Dubare: ಮೂಲ ಸೌಲಭ್ಯ ವಂಚಿತರಾಗಿ ಜೀವನ ಸಾಗಿಸುತ್ತಿರುವ ದುಬಾರೆ ಗಿರಿಜನರು
ಮಡಿಕೇರಿ, ಮೇ 1: ಕಾವೇರಿ ನದಿ ಸೃಷ್ಟಿಯ ದುಬಾರೆ ಪ್ರವಾಸಿ ತಾಣಕ್ಕೆ ಪ್ರವಾಸಿಗರು ಆಗಮಿಸುತ್ತಿದ್ದು, ಬರಿದಾದ ಕಾವೇರಿ ನದಿಯನ್ನೊಮ್ಮೆ ನೋಡಿ ಅಚ್ಚರಿ ಪಟ್ಟರೂ, ಕಲ್ಲಿನಿಂದ ಕಲ್ಲಿಗೆ ಹಾರುತ್ತಾ ದೋಣಿ ಸಹಾಯವಿಲ್ಲದೆ ದುಬಾರೆ ಆನೆ ಶಿಬಿರ ತಲುಪಬಹುದೆಂದು ಖುಷಿಪಡುತ್ತಾರೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಈ ತಾಣ ಸ್ವರ್ಗವಾಗಿ ಗೋಚರಿಸಿದರೂ ಇಲ್ಲಿ ಅನಾದಿ ಕಾಲದಿಂದ ನೆಲೆ ನಿಂತು ಬದುಕು ಕಟ್ಟಿಕೊಂಡಿರುವ ಗಿರಿಜನರಿಗೆ ಮಾತ್ರ ನರಕವಾಗಿಯೇ ಪರಿಣಮಿಸಿದೆ.
ಸಾಮಾನ್ಯ ದಿನಗಳಲ್ಲಿ ಇಲ್ಲಿಗೆ ಆಗಮಿಸುವ ಪ್ರವಾಸಿಗರು ತುಂಬಿ ಹರಿಯುವ ನದಿಯಲ್ಲಿ ದೋಣಿಯಲ್ಲಿ ವಿಹರಿಸಿ, ಆನೆ ಸಫಾರಿ ಮಾಡಿ ಒಂದಷ್ಟು ಹೊತ್ತು ನಿಸರ್ಗದ ಮಡಿಲಲ್ಲಿ ಮೈಮರೆತು ನೀರಾಟವಾಡಿ ತಮ್ಮ ಊರುಗಳಿಗೆ ಹಿಂದಿರುಗುತ್ತಾರೆ. ಹೀಗೆ ಬರುವವರಿಗೆ ಇದು ಖುಷಿಕೊಡುವ ತಾಣವಾದರೂ ಇಲ್ಲಿಯೇ ಬದುಕು ಕಟ್ಟಿಕೊಂಡವರಿಗೆ ಅದರಲ್ಲೂ ಗಿರಿಜನರಿಗೆ ಮಾತ್ರ ನರಕವೇ.

ಇವತ್ತು ದುಬಾರೆ ಆನೆಶಿಬಿರದಲ್ಲಿ ಮರಿ ಆನೆಗಳು ಸೇರಿದಂತೆ ಹಲವು ಸಾಕಾನೆಗಳಿವೆ. ಇವುಗಳೇ ಇಲ್ಲಿನ ಪ್ರಮುಖ ಆಕರ್ಷಣೆ. ದೂರದಿಂದ ಹೆಚ್ಚಿನ ಪ್ರವಾಸಿಗರು ಈ ಆನೆಗಳನ್ನು ನೋಡಲೆಂದೇ ಬರುತ್ತಾರಲ್ಲದೆ, ಕೆಲವರು ಆನೆ ಸವಾರಿ ಮಾಡಿದರೆ ಮತ್ತೆ ಕೆಲವರು ಅವುಗಳಿಗೆ ನೀಡುವ ಆಹಾರ ಹಾಗೂ ಗಜಮಜ್ಜನವನ್ನು ನೋಡಿ ಆನಂದಪಡುತ್ತಾರೆ. (ಈಗ ನದಿಯಲ್ಲಿ ನೀರಿಲ್ಲದ ಕಾರಣ ಸಾಕಾನೆಗಳಿಗೆ ಸ್ನಾನ ಮಾಡಿಸುವುದು ಕೂಡ ಕಷ್ಟವಾಗಿದೆ. ಅದು ಆಚೆಗಿರಲಿ.)
ಮೂಲ ಸೌಲಭ್ಯ ವಂಚಿತ ಗಿರಿಜನರು
ದುಬಾರೆಗೆ ನಮ್ಮ ದೇಶವಲ್ಲದೆ, ವಿದೇಶಿ ಪ್ರವಾಸಿಗರೂ ಆಗಮಿಸುತ್ತಾರೆ. ಇಷ್ಟೊಂದು ಖ್ಯಾತಿ ಪಡೆದ ಪ್ರವಾಸಿ ತಾಣ ಮಾತ್ರ ಗಿರಿಜನರ ಪಾಲಿಗೆ ಮೂಲಭೂತ ಸೌಕರ್ಯದಿಂದ ವಂಚಿತವಾದ ನೆಲೆಯಾಗಿದೆ. ಇಲ್ಲಿ ಅನಾದಿಕಾಲದಿಂದಲೂ ನೆಲೆಯೂರಿದವರು ಈ ಸ್ಥಳವನ್ನು ಬಿಟ್ಟು ಹೋಗಲು ತಯಾರಿಲ್ಲ. ಹೀಗಾಗಿ ಇಲ್ಲಿದ್ದುಕೊಂಡೇ ಬಹಳಷ್ಟು ಮಂದಿ ಕೂಲಿ ಕೆಲಸಕ್ಕಾಗಿ ಹೊರಗೆ ಹೋಗುತ್ತಾರೆ.
ದುಬಾರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅರಣ್ಯ ಸಿಬ್ಬಂದಿಗಳು ಮತ್ತು ಗಿರಿಜನರು ವಿದ್ಯುತ್ ಸಂಪರ್ಕವಿಲ್ಲದೆ ಜೀವನ ಸಾಗಿಸುತ್ತಿದ್ದರು. ಈ ಬಗ್ಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೆ ಕಳೆದ ಕೆಲವು ಸಮಯಗಳ ಹಿಂದೆ ಭೇಟಿ ನೀಡಿದ ಶಾಸಕ ಎ.ಎಸ್.ಪೊನ್ನಣ್ಣ ಇಲ್ಲಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಟ್ಟಿದ್ದಾರೆ. ಹೀಗಾಗಿ ಇಲ್ಲಿರುವ ವಸತಿಗೃಹಗಳಿಗೆ ವಿದ್ಯುತ್ ಸೌಲಭ್ಯ ಕಾಣುವಂತಾಗಿದೆ.

ಇಲ್ಲಿ ಜೀವನ ಮಾಡುವುದೇ ಸವಾಲ್
ದುಬಾರೆ ದ್ವೀಪ ಪ್ರದೇಶವಾಗಿದ್ದು, ಸುತ್ತಲೂ ಕಾವೇರಿ ನದಿ ಆವರಿಸಿದೆ. ಇಲ್ಲಿ ಸುಮಾರು 76 ಕುಟುಂಬಗಳು ವಾಸಿಸುತ್ತಿದ್ದು, 200ರಷ್ಟು ಜನಸಂಖ್ಯೆಯಿದೆ. ಈ ಪೈಕಿ 25 ಮಂದಿ ಅರಣ್ಯ ಇಲಾಖೆಯಲ್ಲಿ ಖಾಂ ಉದ್ಯೋಗಿಗಳಾಗಿದ್ದರೆ 17 ಮಂದಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಉಳಿದವರು ಕೂಲಿ ಕೆಲಸವನ್ನು ಆಶ್ರಯಿಸಿದ್ದಾರೆ. ಕೂಲಿ ಕೆಲಸಕ್ಕೆ ಹೋಗಬೇಕಾದರೆ ನದಿಯನ್ನು ದಾಟಿ ಹೋಗಬೇಕು. ಅದೊಂದು ಸವಾಲ್ ಎಂದರೆ ತಪ್ಪಾಗದು.
ಇಲ್ಲಿಂದ ಗಿರಿಜನರನ್ನು ಒಕ್ಕಲೆಬ್ಬಿಸುವ ಹುನ್ನಾರ ಹಿಂದೆಯಿಂದಲೂ ನಡೆಯುತ್ತಿದೆ. ಆದರೆ ಗಿರಿಜನರು ಬಗ್ಗದೆ ಇಲ್ಲಿಯೇ ಗಟ್ಟಿಯಾಗಿ ನೆಲೆಯೂರಿದ್ದಾರೆ. ವಾಸ್ತವ್ಯ ಹೂಡಿರುವ ಪ್ರದೇಶ ಅರಣ್ಯ ವಲಯವಾಗಿರುವುದರಿಂದ ಇವರಿಗೆ ಸೂಕ್ತ ದಾಖಲೆಯಿಲ್ಲದೆ ಯಾವುದೇ ಸರ್ಕಾರದ ಸೌಲಭ್ಯಗಳು ದೊರೆಯುತ್ತಿಲ್ಲ. ಸದ್ಯ ಇಲ್ಲಿನ ಗಿರಿಜನರು ಗುಡಿಸಲಲ್ಲೇ ಜೀವನ ಸಾಗಿಸಿಕೊಂಡು ಹೋಗುತ್ತಿದ್ದಾರೆ. ಇಲ್ಲಿ ಶೌಚಾಲಯ ಸೇರಿದಂತೆ ಯಾವ ಮೂಲ ಸೌಕರ್ಯವೂ ಇಲ್ಲದಾಗಿದೆ. ಎಲ್ಲದಕ್ಕೂ ಕಾವೇರಿ ನದಿಯನ್ನು ದೋಣಿಯಲ್ಲಿ ದಾಟಿ ಹೋಗಬೇಕಾಗಿರುವುದರಿಂದ ಅನಾರೋಗ್ಯ ಅಥವಾ ಇನ್ನೇನಾದರು ಅವಘಢ ಸಂಭವಿಸಿದರೆ ದೇವರೇ ಗತಿ.
ಇಲ್ಲಿರುವ ಹಾಡಿಜನ ಪ್ರಾರ್ಥನೆ ಏನು?
ನಾವು ಅನಾದಿಕಾಲದಿಂದಲೂ ಕಾಡು ಹಾಗೂ ಪ್ರಾಣಿಗಳೊಂದಿಗೆ ಬೆಳೆದು ಬಂದಿದ್ದೇವೆ. ಇಲ್ಲಿ ಬಿಟ್ಟು ಬೇರೆ ಕಡೆ ಬದುಕಲು ನಮ್ಮಿಂದ ಸಾಧ್ಯವಿಲ್ಲ ನಾವಿದ್ದಲ್ಲಿಯೇ ಮೂಲಭೂತ ಸೌಕರ್ಯ ಕಲ್ಪಿಸಿಕೊಡಿ ಎನ್ನುವುದು ಮಾವುತರು ಸೇರಿದಂತೆ ಹಾಡಿಜನರ ಪ್ರಾರ್ಥನೆಯಾಗಿದೆ. ಆನೆಶಿಬಿರದಲ್ಲಿ ಬ್ರಿಟೀಷರ ಕಾಲದಲ್ಲಿ ಕಟ್ಟಿದ ಪ್ರವಾಸಿ ಮಂದಿರವಿದ್ದು ಇದೊಂದು ಆಕರ್ಷಣೆಯಾಗಿದೆ.

ದುಬಾರೆ ಸುಮಾರು 12,757 ಎಕರೆ ವಿಸ್ತೀರ್ಣ ಹೊಂದಿದ್ದು ಈ ಅರಣ್ಯ ಪ್ರದೇಶದಲ್ಲಿ ತಲತಲಾಂತರದಿಂದ ಗಿರಿಜನರು ವಾಸಿಸುತ್ತಾ ಬಂದಿದ್ದಾರೆ. ಈಗ ಸುಮಾರು 76 ಕುಟುಂಬ ಅಲ್ಲಿ ವಾಸಿಸುತ್ತಿದೆ. ಕೆಲವರು ಹಲವು ವರ್ಷಗಳ ಹಿಂದೆ ಸರ್ಕಾರ ಕಟ್ಟಿದ ಶಿಥಿಲಾವಸ್ಥೆಯ ಮನೆಗಳಲ್ಲಿ ವಾಸವಾಗಿದ್ದರೆ, ಮತ್ತೆ ಕೆಲವರು ಇದರಲ್ಲಿದ್ದರೆ ಯಾವಾಗ ಬಿದ್ದು ಹೋಗುತ್ತದೆಯೋ ಎಂಬ ಭಯದಿಂದ ಗುಡಿಸಲು ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ.
ನಮಗೊಂದು ತೂಗು ಸೇತುವೆ ನಿರ್ಮಿಸಿಕೊಡಿ
ನದಿ ದಾಟಿ ಹೋಗಿ ವಿದ್ಯಾಭ್ಯಾಸ ಕಲಿಯಲು ಹಾಡಿ ಮಕ್ಕಳಿಗೆ ಸಾಧ್ಯವಾಗದ ಹಿನ್ನಲೆಯಲ್ಲಿ ಅಲ್ಲಿ 5ನೇ ತರಗತಿವರೆಗೆ ಶಾಲೆಯನ್ನು ತೆರೆಯಲಾಗಿದ್ದು ಕೆಲವೇ ಕೆಲವು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಆದರೆ 5ನೇ ತರಗತಿ ಬಳಿಕ ಬೇರೆ ಕಡೆ ಹೋಗಬೇಕಾಗಿರುವುದರಿಂದ ಅಲ್ಲಿ ಓದಲಾಗದೆ ಮರಳಿ ಬಂದು ಅಪ್ಪ ಅಮ್ಮಂದಿರ ಜೊತೆಯಲ್ಲಿ ತೋಟ ಕೆಲಸಕ್ಕೆ ಹೋಗುತ್ತಾರೆ. ಇಲ್ಲಿನ ಶಾಲೆಗೆ ಬರುವ ಶಿಕ್ಷಕರು ನದಿ ದಾಟಿ ಬರಬೇಕು ಅದು ಸುಲಭದ ಕೆಲಸವಲ್ಲ. ಏಕೆಂದರೆ ಇಲ್ಲಿನ ಕಾವೇರಿ ನದಿಯನ್ನು ದಾಟಲು ಇರುವ ದೋಣಿಗಳೆಲ್ಲವೂ ಖಾಸಗಿಯವರದ್ದಾಗಿದ್ದು, ಅವರು ನಮ್ಮ ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಜೊತೆಗೆ ಕನಿಷ್ಟ ಜನರಾಗುವ ತನಕ ಕಾಯಲೇ ಬೇಕಾಗಿದೆ.
ಇನ್ನು ಅಂಗನವಾಡಿ ಕೇಂದ್ರದಲ್ಲಿ ಕೆಲವೇ ಕೆಲವು ಮಕ್ಕಳಿದ್ದಾರೆ. ವಸ್ತುಗಳೆಲ್ಲವನ್ನು ಅಲ್ಲಿಗೆ ಸಾಗಿಸುವುದು ತ್ರಾಸದಾಯಕವೇ.. ಇಲ್ಲಿ ಸೋಲಾರ್ ಅಳವಡಿಸಲಾಗಿದೆಯಾದರೂ ಅದು ನಿರ್ವಹಣೆಯಿಲ್ಲದೆ ಸೊರಗಿದೆ. ಕಾವೇರಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸುವುದು ಸಾಧ್ಯವಾಗದ ಮಾತು ಹೀಗಾಗಿ ಕನಿಷ್ಟ ತೂಗು ಸೇತುವೆಯನ್ನಾದರೂ ನಿರ್ಮಿಸಿಕೊಡಿ ಎನ್ನುವುದು ಇಲ್ಲಿನವರ ಮನವಿಯಾಗಿದೆ. ಅದು ಸಾಧ್ಯವಾಗುತ್ತೋ ಗೊತ್ತಿಲ್ಲ.
ಮುಖ್ಯವಾಹಿನಿಗೆ ದುಬಾರೆ ಜನ ಬರ್ತಾರಾ?
ಒಟ್ಟಾರೆ ಅರಣ್ಯದಲ್ಲಿ ನೆಲೆ ನಿಂತ ಗಿರಿಜನ ಕುಟುಂಬ ಇವತ್ತಿನ ಆಧುನಿಕ ಪ್ರಪಂಚದಲ್ಲಿಯೂ ಯಾವುದೇ ರೀತಿಯ ಸೌಕರ್ಯವಿಲ್ಲದೆ ಜೀವನ ಸಾಗಿಸುತ್ತಿರುವುದು ಶೋಚನೀಯ ಸಂಗತಿ. ಸಮಸ್ಯೆಗೆ ಪರಿಹಾರ ಕಂಡುಕೊಂಡು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕಾಗಿದೆ. ಅದು ಸಾಧ್ಯವಾಗುತ್ತಾ ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಉಳಿದು ಹೋಗಿದೆ.












Click it and Unblock the Notifications