ಕೊಡಗು: ಟ್ರಕ್ಕಿಂಗ್ ವೇಳೆ ಯುವಕ ಹೃದಯಾಘಾತದಿಂದ ಸಾವು
ಮಡಿಕೇರಿ, ಡಿಸೆಂಬರ್, 25: ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಯುವಕರಿಗೆ ಹೆಚ್ಚಾಗಿ ಹೃದಯಾಘಾತ ಆಗುತ್ತಿದೆ. ಹಾಗೆಯೇ ಇದೀಗ ಚಾರಣಕ್ಕೆಂದು ತೆರಳಿದ್ದ ವೇಳೆ ಹರಿಯಾಣ ಮೂಲದ ಯುವಕನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮಡಿಕೇರಿ ತಾಲೂಕಿನ ನಾಪೋಕ್ಲು ಬಳಿ ನಡೆದಿದೆ.
ಹರಿಯಾಣ ಮೂಲದ ಜತಿನ್ ಕುಮಾರ್ (25) ಮೃತ ದುರ್ದೈವಿ ಆಗಿದ್ದಾರೆ. ಈತ ತನ್ನ ಸ್ನೇಹಿತರೊಂದಿಗೆ ನಾಪೋಕ್ಲು ಬಳಿಯ ಕಕ್ಕಬ್ಬೆ ತಡಿಯಂಡಮೋಳು ಬೆಟ್ಟಕ್ಕೆ ಚಾರಣಕ್ಕೆ ತೆರಳಿದ್ದು, ಈ ವೇಳೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಜತಿನ್ ಕೆಲಸ ಮಾಡುತ್ತಿದ್ದರು. ವಾರಾತ್ಯದ ರಜೆ ಇದ್ದ ಹಿನ್ನೆಲೆ ಭಾನುವಾರ ತನ್ನ ಐವರು ಸಹೋದ್ಯೋಗಿಗಳೊಂದಿಗೆ ಮಡಿಕೇರಿ ಆಗಿಸಿದ್ದರು ಎನ್ನಲಾಗಿದೆ.

ಕ್ಕಬ್ಬೆ ತಡಿಯಂಡಮೋಳು ಬೆಟ್ಟ ಹತ್ತಿದ ಬಳಿಕ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಸ್ಥಳಕ್ಕೆ ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್, ಅರಣ್ಯ ಇಲಾಖೆಯ ಅಧಿಕಾರಿ ಸುರೇಶ್ ಮತ್ತು ಸಿಬ್ಬಂದಿ ತೆರಳಿ ಮೃತದೇಹವನ್ನು ಮಡಿಕೇರಿ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಸದ್ಯ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ಕಾರು ಹಾಗೂ ಟಿಟಿ ವಾಹನದ ನಡುವೆ ಅಪಘಾತ
ಕಾರು ಹಾಗೂ ಟಿಟಿ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮಹಿಳೆ ಸೇರಿದಂತೆ 10ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ರಾಮಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕೌದಳ್ಳಿ ಗ್ರಾಮದ ಸಮೀಪ ನಡೆದಿದೆ.
ಇನ್ನು ಆನೇಕಲ್ ತಾಲೂಕಿನ ನಿವಾಸಿ ಮಾಲಾ ತೀವ್ರ ಗಾಯಗೊಂಡು ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿ ವಾಪಸ್ ಆನೇಕಲ್ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಮಾರ್ಗ ಮಧ್ಯದಲ್ಲಿ ಟಿಟಿ ವಾಹನ ಹಾಗೂ ಕಾರು ಮುಖಾಮುಖಿ ಡಿಕ್ಕಿ ಹೊಡೆದಿದ್ದು, ಪರಿಣಾಮ ಕಾರಿನಲ್ಲಿದ್ದ ಓರ್ವ ಮಹಿಳೆ ಹಾಗೂ ಟಿಟಿಯಲಿದ್ದ 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ತೀವ್ರ ಗಾಯಗೊಂಡಿದ್ದ ಆನೇಕಲ್ ಗ್ರಾಮದ ನಿವಾಸಿ ಹರೀಶ್ ಅವರ ಪತ್ನಿ ಮಾಲಾ ಅವರನ್ನು ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇನ್ನು ಇವರ ಇಬ್ಬರು ಮಕ್ಕಳಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಉಳಿದಂತೆ ಟಿಟಿ ವಾಹನದಲ್ಲಿದ್ದ ಹತ್ತಕ್ಕೂ ಹೆಚ್ಚು ಜನರು ಸಹ ಗಾಯಗೊಂಡಿದ್ದು, ಸಮೀಪದ ಕೌದಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡು ಖಾಸಗಿ ಆಸ್ಪತ್ರೆಗಳಿಗೆ ತೆರಳಿದ್ದಾರೆ ಎನ್ನಲಾಗಿದೆ.












Click it and Unblock the Notifications