Monsoon Rain: ಕೊಡಗಿನಲ್ಲಿ ತಗ್ಗಿತು ಮುಂಗಾರು ಮಳೆ ಅಬ್ಬರ
ಮಡಿಕೇರಿ, ಆಗಸ್ಟ್ 10: ಕೊಡಗು ಜಿಲ್ಲೆಯಲ್ಲಿ ನೈಋತ್ಯ ಮುಂಗಾರು ಮಳೆಯ ಅಬ್ಬರ ಕಡಿಮೆಯಾಗಿದೆ. ಜುಲೈನಲ್ಲಿ ಜಿಲ್ಲೆಯಲ್ಲಿ ಭಾರೀ ಮಳೆಯಾಗಿತ್ತು. ಆದರೆ ಆಗಸ್ಟ್ ತಿಂಗಳಿನಲ್ಲಿ ಸಾಧಾರಣೆ ಮಳೆ ಸುರಿಯುತ್ತಿದೆ. ಕಳೆದ 24 ಗಂಟೆಯಲ್ಲಿಯೂ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಮುಂದಿನ 10 ರಿಂದ 15 ದಿನಗಳ ಕಾಲ ಸಾಕಷ್ಟು ಎಚ್ಚರವಹಿಸಬೇಕಿದೆ ಎಂದು ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಜಿಲ್ಲಾಡಳಿತ ನೀಡಿರುವ ಮಾಹಿತಿಯಂತೆ ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಜಿಲ್ಲೆಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 3.56 ಮಿ. ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 7.88 ಮಿ. ಮೀ. ಮಳೆಯಾಗಿತ್ತು. ಕೊಡಗು ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗೆ ಸುರಿದ ಮಳೆ 2320.92 ಮಿ. ಮೀ., ಕಳೆದ ವರ್ಷ ಇದೇ ಅವಧಿಯಲ್ಲಿ 1,220.60 ಮಿ. ಮೀ. ಮಳೆಯಾಗಿತ್ತು ಎಂದು ಅಂಕಿ ಸಂಖ್ಯೆಗಳು ಹೇಳಿವೆ.

ಎಲ್ಲಿ, ಎಷ್ಟು ಮಳೆಯಾಗಿದೆ?: ಅಂಕಿ ಅಂಶಗಳನ್ನು ನೋಡಿದರೆ ಮಡಿಕೇರಿ ತಾಲೂಕಿನಲ್ಲಿ ಸುರಿದ ಸರಾಸರಿ ಮಳೆ 13.98 ಮಿ. ಮೀ. ಆಗಿದೆ. ತಾಲೂಕಿನಲ್ಲಿ ಜನವರಿಯಿಂದ ಇಲ್ಲಿಯವರೆಗೆ 3,256.52 ಮಿ. ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2071.75 ಮಿ. ಮೀ. ಮಳೆಯಾಗಿತ್ತು.
ಇನ್ನು ವಿರಾಜಪೇಟೆ ತಾಲೂಕಿನಲ್ಲಿ 24 ಗಂಟೆಯಲ್ಲಿ ಸುರಿದ ಸರಾಸರಿ ಮಳೆ 2.40 ಮಿ. ಮೀ. ಆಗಿದೆ. ತಾಲೂಕಿನಲ್ಲಿ ಜನವರಿಯಿಂದ ಇಲ್ಲಿಯ ತನಕ 2,138.50 ಮಿ. ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 936.16 ಮಿ. ಮೀ. ಮಳೆಯಾಗಿತ್ತು.
ಪೊನ್ನಂಪೇಟೆ ತಾಲೂಕಿನಲ್ಲಿ 24 ಗಂಟೆಗಳಲ್ಲಿ ಸುರಿದ ಸರಾಸರಿ ಮಳೆ 0.65 ಮಿ. ಮೀ., ಜನವರಿಯಿಂದ ಇಲ್ಲಿಯವರೆಗೆ ತಾಲೂಕಿನಲ್ಲಿ 2192.15 ಮಿ. ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 975.65 ಮಿ. ಮೀ. ಮಳೆಯಾಗಿತ್ತು ಎಂದು ಅಂಕಿ ಅಂಶಗಳು ಹೇಳಿವೆ.
ಸೋಮವಾರಪೇಟೆ ತಾಲೂಕಿನಲ್ಲಿ 24 ಗಂಟೆಯಲ್ಲಿ ಸುರಿದ ಸರಾಸರಿ ಮಳೆ 0.75 ಮಿ. ಮೀ., ತಾಲೂಕಿನಲ್ಲಿ ಜನವರಿಯಿಂದ ಇಲ್ಲಿಯ ತನಕ ಸುರಿದ ಮಳೆ 2626.81 ಮಿ. ಮೀ. ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1340.49 ಮಿ. ಮೀ. ಮಳೆಯಾಗಿತ್ತು.
ಕುಶಾಲನಗರದಲ್ಲಿ 24 ಗಂಟೆಯಲ್ಲಿ ಮಳೆಯಾಗಿಲ್ಲ. ಕಳೆದ ವರ್ಷ ಇದೇ ದಿನ 1 ಮಿ. ಮೀ. ಮಳೆಯಾಗಿತ್ತು. ತಾಲೂಕಿನಲ್ಲಿ ಜನವರಿಯಿಂದ ಇಲ್ಲಿಯ ತನಕ 1,390.60 ಮಿ. ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 778.95 ಮಿ. ಮೀ. ಮಳೆಯಾಗಿತ್ತು.
ಉಳಿದಂತೆ ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ, ಮಡಿಕೇರಿ ಕಸಬಾ 8, ನಾಪೋಕ್ಲು 1.80, ಸಂಪಾಜೆ 32.50, ಭಾಗಮಂಡಲ 13.60, ವಿರಾಜಪೇಟೆ 4.80, ಹುದಿಕೇರಿ 1.50, ಪೊನ್ನಂಪೇಟೆ 1.10, ಸೋಮವಾರಪೇಟೆ 1, ಶಾಂತಳ್ಳಿ 2 ಮಿ. ಮೀ. ಆಗಿದೆ.
ಹಾರಂಗಿ ಜಲಾಶಯ ಭರ್ತಿ: ಆಗಸ್ಟ್ 9ರ ಮಾಹಿತಿಯಂತೆ ಕೊಡಗು ಜಿಲ್ಲೆಯ ಹಾರಂಗಿ ಜಲಾಶಯ ಭರ್ತಿಯಾಗಿದೆ. ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಸದ್ಯದ ನೀರಿನ ಮಟ್ಟ 2856.52 ಅಡಿಗಳು. ಡ್ಯಾಂಗೆ ಒಳಹರಿವು 1770 ಕ್ಯುಸೆಕ್, ಹೊರ ಹರಿವು ನದಿಗೆ 3200 ಕ್ಯುಸೆಕ್, ನಾಲೆಗೆ 300 ಕ್ಯುಸೆಕ್.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ತಾಲೂಕು ಮಟ್ಟದ ಅಧಿಕಾರಿಗಳ ಜೊತೆ ಸಭೆಯನ್ನು ನಡೆಸಿದರು. "ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು-ಮೂರು ದಿನಗಳಿಂದ ಮಳೆ ಕಡಿಮೆಯಾಗಿದೆ ಎಂದು ಅಧಿಕಾರಿಗಳು ಮೈಮರೆಯಬಾರದು. ಮುಂದಿನ ಮೂರು-ನಾಲ್ಕು ದಿನಗಳ ನಂತರ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದ್ದರಿಂದ ಭೂಕುಸಿತ ಹಾಗೂ ಪ್ರವಾಹ ಪೀಡಿತ ಸೂಕ್ಷ್ಮ ಪ್ರದೇಶಗಳಲ್ಲಿ ಅಗತ್ಯ ಕಟ್ಟೆಚ್ಚರ ವಹಿಸಬೇಕು" ಎಂದರು.












Click it and Unblock the Notifications