ಕೊಡಗಿನಲ್ಲಿ ಪುಷ್ಯ ಮಳೆ ಅಬ್ಬರ: ಭಯ ಹುಟ್ಟಿಸಿದ ಕಾಲೂರಿನ ಗುಡ್ಡಕುಸಿತ
ಮಡಿಕೇರಿ, ಜುಲೈ 24: ಕೊಡಗಿನಲ್ಲಿ ಕಳೆದ ಕೆಲವು ದಿನಗಳಿಂದ ಅಬ್ಬರಿಸುತ್ತಿರುವ ಪುಷ್ಯ ಮಳೆಗೆ ಕಾವೇರಿ, ಲಕ್ಷ್ಮಣ ತೀರ್ಥ ನದಿಗಳು ಸೇರಿದಂತೆ ಹಳ್ಳಕೊಳ್ಳಗಳು ಉಕ್ಕಿಹರಿಯುತ್ತಿದ್ದು ಹಲವೆಡೆ ಪ್ರವಾಹ ಪರಿಸ್ಥಿತಿ ಎದುರಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯ ಕಾರಣ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಆರಂಭದಿಂದಲೂ ಮುಂಗಾರು ಚೇತರಿಕೆ ಕಂಡಿರಲಿಲ್ಲ. ಜುಲೈ ತಿಂಗಳ ಆರಂಭದಲ್ಲಿ ಆರಿದ್ರಾ ಮತ್ತು ಪುನರ್ವಸು ಮಳೆ ಸ್ವಲ್ಪ ಮಟ್ಟಿಗೆ ಸುರಿದಿತ್ತಾದರೂ ಆ ನಂತರ ಹೆಚ್ಚಿನ ಮಳೆ ಸುರಿದಿರಲಿಲ್ಲ. ಆದರೆ ಪುಷ್ಯ ಮಳೆ ಆರಂಭಗೊಂಡ ನಂತರ ಕೊಡಗಿನ ಮಳೆಗಾಲದ ಪರಿಸ್ಥಿ್ತಿ ಬದಲಾಗಿದ್ದು, ಮುಂಗಾರಿನ ಅಬ್ಬರಕ್ಕೆ ಕಾವೇರಿ ನದಿ ತುಂಬಿ ಹರಿಯುತ್ತಿದ್ದರೆ, ಹಾರಂಗಿ ಜಲಾಶಯ ಭರ್ತಿಯಾಗುವ ಹಂತದಲ್ಲಿದ್ದು, ಗರಿಷ್ಠ 2859 ಅಡಿಗಳ ಜಲಾಶಯದಲ್ಲಿ 2853.77 ಅಡಿಯಷ್ಟು ಉಳಿಸಿಕೊಂಡು ಹೆಚ್ಚುವರಿ ಸುಮಾರು 23937 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

ಕಾವೇರಿಯ ಉಗಮಸ್ಥಾನ ತಲಕಾವೇರಿ ಹಾಗೂ ಸುತ್ತಮುತ್ತ ಮಳೆಯಾಗುತ್ತಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬರುತ್ತಿರುವುದರಿಂದ ಕಾವೇರಿ, ಕನ್ನಿಕೆ, ಸುಜ್ಯೋತಿ ಸಂಗಮದ ಭಾಗಮಂಡಲದ ತ್ರಿವೇಣಿ ಸಂಗಮ ಸಂಪೂರ್ಣ ಜಲಾವೃತವಾಗಿದೆ. ಇದರಿಂದಾಗಿ ಕಾವೇರಿ ನದಿ ತಟದಲ್ಲಿರುವ ಭಗಂಡೇಶ್ವರ ದೇಗುಲದ ಮೆಟ್ಟಿಲವರೆಗೆ ನೀರು ಬಂದಿದೆ. ಇಷ್ಟೇ ಅಲ್ಲದೆ ಭಾಗಮಂಡಲ ಮತ್ತು ನಾಪೋಕ್ಲು ಸಂಪರ್ಕ ಕಲ್ಪಿಸುವ ಸೇತುವೆ ಮೇಲೆ ನೀರು ಹರಿಯುತ್ತಿರುವುದರಿಂದ ಸಂಪರ್ಕ ಕಡಿದುಕೊಂಡಿದೆ.
ಭಾಗಮಂಡಲ ಜಲಾವೃತವಾಗುವುದು ಏಕೆ?
ಸುತ್ತಮುತ್ತಲೂ ಬೆಟ್ಟ ಪ್ರದೇಶವಿದ್ದು, ಮೂರು ನದಿಗಳು ಹರಿದು ಬಂದು ಭಾಗಮಂಡಲದಲ್ಲಿ ಕೂಡುವುದರಿಂದ ಮತ್ತು ನದಿಗಳು ರಭಸವಾಗಿ ಹರಿದು ಹೋಗಲು ಸಾಧ್ಯವಾಗದ ಕಾರಣ ಇಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುವುದಲ್ಲದೆ, ಭಾಗಮಂಡಲ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗದ್ದೆ, ತೋಟಗಳು ಜಲಾವೃತವಾಗುತ್ತದೆ. ಅದರಲ್ಲೂ ತಲಕಾವೇರಿ ವ್ಯಾಪ್ತಿಯಲ್ಲಿ ಅತಿಹೆಚ್ಚು ಮಳೆ ಸುರಿಯುತ್ತಿದ್ದು, ನೀರು ಒಮ್ಮೆಲೆ ಹರಿದು ಬರುವುದರಿಂದ ಪ್ರತಿವರ್ಷವೂ ಈ ಪ್ರದೇಶ ಜಲಾವೃತವಾಗುವುದು ಮಾಮೂಲಿಯಾಗಿದೆ.

ಇನ್ನು ಕಾವೇರಿ ನದಿ ಹರಿಯುವ ಪ್ರದೇಶಗಳ ಪೈಕಿ ಕೆಲವು ಗ್ರಾಮಗಳು ಪ್ರವಾಹದಿಂದ ಜಲಾವೃತವಾಗಿ ಜನ ಕಷ್ಟಪಡುವುದು ಪ್ರತಿ ವರ್ಷವೂ ನಡೆಯುತ್ತದೆ. ಭಾಗಮಂಡಲದಿಂದ ಮುಂದೆ ಹರಿಯುವ ಕಾವೇರಿ, ಕಕ್ಕಬೆಯ ಬೊಳಿಬಾಣೆ, ಕೊಟ್ಟಮುಡಿ, ಬಲಮುರಿ, ಬೇತ್ರಿ, ಕೊಂಡಂಗೇರಿ, ಕಟ್ಟೆಮಾಡು ಚೆಟ್ಟಳ್ಳಿ, ಕರಡಿಗೋಡು ಮೊದಲಾದ ಪ್ರದೇಶಗಳಲ್ಲಿ ಪ್ರವಾಹನ್ನುಂಟು ಮಾಡುತ್ತಿದ್ದು, ಇಲ್ಲಿನ ಹಲವು ಮನೆ, ಗದ್ದೆ, ತೋಟಗಳು ಜಲಾವೃತವಾಗುತ್ತವೆ. ನದಿ ತಟದಲ್ಲಿ ಮನೆ ಮಾಡಿಕೊಂಡಿರುವ ಬಹಳಷ್ಟು ನಿವಾಸಿಗಳಿಗೆ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಎಚ್ಚರಿಕೆಗಳನ್ನು ನೀಡಲಾಗುತ್ತಿದೆ.
ಶವ ಸಂಸ್ಕಾರಕ್ಕೂ ಪರದಾಡುವ ಸ್ಥಿತಿ
ಹಿಂದೆ ಮಳೆ ಪ್ರವಾಹವುಂಟಾದರೂ ಅಷ್ಟೊಂದಾಗಿ ಹಾನಿಯಾಗುತ್ತಿರಲಿಲ್ಲ. ಜತೆಗೆ ಪ್ರವಾಹವೂ ಹೆಚ್ಚು ದಿನಗಳ ಕಾಲ ಇರುತ್ತಿರಲಿಲ್ಲ. ಆದರೀಗ 2018ರ ಬಳಿಕ ಪ್ರತಿ ವರ್ಷವೂ ಪ್ರವಾಹ ಏರ್ಪಡುತ್ತಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಮತ್ತು ಪ್ರಾಣ ಭಯವೂ ಹೆಚ್ಚಾಗುತ್ತಿದೆ. ಈಗಾಗಲೇ ಹಲವರು ಮನೆ ಆಸ್ತಿ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಜತೆಗೆ ಬೆಳೆಹಾನಿಯೂ ಸಾಕಷ್ಟು ಪ್ರಮಾಣದಲ್ಲಿ ಸಂಭವಿಸುತ್ತಿದೆ. ಇದೀಗ ಕಾವೇರಿ ಉಕ್ಕಿ ಹರಿಯುತ್ತಿರುವ ಪರಿಣಾಮ ಕಾಫಿ ಸೇರಿದಂತೆ ಕೃಷಿ ಬೆಳೆಗಳು ನೀರು ಪಾಲಾಗಿವೆ.

ಜಿಲ್ಲೆಗೊಂದು ಸುತ್ತು ಹೊಡೆದರೆ ಮಳೆಯಿಂದ ಹಲವು ಅನಾಹುತಗಳು ಸೃಷ್ಟಿಯಾಗಿದ್ದು, ಕೆಲವು ಕಡೆ ವಿದ್ಯುತ್ ಕಂಬಗಳು ನೆಲಕ್ಕುರುಳಿದ ಕಾರಣ ವಿದ್ಯುತ್ ಇಲ್ಲದೆ ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ. ಮಳೆಯಿಂದಾಗಿ ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಜಂಬೂರು ಗ್ರಾಮದ ನಿವಾಸಿಯಾದ ವತ್ಸಲ ಎಂಬುವರ ಮನೆಯ ಹಿಂಭಾಗದ ಗೋಡೆಯು ಕುಸಿದು ಬಿದ್ದಿದ್ದು ಪರಿಣಾಮ ಮನೆಯ ಮೇಲ್ಚಾವಣಿ, ಗೋಡೆ ,ಶೀಟ್ ಗಳಿಗೆ ಹಾನಿಯಾಗಿದೆ. ಇನ್ನೊಂದೆಡೆ ತುಂಬಿ ಹರುತ್ತಿರುವ ಕಾವೇರಿ ನದಿಯಿಂದ ಸಂಪರ್ಕವಿಲ್ಲದೆ, ಜಲಾವೃತಗೊಂಡು ಸೂಕ್ತ ಸ್ಥಳವಿಲ್ಲದೆ ಹಕ್ಕೆ ಗ್ರಾಮದಲ್ಲಿ ಮೃತರ ಶವ ಸಂಸ್ಕಾರಕ್ಕೆ ಜನ ಪರದಾಡಿದ ಘಟನೆಯೂ ನಡೆದಿದೆ.
ಭಯ ಹುಟ್ಟಿಸಿದ ಕಾಲೂರಿನ ಗುಡ್ಡಕುಸಿತ
ಮಡಿಕೇರಿ ಸಮೀಪದ ಕಾಲೂರು ರಸ್ತೆಯಲ್ಲಿ ಗುಡ್ಡ ಕುಸಿದಿದ್ದು ಸಂಚಾರ ವ್ಯತ್ಯಯಗೊಂಡಿದೆ, ಕಲ್ಲುಮಣ್ಣು ತೆರವುಗೊಳಿಸುವ ತನಕ ಬದಲಿ ಮಾರ್ಗದಲ್ಲಿ ಚಲಿಸುವಂತೆ ಸೂಚಿಸಲಾಗಿದೆ. ಈ ವ್ಯಾಪ್ತಿಯಲ್ಲಿ ಗುಡ್ಡ ಕುಸಿತವಾಗುತ್ತದೆ ಎಂದರೆ ಜನ ಭಯ ಪಡುವಂತಾಗಿದೆ. 2018ರಲ್ಲಿ ಈ ವ್ಯಾಪ್ತಿಯಲ್ಲಿ ಭೂಕುಸಿತ ಸಂಭವಿಸಿ ಸಂಕಷ್ಟ ಅನುಭವಿಸುವಂತಾಗಿತ್ತು. ಇದೀಗ ಮತ್ತೆ ಅಲ್ಲಲ್ಲಿ ಸಣ್ಣಪುಟ್ಟ ಕುಸಿತವಾದರೂ ಜನ ಆತಂಕ ಪಡುವಂತಾಗಿದೆ.
ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂರಂಭಡ ಉದಯಶಂಕರ್ ಮನೆಯ ಹತ್ತಿರ ಭಾರೀ ಗಾತ್ರದ ಮರ ಬಿದ್ದು ರಸ್ತೆ ಸಂಚಾರ ಕಡಿತವಾಗಿದೆ. ಸುಂಟಿಕೊಪ್ಪ ಪಂಪ್ ಹೌಸ್ ರಸ್ತೆಯ ಜಯಲಕ್ಷ್ಮಿ ಎಂಬುವವರ ಮನೆಯ ಗೋಡೆ ಮಳೆ ಗಾಳಿಗೆ ಕುಸಿದು ಬಿದ್ದಿದ್ದು ಭಯದಲ್ಲಿ ಬದುಕುವಂತಾಗಿದೆ. ಇನ್ನೊಂದೆಡೆ ಮತ್ತೆ ಧಾರಾಕಾರವಾಗಿ ಸುರಿದರೆ ಕಾವೇರಿ ನದಿ ರೌದ್ರಾವತಾರ ತಾಳಿದರೆ ಹಿಂದೆ ಆದ ಅನಾಹುತಗಳು ಮರುಕಳಿಸಿ ಬಿಡುತ್ತಾ ಎಂಬ ಭಯವೂ ಜನರನ್ನು ಕಾಡುತ್ತಿದೆ.
ಮಳೆಗೆ ಕೊಚ್ಚಿ ಹೋದ ಕಾಲು ಸೇತುವೆ
ಇದೆಲ್ಲದರ ನಡುವೆ ದಕ್ಷಿಣ ಕೊಡಗಿನಲ್ಲಿ ಲಕ್ಷ್ಮಣತೀರ್ಥ ನದಿ ತುಂಬಿ ಹರಿಯುತ್ತಿರುವುದರಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಪೊನ್ನಂಪೇಟೆ ತಾಲೂಕು ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗರಹೊಳೆ ರಾಷ್ಟ್ರೀಯ ಅಭಯಾರಣ್ಯದಂಚಿನಲ್ಲಿರುವ ಚಿಣ್ಣರಹಾಡಿಗೆ ಹೋಗುವ ತೋಡಿಗೆ ನಿರ್ಮಿಸಿದ್ದ ಕಾಲು ಸೇತುವೆ ಮಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ.
ಇದರಿಂದ ಹಾಡಿಯ ಗಿರಿಜನರು ಬೇರೆಡೆ ಕೆಲಸ ಕಾರ್ಯಕ್ಕೆ ಹೋಗಿ ಬರಲು ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳು ಸುತ್ತಿ ಬಳಸಿ ಕಾಫಿ ತೋಟ ಮತ್ತು ಗದ್ದೆಗಳ ಮೂಲಕ ಕಾಲ್ನಡಿಗೆಯಲ್ಲಿ ಮುಖ್ಯ ರಸ್ತೆಗೆ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಡಿಯ ಹತ್ತಿರ ವಾಹನ ಸಂಚಾರಕ್ಕೆ ಅವಕಾಶವಾಗದೆ ಅನಾರೋಗ್ಯ ಪೀಡಿತರು ಆಸ್ಪತ್ರೆಗೆ ಹೋಗಿ ಬರಲು ಪರದಾಡುವಂತಾಗಿದೆ.
ಒಟ್ಟಾರೆಯಾಗಿ ಹೇಳಬೇಕೆಂದರೆ ಜಿಲ್ಲೆಯಲ್ಲಿ ಸುರಿಯುತ್ತಿರುವ ಪುಷ್ಯಮಳೆಯಿಂದ ಮುಂಗಾರು ಚೇತರಿಸಿಕೊಂಡಂತೆ ಕಂಡರೂ ಒಮ್ಮೆಲೆ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದರಿಂದ ಕೇವಲ ಪ್ರವಾಹ ಮಾತ್ರವಲ್ಲದೆ, ಗುಡ್ಡಕುಸಿತ, ಮನೆಕುಸಿತ, ಮರ, ವಿದ್ಯುತ್ ಕಂಬಗಳು ಬೀಳುವುದು ಹೀಗೆ ಹಲವು ಅನಾಹುತಗಳು ಸಂಭವಿಸುತ್ತಿದೆ. ಈಗಾಗಲೇ ಜಿಲ್ಲಾಡಳಿತ ಮಳೆಗಾಲದಲ್ಲಿ ಸಂಭವಿಸಬಹುದಾದ ಅನಾಹುತಗಳನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಆದರೂ ಜನ ಎಚ್ಚರವಾಗಿರುವುದು ಒಳ್ಳೆಯದು.












Click it and Unblock the Notifications