Huttari Habba 2023: ಕೊಡಗಿನ ಸುಗ್ಗಿ ಹಬ್ಬ ಹುತ್ತರಿ ಆಚರಣೆಗೆ ಸಮಯ ನಿಗದಿ

ಮಡಿಕೇರಿ, ನವೆಂಬರ್‌ 14: ಧಾನ್ಯ ಲಕ್ಷ್ಮಿಯಾದ ಭತ್ತವನ್ನು ಮನೆ ತುಂಬಿಸಿಕೊಳ್ಳುವ ಕೊಡಗಿನ ಸುಗ್ಗಿ ಹಬ್ಬ ಹುತ್ತರಿ ಆಚರಣೆಯ ಕಾಲ ನಿಗದಿಯಾಗಿದೆ. ಪ್ರತಿವರ್ಷವೂ ರೋಹಿಣಿ ನಕ್ಷತ್ರದಲ್ಲಿ ಬರುವ ಹುಣ್ಣಿಮೆಯಂದು ಹುತ್ತರಿ ಹಬ್ಬವನ್ನು ಆಚರಿಸಲಾಗುತ್ತದೆಯಾದರೂ ಆಚರಣಾ ವಿಧಿ ವಿಧಾನಗಳನ್ನು ಮಾತ್ರ ಹಬ್ಬಕ್ಕೂ ಮುನ್ನ ಪಾಡಿ ಇಗ್ಗುತ್ತಪ್ಪ ದೇಗುಲದಲ್ಲಿ ಮಾಡುವುದು ಸಂಪ್ರದಾಯವಾಗಿದೆ.

ಹುತ್ತರಿ ಕೊಡಗಿನವರ ಪಾಲಿಗೆ ವಿಶೇಷ ಹಬ್ಬವಾಗಿದ್ದು, ಧಾನ್ಯಲಕ್ಷ್ಮಿಯಾದ ಭತ್ತವನ್ನು ಗದ್ದೆಯಿಂದ ತಂದು ಮನೆಗೆ ತುಂಬಿಸಿಕೊಳ್ಳುವುದು ಹಬ್ಬದ ಪ್ರಮುಖ ಆಚರಣೆಯಾಗಿದೆ. ಈ ಬಾರಿ ಹಬ್ಬದ ಆಚರಣೆ ಬಗ್ಗೆ ಕಕ್ಕಬೆಯ ಪಾಡಿ ಶ್ರೀ ಇಗ್ಗುತಪ್ಪ ಸನ್ನಿಧಾನದಲ್ಲಿ ಅಮ್ಮಂಗೇರಿಯ ಜ್ಯೋತಿಷ್ಯರು ದೇವತಕ್ಕರು, ನಾಡಿನ ತಕ್ಕ ಮುಖ್ಯಸ್ಥರು, ಭಕ್ತ ಜನಸಂಘದ ಪದಾಧಿಕಾರಿಗಳು, ಸೇರಿ, ಹುತ್ತರಿ ಮುಹೂರ್ತವನ್ನು ನಿಗದಿ ಮಾಡಿದ್ದು ನವೆಂಬರ್‌ 27, ಸೋಮವಾರದಂದು ಆಚರಣೆ ನಡೆಯಲಿದೆ.

ಇನ್ನು ಹಬ್ಬದ ಆಚರಣೆಗೂ ಸಮಯ ನಿಗದಿ ಮಾಡಲಾಗಿದ್ದು, ಪಾಡಿ ಇಗ್ಗುತಪ್ಪ ದೇಗುಲದಲ್ಲಿ ನ.27ರಂದು ರಾತ್ರಿ 7.20 ಗಂಟೆಗೆ ನೆರೆ ಕಟ್ಟುವುದು. ರಾತ್ರಿ 8.20 ಗಂಟೆಗೆ ಕದಿರು ಕುಯ್ಯುವುದು, ರಾತ್ರಿ 9.20 ಗಂಟೆಗೆ ಪ್ರಸಾದ ಸ್ವೀಕಾರ ನಡೆಯಲಿದೆ. ಇನ್ನು ಸಾರ್ವಜನಿಕವಾಗಿ, ರಾತ್ರಿ 7.45 ಗಂಟೆಗೆ ನೆರೆ ಕಟ್ಟುವುದು. ರಾತ್ರಿ 8.45 ಗಂಟೆಗೆ ಕಧಿರು ಕುಯ್ಯುವುದು, ರಾತ್ರಿ 9.45 ಗಂಟೆಗೆ ಭೋಜನ ಪ್ರಸಾದ ನಡೆಯಲಿದೆ.

huttari-habba-2023

ಹುತ್ತರಿ ಕೊಡಗಿನವರ ಪಾಲಿಗೆ ಸುಗ್ಗಿ ಹಬ್ಬ

ಹಬ್ಬದ ದಿನದಂದು ಭತ್ತದ ಗದ್ದೆಯನ್ನು ಹೊಂದಿದವರು ತಮ್ಮ ಗದ್ದೆಯಿಂದ ಭತ್ತದ ಕದಿರು ತಂದರೆ, ಗದ್ದೆ ಹೊಂದಿಲ್ಲದವರು ಗದ್ದೆ ಇರುವವರ ಮನೆಯಿಂದ ಅಥವಾ ದೇವಸ್ಥಾನಗಳಿಂದ ಕದಿರನ್ನು ತಂದು ಮನೆಯ ದೇವರ ಕೋಣೆಯಲ್ಲಿ ಕಟ್ಟುತ್ತಾರೆ. ಅಷ್ಟೇ ಅಲ್ಲದೆ, ತಮ್ಮ ಮನೆಯಲ್ಲಿರುವ ವಾಹನ, ಆಯುಧಗಳಿಗೆ ಕಟ್ಟುವ ಸಂಪ್ರದಾಯ ಹಿಂದಿನಿಂದಲೂ ನಡೆದು ಬಂದಿದೆ.

ಇನ್ನು ಹಬ್ಬದ ಪ್ರಯುಕ್ತ ಪೂರ್ವಭಾವಿಯಾಗಿ ಪಾಡಿಇಗ್ಗುತ್ತಪ್ಪದ ಆದಿಸ್ಥಳ ಮಲ್ಮ ಬೆಟ್ಟದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ದೇವರ ಕಟ್ಟು ಹಾಕಲಾಗುತ್ತದೆ. ಕಟ್ಟು ಹಾಕಿದ ಬಳಿಕ ಅದನ್ನು ಹುತ್ತರಿ ಹಬ್ಬದ ವೇಳೆ ಸಡಿಲಿಸಲಾಗುತ್ತದೆ ಅಲ್ಲಿ ತನಕ ನಾಡಿನ ಜನತೆ ಪ್ರಾಣಿವಧೆ ಮತ್ತಿತರೆ ಹಿಂಸೆಯನ್ನು ಮಾಡುವಂತಿಲ್ಲ ಎಂಬ ನಿರ್ಬಂಧವೂ ಇದೆ.

ಹುತ್ತರಿ ಕೊಡಗಿನವರ ಪಾಲಿಗೆ ಸುಗ್ಗಿ ಹಬ್ಬವಾಗಿದ್ದು, , ಸಂಪ್ರದಾಯದ ಲೇಪನ, ಜಾನಪದದ ಹಿನ್ನಲೆ ಹಬ್ಬಕ್ಕಿದೆ. ದೇವಸ್ಥಾನದ ಪದ್ಧತಿಯಂತೆ ಹಬ್ಬದ ಒಂದು ದಿನದ ಮೊದಲು "ದೇವಪೊಳ್ದ್" ಮಾರನೆಯ ದಿನ ನಾಡಿನಲ್ಲಿ "ನಾಡುಪೊಳ್ದ್" ಎಂದು ಆಚರಿಸಲಾಗುತ್ತದೆ. ಹುತ್ತರಿ ಹಬ್ಬದ ದಿನದಂದು ಕುಟುಂಬದ ಸದಸ್ಯರೆಲ್ಲರೂ ಐನ್‌ಮನೆಯಲ್ಲಿ ಸೇರಿ ಮನೆಯ 'ನೆಲ್ಲಕ್ಕಿ' ನಡುಬಾಡೆಯಲ್ಲಿ ತೂಗು ದೀಪದ ಕೆಳಗೆ ಚಾಪೆ ಹಾಸಿ ಹುತ್ತರಿ ಕುಕ್ಕೆಯಲ್ಲಿ ಮಾವಿನ ಎಲೆ, ಅರಳಿ ಎಲೆ, ಹಲಸಿನ ಎಲೆ, ಕುಂಬಳಿ ಎಲೆ, ಕಾಡು ಗೇರು ಎಲೆ ಹೀಗೆ ಐದು ತರಹದ ಎಲೆಯನ್ನು ಹಾಗೂ ಕಾಡಿನಲ್ಲಿ ಸಿಗುವ ಅಚ್ಚುನಾರನ್ನು ಇರಿಸಲಾಗುತ್ತದೆ.

huttari-habba-2023

ಆಚರಣೆ ಹೇಗೆ ನಡೆಯುತ್ತದೆ ಗೊತ್ತಾ?

ಕುಕ್ಕೆಯ ತುಂಬ ಭತ್ತ ತುಂಬಿ ಅದರ ಮೇಲೆ ಅರ್ಧ ಸೇರಿನಲ್ಲಿ ಅಕ್ಕಿ ತುಂಬಿಡಲಾಗುತ್ತದೆ. ಹುತ್ತರಿ ಕುಡಿಕೆಯಲ್ಲಿ ತಂಬಿಟ್ಟು ಹಾಕಿ ಅದರ ಜೊತೆ ಹಾಲು, ತುಪ್ಪ, ಜೇನು, ಎಳ್ಳು, ಶುಂಠಿ, ತೆಂಗಿನಕಾಯಿ, ಹಾಗಲಕಾಯಿ, ಮುಳ್ಳು ಇಡಲಾಗುತ್ತದೆ. ಇದರ ಪಕ್ಕದಲ್ಲಿ ಕುಡುಗೋಲು, ಮುಕ್ಕಾಲಿಯ ಮೇಲೆ 'ತಳಿಯಕ್ಕಿ ಬೊಳ್ಚ', ಮೂರು ವೀಳ್ಯದೆಲೆ ಹಾಗೂ ಮೂರು ಅಡಿಕೆಯನ್ನು ಇಡಲಾಗುತ್ತದೆ.

ಮುತೈದೆಯರು ಅಕ್ಕಿ ಹಿಟ್ಟಿನಿಂದ ಹಬ್ಬಾಚರಣೆಗೆ ಇರಿಸಲಾದ ವಸ್ತುಗಳ ಮುಂದೆ ರಂಗೋಲಿ ಇಡುತ್ತಾರೆ. ಬಳಿಕ ದೇವರನ್ನು ಪ್ರಾರ್ಥಿಸುತ್ತಾ ಎಲೆಗಳನ್ನು ಸಂಪ್ರದಾಯದಂತೆ ಒಂದರ ಮೇಲೊಂದು ಇಟ್ಟು ನಾರಿನಿಂದ ಕಟ್ಟಲಾಗುತ್ತದೆ. ಇದನ್ನು ನೆರೆ ಕಟ್ಟುವುದು ಎಂದು ಕರೆಯುತ್ತಾರೆ. ಬಳಿಕ ಬೇಯಿಸಿದ ಹುತ್ತರಿ ಗೆಣಸನ್ನು ಜೇನುತುಪ್ಪ, ಬೆಲ್ಲ ಹಾಗೂ ತುಪ್ಪದೊಂದಿಗೆ ಸೇರಿಸಿ ಸೇವಿಸುತ್ತಾರೆ. ಜೊತೆಗೆ ಇತರೆ ತಿಂಡಿ ತೀರ್ಥಗಳೂ ಇರುತ್ತವೆ. ಇದನ್ನು ಫಲಹಾರ ಎನ್ನುತ್ತಾರೆ.

huttari-habba-2023

'ಪೊಲಿ ಪೊಲಿ ದೇವಾ' ಘೋಷಣೆ

ಫಲಹಾರದ ಬಳಿಕ ಸಿದ್ದಪಡಿಸಲಾದ 'ಕುತ್ತಿ'ಯನ್ನು ಕುಟುಂಬದ ಹಿರಿಯರೊಬ್ಬರು ಹೊತ್ತು ಊರಿನಲ್ಲಿರುವ ಅಂಬಲ(ಮೈದಾನ)ಕ್ಕೆ ತೆರಳುತ್ತಾರೆ. ಅಲ್ಲಿಗೆ ಸುತ್ತಮುತ್ತಲಿನ ಕುಟುಂಬದವರು, ಸಂಬಂಧಿಕರು ಬರುತ್ತಾರೆ. ಅಲ್ಲಿಂದ ಮನೆಯ ಹಿರಿಯ ವ್ಯಕ್ತಿ ಕದಿರು ತೆಗೆಯಲು ಕುಡುಗೋಲನ್ನು ಕದಿರು ತೆಗೆಯುವವನ ಕೈಗೆ ನೀಡುತ್ತಾರೆ. ಈ ಸಂದರ್ಭ ಮುತೈದೆಯೊಬ್ಬರು 'ತಳಿಯಕ್ಕಿ ಬೊಳ್ಚ'ವನ್ನು ಹಿಡಿದುಕೊಳ್ಳುತ್ತಾರೆ. ಬಳಿಕ ಮನೆಯವರೆಲ್ಲರೂ ಒಡ್ಡೋಲಗದೊಂದಿಗೆ ಕದಿರು ಕೊಯ್ಯುವ ಗದ್ದೆಯತ್ತ ತೆರಳುತ್ತಾರೆ.

ಗದ್ದೆ ತಲುಪಿದ ಬಳಿಕ ಹಾಲುಜೇನು ಮೊದಲಾದುವುಗಳನ್ನು ಕದಿರಿನ ಬುಡಕ್ಕೆ ಸುರಿಯಲಾಗುತ್ತದೆ. ಹುತ್ತರಿ ಕುಕ್ಕೆಯಲ್ಲಿ ಕೊಂಡೊಯ್ದ ಅಚ್ಚುನಾರಿನಿಂದ ಕಟ್ಟಿದ ಎಲೆಗಳನ್ನೊಳಗೊಂಡ ನೆರೆಯನ್ನು ಕದಿರಿನ ಬುಡಕ್ಕೆ ಕಟ್ಟಲಾಗುತ್ತದೆ. ಆ ನಂತರ ಹುತ್ತರಿ ಮೂಹೂರ್ತಕ್ಕೆ ಸುಸೂತ್ರವೆನಿಸುವಂತೆ ಗುಂಡೊಂದನ್ನು ಹಾರಿಸಲಾಗುತ್ತದೆ. ಕುತ್ತಿ ಹೊತ್ತ ಕುಟುಂಬದ ಹಿರಿಯ ವ್ಯಕ್ತಿ ದೇವರನ್ನು ಪ್ರಾರ್ಥಿಸಿ, ಕದಿರನ್ನು ಬೆಸ ಸಂಖ್ಯೆಯಲ್ಲಿ ಕೊಯ್ದು ಹುತ್ತರಿ ಕುಕ್ಕೆಯಲ್ಲಿ ಇಡಲಾಗುತ್ತದೆ. ಈ ಸಂದರ್ಭ ನೆರೆದವರು 'ಪೊಲಿ ಪೊಲಿ ದೇವಾ' ಎಂದು ಘೋಷಣೆ ಕೂಗುತ್ತಾರೆ. ಈ ವೇಳೆ ಪಟಾಕಿ ಸಿಡಿಸಿ ಸಂಭ್ರಮಿಸಲಾಗುತ್ತದೆ.

huttari-habba-2023

ಹುತ್ತರಿ ಕಳೆದರೂ ಸಂಭ್ರಮ ಮುಗಿಯಲ್ಲ

ಕದಿರು ತುಂಬಿದ ಕುಕ್ಕೆಯನ್ನು ತಲೆಯಲ್ಲಿ ಹೊತ್ತು 'ಪೊಲಿ ಪೊಲಿ ದೇವಾ' ಎಂದು ಘೋಷಣೆ ಕೂಗುತ್ತಾ ಬರಲಾಗುತ್ತದೆ. ಅಲ್ಲದೆ ಕದಿರನ್ನು ಕೆಲವು ಕುಟುಂಬದವರು ದೇವಸ್ಥಾನಕ್ಕೆ ಅರ್ಪಿಸಿ ಬಳಿಕ ಮನೆಗೆ ತೆರಳಿದರೆ ಇನ್ನು ಕೆಲವರು ನೇರವಾಗಿ ಒಕ್ಕಲು ಕಣಕ್ಕೆ ತೆರಳಿ ಮನೆಗೆ ತೆರಳುತ್ತಾರೆ. ಮನೆಯಲ್ಲಿದ್ದ ಮುತೈದೆ ಕದಿರು ಕೊಯ್ದವನ ಕಾಲು ತೊಳೆದು ಹಾಲು ನೀಡಿ ಧಾನ್ಯ ಲಕ್ಷ್ಮಿಯನ್ನು ಮನೆತುಂಬಿಸಿಕೊಳ್ಳುತ್ತಾರೆ. ಧಾನ್ಯ ಲಕ್ಷ್ಮಿಯನ್ನು ಮನೆಗೆ ತುಂಬಿಸಿಕೊಂಡ ನಂತರ ಕದಿರನ್ನು ಆಯುಧ, ವಾಹನ ಮುಂತಾದವುಗಳಿಗೆ ಕಟ್ಟಲಾಗುತ್ತದೆ. ಬಳಿಕ ಮನೆಯಲ್ಲಿ ಹೊಸ ಅಕ್ಕಿ ಪಾಯಸ ಮಾಡಿ ಸದಸ್ಯರೆಲ್ಲಾ ಒಂದೆಡೆ ಕುಳಿತು ಊಟ ಮಾಡುತ್ತಾರೆ.

ಹುತ್ತರಿ ಹಬ್ಬದ ಮಾರನೆಯ ದಿನ ಹುತ್ತರಿ ಹಾಡನ್ನು ಮನೆಮನೆಗಳಲ್ಲಿ ಹಾಡುವ ಪದ್ಧತಿಯೂ ಇದೆ. ಅಲ್ಲದೆ, ನಾಡ್‌ ಮಂದ್‌ನಲ್ಲಿ (ಊರಿನ ದೊಡ್ಡ ಮೈದಾನದಲ್ಲಿ) ಊರಿನವರೆಲ್ಲಾ ಸೇರಿ ಹುತ್ತರಿ ಕೋಲಾಟ ನಡೆಸುತ್ತಾರೆ. ಆ ನಂತರ ಹಬ್ಬದ ಕಡೆಯ ದಿನವಾಗಿ "ಊರೋರ್ಮೆ" ನಡೆಯುತ್ತದೆ. ಊರವರೆಲ್ಲಾ ಗ್ರಾಮದ ಅಂಬಲ(ಮೈದಾನ)ದಲ್ಲಿ ನೆರೆಯುತ್ತಾರೆ. ವಿವಿಧ ತಿಂಡಿ ತಿನಿಸು, ಅನ್ನ, ರೊಟ್ಟಿ ಹೀಗೆ ವಿವಿಧ ಪದಾರ್ಥಗಳನ್ನು ಮನೆಯಿಂದ ತಂದು ಅಲ್ಲಿ ಸೇವಿಸುತ್ತಾರೆ. ಅಲ್ಲಿಗೆ ಹುತ್ತರಿ ಹಬ್ಬದ ಸಂಭ್ರಮ ಮುಗಿಯುತ್ತದೆ. ಆದರೆ ಬಳಿಕವೂ ಸಂಘ ಸಂಸ್ಥೆಗಳು ತಮಗೆ ಅನುಕೂಲವಾದ ದಿನಗಳಲ್ಲಿ ಹುತ್ತರಿ ಸಂತೋಷಕೂಟಗಳನ್ನು ನಡೆಸುವ ಮೂಲಕ ಎಲ್ಲರೂ ಒಂದೆಡೆ ಸೇರಿ ಹುತ್ತರಿ ಹಬ್ಬದ ಶುಭಾಷಯಗಳನ್ನು ವಿನಿಮಯ ಮಾಡಿಕೊಳ್ಳುವುದು ಕಂಡು ಬರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+