• search
  • Live TV
ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವರುಣನ ಮುನಿಸಿನಲ್ಲೂ ಇರ್ಪು ಜಲಧಾರೆಯ ಥಕಥೈ...

|

ಮಡಿಕೇರಿ, ಜುಲೈ 16: ಇಷ್ಟರಲ್ಲಾಗಲೇ ಕೊಡಗಿನಲ್ಲಿ ಮುಂಗಾರು ಚುರುಕುಗೊಂಡು ಬೆಟ್ಟಗುಡ್ಡ, ಕಾಡು, ಕಾಫಿ ತೋಟಗಳ ನಡುವೆಯಿದ್ದ ಜಲಧಾರೆಗಳು ಮೈಕೈ ತುಂಬಿಕೊಂಡು ಥಕಥೈ ಎನ್ನಬೇಕಿತ್ತು. ತನ್ನ ರೌದ್ರನರ್ತನವನ್ನು ನೋಡುಗರ ಮುಂದೆ ತೆರೆದಿಡಬೇಕಿತ್ತು. ಆದರೆ ಅದ್ಯಾಕೋ ಗೊತ್ತಿಲ್ಲ ವರುಣ ಮುನಿಸಿಕೊಂಡಂತೆ ಕಾಣುತ್ತಿದ್ದಾನೆ.

ಪ್ರಾಣಕ್ಕೆ ಕುತ್ತು ತರುವ ಕೊಡಗಿನ ಮೂರು ಜಲಪಾತಗಳು

ಆದರೆ ಅಲ್ಲಲ್ಲಿ ಸ್ವಲ್ಪ ಮಳೆಯಾದ ಕಾರಣ ತಕ್ಕಮಟ್ಟಿಗೆ ಜಲಧಾರೆಗಳು ಚೇತರಿಸಿಕೊಂಡು ತಮ್ಮ ಸೌಂದರ್ಯವನ್ನು ತೆರೆದಿಡುತ್ತಿವೆ. ಸದ್ಯದ ಪರಿಸ್ಥಿತಿಯಲ್ಲಿ ದಕ್ಷಿಣ ಕೊಡಗಿನ ಬ್ರಹ್ಮಗಿರಿ ಬೆಟ್ಟಶ್ರೇಣಿಗಳ ವ್ಯಾಪ್ತಿಗೆ ಬರುವ ಶ್ರೀಮಂಗಲ, ಕುಟ್ಟ, ಬಿರುನಾಣಿ ವ್ಯಾಪ್ತಿಯಲ್ಲಿ ತಕ್ಕಮಟ್ಟಿಗೆ ಮಳೆಯಾಗುತ್ತಿರುವುದರಿಂದ ಬ್ರಹ್ಮಗಿರಿ ಬೆಟ್ಟ ಶ್ರೇಣಿಯಲ್ಲಿ ಜನ್ಮ ತಾಳಿರುವ ಲಕ್ಷ್ಮಣ ತೀರ್ಥ ನದಿಯಲ್ಲಿ ಒಂದಿಷ್ಟು ನೀರು ಕಾಣಿಸಿಕೊಂಡಿದ್ದು, ಈ ನದಿಯಿಂದ ಸೃಷ್ಟಿಯಾದ ಇರ್ಪು ಜಲಪಾತ ಇದೀಗ ಹಾಲ್ನೊರೆಯನ್ನುಕ್ಕಿಸುತ್ತಾ ತನ್ನ ನೋಡಲು ಬರುವ ಪ್ರವಾಸಿಗರ ಮನಸೆಳೆಯುತ್ತಿದೆ.

 ಸೌಮ್ಯ-ರೌದ್ರತೆಯ ಪ್ರದರ್ಶನ

ಸೌಮ್ಯ-ರೌದ್ರತೆಯ ಪ್ರದರ್ಶನ

ನಾಗರಹೊಳೆ ಕಡೆಗೆ ಬಂದವರು ಹಾಗೆಯೇ ಇರ್ಪು ಜಲಪಾತ ನೋಡಿಕೊಂಡು ಹೋಗುವ ಸಲುವಾಗಿ ಬರುತ್ತಾರೆ. ಹಾಗೆ ಬಂದವರಿಗೆ ಇರ್ಪು ಜಲಪಾತ ಅವರ ಆಯಾಸವನ್ನೆಲ್ಲ ಹೊಡೆದೋಡಿಸಿ ಹುರುಪು ತುಂಬುತ್ತದೆ. ಎತ್ತರದ ಗುಡ್ಡದಿಂದ ನೀರು ರಭಸವಾಗಿ ಧುಮುಕುವಾಗ ಅದರಿಂದ ಹಾರಿಬರುವ ನೀರಿನ ಸಿಂಚನ ಮುದ ನೀಡುತ್ತದೆ.

ಇಲ್ಲಿನ ರಾಮೇಶ್ವರ ದೇವಾಲಯದಿಂದ ಮುಂದಕ್ಕೆ ಜಲಧಾರೆಯತ್ತ ಹೆಜ್ಜೆ ಹಾಕುವಾಗಲೇ ಜಲಧಾರೆ ಭೋರ್ಗರೆತ ತನ್ನ ಇರುವನ್ನು ಖಚಿತಪಡಿಸುತ್ತದೆ. ನದಿಗೆ ಅಡ್ಡಲಾಗಿ ಕಟ್ಟಿರುವ ಪುಟ್ಟ ತೂಗು ಸೇತುವೆ ದಾಟಿ ಒಂದೊಂದೇ ಮೆಟ್ಟಿಲನ್ನು ಹತ್ತುತ್ತಾ ಹೋದರೆ ಜಲಧಾರೆಯ ಒಂದೊಂದೇ ನೋಟದ ದರ್ಶನವಾಗುತ್ತದೆ. ಎರಡು ಹಂತದಲ್ಲಿ ಧುಮುಕುವ ಜಲಧಾರೆ ಸೌಮ್ಯ ಮತ್ತು ರೌದ್ರಭಾವ ಎರಡನ್ನೂ ತೆರೆದಿಡುತ್ತದೆ.

 ಇರ್ಪು ಜಲಧಾರೆ ಸೃಷ್ಟಿಯ ಕಥೆ

ಇರ್ಪು ಜಲಧಾರೆ ಸೃಷ್ಟಿಯ ಕಥೆ

ಕೊಡಗಿನಲ್ಲಿ ಹತ್ತಾರು ಜಲಪಾತಗಳಿದ್ದು, ಅವುಗಳ ಪೈಕಿ ಕೆಲವು ಜಲಪಾತಗಳು ಅನಾಹುತಕಾರಿ ಜಲಪಾತಗಳೆಂಬ ಹಣೆಪಟ್ಟಿ ಕಟ್ಟಿಕೊಂಡಿವೆ. ಇಲ್ಲಿ ಹಲವರು ತಮ್ಮ ಜೀವ ಕಳೆದುಕೊಂಡಿದ್ದಾರೆ. ಆದರೆ ಇರ್ಪು ಜಲಪಾತದಲ್ಲಿ ಆ ರೀತಿಯ ದುರ್ಘಟನೆ ನಡೆದಿದ್ದು ಅಪರೂಪ. ಇಷ್ಟಕ್ಕೂ ಇದು ಬರೀ ಜಲಪಾತವಲ್ಲ. ಪವಿತ್ರ ಮತ್ತು ಇಷ್ಟಾರ್ಥ ನೆರವೇರಿಸುವ ಜಲಪಾತ ಎಂದು ಇಲ್ಲಿನ ಜನ ನಂಬುತ್ತಾರೆ. ಇದಕ್ಕೆ ಕಾರಣ, ಇರ್ಪು ಜಲಪಾತದ ಸೃಷ್ಟಿ ಮತ್ತು ಹೆಸರಿನ ಬಗ್ಗೆ ಕೆದಕುತ್ತಾ ಹೋದರೆ ತೆರೆದುಕೊಳ್ಳುವ ರಾಮಾಯಣ.

ರಾವಣ ಸೀತೆಯನ್ನು ಅಪಹರಿಸುತ್ತಾನೆ. ಸೀತೆಯನ್ನು ಹುಡುಕುತ್ತಾ ರಾಮಲಕ್ಷ್ಮಣರು ಬ್ರಹ್ಮಗಿರಿಯ ತಪ್ಪಲಿಗೆ ಬರುತ್ತಾರೆ. ಅಲ್ಲಿಂದ ಮುಂದೆ ನಡೆದರೆ ಅದು ಕೇರಳ. ಈ ವೇಳೆ ಎಲ್ಲರೂ ಮುಂದೆ ನಡೆಯುತ್ತಿದ್ದರೆ, ಲಕ್ಷ್ಮಣ ಮಾತ್ರ ಮುಂದೆ ನಡೆಯದೆ ಅಲ್ಲಿಯೇ ಕುಳಿತು ಬಿಡುತ್ತಾನೆ. ಇದುವರೆಗೆ ಏನೂ ಮಾಡದ ಲಕ್ಷ್ಮಣ ಇವತ್ತೇಕೆ ಈ ರೀತಿ ನಡೆದುಕೊಂಡ ಎಂಬ ಅಚ್ಚರಿ ರಾಮನಿಗಾಗುತ್ತದೆ. ಕೆಲಕಾಲ ಅಲ್ಲಿ ಕೂತ ಲಕ್ಷ್ಮಣ ಆನಂತರ ಅಲ್ಲಿಂದ ಹೊರಡುತ್ತಾನೆ. ಜತೆಗೆ ತಾನು ಹೀಗೆ ಮಾಡಬಾರದಿತ್ತು. ಇದರಿಂದ ಅಣ್ಣ ಶ್ರೀರಾಮನಿಗೆ ಬೇಸರವಾಗಿದೆ ಎಂಬುದು ಲಕ್ಷ್ಮಣನಿಗೆ ಅರಿವಾಗುತ್ತದೆ. ಹೀಗಾಗಿ ನಾನು ತಪ್ಪು ಮಾಡಿಬಿಟ್ಟೆ, ಇದಕ್ಕೆ ಪ್ರಾಯಶ್ಚಿತ್ತ ಸಿಗಬೇಕಾದರೆ ಆತ್ಮಾಹುತಿ ಮಾಡಿಕೊಳ್ಳಬೇಕೆಂಬ ತೀರ್ಮಾನಕ್ಕೆ ಬರುತ್ತಾನೆ. ಅದಕ್ಕಾಗಿ ಅಗ್ನಿಕುಂಡ ನಿರ್ಮಿಸುತ್ತಾನೆ. ಈ ವಿಷಯ ತಿಳಿದ ಶ್ರೀರಾಮ ಅವನನ್ನು ಸಂತೈಸುತ್ತಾನೆ. ಅಷ್ಟೇ ಅಲ್ಲ ತಾನೊಂದು ಬಾಣ ಬಿಟ್ಟು ಜಲಧಾರೆಯನ್ನು ಸೃಷ್ಟಿಸಿ ಅದರಿಂದ ಅಗ್ನಿ ಕುಂಡವನ್ನು ನಂದಿಸುತ್ತಾನೆ. ಆ ಜಲಧಾರೆಯೇ ಲಕ್ಷ್ಮಣ ತೀರ್ಥ ಎಂದು ಜನ ನಂಬಿದ್ದಾರೆ.

ಇಷ್ಟಾರ್ಥ ನೆರವೇರಲು ಶಿವರಾತ್ರಿ ಮರುದಿನ ಇರ್ಪು ಜಲಧಾರೆಯಲ್ಲಿ ಸ್ನಾನ!

 ಎರಡು ಹಂತದಲ್ಲಿ ಧುಮುಕುವ ಜಲಧಾರೆ

ಎರಡು ಹಂತದಲ್ಲಿ ಧುಮುಕುವ ಜಲಧಾರೆ

ಇರ್ಪು ಜಲಧಾರೆ ಸುಮಾರು ಎಪ್ಪತ್ತು ಅಡಿಯಷ್ಟು ಎತ್ತರದಿಂದ ಧುಮುಕಿ, ಅಲ್ಲಿಂದ ಮತ್ತೆ ನೂರು ಅಡಿಯಷ್ಟು ಕೆಳಕ್ಕೆ ಜಿಗಿಯುತ್ತಾ, ಮತ್ತೆ ಅಂಕುಡೊಂಕಾಗಿ ಹರಿದು ಚಿಕ್ಕಾತಿ ಚಿಕ್ಕ ಜಲಧಾರೆಗಳಾಗಿ ಹರಿದು ಹೋಗುತ್ತದೆ. ಈ ವೇಳೆ ನೊರೆಹಾಲಿನ ದೃಶ್ಯ ಕಣ್ಮನ ಸೆಳೆಯುತ್ತದೆ. ಎರಡು ಹಂತದಲ್ಲಿ ಧುಮುಕುವ ಜಲಧಾರೆ ತನ್ನ ರುದ್ರ ಮತ್ತು ಮೋಹಕ ಚೆಲುವಿನಿಂದ ಗಮನಸೆಳೆಯುತ್ತದೆ. ಅಷ್ಟೇ ಅಲ್ಲ ನಿಸರ್ಗ ಪ್ರೇಮಿಗಳಿಗೆ ರಸದೂಟ ಬಡಿಸುತ್ತದೆ. ಹೀಗಾಗಿಯೇ ಸದಾ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಒಂದಷ್ಟು ಸಮಯ ಜಲಧಾರೆಯಲ್ಲಿ ಆಟವಾಡಿ ಹಿಂತಿರುಗುತ್ತಾರೆ.

ಮೈದುಂಬಿ ಧುಮ್ಮಿಕ್ಕುತಿಹ ಅಬ್ಬಿ ಫಾಲ್ಸ್‌ನತ್ತ ಪ್ರವಾಸಿಗರ ದೌಡು

 ಇರ್ಪುಗೆ ತೆರಳುವ ಮಾರ್ಗ

ಇರ್ಪುಗೆ ತೆರಳುವ ಮಾರ್ಗ

ಇರ್ಪು, ಮಡಿಕೇರಿಯಿಂದ 85 ಕಿ.ಮೀ. ದೂರದಲ್ಲಿದ್ದು, ವೀರಾಜಪೇಟೆ ತಾಲ್ಲೂಕಿಗೆ ಸೇರಿರುವ ಇರ್ಪು ಜಲಪಾತವನ್ನು ವೀಕ್ಷಿಸಲು ಬರುವವರು ಮೈಸೂರಿನಿಂದ ಹುಣಸೂರು- ಗೋಣಿಕೊಪ್ಪದ ಮೂಲಕ ಅಥವಾ ಮೈಸೂರು ಹುಣಸೂರು ನಾಗರಹೊಳೆ ಮೂಲಕ, ಮಡಿಕೇರಿ ಮೂರ್ನಾಡು, ವೀರಾಜಪೇಟೆ, ಗೋಣಿಕೊಪ್ಪ, ಶ್ರೀಮಂಗಲಕ್ಕಾಗಿಯೂ ತೆರಳಬಹುದಾಗಿದೆ.

ಮಂಜಿನ ಮಡಿಕೇರಿಯಲ್ಲಿ ಮುದ ನೀಡುವ ತಾಣಗಳು

English summary
Some parts of the madikeri is getting rain now a days. so due to the rain, the water bodies are recovering and bringing out their beauty. irpu is now attracting the people by its unique beauty.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X