ಗೌರಿ ಹಬ್ಬದಂದು ಕೊಡಗಿನ ಹೊನ್ನಮ್ಮನಿಗೆ ವಿಶೇಷ ಪೂಜೆ: ಇಲ್ಲದೆ ಕ್ಷೇತ್ರದ ಮಹತ್ವ
ಮಡಿಕೇರಿ, ಸೆಪ್ಟೆಂಬರ್ 18: ಕೊಡಗಿನಲ್ಲಿ ಲೋಕಕಲ್ಯಾಣಕ್ಕೆ ನದಿಯಾಗಿ ಹರಿದ ಕಾವೇರಿ ಒಂದು ಕಡೆಯಾದರೆ ಇನ್ನೊಂದು ಕಡೆ ಊರಿನ ಹಿತಕ್ಕಾಗಿ ತನ್ನನ್ನೇ ಬಲಿದಾನ ಗೈದ ಹೊನ್ನಮ್ಮ ಇವರಿಬ್ಬರು ಭಕ್ತರ ಪಾಲಿಗೆ ಮಾತೆಯರಾಗಿ ಪೂಜಿಸಲ್ಪಡುತ್ತಾರೆ. ಕಾವೇರಿಗೆ ಅಕ್ಟೋಬರ್ ತಿಂಗಳ ತುಲಾ ಸಂಕ್ರಮಣದಂದು ಪೂಜೆ ಸಲ್ಲಿಸಿದರೆ, ಹೊನ್ನಮ್ಮನಿಗೆ ಗೌರಿ ಹಬ್ಬದಂದು ಪೂಜೆ ಸಲ್ಲಿಸಲಾಗುತ್ತಿದೆ.
ಇದೀಗ ಗೌರಿ ಹಬ್ಬ ಬಂದಿದ್ದು ಅದರಂತೆ ಹೊನ್ನಮ್ಮನಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿ ಒಳಿತನ್ನು ಬೇಡಲಾಗುತ್ತದೆ. ಅಷ್ಟೇ ಅಲ್ಲದೆ ಮುತ್ತೈದೆ ಸ್ಥಾನವನ್ನು ಕರುಣಿಸುವಂತೆ ಪ್ರಾರ್ಥಿಸಲಾಗುತ್ತದೆ. ಇಷ್ಟಕ್ಕೂ ಕಾವೇರಿ ತಲಕಾವೇರಿಯಲ್ಲಿ ಉಗಮವಾಗುವುದು ಗೊತ್ತು. ಆದರೆ ಹೊನ್ನಮ್ಮ ಇರುವುದೆಲ್ಲಿ ಎಂಬ ಪ್ರಶ್ನೆಗಳು ಮೂಡದಿರದು. ಹೀಗಾಗಿ ಹೊನ್ನಮ್ಮನ ಬಗ್ಗೆ ಒಂದಿಷ್ಟು ವಿಚಾರಗಳನ್ನು ಹೇಳಲೇ ಬೇಕಾಗುತ್ತದೆ.
ಹೊನ್ನಮ್ಮನ ಕೆರೆಯ ದಡದಲ್ಲಿ ನೆಲೆನಿಂತು ಭಕ್ತರನ್ನು ಕಾಯುತ್ತಿದ್ದಾಳೆ. ಈಕೆಯ ದರ್ಶನ ಮಾಡಬೇಕಾದರೆ ಕೊಡಗಿನ ಸೋಮವಾರಪೇಟೆಯಿಂದ ಶನಿವಾರಸಂತೆ ಕಡೆಗಿನ ರಸ್ತೆಯಲ್ಲಿ ಸುಮಾರು 6ಕಿ.ಮೀ. ಸಾಗಿ ದೊಡ್ಡಮಳ್ತೆ ಎಂಬ ಗ್ರಾಮ ತಲುಪಿ ಅಲ್ಲಿಂದ ಬಲಕ್ಕೆ ಇರುವ ರಸ್ತೆಯಲ್ಲಿ ತೆರಳಿದರೆ ಹೊನ್ನಮ್ಮನ ಸನ್ನಿಧಿಗೆ ತಲುಪಬಹುದು. ಇಲ್ಲಿಗೆ ತೆರಳಿದವರಿಗೆ ವಿಶಾಲವಾದ ಕೆರೆ ಮತ್ತು ದಂಡೆಯಲ್ಲಿ ನಿಂತ ಹೊನ್ನಮ್ಮನ ದರ್ಶನವಾಗುತ್ತದೆ.

ಕೆರೆಗೆ ಹೊನ್ನಮ್ಮ ಹೆಸರು ಬಂದಿದ್ದೇಗೆ?
ಇಲ್ಲಿರುವ ಕೆರೆಯನ್ನು ಹೊನ್ನಮ್ಮನ ಕೆರೆ ಎಂದೇ ಕರೆಯುತ್ತಾರೆ. ಈ ಕೆರೆಗೆ ಹೊನ್ನಮ್ಮನ ಕೆರೆ ಎಂಬ ಹೆಸರು ಹೇಗೆ ಬಂತು? ಕೆರೆಯ ದಡದಲ್ಲಿ ಹೊನ್ನಮ್ಮ ಹೇಗೆ ಪ್ರತಿಷ್ಠಾಪನೆಗೊಂಡಳು ಎಂಬಿತ್ಯಾದಿ ಪ್ರಶ್ನೆಗಳು ಮೂಡುವುದು ಸಹಜ. ಇದಕ್ಕೆಲ್ಲ ಉತ್ತರ ಪೌರಾಣಿಕ ಕಥೆ ಹೇಳುತ್ತದೆ. ಆ ಕಥೆ ಹೊನ್ನಮ್ಮ ಯಾರು? ಇವತ್ತು ನಳನಳಿಸುವ ವಿಶಾಲ ಕೆರೆಯ ಹಿಂದಿನ ಆಕೆಯ ಪಾತ್ರವೇನು? ಹೆಣ್ಣುಮಕ್ಕಳೇಕೆ ಆಕೆಗೆ ಬಾಗಿನ ಅರ್ಪಿಸಿ ಪೂಜೆ ಸಲ್ಲಿಸುತ್ತಾರೆ ಎಂಬಿತ್ಯಾದಿ ವಿಚಾರಗಳನ್ನು ಮನದಟ್ಟು ಮಾಡಿಕೊಡುತ್ತದೆ.
1106ರ ಕಾಲಘಟ್ಟದಲ್ಲಿ ಇವತ್ತಿನ ಹೊನ್ನಮ್ಮನಕೆರೆಯಿರುವ ಪ್ರದೇಶವಾದ ದೊಡ್ಡಮಳ್ತೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶವನ್ನು ಏಳುಸಾವಿರ ಸೀಮೆ ಎಂದು ಕರೆಯಲಾಗುತ್ತಿತ್ತಂತೆ. ಕ್ರಿ.ಶ.1034 ರಿಂದ 1297ರವರೆಗೆ ಈ ಸೀಮೆಯನ್ನು ಚಂಗಲವಾಸ್ ಎಂಬ ರಾಜಮನೆತನ ಆಳುತ್ತಿತ್ತಂತೆ. 1106ರಲ್ಲಿ ಆಗಿನ ಏಳುಸಾವಿರ ಸೀಮೆಗೆ ಒಳಪಟ್ಟಿದ್ದ ದೊಡ್ಡಮಳ್ತೆಯಲ್ಲಿ ವ್ಯಾಪಾರಿ ಕಲ್ಲನಕೇರಿ ಮಲ್ಲೇಗೌಡ ಎಂಬಾತ ವಾಸಿಸುತ್ತಿದ್ದನಂತೆ. ಈತ ಊರಿನ ಮುಖಂಡನಾಗಿದ್ದು, ಪರೋಪಕಾರಿಯೂ, ಮಹಾನ್ ದೈವಭಕ್ತನಾಗಿದ್ದನಂತೆ.
ಆ ಅಶರೀರವಾಣಿ ಹೇಳಿದ್ದೇನು ಗೊತ್ತಾ?
ಒಮ್ಮೆ ಗ್ರಾಮದಲ್ಲಿ ಬರಗಾಲ ಕಾಣಿಸಿಕೊಂಡಿತಂತೆ ಆಗ ಕುಡಿಯುವ ನೀರಿಗೆ ಗ್ರಾಮದಲ್ಲಿ ಹಾಹಾಕಾರ ಉಂಟಾಯಿತಂತೆ. ಪ್ರಾಣಿಪಕ್ಷಿಗಳು, ಜಾನುವಾರುಗಳು ನೀರಿಲ್ಲದೆ ಸಾಯತೊಡಗಿದವಂತೆ. ಈ ಸಂದರ್ಭ ಮಲ್ಲೇಗೌಡನಿಗೆ ಕೆರೆಯೊಂದನ್ನು ತೋಡಿ ಗ್ರಾಮದ ಜನರಿಗೆ ಉಂಟಾಗಿರುವ ನೀರಿನ ಬವಣೆಯನ್ನು ತಪ್ಪಿಸಬಹುದು ಎಂಬ ಆಲೋಚನೆ ಬಂತಂತೆ. ಕೂಡಲೇ ಆತ ಕೂಲಿಕಾರರನ್ನು ಕರೆಯಿಸಿ ಕೆರೆಯನ್ನು ತೋಡುವುದಕ್ಕೆ ಮುಂದಾದನು.

ಜನರ ಶ್ರಮದಿಂದ ವಿಶಾಲ ಕೆರೆಯೇನೋ ನಿರ್ಮಾಣವಾಯಿತಾದರೂ ನೀರು ಸಿಗಲಿಲ್ಲ. ಶಕ್ತಿಮೀರಿ ಭೂಮಿಯ ಆಳಕ್ಕೆ ತೋಡಿದರೂ ನೀರು ಮಾತ್ರ ಬರಲೇ ಇಲ್ಲ. ಇದರಿಂದ ಮಲ್ಲೇಗೌಡ ಮುಂದೇನು ಮಾಡುವುದು ಎಂದು ಚಿಂತಾಕ್ರಾಂತನಾದನು. ಈ ಸಂದರ್ಭ ಮುತ್ತೈದೆ ಹೆಣ್ಣುಮಗಳನ್ನು ಕೆರೆಗೆ ಹಾರ ನೀಡಿದರೆ ನೀರು ಬರುತ್ತೆ ಎಂಬ ಅಶರೀರವಾಣಿಯೊಂದು ಆತನಿಗೆ ಕೇಳಿಬರುತ್ತದೆ.
ಹೊನ್ನಮ್ಮನ ಗಂಡ ಪ್ರಾಣ ಬಿಟ್ಟಿದ್ದೇಕೆ?
ಆದರೆ ಕೆರೆಗೆಹಾರ ನೀಡುವುದಾದರು ಯಾರನ್ನು ಎಂದು ಮಲ್ಲೇಗೌಡ ಯೋಚಿಸುತ್ತಾ ದಿನಕಳೆಯುತ್ತಿರುತ್ತಾನೆ. ಮಾವನನ್ನು ಆವರಿಸಿದ ಚಿಂತೆಯನ್ನು ಅರಿತ ಕಿರಿಸೊಸೆ ಹೊನ್ನಮ್ಮ ಊರಿನ ಜನರ ಒಳಿತಿಗಾಗಿ ಕೆರೆಗೆ ಹಾರಿ ತನ್ನ ಪ್ರಾಣವನ್ನು ಅರ್ಪಿಸುತ್ತಾಳೆ. ಆಕೆ ಮಾಡಿದ ತ್ಯಾಗಬಲಿದಾನದ ಫಲದಿಂದ ಕೂಡಲೇ ಕೆರೆಯಲ್ಲಿ ನೀರು ತುಂಬಿ ಬರುತ್ತದೆ.
ಕೆರೆಯಲ್ಲಿ ತುಂಬಿದ ನೀರನ್ನು ಕುಡಿದು ಪ್ರಾಣಿ ಪಕ್ಷಿಗಳು, ಜನ ಜಾನುವಾರುಗಳು ಕುಡಿದು ಸಂತೋಷಪಡುತ್ತಿರುವಾಗಲೇ ದಂಡಿಗೆ ಹೋಗಿದ್ದ ಹೊನ್ನಮ್ಮನ ಪತಿ ಶಾಂತರಾಜು ಊರಿಗೆ ಬರುತ್ತಾನೆ. ಆತನಿಗೆ ಮಡದಿ ಹೊನ್ನಮ್ಮ ಕೆರೆಗೆ ಹಾರವಾಗಿರುವ ವಿಷಯ ತಿಳಿಯುತ್ತದೆ. ಮಡದಿಯ ಅಗಲಿಕೆಯ ನೋವನ್ನು ತಾಳಲಾರದೆ ಆತನೂ ಕೂಡ ಅದೇ ಕೆರೆಗೆ ಹಾರಿ ಪ್ರಾಣಬಿಡುತ್ತಾನೆ.

ಪ್ರವಾಸಿಗರಿಗೆ ಮುದ ನೀಡುವ ತಾಣ
ತನ್ನ ಸೊಸೆಯ ತ್ಯಾಗಬಲಿದಾನದ ನೆನಪಿಗಾಗಿ ಮಲ್ಲೇಗೌಡ ಕೆರೆಯ ಏರಿಯಲ್ಲೊಂದು ದೇವಾಲಯವನ್ನು ಕಟ್ಟಿಸಿ ಅಲ್ಲಿ ಬಸವೇಶ್ವರ, ಗಣಪತಿ, ಹಾಗೂ ಹೊನ್ನಮ್ಮನ ವಿಗ್ರಹವನ್ನು ಪ್ರತಿಷ್ಠಾಪಿಸುತ್ತಾನಂತೆ. ಊರಿನ ಹಿತಕ್ಕಾಗಿ ಬಲಿದಾನಗೈದ ಹೊನ್ನಮ್ಮ ಜನರ ಪಾಲಿಗೆ ದೇವರಾಗುತ್ತಾಳೆ. ನಂತರದ ಕಾಲಘಟ್ಟದಲ್ಲಿ ವರ್ಷಂಪ್ರತಿ ಗೌರಿಹಬ್ಬದ ದಿನದಂದು ಕೆರೆಗೆ ನವ ವಧುವರರು ಹಾಗೂ ಮುತ್ತೈದರು ಬಾಗಿನ ಅರ್ಪಿಸುವ ಸಂಪ್ರದಾಯ ಬಂದಿದ್ದು, ನವದಂಪತಿಗಳು ಬಾಗಿನ ಅರ್ಪಿಸಿ ತಾಯಿ ಹೊನ್ನಮ್ಮನಿಗೆ ಪೂಜೆ ಸಲ್ಲಿಸಿ ದಾಂಪತ್ಯ ಜೀವನ ಸುಖಮಯವಾಗಿರಲಿ ಎಂದು ಬೇಡಿಕೊಳ್ಳುತ್ತಾರೆ.
ಪ್ರತಿ ವರ್ಷವೂ ಗೌರಿಹಬ್ಬದಂದು ಇಲ್ಲಿ ಜನಜಾತ್ರೆಯೇ ನೆರೆಯುತ್ತದೆ. ಹೊಸದಾಗಿ ಮದುವೆಯಾದವರು ಮಾತ್ರವಲ್ಲದೆ, ಎಲ್ಲರೂ ಇಲ್ಲಿಗೆ ತೆರಳಿ ಪೂಜೆ ಸಲ್ಲಿಸುತ್ತಾರೆ. ಕೆರೆಗೆ ಬಾಗಿನ ಅರ್ಪಿಸಿ ಪುನೀತರಾಗುತ್ತಾರೆ.
ಹೊನ್ನಮ್ಮಕೆರೆ ಇರುವ ಪ್ರದೇಶ ಒಂದು ಸುಂದರ ನಿಸರ್ಗ ರಮಣೀಯ ತಾಣವಾಗಿದ್ದು, ಬೆಟ್ಟಗುಡ್ಡಗಳ ಸುಂದರ ನೋಟವನ್ನು ನೋಡುಗರಿಗೆ ಉಣಬಡಿಸುತ್ತದೆ. ಇಲ್ಲಿರುವ ಬೆಟ್ಟಗುಡ್ಡಗಳನ್ನೇರಿದರೆ ಕಂಡು ಬರುವ ದೃಶ್ಯ ವರ್ಣಿಸಲಾರದ್ದಾಗಿದೆ. ಬಿಡುವಿನ ದಿನಗಳಲ್ಲಿ ಹಸಿರ ನಿಸರ್ಗದ ನಡುವೆ ಒಂದಷ್ಟು ಕಳೆದು ಬರಲು ಬಯಸುವವರು ಇಲ್ಲಿಗೆ ಭೇಟಿ ನೀಡಲು ಯಾವುದೇ ಅಡ್ಡಿಯಿಲ್ಲ.












Click it and Unblock the Notifications