ಕೊಡಗು ಜಿಲ್ಲೆಗೆ ಸಚಿವ ಸ್ಥಾನ, ಮುಖ್ಯಮಂತ್ರಿಗಳ ನಡೆ ಕುತೂಹಲ
ಮಡಿಕೇರಿ, ಏಪ್ರಿಲ್ 22: ಮಡಿಕೇರಿ, ವಿರಾಜಪೇಟೆ ಎರಡು ವಿಧಾನಸಭಾ ಕ್ಷೇತ್ರಗಳನ್ನು ಮಾತ್ರ ಹೊಂದಿರುವ ಜಿಲ್ಲೆ ಕೊಡಗು. 2024ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಭದ್ರಕೋಟೆಯಲ್ಲಿಯಾಗಿದ್ದ ಕೊಡಗು ಜಿಲ್ಲೆಯನ್ನು ಕಾಂಗ್ರೆಸ್ ತನ್ನ ವಶಕ್ಕೆ ಪಡೆದುಕೊಂಡಿದೆ. ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಗಳಿಸಿದ್ದು, ಸಚಿವ ಸ್ಥಾನ ಮಾತ್ರ ಸಿಕ್ಕಿಲ್ಲ. ಕೊಡಗು ಜಿಲ್ಲೆಗೆ ಸಚಿವ ಸ್ಥಾನ ಬೇಕು ಎಂಬ ಕೂಗು ಮತ್ತೆ ಕೇಳಿ ಬರುತ್ತಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಸಹ ಸಲ್ಲಿಕೆ ಮಾಡಲಾಗಿದೆ.
ಕೊಡಗು ಜಿಲ್ಲೆಯ ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನ ಡಾ. ಮಂತರ್ ಗೌಡ ಗೆಲುವು ಸಾಧಿಸಿದ್ದಾರೆ. ವಿರಾಜಪೇಟೆ ಕ್ಷೇತ್ರದಿಂದ ವಕೀಲರು ಆಗಿರುವ ಎ. ಎಸ್. ಪೊನ್ನಣ್ಣ ಜಯಗಳಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಎ. ಎಸ್. ಪೊನ್ನಣ್ಣ ಅವರನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿ ನೇಮಕ ಮಾಡಿಕೊಂಡಿದ್ದಾರೆ.

ಕೊಡಗು ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು. ವಿರಾಜಪೇಟೆ ಕ್ಷೇತ್ರದ ಶಾಸಕ ಎ. ಎಸ್. ಪೊನ್ನಣ್ಣ ಅವರನ್ನು ಸಚಿವರನ್ನಾಗಿ ಮಾಡಬೇಕು ಎಂದು ಬೇಡಿಕೆ ಇಡಲಾಗಿದೆ. ಈ ಕುರಿತು ಕೊಡವ ಸಮಾಜದವರು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಯಾಗಿ ಮನವಿ ಸಲ್ಲಿಕೆ ಮಾಡಿದ್ದಾರೆ.
ಮನವಿಯಲ್ಲಿ ಏನಿದೆ?: ಮುಖ್ಯಮಂತ್ರಿಗಳಿಗೆ ಸಲ್ಲಿಕೆ ಮಾಡಿರುವ ಮನವಿಯು ವಿರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ. ಎಸ್. ಪೊನ್ನಣ್ಯ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಬೇಡಿಕೆ ಎಂಬ ವಿಷಯವನ್ನು ಒಳಗೊಂಡಿದೆ.
ಕೂಡವರು ಸೂಕ್ಷ್ಮ ಅಲ್ಪಸಂಖ್ಯಾತ ಜನಸಂಖ್ಯೆಯಾಗಿದ್ದು, ಅವರು ಅತ್ಯಂತ ಕಡಿಮೆ ಸಂಖ್ಯೆಯಲ್ಲಿದ್ದರೂ ಕ್ರೀಡೆ, ದೇಶದ ಸಶಸ್ತ್ರಪಡೆಗಳಲ್ಲಿ ಪ್ರಾತಿನಿಧ್ಯ ಮತ್ತು ರಾಷ್ಟ್ರ ನಿರ್ಮಾಣದ ಇತರ ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಬೆಂಗಳೂರಿನ ಕೊಡವ ಸಮಾಜದ ಸದಸ್ಯರಾದ ನಾವು ವಿನಮ್ರವಾಗಿ ಹೇಳಲು ಬಯಸುತ್ತೇವೆ.
ಬಹಳ ಸಮಯದ ನಂತರ ಕೂಡವರಾದ ಎ. ಎಸ್. ಪೊನ್ನಣ್ಣ ಅವರು ವಿರಾಜಪೇಟೆ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇದಲ್ಲದೆ, ಅವರನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿಯೂ ನೇಮಿಸಲಾಗಿದೆ. ಎ. ಎಸ್. ಪೊನ್ನಣ್ಣ ಅವರು ಅಧಿಕಾರ ವಹಿಸಿಕೊಂಡಾಗಿನಿಂದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿ ತಮ್ಮ ಪಾತ್ರವನ್ನು ನಿರ್ವಹಿಸುವುದರ ಜೊತೆಗೆ ವಿರಾಜಪೇಟೆ ಕ್ಷೇತ್ರಕ್ಕೆ ಅಸಾಧಾರಣ ಕೆಲಸ ಮಾಡುತ್ತಿದ್ದಾರೆ.
ಸೂಕ್ಷ್ಮ ಅಲ್ಪಸಂಖ್ಯಾತ ಜನಸಂಖ್ಯೆಯ ಪ್ರತಿನಿಧಿಯಾಗಿ, ನಮ್ಮ ಪ್ರತಿನಿಧಿ ಎ. ಎಸ್. ಪೊನ್ನಣ್ಣ ಅವರನ್ನು ಮಂತ್ರಿಮಂಡಲಕ್ಕೆ ಸೇರಿಸಿಕೊಳ್ಳಬೇಕು ಮತ್ತು ಗೌರವಾನ್ವಿತ ಸಚಿವ ಸ್ಥಾನವನ್ನು ನೀಡಬೇಕು ಎಂದು ಕೊಡವ ಸಮಾಜ ಬೆಂಗಳೂರು ಆಡಳಿತ ಮಂಡಳಿಯಾಗಿ ನಾವು ವಿನಮ್ರವಾಗಿ ಒತ್ತಾಯಿಸುತ್ತೇವೆ ಎಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಕೆ ಮಾಡಲಾಗಿದೆ.
ಸಿದ್ದರಾಮಯ್ಯ ನಿಲುವು ಕುತೂಹಲ: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳು ಕಳೆಯುತ್ತಿವೆ. ಈಗ ಸಚಿವ ಸಂಪುಟ ಪುನಾರಚನೆ ಮಾತುಗಳು ಸಹ ಕೇಳಿ ಬರುತ್ತಿವೆ. ಇಂತಹ ಸಮಯದಲ್ಲಿ ಕೊಡವ ಸಮಾಜ ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದೆ. ಕೊಡಗು ಜಿಲ್ಲೆಗೆ ಸಚಿವ ಸ್ಥಾನ ಸಿಗಲಿದೆಯೇ? ಎಂದು ಕಾದು ನೋಡಬೇಕಿದೆ.
2023ರ ವಿಧಾನಸಭೆ ಚುನಾವಣೆಯಲ್ಲಿ ವಿರಾಜಪೇಟೆ ಕ್ಷೇತ್ರದಲ್ಲಿ ಎ. ಎಸ್. ಪೊನ್ನಣ್ಣ ಅವರು 83,791 ಮತಗಳನ್ನು ಪಡೆದು ಎದುರಾಳಿ ಬಿಜೆಪಿಯ ಕೆ. ಜಿ. ಬೋಪಯ್ಯ (79,500 ಮತ) ಸೋಲಿಸಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ವಿಧಾನಸಭೆ ಚುನಾವಣೆ ಮುಗಿದು ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೂ ಕೊಡಗು ಜಿಲ್ಲೆಗೆ ಸಚಿವ ಸ್ಥಾನದ ಬೇಡಿಕೆ ಇಡಲಾಗಿತ್ತು. "ಕೊಡಗು ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು. ಜತೆಗೇ ಕೊಡಗಿನವರಿಗೇ ಉಸ್ತುವಾರಿ ಸಚಿವ ಸ್ಥಾನ ನೀಡಬೇಕು" ಎಂದು ವಿಧಾನ ಪರಿಷತ್ತಿನ ನಿಕಟಪೂರ್ವ ಸದಸ್ಯೆ ವೀಣಾ ಅಚ್ಚಯ್ಯ ಒತ್ತಾಯಿಸಿದ್ದರು.












Click it and Unblock the Notifications