SSLC ವಿದ್ಯಾರ್ಥಿನಿ ಕೊಲೆ: ಸ್ಪೆಷಲ್ ಕೋರ್ಟ್ ಓಪನ್: ಕೃತ್ಯದ ಸ್ಥಳ ಪರಿಶೀಲಿಸಿ ಜಿ.ಪರಮೇಶ್ವರ ಹೇಳಿದ್ದೇನು?
ಮಡಿಕೇರಿ, ಮೇ 16: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯನ್ನು ಹತ್ಯೆ ಮಾಡಿರುವ ಕೃತ್ಯ ಖಂಡನೀಯ. ಸಹಿಸಲಾದ ಘಟನೆ. ಬಾಲಕಿಯ ಕುಟುಂಬಕ್ಕೆ ನ್ಯಾಯ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಪ್ರಕರಣ ಸಂಬಂಧ ಸ್ಪೆಷಲ್ ಕೋರ್ಟ್ ತೆರೆಯಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಭರವಸೆ ನೀಡಿದರು.
ಸೋಮವಾರಪೇಟೆಯ ಸೂರ್ಲಬ್ಬಿ ಬಳಿಯ ಕುಂಬಾರಗಡಿಗೆ ಗ್ರಾಮದಲ್ಲಿ ಎಸ್‌ಎಸ್ಎಲ್‌ಸಿ ವಿದ್ಯಾರ್ಥಿನಿ ಹತ್ಯೆಯಾದ ಸ್ಥಳವನ್ನು ಗೃಹ ಸಚಿವರು ಗುರುವಾರ ಪರಿಶೀಲಿಸಿದರು. ಬಳಿಕ ಬಾಲಕಿಯ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ನಂತರ ಸುದ್ದಿಗಾರರ ಜೊತೆಗೆ ಮಾತನಾಡಿದರು.

ಅಮಾಷವಾಗಿ ಕೊಲೆಗೀಡಾದ ವಿದ್ಯಾರ್ಥಿನಿ 16 ವರ್ಷದ ಮೀನಾ. ಕೊಲೆ ಮಾಡಿದ ಆರೋಪಿ ಪ್ರಕಾಶ್ (32). ಈ ಆರೋಪಿ ಬಾಲಕಿಯ ತಂದೆ-ತಾಯಿಗೆ ಒತ್ತಾಯ ಮಾಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದ. ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ಗೊತ್ತಾದ ಕೂಡಲೇ ತಿಳಿಹೇಳಿ ತಡೆದಿದ್ದರು. ವಿದ್ಯಾರ್ಥಿನಿಗೆ 18 ವರ್ಷ ತುಂಬಿದ ನಂತರ ಮದುವೆಯಾಗುವಂತೆ ಆತನಿಗೆ ಬುದ್ಧಿವಾದ ಹೇಳಿದ್ದರು.
ತಾಯಿ ಮೇಲೆ ಹಲ್ಲೆ ಬಳಿಕ ಬಾಲಕಿ ಕೊಲೆ
ಈ ಬೆಳವಣಿಗೆಗಳು ಆದ ಬಳಿಕ ಆರೋಪಿಯು ಬಾಲಕಿಯ ಮನೆ ಬಳಿ ತೆರಳಿ ಆಕೆಯ ತಂದೆ-ತಾಯಿ ಜೊತೆ ಜಗಳವಾಡಿದ್ದಾನೆ. ತನ್ನ ಜೊತೆ ಮದುವೆ ಮಾಡಿಕೊಡುವಂತೆ ಒತ್ತಾಯಿಸಿದ್ದಾನೆ. ಬಾಲಕಿಯ ತಾಯಿಯ ಮೇಲೆ ಹಲ್ಲೆ ಮಾಡಿ, ಬಾಲಕಿಯನ್ನು ಎಳೆದೊಯ್ದು ಕೃತ್ಯ ಎಸಗಿದ್ದಾನೆ ಎಂಬುದು ತನಿಖೆಯಿಂದ ತಿಳಿದು ಬಂದಿದೆ ಎಂದು ಹೇಳಿದರು.
ಇದನ್ನು ನಿಜಕ್ಕು ಮನುಷ್ಯರು ಒಪ್ಪಿಕೊಳ್ಳುವ ಕೃತ್ಯವಲ್ಲ. ಈಗಾಗಲೇ ಆರೋಪಿಯನ್ನು ಬಂಧಿಸಲಾಗಿದೆ. ಕಾನೂನಿನ ಪ್ರಕಾರ ಶಿಕ್ಷೆ ಆಗಬೇಕೆನ್ನುವ ನಿಟ್ಟಿನಲ್ಲಿ ಪೊಲೀಸರು ಕೆಲಸ ಮಾಡುತ್ತಿದ್ದಾರೆ ಎಂದರು.

ವಿಶೇಷ ಅಭಿಯೋಜಕ ನೇಮಕ
ಮೃತ ಬಾಲಕಿಯನ್ನು ಮತ್ತೆ ವಾಪಸ್ ಕರೆತರಲು ಆಗುವುದಿಲ್ಲ. ಆದರೆ, ಕುಟುಂಬಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಅಭಿಯೋಜಕರನ್ನು ನೇಮಿಸಲಾಗುವುದು. ಸ್ಪೆಷಲ್ ಕೋರ್ಟ್ ತೆರೆಯಲಾಗುವುದು ಎಂದು ಅವರು ಭರವಸೆ ಕೊಟ್ಟರು.
ಕುಟುಂಬವನ್ನು ನೋಡಿದರೆ ಬಹಳ ನೋವಾಗುತ್ತದೆ. ಬಡತನದ ಕುಟುಂಬ. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಪರಿಹಾರದ ಬಗ್ಗೆ ಮಾತನಾಡಲು ಆಗುವುದಿಲ್ಲ. ನೀತಿ ಸಂಹಿತೆ ಮುಗಿದ ಕೂಡಲೇ ಸರ್ಕಾರ ಕ್ರಮ ಕೈಗೊಳ್ಳಲಿದ್ದೇವೆ.
ಪ್ರಕರಣದ ತನಿಖೆಯ ವರದಿ ಆಧರಿಸಿ ಅಧಿಕಾರಿಗಳ ಮೇಲೆ ತಪ್ಪು ಕಂಡು ಬಂದರೂ ಸಹಿತ ಕ್ರಮ ಕೈಗೊಳ್ಳಲಾಗುವುದು. ಇಂತಹ ಪ್ರಕರಣಗಳಲ್ಲಿ ನಿರ್ಲಕ್ಷ್ಯ ಮಾಡಲಾಗುವುದಿಲ್ಲ. ತನಿಖೆ ಮುಗಿಯುವವರೆಗೂ ಯಾವುದೇ ಹೇಳಿಕೆ ಕೊಡಲು ಆಗುವುದಿಲ್ಲ. ಇದರಿಂದ ತನಿಖೆಗೆ ಅಡ್ಡಿಯಾಗುತ್ತದೆ. ವರದಿ ಆಧರಿಸಿ ಕ್ರಮ ಜಾರಿಯಾಗಲಿದೆ ಎಂದು ವಿವರಿಸಿದರು.
ಮಾಜಿ ಮುಖ್ಯಮಂತ್ರಿಗಳ ಸರ್ಟಿಫಿಕೇಟ್ ಬೇಕಿಲ್ಲ
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಮಾಜಿ ಸಿಎಂ ತಮ್ಮ ಅಧಿಕಾರವಧಿಯಲ್ಲಿನ ಅಂಕಿ-ಅಂಶಗಳನ್ನು ತೆಗೆಸಿ ನೋಡಿದರೆ ತಿಳಿಯುತ್ತದೆ. ಬಿಜೆಪಿ ಕಾಲದಲ್ಲಿ ಎಷ್ಟು ಕೊಲೆ, ರೇಪ್, ಅಪರಾಧ ಚಟುವಟಿಕೆಗಳಿತ್ತು ಎಂಬುದು ಗೊತ್ತಾಗುತ್ತದೆ. ಆಗ ಅವರಿಗೆ ಅರ್ಥವಾಗುತ್ತದೆ.
ಜಗದೀಶ್ ಶೆಟ್ಟರ್ ಅವರಿಂದ ಸರ್ಟಿಫಿಕೇಟ್ ತೆಗೆದುಕೊಳ್ಳಬೇಕಿಲ್ಲ. ಜನಗಳಿಂದ ಸರ್ಟಿಫಿಕೇಟ್ ತೆಗೆದುಕೊಳ್ಳಬೇಕು. ಜನಗಳೇ ನಮಗೆ ಸರ್ಟಿಫಿಕೇಟ್ ಕೊಡುತ್ತಾರೆ, ಜಗದೀಶ್ ಶೆಟ್ಟರ್ ಅಲ್ಲ ಎಂದು ತಿರುಗೇಟು ಕೊಟ್ಟರು. ಈ ವೇಳೆ ಶಾಸಕ ಡಾ.ಮಂಥರ್ ಗೌಡ, ಐಜಿಪಿ ಅಮಿತ್ ಸಿಂಗ್, ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಉಪಸ್ಥಿತರಿದ್ದರು.












Click it and Unblock the Notifications