ವಿರಾಜಪೇಟೆ ಕ್ಷೇತ್ರದಲ್ಲಿ ನಡೆಯದ ಜಾತಿ ರಾಜಕೀಯ: ಬಿಜೆಪಿ ಭದ್ರಕೋಟೆಗೆ ಲಗ್ಗೆಯಿಡುತ್ತಾ ಕಾಂಗ್ರೆಸ್?

ಮಡಿಕೇರಿ, ಏಪ್ರಿಲ್‌ 21: ಬಿಜೆಪಿಯ ಭದ್ರಕೋಟೆ ಕೊಡಗಿನಲ್ಲಿ ಮಡಿಕೇರಿ ಮತ್ತು ವಿರಾಜಪೇಟೆ ಕ್ಷೇತ್ರದಲ್ಲಿ ಬಿಜೆಪಿ ಬಲವಾಗಿ ನೆಲೆಯೂರಿದ್ದು, ಮಡಿಕೇರಿಯಲ್ಲಿ ಅಪ್ಪಚ್ಚು ರಂಜನ್ ಮತ್ತು ವಿರಾಜಪೇಟೆ ಯಲ್ಲಿ ಕೆ.ಜಿ.ಬೋಪಯ್ಯ ಅವರು ಗೆಲುವು ಸಾಧಿಸುತ್ತಾ ಬಂದಿದ್ದಾರೆ. ಈ ಬಾರಿ ಕಮಲದ ಭದ್ರಕೋಟೆಗೆ ಕಾಂಗ್ರೆಸ್ ಲಗ್ಗೆಯಿಡುತ್ತಾ ಎಂಬ ಕುತೂಹಲ ಆರಂಭವಾಗಿದೆ.

ಮಡಿಕೇರಿ ಕ್ಷೇತ್ರಕ್ಕಿಂತಲೂ ವಿರಾಜಪೇಟೆ ಕ್ಷೇತ್ರದಲ್ಲಿ ಭಾರೀ ಪೈಪೋಟಿ ಏರ್ಪಟ್ಟಿದ್ದು, ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಎ.ಎಸ್.ಪೊನ್ನಣ್ಣ ಅವರು ಬಿಜೆಪಿಯ ಅಭ್ಯರ್ಥಿ ಕೆ.ಜಿ.ಬೋಪಯ್ಯ ಅವರಿಗೆ ತೀವ್ರ ಪೈಪೋಟಿ ನೀಡುವ ಸಾಧ್ಯತೆಗಳು ಕ್ಷೇತ್ರದಲ್ಲಿ ಕಂಡು ಬರುತ್ತಿವೆ. ಕಳೆದ ಎರಡು ದಶಕಗಳಿಂದ ಬಿಜೆಪಿ ಗೆಲ್ಲುತ್ತಲೇ ಬರುತ್ತಿದೆ. ಕಾಂಗ್ರೆಸ್ ಕೋಟೆಗೆ ಲಗ್ಗೆಯಿಟ್ಟ ಬಿಜೆಪಿ ತಳಮಟ್ಟದಿಂದಲೇ ಗಟ್ಟಿಯಾಗಿದೆ.

Karnataka Election 2023: Virajpet Constituency Analysis

ಇನ್ನು ಕ್ಷೇತ್ರದಲ್ಲಿ ಜಾತಿ, ಧರ್ಮ, ವ್ಯಕ್ತಿಯನ್ನು ಮೀರಿ ಪಕ್ಷವನ್ನು ಗೆಲ್ಲಿಸಿಕೊಂಡು ಬರಲಾಗುತ್ತಿದೆ. ಆದರೆ ಈ ಬಾರಿ ಬಿಜೆಪಿಯನ್ನು ಪ್ರತಿನಿಧಿಸುತ್ತಿರುವ ಶಾಸಕ ಕೆ.ಜಿ.ಬೋಪಯ್ಯ ಅವರನ್ನು ಸೋಲಿಸಲೇ ಬೇಕೆಂದು ಹಠತೊಟ್ಟಿರುವುದು ಎದ್ದು ಕಾಣಿಸುತ್ತಿದೆ. ಕಾಂಗ್ರೆಸ್ ನಿಂದ ಕೊಡವ ಸಮುದಾಯದ ಅಭ್ಯರ್ಥಿ ಹಿರಿಯ ರಾಜಕಾರಣಿಯಾಗಿದ್ದ ದಿ.ಎ.ಕೆ.ಸುಬ್ಬಯ್ಯ ಅವರ ಪುತ್ರರಾಗಿರುವ ಎ.ಎಸ್.ಪೊನ್ನಣ್ಣ ಅವರು ಕಣಕ್ಕಿಳಿದಿದ್ದು, ಒಂದಷ್ಟು ನಾಯಕರು ಇವರ ಬೆನ್ನಿಗೆ ನಿಂತಿದ್ದಾರೆ.

ಕೈ ಅಭ್ಯರ್ಥಿಗೆ ಬಲಬಂದಿದ್ದೇಗೆ?

ಜೆಡಿಎಸ್‌ ಪಕ್ಷ ಜಿಲ್ಲೆಯಲ್ಲಿ ಬೆಳೆಸಲೇ ಬೇಕು ಎಂದು ಪ್ರಯತ್ನ ಮಾಡುತ್ತಾ ಬಂದಿದ್ದ ಸಂಕೇತ್ ಪೂವಯ್ಯ ಅವರು ತಮ್ಮ ಒಂದಷ್ಟು ಬೆಂಬಲಿಗರೊಂದಿಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದು, ಕಾಂಗ್ರೆಸ್ ಅಭ್ಯರ್ಥಿ ಎ.ಎಸ್.ಪೊನ್ನಣ್ಣ ಅವರಿಗೆ ಒಂದಷ್ಟು ಬಲಬಂದಂತಾಗಿದೆ.

Karnataka Election 2023: Virajpet Constituency Analysis

ವಿರಾಜಪೇಟೆ ಕ್ಷೇತ್ರ ಹಿಂದಿನಿಂದಲೂ ಕಾಂಗ್ರೆಸ್ ಅನ್ನೇ ಪ್ರತಿನಿಧಿಸುತ್ತಿದ್ದ ಕ್ಷೇತ್ರವಾಗಿತ್ತು. ಸುಮಾರು 20 ವರ್ಷಗಳ ಹಿಂದೆ ಕಾಂಗ್ರೆಸ್ ಪಾರುಪತ್ಯ ಸಾಧಿಸಿತ್ತು. ಇಂತಹ ಕ್ಷೇತ್ರದಲ್ಲಿ ಬಿಜೆಪಿ ಭದ್ರವಾಗಿ ನೆಲೆಯೂರಿದೆ ಎಂದರೆ ಅದರ ಹಿಂದೆ ಬಿಜೆಪಿ ನಾಯಕರ ಶ್ರಮ ಇಲ್ಲದಿಲ್ಲ. ಇಪ್ಪತ್ತು ವರ್ಷಗಳ ಹಿಂದೆ ವೀರಾಜಪೇಟೆ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಮೀಸಲು ಕ್ಷೇತ್ರವಾಗಿದ್ದ ವಿರಾಜಪೇಟೆ ಕ್ಷೇತ್ರ ನಂತರ ಸಾಮಾನ್ಯ ಕ್ಷೇತ್ರವಾಗಿ ಪರಿವರ್ತನೆಗೊಂಡಿತು.

ಜಾತಿ ರಾಜಕೀಯಕ್ಕೆ ಸೊಪ್ಪು ಹಾಕದ ಜನ

ಸದ್ಯ ಕ್ಷೇತ್ರದಲ್ಲಿ ಕೊಡವ ಹಾಗೂ ಅರೆ ಭಾಷೆಗೌಡರ ಪ್ರಾಬಲ್ಯ ಹೆಚ್ಚಿದ್ದು, ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತರು, ಮಲಯಾಳಿ ಹಾಗೂ ತುಳುಭಾಷೆ ಮಾತನಾಡುವ ಬಂಟ್ಸ್, ಪೂಜಾರಿ ಹೀಗೆ ಹಲವು ಸಮುದಾಯದವರು ಇಲ್ಲಿದ್ದಾರೆ. ಆದರೆ ಇದುವರೆಗೆ ಇಲ್ಲಿ ಜಾತಿಯನ್ನು ಮೀರಿ ಮತದಾರರು ಬಿಜೆಪಿ ಪಕ್ಷವನ್ನು ಬೆಂಬಲಿಸಿಕೊಂಡು ಬಂದಿದ್ದು, ಇದರಿಂದ ಕೆ.ಜಿ.ಬೋಪಯ್ಯ ಅವರು ಯಾವುದೇ ಅಡ್ಡಿ ಆತಂಕವಿಲ್ಲದೆ ಗೆಲುವು ಸಾಧಿಸುತ್ತಾ ಬರುವಂತಾಗಿದೆ.

Karnataka Election 2023: Virajpet Constituency Analysis

ವಿರಾಜಪೇಟೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಕೆ.ಜಿ.ಬೋಪಯ್ಯ ಅವರು ಅರೆಗೌಡ ಸಮುದಾಯಕ್ಕೆ ಸೇರಿದ್ದು, ಕ್ಷೇತ್ರದಲ್ಲಿ ಹೆಚ್ಚು ಪ್ರಾಬಲ್ಯವಿರುವ ಕೊಡವ ಸಮುದಾಯದವರು ಜಾತಿಯನ್ನು ಬದಿಗೆ ತಳ್ಳಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ ಎಂದರೆ ತಪ್ಪಾಗಲಾರದು. ಈ ಬಾರಿ ಮಾತ್ರವಲ್ಲದೆ, ಈ ಹಿಂದಿನ ಚುನಾವಣೆಗಳಲ್ಲಿಯೂ ಕೆ.ಜಿ.ಬೋಪಯ್ಯ ಅವರ ವಿರುದ್ಧ ಕಾಂಗ್ರೆಸ್ ಕೊಡವ ಸಮುದಾಯದ ಅಭ್ಯರ್ಥಿಯನ್ನೇ ಕಣಕ್ಕಿಳಿಸುತ್ತಾ ಬಂದಿದೆ.

ಪೊನ್ನಣ್ಣರನ್ನು ಕ್ಷೇತ್ರಕ್ಕೆ ಕರೆತಂದಿದ್ದೇಕೆ?

ಬಿಜೆಪಿ ಅಭ್ಯರ್ಥಿಯಾಗಿದ್ದ ಕೆ.ಜಿ.ಬೋಪಯ್ಯ ಅವರಿಗೆ 2013ರಲ್ಲಿ ಕಾಂಗ್ರೆಸ್ಸಿನ ಬಿ.ಟಿ.ಪ್ರದೀಪ್ ಎದುರಾಳಿಯಾದರೂ ಗೆಲುವು ಸಾಧಿಸಲಾಗಲಿಲ್ಲ. 2018 ಕೊಡವ ಸಮುದಾಯದ ಅರುಣ್ ಮಾಚಯ್ಯ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿತ್ತು. ಆಗಲೂ ಬೋಪಯ್ಯನವರೇ ಗೆಲುವು ಪಡೆದಿದ್ದರು. ಇದೀಗ ಮತ್ತೆ ಕೊಡವ ಸಮುದಾಯದ ಎ.ಎಸ್.ಪೊನ್ನಣ್ಣ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ.

ಸದ್ಯಕ್ಕೀಗ ಕಾಂಗ್ರೆಸ್‌ನ ಅಭ್ಯರ್ಥಿ ಎ.ಎಸ್.ಪೊನ್ನಣ್ಣ ಅವರು ಕ್ಷೇತ್ರಕ್ಕೆ ಹೊಸಮುಖ, ರಾಜ್ಯ ರಾಜಕೀಯದಲ್ಲಿ ಹೆಚ್ಚು ಸಕ್ರಿಯರಾಗಿದ್ದ ಪೊನ್ನಣ್ಣ ಅವರನ್ನು ಕ್ಷೇತ್ರಕ್ಕೆ ಕರೆತರಲಾಗಿದೆ. ಬಿಜೆಪಿ ಭದ್ರಕೋಟೆಯನ್ನು ಛಿದ್ರಗೊಳಿಸಲೇ ಬೇಕೆಂಬ ಹಠಕ್ಕೆ ಬಿದ್ದಿರುವ ಎ.ಎಸ್.ಪೊನ್ನಣ್ಣ ಅವರು ಈಗಾಗಲೇ ಪ್ರಮುಖ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತಿದ್ದಾರೆ. ಒಂದಷ್ಟು ಬೆಂಬಲವೂ ಅವರಿಗೆ ವ್ಯಕ್ತವಾಗುತ್ತಿದೆ.

ಕ್ಷೇತ್ರದಲ್ಲಿ ನೇರಾ ನೇರ ಪೈಪೋಟಿ

ಬಿಜೆಪಿಯನ್ನು ಮಣಿಸುವುದು ಅಷ್ಟು ಸುಲಭವೇನಲ್ಲ. ಕಾಂಗ್ರೆಸ್ ಅಭ್ಯರ್ಥಿ ಎ.ಎಸ್.ಪೊನ್ನಣ್ಣ ಅವರ ಪರ ಕ್ಷೇತ್ರದಲ್ಲಿ ಹೊರನೋಟಕ್ಕೆ ಹೆಚ್ಚು ಒಲವು ಕಂಡು ಬರುತ್ತಿದೆಯಾದರೂ ಅದು ಮತವಾಗಿ ಪರಿವರ್ತನೆ ಆಗುತ್ತದಾ ಎನ್ನುವುದೇ ಬಹುಮುಖ್ಯ ಪ್ರಶ್ನೆಯಾಗಿದೆ. ದಿನದಿಂದ ದಿನಕ್ಕೆ ಚುನಾವಣಾ ಕಾವು ಹೆಚ್ಚಾಗುತ್ತಿದೆ. ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರಾ ನೇರ ಪೈಪೋಟಿಯಿದ್ದು, ಬಿಜೆಪಿ ಭದ್ರಕೋಟೆಗೆ ಕಾಂಗ್ರೆಸ್ ಲಗ್ಗೆಯಿಡುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+