• search
 • Live TV
ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಪಘಾತಕ್ಕೆ ತುತ್ತಾದ ಖಾಸಗಿ ಸಾರಿಗೆ ಸಿಬ್ಬಂದಿಗೂ ಸರ್ಕಾರದ ಪರಿಹಾರ: ಅರ್ಜಿ ಸಲ್ಲಿಸುವುದೇಗೆ?

|
Google Oneindia Kannada News

ಮಡಿಕೇರಿ ಆಗಸ್ಟ್ 16 :ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರಾದ ಚಾಲಕರು, ನಿರ್ವಾಹಕರು ಹಾಗೂ ಕ್ಲೀನರ್‌ಗಳು ನಿರಂತರವಾಗಿ ಅಪಘಾತಗಳಿಗೆ ತುತ್ತಾಗಿ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿ ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆಯಡಿ ಪರಿಹಾರ ನೀಡಲಿದೆ.

ಅಪಘಾತಕ್ಕೀಡಾದಾಗ ಮರಣಕ್ಕೆ ತುತ್ತಾಗುವ, ಶಾಶ್ವತ ದುರ್ಬಲತೆ ಅಥವಾ ತಾತ್ಕಾಲಿಕ ದುರ್ಬಲತೆ ಹೊಂದಿದ ಸಂದರ್ಭದಲ್ಲಿ, ಅವರ ದುಡಿಮೆಯನ್ನೇ ಅವಲಂಬಿಸಿರುವ ಅವರ ಕುಟುಂಬವು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸಂಕಷ್ಟಕ್ಕೆ ಸಿಲುಕುತ್ತದೆ. ಇಂತಹ ಕಾರ್ಮಿಕರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಅಪಘಾತ ಪರಿಹಾರ ಸೌಲಭ್ಯ ಒದಗಿಸುವ ಮೂಲಕ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆ ಒದಗಿಸುವ ಸದುದ್ದೇಶದಿಂದ ರಾಜ್ಯ ಸರಕಾರವು 'ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆ' ಎಂಬ ಮಹತ್ವಾಕಾಂಕ್ಷಿ ಯೋಜನೆಯನ್ನು 2012 ರಲ್ಲಿ ಜಾರಿಗೆ ತಂದಿದೆ.

ಕೋವಿಡ್‌ 19 ನಿಂದ ಮೃತರಾದ ಕುಟುಂಬಕ್ಕೆ ಪರಿಹಾರ: ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಣೆಕೋವಿಡ್‌ 19 ನಿಂದ ಮೃತರಾದ ಕುಟುಂಬಕ್ಕೆ ಪರಿಹಾರ: ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಣೆ

ಅಪಘಾತ ಪರಿಹಾರ ಯೋಜನೆಯು ಕರ್ನಾಟಕ ರಾಜ್ಯಕ್ಕೆ ಮಾತ್ರ ಅನ್ವಯಿಸುತ್ತದೆ. ಯೋಜನೆಯು ಖಾಸಗಿ ವಾಣಿಜ್ಯ ಸಾರಿಗೆಯ ಚಾಲಕರು, ನಿರ್ವಾಹಕರು ಹಾಗೂ ಕ್ಲೀನರ್‌ಳಿಗೆ ಅನ್ವಯಿಸುತ್ತದೆ. ವಯೋಮಿತಿ 20 ರಿಂದ 70 ವರ್ಷಗಳಾಗಿರುತ್ತದೆ. ಈ ಯೋಜನೆಯ ಸೌಲಭ್ಯಗಳು ಕರ್ತವ್ಯದಲ್ಲಿರುವಾಗ ಹಾಗೂ ಇಲ್ಲದಿರುವಾಗಲೂ ಸಹ ಲಭ್ಯವಾಗುತ್ತದೆ.

ಚಾಲಕರು, ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯಿಂದ ವಾಣಿಜ್ಯ ವಾಹನ ಚಲಾಯಿಸಲು ಊರ್ಜಿತ ಚಾಲನಾ ಪರವಾನಗಿಯನ್ನು ಹೊಂದಿರುವುದು ಕಡ್ಡಾಯ. ಚಾಲಕರು ಮಂಡಳಿಯಲ್ಲಿ ಯೋಜನೆಯಡಿ ಪ್ರತ್ಯೇಕವಾಗಿ ನೋಂದಣಿ ಮಾಡಿಸುವ ಅವಶ್ಯಕತೆ ಇರುವುದಿಲ್ಲ. ನಿರ್ವಾಹಕರು ಹಾಗೂ ಕ್ಲೀನರ್‌ಗಳು ಮಂಡಳಿಯ ನಿಯಮಾನುಸಾರ ಅಧಿಸೂಚಿಸಲ್ಪಟ್ಟ ಆಯಾಯ ಜಿಲ್ಲೆಯ ನೋಂದಣಿ ಅಧಿಕಾರಿಗಳಿಂದ ಯೋಜನೆಯಡಿ ಫಲಾನುಭವಿಯಾಗಿ ನೋಂದಣಿ ಮಾಡಿಸಿಕೊಳ್ಳಬೇಕು.

ಅಪಘಾತದಿಂದ ಚಾಲಕರು, ನಿರ್ವಾಹಕರು ಹಾಗೂ ಕ್ಲೀನರ್‌ಗಳು ಮರಣ ಹೊಂದಿದಲ್ಲಿ, ಅವರ ನಾಮನಿರ್ದೇಶಿತರಿಗೆ ರೂ.5 ಲಕ್ಷ ಪರಿಹಾರ ಸಿಗಲಿದೆ. ಒಂದು ವೇಳೆ ಅಪಘಾತದಿಂದ ಶಾಶ್ವತ ಅಂಗವಿಕಲರಾದರೆ, ಫಲಾನುಭವಿಗಳಿಗೆ ದುರ್ಬಲತೆಯ ಪ್ರಮಾಣಕ್ಕನುಗುಣವಾಗಿ ಗರಿಷ್ಠ ರೂ.2 ಲಕ್ಷದವರೆಗೆ ಪರಿಹಾರ ಸಿಗಲಿದೆ.

ವೃದ್ಧಾಪ್ಯ ಪಿಂಚಣಿ, ವಿಧವಾ ಪಿಂಚಣಿ ಎರಡೂ ಪಡೆಯಲು ಸಾಧ್ಯವಾ?ವೃದ್ಧಾಪ್ಯ ಪಿಂಚಣಿ, ವಿಧವಾ ಪಿಂಚಣಿ ಎರಡೂ ಪಡೆಯಲು ಸಾಧ್ಯವಾ?

ಅಪಘಾತದಿಂದ ತಾತ್ಕಾಲಿಕ ದುರ್ಬಲತೆ ಹೊಂದಿದಾಗ, ಅಪಘಾತಕ್ಕೊಳಗಾಗಿ ಆಸ್ಪತ್ರೆಯಲ್ಲಿ 15 ದಿನಗಳಿಗಿಂತ ಕಡಿಮೆ ಅವಧಿಗೆ ಒಳರೋಗಿಯಾಗಿ ಚಿಕಿತ್ಸೆ ಪಡೆದಲ್ಲಿ, ಗರಿಷ್ಟ ರೂ. 50 ಸಾವಿರದವರೆಗೆ ಅಥವಾ ನಿಖರ ಆಸ್ಪತ್ರೆ ವೆಚ್ಚ, ಇವುಗಳಲ್ಲಿ ಯಾವುದು ಕಡಿಮೆಯೋ ಅದನ್ನು ಪಾವತಿಸಲಾಗುತ್ತದೆ. 15 ದಿನಗಳಿಗಿಂತ ಹೆಚ್ಚು ದಿನ ಒಳರೋಗಿಯಾಗಿ ಚಿಕಿತ್ಸೆ ಪಡೆದಿದ್ದಲ್ಲಿ, ಗರಿಷ್ಠ ರೂ.1 ಲಕ್ಷದವರೆಗೆ ಅಥವಾ ನಿಖರ ಆಸ್ಪತ್ರೆ ವೆಚ್ಚ ಅಥವಾ ಇವುಗಳಲ್ಲಿ ಯಾವುದು ಕಡಿಮೆಯೋ ಅದನ್ನು ನೀಡಲಾಗುತ್ತದೆ.

Government Provides Compensation for Private Transport Workers Involved in Accidents

ಕ್ಲೈಮ್‌ಗೆ ಅರ್ಜಿ ಸಲ್ಲಿಸುವ ವಿಧಾನ
ಪರಿಹಾರ ಮೊತ್ತವನ್ನು ಪಡೆಯಲು ಅಪಘಾತ ಸಂಭವಿಸಿದ ಒಂದು ವರ್ಷದೊಳಗೆ ಮಂಡಳಿಗೆ ಫಲಾನುಭವಿ/ ನಾಮನಿರ್ದೇಶಿತರು ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು. ಅಪಘಾತದಿಂದ ಮರಣ ಹೊಂದಿದ ಪ್ರಕರಣಗಳಲ್ಲಿ ಅರ್ಜಿಯ ಜೊತೆಗೆ ಮರಣ ಪ್ರಮಾಣ ಪತ್ರ, ಮರಣೋತ್ತರ ಪರೀಕ್ಷಾ ವರದಿ, ಪ್ರಥಮ ವರ್ತಮಾನ ವರದಿ (ಎಫ್‍ಐಆರ್) ಮತ್ತು ಊರ್ಜಿತ ಚಾಲನಾ/ ನಿರ್ವಾಹಕ ಪರವಾನಗಿ ಹಾಗೂ ಕ್ಲೀನರ್‌ಗಳು ನೋಂದಣಿ ಗುರುತಿನ ಚೀಟಿ ಲಗತ್ತಿಸಿ ಸಲ್ಲಿಸಬೇಕು.

ಅಪಘಾತದಿಂದ ದುರ್ಬಲತೆ ಉಂಟಾದಲ್ಲಿ ಕ್ಲೇಮ್ ಅರ್ಜಿಯ ಜೊತೆಗೆ ಊರ್ಜಿತ ಚಾಲನಾ/ ನಿರ್ವಾಹಕ ಪರವಾನಗಿ/ ಬ್ಯಾಡ್ಜ್, ಕ್ಲೀನರ್‌ಗಳು ನೋಂದಣಿ ಗುರುತಿನ ಚೀಟಿ, ಪ್ರಥಮ ವರ್ತಮಾನ ವರದಿ (ಎಫ್‍ಐಆರ್) ಮತ್ತು ಒಳರೋಗಿ ಆಸ್ಪತ್ರೆ ವೆಚ್ಚ ಹಿಂಪಡೆಯಲು ವೈದ್ಯಕೀಯ ಪ್ರಮಾಣ ಪತ್ರ/ ಬಿಲ್‍ಗಳ ಮೂಲ ಪ್ರತಿಗಳನ್ನು ಕಡ್ಡಾಯವಾಗಿ ಲಗತ್ತಿಸಬೇಕು. ಸ್ವೀಕರಿಸಿದ ಕ್ಲೈಮ್ ಅರ್ಜಿಯ ದಾಖಲೆಗಳನ್ನು ನಿಯಮಾನುಸಾರ ಪರಿಶೀಲಿಸಿ ಅರ್ಹರಿದ್ದಲ್ಲಿ, ಪರಿಹಾರದ ಮೊತ್ತವನ್ನು ಅರ್ಜಿದಾರರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗುವುದು.

ಶೈಕ್ಷಣಿಕ ಧನಸಹಾಯ
ಅಪಘಾತದಿಂದ ಮರಣ ಹೊಂದಿದ ಅಥವಾ ಸಂಪೂರ್ಣ ಶಾಶ್ವತ ದುರ್ಬಲತೆ ಹೊಂದಿದ ಫಲಾನುಭವಿಗಳ ಇಬ್ಬರು ಮಕ್ಕಳಿಗೆ, 1ನೇ ತರಗತಿಯಿಂದ ಪದವಿ ಪೂರ್ವ/12 ನೇ ತರಗತಿಯವರೆಗೆ ವಾರ್ಷಿಕ ತಲಾ ರೂ. 10 ಸಾವಿರಗಳ ಶೈಕ್ಷಣಿಕ ಧನ ಸಹಾಯ ನೀಡಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ
ಶೈಕ್ಷಣಿಕ ಧನ ಸಹಾಯದ ಅರ್ಜಿಗಳನ್ನು ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಮುಖಾಂತರ ಅಥವಾ ನೇರವಾಗಿ ಮಂಡಳಿಗೆ ಸಲ್ಲಿಸಬಹುದು. ಈ ಅರ್ಜಿಗಳನ್ನು ಪರಿಶೀಲಿಸಿ, ಧನ ಸಹಾಯದ ಮೊತ್ತವನ್ನು ಅರ್ಜಿದಾರರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗುವುದು.

ಹೆಚ್ಚಿನ ಮಾಹಿತಿಗೆ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಚೇರಿ, ಕೊಠಡಿ ಸಂಖ್ಯೆ 11, ಜಿಲ್ಲಾಡಳಿತ ಭವನ, ಮಡಿಕೇರಿ, ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿ ಮಡಿಕೇರಿ, ಸೋಮವಾರಪೇಟೆ ಹಾಗೂ ವಿರಾಜಪೇಟೆ ಇಲ್ಲಿ ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಅನಿಲ್ ಬಗಟಿ ಅವರು ತಿಳಿಸಿದ್ದಾರೆ.

Recommended Video

   ಜಿಂಬಾಬ್ವೆ ವಿರುದ್ಧದ ಸರಣಿಯಿಂದ ವಾಷಿಂಗ್ಟನ್ ಸುಂದರ್ ಔಟ್ | *Cricket | OneIndia Kannada
   English summary
   Government Provides Compensation for Private Transport Workers Involved in Accidents, check here for details, know more,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X