ಗೌರಿಹಬ್ಬದಂದು ಕೊಡಗಿನ ಹೊನ್ನಮ್ಮನಿಗೆ ಬಾಗಿನ: ಯಾರು ಈ ಹೊನ್ನಮ್ಮ ?

ಮಡಿಕೇರಿ: ಕೊಡಗಿನಲ್ಲಿರುವ ಹೊನ್ನಮ್ಮನಿಗೆ ಗೌರಿ ಹಬ್ಬದಂದು ಬಾಗಿನ ನೀಡುವ ಸಂಪ್ರದಾಯ ಹಿಂದಿನ ಕಾಲದಿಂದಲೂ ನಡೆದು ಬಂದಿದ್ದು ಅಂದು ಬಾಗಿನ ನೀಡುವ ಮುತ್ತೈದೆಯರು ದಾಂಪತ್ಯ ಬದುಕು ಸುಖಮಯವಾಗಿರಲಿ ಎಂದು ಬೇಡಿಕೊಳ್ಳುತ್ತಾರೆ. ಈ ದಿನ ಹೊನ್ನಮ್ಮನಿಗೆ ಬಾಗಿನ ನೀಡಲು ನೂಕು ನುಗ್ಗಲು ಏರ್ಪಡುತ್ತದೆ. ಇಷ್ಟಕ್ಕೂ ಕೊಡಗಿನ ಹೊನ್ನಮ್ಮ ಯಾರು? ಆಕೆಗೇಕೆ ಬಾಗಿನ ನೀಡಲಾಗುತ್ತದೆ ಎಂಬುದನ್ನು ನೋಡುತ್ತಾ ಹೋದರೆ ಇತಿಹಾಸದಲ್ಲಿ ಊರಿನ ಜನರಿಗಾಗಿ ತನ್ನ ಪ್ರಾಣವನ್ನೇ ಅರ್ಪಿಸಿದ ಹೆಣ್ಣು ಮಗಳೊಬ್ಬಳ ತ್ಯಾಗ ಬಲಿದಾನ ಕಥೆಯೊಂದು ಹೊರ ಬರುತ್ತದೆ.

ನಮ್ಮ ಭಾರತೀಯ ಪರಂಪರೆಯಲ್ಲಿ ಪೌರಾಣಿಕ ಮತ್ತು ಐತಿಹಾಸಿಕವಾಗಿ ನೋಡುತ್ತಾ ಹೋದರೆ ಹೆಣ್ಣು ಮಕ್ಕಳು ಹಲವು ಬಗೆಯಲ್ಲಿ ತ್ಯಾಗ ಬಲಿದಾನವನ್ನು ಮಾಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಅವರ ತ್ಯಾಗಮಯಿ ಮತ್ತು ಆದರ್ಶದ ಬದುಕಿಗೆ ಸಾಕ್ಷಿಯಾಗಿ ಇವತ್ತು ನದಿ, ಹೊಳೆ, ಕೆರೆಗಳು ಹೆಣ್ಣು ಮಕ್ಕಳ ಹೆಸರಲ್ಲಿವೆ. ಅಷ್ಟೇ ಅಲ್ಲದೆ ನಾವಿರುವ ದೇಶವನ್ನೇ ತಾಯಿಗೆ ಹೋಲಿಸುತ್ತಿದ್ದೇವೆ.

Gowri Ganesha Festival Celebration In Honnamma Temple Kodagu

ಇದೆಲ್ಲದರ ನಡುವೆ ಕೊಡಗಿನಲ್ಲಿರುವ ಹೊನ್ನಮ್ಮ ಯಾರು? ಎಂಬ ಕುತೂಹಲ ಎಲ್ಲರನ್ನು ಕಾಡದಿರದು. ಹೊನ್ನಮ್ಮನ ಬಗ್ಗೆ ತಿಳಿಯುತ್ತಾ ಹೋದರೆ ತ್ಯಾಗಬಲಿದಾನದ ಕಥೆಯೊಂದು ನಮ್ಮ ಮುಂದೆ ಬರುತ್ತದೆ. ಜನಪದದಲ್ಲಿ ಊರಿನ ಜನರಿಗಾಗಿ, ಕುಟುಂಬಕ್ಕಾಗಿ ಹಲವು ರೀತಿಯಲ್ಲಿ ತ್ಯಾಗಮಾಡಿದ ಹೆಣ್ಣು ಮಕ್ಕಳ ಕಥೆಗಳು ಬಹಳಷ್ಟಿವೆ. ಅದರಲ್ಲೂ ಕೆರೆಗೆ ಹಾರವಾಗುವುದರ ಮೂಲಕ ಬತ್ತಿದ ಕೆರೆಗೆ ಜೀವ ತುಂಬಿದ ತ್ಯಾಗಮಯಿಗಳ ಕಥೆಗಳು ಜನಪದದಲ್ಲಿ ಆಯಾಯ ಪ್ರಾಂತ್ಯಕ್ಕೆ ಸಂಬಂಧಿಸಿದಂತೆ ಇರುವುದು ಕಾಣಿಸುತ್ತದೆ.

ಸೋಮವಾರಪೇಟೆಯಲ್ಲಿರುವ ಹೊನ್ನಮ್ಮನ ಕೆರೆ

ಕೊಡಗಿನ ಮಟ್ಟಿಗೆ ಹೇಳುವುದಾದರೆ ಹೊನ್ನಮ್ಮ ತ್ಯಾಗಮಯಿಯಾಗಿದ್ದಾಳೆ. ಅವತ್ತಿನ ಅವಳ ತ್ಯಾಗದ ಫಲದಿಂದ ಇಂದಿಗೂ ಬೃಹತ್ ಕೆರೆ ನೀರಾಡುತ್ತಾ ಲಕ್ಷಾಂತರ ಜನರ ದಾಹ ನೀಗಿಸುತ್ತಿದೆ. ಹೊನ್ನಮ್ಮನ ಹೆಸರಿನಲ್ಲಿರುವ ಕೆರೆ ಕೊಡಗಿನ ಸೋಮವಾರಪೇಟೆ ತಾಲೂಕಿನಲ್ಲಿದೆ. ಸೋಮವಾರಪೇಟೆಯಿಂದ ಶನಿವಾರಸಂತೆ ಕಡೆಗಿನ ರಸ್ತೆಯಲ್ಲಿ ಸುಮಾರು 6ಕಿ.ಮೀ. ಸಾಗಿದರೆ ದೊಡ್ಡಮಳ್ತೆ ಎಂಬ ಗ್ರಾಮ ಸಿಗುತ್ತದೆ. ಅಲ್ಲಿಂದ ಬಲಕ್ಕೆ ಇರುವ ರಸ್ತೆಯಲ್ಲಿ ತೆರಳಿದರೆ ಹೊನ್ನಮ್ಮನ ಕೆರೆ ಸಿಗುತ್ತದೆ.

Gowri Ganesha Festival Celebration In Honnamma Temple Kodagu

ಮೊದಲ ಬಾರಿಗೆ ಹೋಗುವವರಿಗೆ ನಿಸರ್ಗ ಸುಂದರ ಬೆಟ್ಟಗುಡ್ಡಗಳ ನಡುವೆ ಇರುವ ಬೃಹತ್ ಕೆರೆ ಆಕರ್ಷಿಸುತ್ತದೆ. ವಿಶಾಲವಾಗಿ ಹರಡಿರುವ ಕೆರೆಯ ದಡದಲ್ಲಿಯೇ ಹೊನ್ನಮ್ಮನ ಕೆರೆಯಿದೆ. ಈ ಕೆರೆಯ ಹಿಂದಿನ ಶಕ್ತಿಯೇ ಹೊನ್ನಮ್ಮ ಆಗಿದ್ದು, ಕೆರೆ ಇವತ್ತು ನೀರು ತುಂಬಿ ಅಲೆಯಾಡಬೇಕಾದರೆ ಅದಕ್ಕೆ ಹೊನ್ನಮ್ಮನೇ ಕಾರಣವಾಗಿದ್ದು ಆಕೆಯ ಹೆಸರಿನಲ್ಲಿಯೇ ಕೆರೆ ಪ್ರಸಿದ್ದಿಗೆ ಬಂದಿದೆ. ಕೆರೆಯ ಸೃಷ್ಟಿಯ ಕುರಿತಂತೆ ಕಥೆಗಳಿದ್ದು ಕೆರೆ ಸೃಷ್ಟಿಯಾಗಿ ಹಲವು ಶತಮಾನಗಳೇ ಉರುಳಿ ಹೋಗಿವೆ.

ಕಲ್ಲನಕೇರಿ ಮಲ್ಲೇಗೌಡ ನಿರ್ಮಿಸಿದ ಕೆರೆ

ಹೊನ್ನಮ್ಮನಕೆರೆಯು 1106ರಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆಗಿನ ಕಾಲದಲ್ಲಿ ಹೊನ್ನಮ್ಮನಕೆರೆಯಿರುವ ಪ್ರದೇಶವಾದ ದೊಡ್ಡಮಳ್ತೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶವನ್ನು ಏಳುಸಾವಿರ ಸೀಮೆ ಎಂದು ಕರೆಯಲಾಗುತ್ತಿತ್ತಂತೆ. ಕ್ರಿ.ಶ.1034 ರಿಂದ 1297ರವರೆಗೆ ಈ ಸೀಮೆಯನ್ನು ಚಂಗಲವಾಸ್ ಎಂಬ ರಾಜಮನೆತನ ಆಳುತ್ತಿತ್ತಂತೆ. 1106ರಲ್ಲಿ ಆಗಿನ ಏಳುಸಾವಿರ ಸೀಮೆಗೆ ಒಳಪಟ್ಟಿದ್ದ ದೊಡ್ಡಮಳ್ತೆಯಲ್ಲಿ ವ್ಯಾಪಾರಿ ಕಲ್ಲನಕೇರಿ ಮಲ್ಲೇಗೌಡ ಎಂಬಾತ ವಾಸಿಸುತ್ತಿದ್ದನಂತೆ.

ಈತ ಊರಿನ ಮುಖಂಡನಾಗಿದ್ದು, ಪರೋಪಕಾರಿಯೂ, ಮಹಾನ್ ದೈವಭಕ್ತನಾಗಿದ್ದನಂತೆ. ಒಮ್ಮೆ ಗ್ರಾಮದಲ್ಲಿ ಬರಗಾಲ ಕಾಣಿಸಿಕೊಂಡಿತಂತೆ ಆಗ ಕುಡಿಯುವ ನೀರಿಗೆ ಗ್ರಾಮದಲ್ಲಿ ಹಾಹಾಕಾರ ಉಂಟಾಯಿತಂತೆ. ಪ್ರಾಣಿಪಕ್ಷಿಗಳು, ಜಾನುವಾರುಗಳು ನೀರಿಲ್ಲದೆ ಸಾಯತೊಡಗಿದವಂತೆ. ಈ ಸಂದರ್ಭ ಮಲ್ಲೇಗೌಡನಿಗೆ ಕೆರೆಯೊಂದನ್ನು ತೋಡಿ ಗ್ರಾಮದ ಜನರಿಗೆ ಉಂಟಾಗಿರುವ ನೀರಿನ ಬವಣೆಯನ್ನು ತಪ್ಪಿಸಬಹುದು ಎಂಬ ಆಲೋಚನೆ ಬಂತಂತೆ. ಕೂಡಲೇ ಆತ ಕೂಲಿಕಾರರನ್ನು ಕರೆಯಿಸಿ ಕೆರೆಯನ್ನು ತೋಡುವುದಕ್ಕೆ ಮುಂದಾದನು.

ಮಾವನ ಚಿಂತೆ ದೂರ ಮಾಡಿದ ಹೊನ್ನಮ್ಮ

ಜನರ ಶ್ರಮದಿಂದ ವಿಶಾಲ ಕೆರೆಯೇನೋ ನಿರ್ಮಾಣವಾಯಿತಾದರೂ ನೀರು ಸಿಗಲಿಲ್ಲ. ಶಕ್ತಿಮೀರಿ ಭೂಮಿಯ ಆಳಕ್ಕೆ ತೋಡಿದರೂ ನೀರು ಮಾತ್ರ ಬರಲೇ ಇಲ್ಲ. ಇದರಿಂದ ಮಲ್ಲೇಗೌಡ ಮುಂದೇನು ಮಾಡುವುದು ಎಂದು ಚಿಂತಾಕ್ರಾಂತನಾದನು. ಈ ಸಂದರ್ಭ ಮುತ್ತೈದೆ ಹೆಣ್ಣುಮಗಳನ್ನು ಕೆರೆಗೆ ಹಾರ ನೀಡಿದರೆ ನೀರು ಬರುತ್ತೆ ಎಂಬ ಅಶರೀರವಾಣಿಯೊಂದು ಆತನಿಗೆ ಕೇಳಿಬರುತ್ತದೆ. ಆದರೆ ಕೆರೆಗೆಹಾರ ನೀಡುವುದಾದರು ಯಾರನ್ನು ಎಂದು ಮಲ್ಲೇಗೌಡ ಯೋಚಿಸುತ್ತಾ ದಿನಕಳೆಯುತ್ತಿರುತ್ತಾನೆ.

ಮಾವನನ್ನು ಆವರಿಸಿದ ಚಿಂತೆಯನ್ನು ಅರಿತ ಕಿರಿಸೊಸೆ ಹೊನ್ನಮ್ಮ ಊರಿನ ಜನರ ಒಳಿತಿಗಾಗಿ ಕೆರೆಗೆ ಹಾರಿ ತನ್ನ ಪ್ರಾಣವನ್ನು ಅರ್ಪಿಸುತ್ತಾಳೆ. ಆಕೆ ಮಾಡಿದ ತ್ಯಾಗಬಲಿದಾನದ ಫಲದಿಂದ ಕೂಡಲೇ ಕೆರೆಯಲ್ಲಿ ನೀರು ತುಂಬಿ ಬರುತ್ತದೆ. ಪ್ರಾಣಿ ಪಕ್ಷಿಗಳು, ಜನ ಜಾನುವಾರುಗಳು ಕೆರೆಯ ನೀರು ಕುಡಿದು ಸಂತೋಷಪಡುತ್ತಿರುವಾಗಲೇ ಹೊನ್ನಮ್ಮನ ಪತಿ ಶಾಂತರಾಜುಗೆ ಮಡದಿ ಹೊನ್ನಮ್ಮ ಕೆರೆಗೆ ಹಾರವಾಗಿರುವ ವಿಷಯ ತಿಳಿಯುತ್ತದೆ. ಮಡದಿಯ ಅಗಲಿಕೆಯ ನೋವನ್ನು ತಾಳಲಾರದೆ ಆತನೂ ಕೂಡ ಅದೇ ಕೆರೆಗೆ ಹಾರಿ ಪ್ರಾಣಬಿಡುತ್ತಾನೆ.

ಅನ್ನದಾತೆಯಾದ ಕೊಡಗಿನ ಹೊನ್ನಮ್ಮ

ತನ್ನ ಸೊಸೆಯ ತ್ಯಾಗಬಲಿದಾನದ ನೆನಪಿಗಾಗಿ ಮಲ್ಲೇಗೌಡ ಕೆರೆಯ ಏರಿಯಲ್ಲೊಂದು ದೇವಾಲಯವನ್ನು ಕಟ್ಟಿಸಿ ಅಲ್ಲಿ ಬಸವೇಶ್ವರ, ಗಣಪತಿ, ಹಾಗೂ ಹೊನ್ನಮ್ಮನ ವಿಗ್ರಹವನ್ನು ಪ್ರತಿಷ್ಠಾಪಿಸಿದನು ಎಂದು ಹೇಳಲಾಗಿದೆ. ನಾಡಿನ ಜನತೆಗಾಗಿ ಹೊನ್ನಮ್ಮ ಮಾಡಿದ ತ್ಯಾಗ ಬಲಿದಾನದ ನೆನಪಿಗಾಗಿ ವರ್ಷಂಪ್ರತಿ ಗೌರಿಹಬ್ಬದ ದಿನದಂದು ಕೆರೆಗೆ ನವ ವಧುವರರು ಹಾಗೂ ಮುತ್ತೈದರು ಬಾಗಿನ ಅರ್ಪಿಸುತ್ತಾರೆ. ಅಲ್ಲದೆ, ನವದಂಪತಿಗಳು ಬಾಗಿನ ಅರ್ಪಿಸಿ ತಾಯಿ ಹೊನ್ನಮ್ಮನಿಗೆ ಪೂಜೆ ಸಲ್ಲಿಸಿದರೆ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ ಎಂಬ ನಂಬಿಕೆಯೂ ಜನರಲ್ಲಿದೆ.

ಸುಮಾರು 16.20 ಎಕರೆ ವಿಸ್ತೀರ್ಣ ಹೊಂದಿರುವ ಹೊನ್ನಮ್ಮನಕೆರೆಯಿಂದ ದೊಡ್ಡಮಳ್ತೆ, ಹಾರೋಹಳ್ಳಿ, ಮಸಗೊಡು, ಅಬ್ಬೂರು, ಮೋರಿಕಲ್ಲು ಹಾಗೂ ಅಡಿನಾಡೂರು ಗ್ರಾಮಗಳ ಕೃಷಿಕರ ಜಮೀನಿಗೆ ನೀರು ಹರಿಯುತ್ತಿದ್ದು ಅವರ ಪಾಲಿಗೆ ಹೊನ್ನಮ್ಮ ಅನ್ನದಾತೆಯೂ ಆಗಿದ್ದಾಳೆ. ಕೆರೆಯ ಪ್ರವೇಶ ದ್ವಾರದ ಬಲಕ್ಕೆ ಪುರಾತನ ಕಾಲದ ಗುಡಿಯೊಳಗೆ ಸಿದ್ದೇಶ್ವರ ದೇವರು ಹಾಗೂ ಪೂರ್ವಕ್ಕೆ ಮುಕ್ಕಾಲು ಕಿ.ಮೀ.ದೂರದಲ್ಲಿ ಶಿಲಾರಾಶಿಯ ಮಧ್ಯೆ ದೊಡ್ಡ ನಂದಿ ಹಾಗೂ ಚಿಕ್ಕ ನಂದಿ ವಿಗ್ರಹಗಳಿದ್ದು, ಇವುಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಒಟ್ಟಾರೆ ಗೌರಿ ಹಬ್ಬದಂದು ತ್ಯಾಗಮಯಿ ಹೊನ್ನಮ್ಮ ಎಲ್ಲರ ಹರಸುತ್ತಿರುವುದು ವಿಶೇಷವಾಗಿದೆ.

ಇಷ್ಟಾರ್ಥ ನೆರವೇರಿಸುವ ಕುದೇರು ಕಡಲೆ ಹಿಟ್ಟಿನ ಗೌರಮ್ಮ

ಚಾಮರಾಜನಗರ: ಗೌರಿಗಣೇಶ ಹಬ್ಬದಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿ ಪಕ್ಕದಲ್ಲಿ ಗೌರಿಯನ್ನಿಟ್ಟು ಸಾಮೂಹಿಕವಾಗಿ ಪೂಜಾ ಕಾರ್ಯಕ್ರಮಗಳನ್ನು ನಡೆಸುವುದು ಹಿಂದಿನಿಂದಲೂ ನಡೆದು ಬಂದಿದೆ. ಆದರೆ ಗೌರಿಯನ್ನೇ ಕಡಲೆಹಿಟ್ಟಿನಿಂದ ತಯಾರಿಸಿ ಬಳಿಕ ಪ್ರತಿಷ್ಠಾಪಿಸಿ ಊರಿಗೆ ಊರೇ ಸಾಮೂಹಿಕವಾಗಿ ಪೂಜೆ ಸಲ್ಲಿಸಿ ಹಬ್ಬಾಚರಣೆ ಮಾಡುವ ಸಂಪ್ರದಾಯ ಚಾಮರಾಜನಗರ ಜಿಲ್ಲೆಯ ಕುದೇರುನಲ್ಲಿ ನಡೆಯುತ್ತದೆ. ಈ ರೀತಿಯ ಆಚರಣೆ ಬೇರೆಲ್ಲೂ ಕಾಣದಿರುವುದೇ ಇಲ್ಲಿನ ವಿಶೇಷತೆಯಾಗಿದೆ.

ಹಾಗಾದರೆ ಕುದೇರುವಿನ ಗೌರಿಯ ವಿಶೇಷತೆ ಏನು? ಇಲ್ಲಿಯ ಆಚರಣೆ ಹೇಗೆ ಸಾಗುತ್ತದೆ ಎಂಬುದನ್ನು ನೋಡಿದ್ದೇ ಆದರೆ ಹತ್ತು ಹಲವು ವಿಶೇಷತೆಗಳು ಇಲ್ಲಿ ಕಾಣ ಸಿಗುತ್ತದೆ. ಮೇಲ್ನೋಟಕ್ಕೆ ಕುದೇರುನಲ್ಲಿ ಕಡಲೆಹಿಟ್ಟಿನಿಂದ ಗೌರಿಯನ್ನು ತಯಾರಿಸಿ ಮೆರವಣಿಗೆಯಲ್ಲಿ ಕೊಂಡೊಯ್ದು ಪ್ರತಿಷ್ಠಾಪಿಸಿ ಗ್ರಾಮಸ್ಥೆರೆಲ್ಲರೂ ಸಾಮೂಹಿಕವಾಗಿ ಪೂಜೆ ಸಲ್ಲಿಸುವುದು ಕಂಡು ಬರುತ್ತದೆ. ಜತೆಗೆ ಇಡೀ ಊರಿನ ಹೆಂಗಳೆಯರೆಲ್ಲರೂ ಗೌರಿಗೆ ವಿಶೇಷ ಪೂಜೆ ಸಲ್ಲಿಸುತ್ತಾ ಎಲ್ಲ ವರ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+