆ, ನಗರದಾದ್ಯಂತ ರಾತ್ರಿ ಪೂರ್ತಿ ಅಲ್ಲಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಇನ್ನು ಮೈಸೂರು ದಸರಾವನ್ನು ವೀಕ್ಷಿಸಿದ ಬಳಿಕ ಪ್ರವಾಹೋಪಾದಿಯಲ್ಲಿ ಜನ ಮಡಿಕೇರಿ ದಸರಾವನ್ನು ವೀಕ್ಷಿಸಲು ಬರುವುದರಿಂದ ಮೈಸೂರಿನಿಂದ ಮಡಿಕೇರಿಗೆ ಅಂದು ವಿಶೇಷ ಬಸ್ ವ್ಯವಸ್ಥೆಯನ್ನು ಕೂಡ ಮಾಡಲಾಗುತ್ತದೆ.
ಒಮ್ಮೆ ಮಡಿಕೇರಿಯ ಮಂಜಿನಲ್ಲಿ ಮಿಂದೆದ್ದು ದಸರಾ ವೀಕ್ಷಿಸಿ ಹೋದವರು ಆ ಸುಂದರ ಕ್ಷಣವನ್ನು ಎಂದೆಂದಿಗೂ ಮರೆಯಲಾರರು. ಆದ್ದರಿಂದಲೇ ಮಡಿಕೇರಿ ದಸರಾದ ವೈಭವ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುತ್ತಿದೆ ಎಂದರೆ ತಪ್ಪಾಗಲಾರದು.












Click it and Unblock the Notifications