ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟಿಪ್ಪು ಜಯಂತಿ ಆಚರಣೆಗೆ ಕೊಡಗಿನಲ್ಲಿ ವಿರೋಧದ ಅಲೆ

ಟಿಪ್ಪು ಮತಾಂಧ ಎನ್ನಲು ಕೊಡಗಿನಲ್ಲಿರುವ ಮಾಪಿಳ್ಳೆಗಳೇ ಸಾಕ್ಷಿ. ಸ್ವಾತಂತ್ರ್ಯ ಹೋರಾಟ ಆರಂಭವಾದದ್ದು 1875ರಲ್ಲಿ. ಟಿಪ್ಪು 1799ರಲ್ಲಿಯೇ ಸಾವನ್ನಪ್ಪಿದ್ದಾನೆ. ಹೀಗಿರುವಾಗ ಟಿಪ್ಪು ಹೇಗೆ ಸ್ವಾತಂತ್ರ್ಯ ಹೋರಾಟಗಾರ ಆಗಲು ಸಾಧ್ಯ?

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ: ಟಿಪ್ಪು ಜಯಂತಿ ದಿನ ಹತ್ತಿರವಾಗುತ್ತಿದ್ದಂತೆ ಕೊಡಗಿನಲ್ಲಿ ವಾತಾವರಣ ಕಾವೇರುತ್ತಿದೆ. ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ವಿರೋಧ ವ್ಯಕ್ತವಾಗುತ್ತಿದೆ. ಈ ಮಧ್ಯೆ ಜಿಲ್ಲಾಡಳಿತ ಟಿಪ್ಪು ಜಯಂತಿ ಆಚರಿಸಲು ಸರಕಾರದ ಆದೇಶದಂತೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಸೂಕ್ತ ಪೊಲೀಸ್ ಬಂದೋಬಸ್ತ್ ಹಾಕಿ, ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿದೆ.

ಟಿಪ್ಪು ಸುಲ್ತಾನ್ ಜಯಂತಿ ಆಚರಿಸುವ ಉದ್ದೇಶವನ್ನು ಪ್ರಶ್ನಿಸಿ ಮತ್ತು ಆಚರಣೆಗೆ ತಡೆ ಕೋರಿ ಸಮಾಜ ಸೇವಕ ಕೊಕ್ಕಲೆಮಾಡ ಮಂಜು ಅವರು ಹೈಕೋರ್ಟ್‍ಗೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಬುಧವಾರ ವಿಚಾರಣೆಗೆ ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ, ನ್ಯಾಯಮೂರ್ತಿ ಆರ್. ಬೂದಿಹಾಳ್ ಅವರನ್ನು ಒಳಗೊಂಡ ವಿಭಾಗೀಯ ನ್ಯಾಯಪೀಠ, ಟಿಪ್ಪು ಆಗಿನ ರಾಜ್ಯ ಸಂಸ್ಥಾನದ ರಾಜ. ಅವನು ಸ್ವಾತಂತ್ರ್ಯ ಹೋರಾಟಗಾರನಲ್ಲ ಎಂದು ಅಭಿಪ್ರಾಯ ಪಟ್ಟಿದ್ದು, ಅರ್ಜಿ ವಿಚಾರಣೆಯನ್ನು ಗುರುವಾರಕ್ಕೆ(ನ.3) ಮುಂದೂಡಿದೆ. ಇವತ್ತಿನ ತೀಪು ಭಾರೀ ಕುತೂಹಲ ಮೂಡಿಸಿದೆ.[ಟಿಪ್ಪು ಜಯಂತಿ ಆಚರಿಸುವ ಉದ್ದೇಶವೇನು: ಹೈಕೋರ್ಟ್ ಪ್ರಶ್ನೆ]

Bopanna-appacchu

ಕೊಡಗಿನಲ್ಲಿ ಕಳೆದ ವರ್ಷದ ಕಹಿ ಘಟನೆಗಳು ಇನ್ನೂ ಆರಿಲ್ಲ ಮತ್ತೆ ಅಂತಹದೇ ವಾತಾವರಣ ನಿರ್ಮಾಣವಾಗುತ್ತದೆಯಾ ಎಂಬ ಭಯವೂ ವ್ಯಕ್ತವಾಗುತ್ತಿದೆ. ಈಗಾಗಲೇ ಬರದ ಹಿನ್ನಲೆಯಲ್ಲಿ ತತ್ತರಿಸಿದ ಜನಕ್ಕೆ ಇದು ಮತ್ತೊಂದು ಸಮಸ್ಯೆಯಾಗಿ ಪರಿವರ್ತನೆಯಾಗುವ ಸಾಧ್ಯತೆಯೂ ಇದೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿರುವ ಕೊಡಗಿನ ಶಾಸಕರಾದ ಅಪ್ಪಚ್ಚುರಂಜನ್ ಹಾಗೂ ಕೆ.ಜಿ.ಬೋಪಯ್ಯ, ಟಿಪ್ಪು ಜಯಂತಿ ಆಚರಣೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ತನ್ನ ನಿರ್ಧಾರವನ್ನು ಬದಲಾಯಿಸಿ ಆಚರಣೆ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.[ಟಿಪ್ಪು ಜಯಂತಿ ಹೆಸರಲ್ಲಿ ಕಾಂಗ್ರೆಸ್ ರಾಜಕೀಯ: ಮೋಹನ್ ದಾಸ್ ಪೈ]

ಜಿಲ್ಲೆಯಲ್ಲಿ ಟಿಪ್ಪು ನಡೆಸಿದ ಹತ್ಯೆ ಮತ್ತು ಮತಾಂತರಕ್ಕೆ ಸಾಕಷ್ಟು ದಾಖಲೆಗಳಿವೆ. ರಾಜ್ಯ ಸರಕಾರ ಟಿಪ್ಪು ಜಯಂತಿ ಆಚರಿಸುವ ಮೂಲಕ ಕೊಡಗಿನ ಜನರನ್ನು ಅಪಮಾನಿಸಲು ಮುಂದಾಗಿದೆ ಎಂದು ಆರೋಪಿಸಿದ್ದಾರೆ. ಮತಾಂತರಗೊಂಡಿರುವ ಮುಸ್ಲಿಮರಿಗೆ ಮನೆ ಹೆಸರುಗಳು ಆರ್ ಟಿಸಿಯಲ್ಲಿ ಇವೆ ಎಂದ ಅವರು, ಟಿಪ್ಪು ಜಯಂತಿಯನ್ನು ಹೇಗಾದರೂ ನಿಲ್ಲಿಸಿ ಎಂದು ಮುಸಲ್ಮಾನರೇ ದೂರವಾಣಿ ಕರೆ ಮಾಡಿ ಮನವಿ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು. ಮುಸಲ್ಮಾನರನ್ನು ಎತ್ತಿ ಕಟ್ಟುವ ರಾಜ್ಯ ಸರಕಾರದ ಕ್ರಮ ಖಂಡನೀಯ ಎಂದರು.

ಮಂಗಳೂರು ಭಾಗದಲ್ಲಿ ಟಿಪ್ಪುವಿನಿಂದ ಕ್ರೈಸ್ತರ ಮತಾಂತರವಾಗಿದೆ ಎಂದು ಉಲ್ಲೇಖಿಸಿದ ಅವರು, ಎಲ್ಲರ ವಿರೋಧದ ನಡುವೆ ಜಯಂತಿ ಆಚರಿಸಿದರೆ ಟಿಪ್ಪು ಧಾರಾವಾಹಿ ನಿರ್ಮಿಸಲು ಮುಂದಾದ ಸಂಜಯ್ ಖಾನ್ ಹಾಗೂ ಟಿಪ್ಪು ಖಡ್ಗವನ್ನು ತಂದ ವಿಜಯಮಲ್ಯ ಅವರ ಪರಿಸ್ಥಿತಿಯೇ ಸಿದ್ಧರಾಮಯ್ಯ ಅವರಿಗೂ ಆಗಲಿದೆ ಎಂದರು.[ಇತಿಹಾಸ ಅರಿಯದವರಿಂದ ಟಿಪ್ಪು ಬಗ್ಗೆ ಅಪಪ್ರಚಾರ: ಖಾದರ್]

ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಜಿಲ್ಲೆಯಲ್ಲಿ ಟಿಪ್ಪು ಜಯಂತಿ ಆಚರಣೆ ವಿರೋಧಿಸಲಾಗುತ್ತಿದೆಯೇ ಹೊರತು ಮುಸಲ್ಮಾನರನ್ನಲ್ಲ ಎಂದು ಸ್ಪಷ್ಟಪಡಿಸಿದರು. ಸುಮಾರು 310 ದೇವಾಲಯಗಳು ಸೇರಿದಂತೆ ಕೊಡಗಿನ ಐನ್‍ಮನೆಗಳು ಟಿಪ್ಪುವಿನಿಂದ ನಾಶವಾಗಿವೆ. ಭಾಗಮಂಡಲದ ಶ್ರೀಭಗಂಡೇಶ್ವರ ದೇವಾಲಯದಲ್ಲಿ ಟಿಪ್ಪುವಿನಿಂದ ಭಗ್ನಗೊಂಡ ಆನೆಯ ಮೂರ್ತಿ ಇದೆ. ತಲಕಾವೇರಿಗೆ ದಾಳಿ ಮಾಡಲೆಂದು ತೆರಳುತ್ತಿದ್ದಾಗ ಭಾರೀ ಮಳೆ ಅಡ್ಡಿಪಡಿಸಿದ ಕಾರಣ ಟಿಪ್ಪು ಮರಳುವಾಗ ವಿಶ್ರಾಂತಿ ಪಡೆದ ಕಲ್ಲನ್ನು ಇಂದಿಗೂ ಸಲಾಂ ಕಲ್ಲು ಎಂದು ಕರೆಯಲಾಗುತ್ತಿದೆ ಎಂದರು.

ಕೆಲವು ಊರುಗಳ ಹೆಸರನ್ನು ಕೂಡ ಬದಲಾಯಿಸಿದ್ದ ಟಿಪ್ಪು, ವೀರಾಜಪೇಟೆಯ ಸಂತ ಅನ್ನಮ್ಮ ಚರ್ಚ್ ಅನ್ನು ಧ್ವಂಸಗೊಳಿಸಿದ್ದಕ್ಕೆ ಸಾಕ್ಷ್ಯಗಳಿವೆ. ಇನ್ನೂ ಕಾಲ ಮಿಂಚಿಲ್ಲ. ಸರಕಾರ ಜನರ ಭಾವನೆಗಳಿಗೆ ಗೌರವ ನೀಡಿ, ಟಿಪ್ಪು ಜಯಂತಿ ಆಚರಣೆಯನ್ನು ಕೈಬಿಡಲಿ ಎಂದು ಒತ್ತಾಯಿಸಿದರು.

ಕುಟ್ಟಪ್ಪ ಹುತಾತ್ಮದಿನಾಚರಣೆ?

ಟಿಪ್ಪು ಜಯಂತಿಯನ್ನು ವಿರೋಧಿಸಿ, ನ.10 ರಂದು ಪೊನ್ನಂಪೇಟೆಯಿಂದ ತಾಲೂಕು ಕೇಂದ್ರ ವೀರಾಜಪೇಟೆವರೆಗೆ ಮಹಿಳೆಯರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪಾದಯಾತ್ರೆ ಕೈಗೊಳ್ಳಲು ವಿವಿಧ ಸಂಘಟನೆಗಳು ನಿರ್ಧರಿಸಿವೆ.

ಕುಟ್ಟಪ್ಪ ಅವರ ಹುತಾತ್ಮ ದಿನವನ್ನು ನ.10 ರಂದು ಆಚರಿಸಲು ಹಾಗೂ ಟಿಪ್ಪು ಜಯಂತಿ ಆಚರಣೆಗೆ ತಡೆ ಮಾಡಲು ಆಗ್ರಹಿಸಿ ಶಾಂತಿಯುತ ಪಾದಯಾತ್ರೆ ಕೈಗೊಳ್ಳಲು ನಿರ್ಣಯ ಕೈಗೊಳ್ಳಲಾಗಿದೆ.

ಸಂಘಟನೆಗಳ ವಿರೋಧ

ಕೊಡಗಿನಲ್ಲಿ ಟಿಪ್ಪು ಜಯಂತಿ ಆಚರಿಸುವದಕ್ಕೆ ಬಾಳೆಲೆ ಕೊಡವ ಸಮಾಜ ತೀವ್ರ ವಿರೋಧ ವ್ಯಕ್ತಪಡಿಸಿದೆ. ಸರಕಾರ ಮತ್ತೊಮ್ಮೆ ಟಿಪ್ಪು ಜಯಂತಿಯನ್ನು ಆಚರಿಸಿ, ಅಹಿತಕರ ಘಟನೆಗಳು ಸಂಭವಿಸಿದರೆ, ಜಿಲ್ಲಾಡಳಿತ ಹಾಗೂ ಸರಕಾರ ನೇರ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.[ಟಿಪ್ಪು ಸುಲ್ತಾನ್ ನಿಜ ಇತಿಹಾಸ, ರಾಜಕಾರಣ ಹಾಗೂ ಸತ್ಯಾನ್ವೇಷಣೆ]

ನಾಪೋಕ್ಲು ಸಮೀಪದ ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲಜಿ, ಪೇರೂರು, ದೊಡ್ಡ ಪುಲಿಕೋಟು ಗ್ರಾಮಸ್ಥರು ಟಿಪ್ಪು ಜಯಂತಿ ಆಚರಣೆಯನ್ನು ಕೂಡಲೇ ಕೈಬಿಡಬೇಕೆಂದು ಆಗ್ರಹಿಸಿದ್ದಾರೆ.

ಬಲ್ಲಮಾವಟಿಯಲ್ಲಿ ನಡೆದ ಟಿಪ್ಪು ಜಯಂತಿ ವಿರೋಧಿ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದು, ಟಿಪ್ಪು ಒಬ್ಬ ಮತಾಂಧನಾಗಿದ್ದು, ಹೋರಾಟಗಾರ ಎನ್ನಲು ಯಾವದೇ ಆಧಾರಗಳಿಲ್ಲ. ಟಿಪ್ಪು ಮತಾಂಧ ಎನ್ನಲು ಕೊಡಗಿನಲ್ಲಿರುವ ಮಾಪಿಳ್ಳೆಗಳೇ ಸಾಕ್ಷಿ. ಸ್ವಾತಂತ್ರ್ಯ ಹೋರಾಟ ಆರಂಭವಾದದ್ದು 1875ರಲ್ಲಿ. ಟಿಪ್ಪು 1799ರಲ್ಲಿಯೇ ಸಾವನ್ನಪ್ಪಿದ್ದಾನೆ. ಹೀಗಿರುವಾಗ ಟಿಪ್ಪು ಹೇಗೆ ಸ್ವಾತಂತ್ರ್ಯ ಹೋರಾಟಗಾರ ಆಗಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಜನ ವಿರೋಧದ ನಡುವೆಯೂ ಸರಕಾರ ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿರುವದು ಖಂಡನೀಯ ಎಂದು ಬಿಟ್ಟಂಗಾಲ ಕೊಡವ ಫ್ಯಾಮಿಲಿ ಕ್ಲಬ್ ಅಧ್ಯಕ್ಷ ಚೇಂದ್ರಿಮಾಡ ಕಾವೇರಪ್ಪ ತಿಳಿಸಿದ್ದಾರೆ.ಟಿಪ್ಪು ಜಯಂತಿಯನ್ನು ಆಚರಿಸದಂತೆ ಸುಂಟಿಕೊಪ್ಪ ನಗರ ಬಿಜೆಪಿ ಮತ್ತು ಬಿಜೆಪಿ ಯುವ ಮೋರ್ಚಾದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.['ಟಿಪ್ಪು ಜಯಂತಿ ಬೇಡ' ಬಿಜೆಪಿಯಿಂದ ನ.8ರಂದು ರಾಜ್ಯಾದ್ಯಂತ ಪ್ರತಿಭಟನೆ]

ಟಿಪ್ಪು ಜಯಂತಿ ಆಚರಿಸುವದನ್ನು ಮಕ್ಕಂದೂರಿನ ಏಕದಂತ ಯುವಕ ಸಂಘ, ಮಡಿಕೇರಿಯ ಕಾನ್ವೆಂಟ್‍ಜಂಕ್ಷನ್‍ನ ಶ್ರೀ ಮಹಾಗಣಪತಿ ಸೇವಾ ಸಮಿತಿ ವಿರೋಧಿಸಿದೆ.

ಟಿಪ್ಪು ಜಯಂತಿ ಆಚರಣೆಯನ್ನು ವಿರೋಧಿಸಿ ಸೋಮವಾರಪೇಟೆ ತಾಲೂಕು ಪಂಚಾಯಿತಿಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಕಾಂಗ್ರೆಸ್ ಸದಸ್ಯರ ವಿರೋಧದ ನಡುವೆಯೂ ತಾ.ಪಂ.ನಲ್ಲಿ ಸ್ಪಷ್ಟ ಬಹುಮತ ಹೊಂದಿರುವ ಬಿಜೆಪಿ ಸದಸ್ಯರು ಒಕ್ಕೊರಲಿನಿಂದ ಟಿಪ್ಪು ಜಯಂತಿ ಆಚರಣೆಯ ವಿರುದ್ಧ ಅಭಿಪ್ರಾಯ ಮಂಡಿಸಿ, ಅಂತಿಮವಾಗಿ ನಿರ್ಣಯ ಕೈಗೊಳ್ಳಲಾಯಿತು. 19 ಸದಸ್ಯ ಬಲದಲ್ಲಿ 13 ಮಂದಿ ಟಿಪ್ಪು ಜಯಂತಿ ವಿರುದ್ಧವಾಗಿ ಕೈ ಎತ್ತಿ ಆಚರಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

English summary
Kodagu people opposing to Tippu jayanti celebration. But, Karnataka government decide to celebrate this event with police security. Various organisations planning a protest against Tippu jayanti on November 10th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X