Holiday: ರಾಜ್ಯದ ಈ ಜಿಲ್ಲೆಯಲ್ಲಿ ಮೇ 29, 30ರಂದು ಎಲ್ಲಾ ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
Schools and Colleges Holiday: ರಾಜ್ಯದಲ್ಲಿ ಬೇಸಿಗೆ ರಜೆ ಮುಕ್ತಾಯವಾಗಿದ್ದು, ಇಂದಿನಿಂದ ಅಂದರೆ ಮೇ 29ರಿಂದ ರಾಜ್ಯಾದ್ಯಂತ ಶಾಲೆಗಳು ಆರಂಭ ಆಗಲಿವೆ. ಈ ನಡುವೆಯೇ ಜಿಲ್ಲೆಯೊಂದರಲ್ಲಿ ಶಾಲಾ-ಕಾಲೇಜುಗಳು ಹಾಗೂ ಅಂಗನವಾಡಿ ಕೇಂದ್ರಗಳಿಗೆ ಗುರುವಾರ ಮತ್ತು ಶುಕ್ರವಾರ ರಜೆ ಘೋಷಣೆ ಮಾಡಲಾಗಿದೆ. ಹಾಗಾದ್ರೆ ಕಾರಣ ಏನೆಂದು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಶಾಲಾ-ಕಾಲೇಜುಗಳಿಗೆ ಹಲವು ಜಿಲ್ಲೆಗಳಲ್ಲಿ ಬೇಸಿಗೆ ರಜೆ ಸೇರಿದಂತೆ ವರ್ಷದ ಆರಂಭದಿಂದಲೂ ಸಾಲು ರಜೆಗಳನ್ನೇ ನೀಡಲಾಗಿದೆ. ಪ್ರತಿಭಟನೆ, ವಿಶೇಷ ಕಾರ್ಯಕ್ರಮಗಳು ಸೇರಿದಂತೆ ಹಲವು ಕಾರಣಗಳಿಂದ ಕೆಲವು ಜಿಲ್ಲೆಗಳಲ್ಲಿ ರಜೆಗಳನ್ನು ನೀಡಲಾಗಿದ್ದು, ವಿದ್ಯಾರ್ಥಿಗಳಿಗೆ ರಜೆಗಳ ಹಬ್ಬದೂಟವನ್ನೇ ಬಡಿಸಿದಂತಾಗಿದೆ.

ಇಂದಿನಿಂದ ಬೇಸಿಗೆ ರಜೆ ಮುಗಿದು ರಾಜ್ಯಾದ್ಯಂತ ಶಾಲೆಗಳು ಆರಂಭವಾಗುತ್ತಿವೆ. ಈ ನಡುವೆಯೇ ಭಾರೀ ಮಳೆ ಮುಂದುವರೆದ ಕಾರಣ ಮಕ್ಕಳ ಹಿತದೃಷ್ಟಿಯಿಂದ ಕೊಡಗು ಜಿಲ್ಲೆಯಲ್ಲಿ ಮೇ 29 ಹಾಗೂ 30ರಂದು ಎರಡು ದಿನ ಶಾಲಾ-ಕಾಲೇಜುಗಳು ಹಾಗೂ ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಈಗಾಗಲೇ ಇದೇ ಪರಿಸ್ಥಿತಿ ಹಿನ್ನೆಲೆ ದಕ್ಷಿಣ ಕನ್ನಡ, ಉಡುಪಿ, ಮೈಸೂರು ಭಾಗದಲ್ಲೂ ರಜೆ ಘೋಷಿಸಲಾಗಿತ್ತು.
ಈ ಬಾರಿ ಅವಧಿಗೂ ಮುನ್ನ ಮುಂಗಾರು ಎಂಟ್ರಿ ಕೊಟ್ಟಿದ್ದು, ರಾಜ್ಯದ ಹಲವು ಜಿಲ್ಲಗಳಲ್ಲಿ ಭಾರೀ ಮಳೆ ಸುರಿದ ಕಾರಣ ನದಿ-ಕೆರೆ, ಕಟ್ಟೆಗಳು ತುಂಬುವುದಲ್ಲದೆ ಅವಾಂತರಗಳೇ ಸೃಷ್ಟಿಯಾಗಿವೆ. ಹಾಗೆಯೇ ಇದೀಗ ಕೊಡಗು ಜಿಲ್ಲೆಯಲ್ಲಿ ಮಳೆ ಬಿರುಸುಗೊಂಡಿರುವ ಕಾರಣ ಗುರುವಾರ, ಶುಕ್ರವಾರ ಅಂಗನವಾಡಿ ಮತ್ತು ಶಾಲಾ-ಕಾಲೇಜುಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿ ವೆಂಕಟರಾಜಾ ಆದೇಶ ಹೊರಡಿಸಿದ್ದಾರೆ.
ರೆಡ್ ಅಲರ್ಟ್ ಘೋಷಣೆ: ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ಭಾರೀ ಮಳೆ ಮುಂದುವರೆಯುವ ಮುನ್ಸೂಚನೆ ಇರುವ ಹಿನ್ನೆಲೆ ಕೊಡಗು ಜಿಲ್ಲೆಗೆ ಎರಡು ದಿನ ರೆಡ್ ಅಲರ್ಟ್ ಘೋಷಿಸಲಾಗಿದೆ. ಆದ್ದರಿಂದ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಮಕ್ಕಳ ಹಿತದೃಷ್ಟಿಯಿಂದ ರಜೆ ನಿರ್ಧಾರ ತೆಗೆದುಕೊಂಡಿದೆ. ಅಲ್ಲದೆ, ಜಿಲ್ಲೆಗೆ ಆಗಮಿಸಿದ ಎನ್‌ಡಿಆರ್‌ಎಫ್ ತಂಡವು ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧವಾಗಿರಬೇಕು ಎಂದು ಎಚ್ಚರಿಕೆ ನೀಡಿದೆ. ಈಗಾಗಲೇ ಜಿಲ್ಲೆಯ ಹಲವೆಡೆ ಮಳೆರಾಯ ದೊಡ್ಡ-ದೊಡ್ಡ ಅವಾಂತರಗಳೇ ಸೃಷ್ಟಿಸಿದ್ದಾನೆ.
ಕೊಡಗು ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸತತವಾಗಿ ಮಳೆರಾಯ ಆರ್ಭಟ ಮುಂದುವರೆಸಿದ್ದಾನೆ. ಈ ಹಿನ್ನೆಲೆ ಜಿಲ್ಲಾಡಳಿತ ಅವಧಿಗೆ ಮೊದಲೇ ಎನ್‌ಡಿಆರ್‌ಎಫ್ ತಂಡವನ್ನು ಜಿಲ್ಲೆಗೆ ಕರೆಸಿಕೊಂಡಿದೆ. ಬೆಂಗಳುರಿನ 10ನೇ ಬೆಟಾಲಿಯನ್ನ 30 ಯೋಧರು ಈಗಾಗಲೇ ಮಡಿಕೇರಿಗೆ ಬಂದು ಇಲ್ಲಿನ ಪೊಲೀಸ್ ಮೈತ್ರಿ ಹಾಲ್ನಲ್ಲಿ ಉಳಿದುಕೊಂಡಿದ್ದಾರೆ ಎಂದು ಎಂದು ತಿಳಿದುಬಂದಿದೆ.
ಈಗಾಗಲೇ ಜಿಲ್ಲಾಡಳಿತದ ಜೊತೆ ಸಭೆ ನಡೆಸಿ ಸಂಭಾವ್ಯ ಅಪಾಯಕಾರಿ ಸ್ಥಳಗಳ ಮ್ಯಾಪಿಂಗ್ ಮಾಡಿದೆ. ಕೆಲವೇ ದಿನಗಳಲ್ಲಿ ಆ ಎಲ್ಲಾ ಸ್ಥಳಗಳಿಗೆ ತೆರಳಿ ಪರಿಶೀಲನೆ ನಡೆಸಲು ಮುಂದಾಗಿದೆ. ತುರ್ತು ಸಂದರ್ಭದಲ್ಲಿ ಬಳಸಲು ಬೇಕಾದ ಅಗತ್ಯ ರಕ್ಷಣಾ ಪರಿಕರಗಳನ್ನೂ ಕೂಡ ಸಿದ್ಧತೆ ಮಾಡಿಕೊಂಡಿದ್ದಾರೆ. ಇನ್ಸ್ಪೆಕ್ಟರ್ ಹರೀಶ್ ಪಾಂಡೆ ನೇತೃತ್ವದ ತಂಡ ಜನರಿಗೆ ಯಾವುದೇ ತೊಂದರೆ ಆಗದಂತೆ ನಾವು ನೋಡಿಕೊಳ್ಳುತ್ತೇವೆ ಎಂದು ಅಭಯ ನೀಡಿದ್ದಾರೆ. ಇದೀಗ ಕಾವೇರಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನರು ಎಚ್ಚರಿಕೆಯಿಂದ ಇರುವಂತೆಯೂ ಸೂಚನೆ ನೀಡಲಾಗಿದೆ.












Click it and Unblock the Notifications